ADVERTISEMENT

ಪಿಯರ್ಸ್‌ ಖಾದ್ಯಾವಳಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಹೈಟೆಕ್ ನಗರ ಬೆಂಗಳೂರಿನಲ್ಲಿ ಎಲ್ಲದರಲ್ಲೂ ವಿದೇಶೀ ಸೊಗಡು. ಬಟ್ಟೆ ಬರೆಯಿಂದ ಹಿಡಿದು ತಿನ್ನುವ ತಿಂಡಿ ತಿನಿಸಿನಲ್ಲೂ ವಿದೇಶದ್ದೇ ವಾಸನೆ.

ಸಲಾಡ್, ಜ್ಯೂಸ್, ನೂಡಲ್ಸ್, ಸೂಪ್ ಇಂತಹದೇ ಸುಮಾರು ತಿನಿಸುಗಳು ವಿದೇಶಿಯರ ಕೊಡುಗೆ. ಆದರೆ ವಿದೇಶದ್ದು ಎಂದಮಾತ್ರಕ್ಕೆ ಮೂಗು ಮುರಿಯಬೇಕಿಲ್ಲ. ಅದರ ರುಚಿಗೆ ಮಾರುಹೋಗುವವರು ದಿನೇದಿನೇ ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದಾರೆ.

ವಿವಿಧ ಬಗೆಯ ವಿದೇಶಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸುವುದನ್ನು ಕಲಿಯಲು ಕಾತರಿಸುವವರೂ ಇದ್ದಾರೆ. ಆದರೆ ಇದಕ್ಕೆ ಇಲ್ಲದ ಪದಾರ್ಥಗಳನ್ನು ಹಾಕಬೇಕಲ್ಲ ಎಂದು ಸುಮ್ಮನಾಗುವ ಮಂದಿ ಹೆಚ್ಚು. ಅಂತಹವರಿಗೆ ಅನುವಾಗಲೆಂದೇ ಮುಂಬೈನ ಪ್ರಸಿದ್ಧ ಶೆಫ್ ವಿಕ್ಕಿ ರತ್ನಾನಿ ಬೆಂಗಳೂರಿಗೆ ಭೇಟಿ ನೀಡಿದ್ದರು.

ಬೆಂಗಳೂರಿನ ಯುಬಿ ಸಿಟಿ ಮಾಲ್‌ನ `ಟೇಸ್ಟಿ ಟ್ಯಾಂಗಲ್ಸ್~ನಲ್ಲಿ ಈ ಖಾದ್ಯಗಳ ಪ್ರಾತ್ಯಕ್ಷಿತೆ ನಡೆದಿದ್ದು ಪಿಯರ್ ಬ್ಯೂರೊ ನಾರ್ತ್‌ವೆಸ್ಟ್ ಮತ್ತು ಎಸ್‌ಸಿಎಸ್ ಗ್ರೂಪ್ ಸಹಯೋಗದಲ್ಲಿ.
ಪ್ರಕೃತಿಯ ಕೊಡುಗೆ ಎಂದು ಕರೆಸಿಕೊಳ್ಳುವ `ಪಿಯರ್ಸ್~ (ಪೇರು ಹಣ್ಣು)ನಿಂದ ಹೇಗೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಎನ್ನುವುದರ ಬಗ್ಗೆ ಪ್ರಾಯೋಗಿಕವಾಗಿ ನಿರೂಪಿಸಿದರು ವಿಕ್ಕಿ. ಪೇರು ಹಣ್ಣಿನ ಖಾದ್ಯ ಮತ್ತು ಹಣ್ಣಿನಲ್ಲಿರುವ ಆರೋಗ್ಯಕರ ಅಂಶಗಳನ್ನೂ ತಿಳಿಸಿಕೊಡಲಾಯಿತು.

ಈಗ ಮಾರುಕಟ್ಟೆಯಲ್ಲಿ  ಯುಎಸ್‌ಎ ಪಿಯರ್ಸ್ ಎಂದು ಲಭ್ಯವಿರುವ ಅಮೆರಿಕ ಮೂಲದ ಪೇರುಹಣ್ಣನ್ನು ಉಪಯೋಗಿಸಿಕೊಂಡು ಪಿಯರ್ಸ್ ಪಾಯಸ, ಪಿಯರ್ಸ್ ಮಶ್ರೂಮ್ ಸ್ಪ್ರಿಂಗ್ ರೋಲ್ ಮತ್ತು ಪಿಯರ್ಸ್ ಸ್ಟಿರ್ ಫ್ರೈಯ್ಡ ಎಂಬ ಖಾದ್ಯಗಳನ್ನು ತಯಾರಿಸುವ ರೀತಿಯನ್ನು ನಿರೂಪಿಸಿದರು. ರುಚಿಯೊಂದಿಗೆ ಪೌಷ್ಟಿಕಾಂಶ ನೀಡುವ ಪೇರುಹಣ್ಣನ್ನು ಹೇಗೆಲ್ಲಾ ಸೇವಿಸಬಹುದು ಎಂಬ ಬಹುರೂಪಿ ತಿನಿಸುಗಳನ್ನು ಮಾಡಿ ತೋರಿಸಿದರು ವಿಕ್ಕಿ ರತ್ನಾನಿ.

ಸಿಹಿ ಹಣ್ಣಿನಿಂದ ಈ ಖಾದ್ಯಗಳನ್ನು ತಯಾರಿಸುತ್ತಿದ್ದ ಕಾರಣ ಹೇಗಿರುತ್ತೋ ಏನೊ ಎಂದುಕೊಂಡರೂ ರುಚಿ ನೋಡಿದ ಮೇಲಂತೂ ಮತ್ತೊಮ್ಮೆ ಇದರ ಸ್ವಾದ ಸವಿಯಲೇಬೇಕು  ಎನಿಸ್ದ್ದಿದಂತೂ ಸುಳ್ಳಲ್ಲ. ಖಾರ, ಹುಳಿ, ಸಿಹಿ ಮೂರು ರೀತಿಯ ತಿನಿಸುಗಳೂ ಅಲ್ಲಿದ್ದವು. ಅದರಲ್ಲೂ ಪೇರು ಹಣ್ಣನ್ನು ಬಳಸಿ ತಯಾರಿಸಿದ ಪಾಯಸದ ರುಚಿಗಂತೂ ಸಾಟಿಯಿರಲಿಲ್ಲ.

ಈ ಸಂದರ್ಭದಲ್ಲಿ ಪೇರು ಹಣ್ಣಿನಲ್ಲಿನ ಆರೋಗ್ಯಕ್ಕೆ ಪೂರಕವಾಗುವ ಅನೇಕ ಅಂಶಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

-ಪೇರು ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ  ದಪ್ಪಗಾಗುವ ಚಿಂತೆಯಿಲ್ಲ.
-ಸೋಡಿಯಂ, ಬೊಜ್ಜು ಮತ್ತು ಕೊಲೆಸ್ಟ್ರಾಲ್ ರಹಿತವಾಗಿದೆ.
-ಇದರಲ್ಲಿ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಸಿ ಹೇರಳವಾಗಿದೆ.

-ಪೇರು ಹಣ್ಣಿನಲ್ಲಿ ನಾರಿನಂಶ ಅಧಿಕವಿದೆ. ಇದರಿಂದ ಕೊಲೆಸ್ಟ್ರಾಲ್ ಕರಗಲು ಅನುವಾಗುತ್ತದೆ ಮತ್ತು ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
-ಇದರಲ್ಲಿ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಅಂಶ ಹೆಚ್ಚಿದೆ. ಅಷ್ಟೇ ಅಲ್ಲ, ಪೇರುಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಲೆವುಲೋಸ್ ಇದೆ. ಸಿಹಿ ತಿನ್ನಲು ಬಯಸುವವರು ಇದನ್ನು ನಿಶ್ಚಿಂತೆಯಾಗಿ ತಿನ್ನಬಹುದು.

-ಪೇರು ಹಣ್ಣಿನಲ್ಲಿ ಪೊಟಾಶಿಯಂ ಇರುವುದರಿಂದ ರಕ್ತದೊತ್ತಡವೂ ನಿಯಂತ್ರಣಕ್ಕೆ ಬರುತ್ತದೆ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ನಿವಾರಿಸುತ್ತದೆ.
-ದೇಹ ಸದೃಢವಾಗಿರಬೇಕೆಂದು ಬಯಸುವವರಿಗೆ ಇದು ಸೂಕ್ತ ಹಣ್ಣು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.