ADVERTISEMENT

ಪುಟಾಣಿಯ ರಸಪಾಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST

ಮಕ್ಕಳಲ್ಲಿ ಅಡುಗೆಯ ಕೌಶಲವನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ‘ಕ್ಯಾಲಿಫೋರ್ನಿಯಾ ಪಿಜ್ಜಾ ಕಿಚನ್’ (ಸಿಪಿಕೆ) ನಗರದಲ್ಲಿ ಜೂನಿಯರ್‌ ಪಿಜ್ಜಾ ಶೆಫ್‌ ಎಂಬ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಶಾಲಾ ಮಕ್ಕಳಿಗೆ ಈ ಅವಕಾಶವನ್ನು ನೀಡಲಾಯಿತು. ಈ ಸ್ಪರ್ಧೆಯಲ್ಲಿ ಬೆಥನಿ ಹೈಸ್ಕೂಲ್‌ ವಿದ್ಯಾರ್ಥಿನಿ, ಒಂಬತ್ತು ವರ್ಷದ ಸಿಮರ್‌ ಗೆಲುವಿನ ಕಿರೀಟ ಧರಿಸಿದರು.

ಅಮ್ಮ ಅಡುಗೆಮನೆಯಲ್ಲಿ ಮಾಡಿಕೊಡುತ್ತಿದ್ದ ಪುಟಾಣಿ ರೊಟ್ಟಿಯಿಂದ ಸ್ಫೂರ್ತಿಗೊಂಡ ಹುಡುಗಿ ಸಿಮರ್‌. ಮೂಲತಃ ಪಂಜಾಬಿ ಹುಡುಗಿಯಾದರೂ ನೆಲೆ ನಿಂತಿದ್ದು ಬೆಂಗಳೂರಿನಲ್ಲಿ. ಅಂದಹಾಗೆ ಇವರಿಗೆ  ತಾಯಿ ಡಾ. ಅಮೃತ್ ಸ್ಫೂರ್ತಿಯಂತೆ. ಜೂನಿಯರ್‌ ಪಿಜ್ಜಾ ಶೆಫ್‌ನಲ್ಲಿ ಭಾಗವಹಿಸಿದ ಇವರು ‘ಮೆಟ್ರೊ’ದೊಂದಿಗೆ ಮಾತು ಹಂಚಿಕೊಂಡಿದ್ದು ಹೀಗೆ....

* ಸಿಪಿಕೆ ಜೂನಿಯರ್ ಪಿಜ್ಜಾ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವ ಹೇಗಿತ್ತು?
ತುಂಬಾ ಚೆನ್ನಾಗಿತ್ತು. ಕಲಿಯುವುದಕ್ಕೆ ಒಂದು ಒಳ್ಳೆಯ ಅವಕಾಶ ಸಿಕ್ಕಿತು. ಸ್ಪರ್ಧೆಗೆ ಅವರು ನಡೆಸಿದ ತಯಾರಿ  ನನಗೆ ಇಷ್ಟವಾಯಿತು. ಒಳ್ಳೆಯ ಶೆಫ್‌ಗಳ ಭೇಟಿಗೆ ಈ ಸಂದರ್ಭದಲ್ಲಿ ಅವಕಾಶ ಸಿಕ್ಕಿತು. ಇಂದಿರಾನಗರದ ಸಿಪಿಕೆ ಅಡುಗೆ ಮನೆಯಲ್ಲಿ ನಾನು ಅಡುಗೆ ತಯಾರಿಯಲ್ಲಿ ನಿರತಳಾಗಿದ್ದಾಗ ಎಲ್ಲರೂ ನನ್ನನ್ನು ಕುತೂಹಲದಿಂದ ನೋಡುತ್ತಿದ್ದರು ಇದೆಲ್ಲಾ ನನಗೆ ಥ್ರಿಲ್ ನೀಡಿತ್ತು.

* ಆಯ್ಕೆ ಪ್ರಕ್ರಿಯೆ ಹೇಗಿತ್ತು?
ಸ್ಕೂಲ್‌ನಲ್ಲಿ ಈ ಸ್ಪರ್ಧೆಗೆ ಸಂಬಂಧಿಸಿದ ಒಂದು ಅರ್ಜಿ ನೀಡಿದರು. ಆ ಅರ್ಜಿಯಲ್ಲಿ ನನ್ನ ಫೋಟೊ ಮತ್ತು ನಾನು ತಯಾರಿಸಿದ ಖಾದ್ಯದ ಚಿತ್ರವನ್ನು ಅಂಟಿಸಿ ಕಳುಹಿಸಿದೆ. ‘ಟಾಪ್‌ ಥರ್ಟಿ’ಯಲ್ಲಿ ನಾನು ಒಬ್ಬಳಾಗಿದ್ದೆ. ನಂತರದ ಸುತ್ತು ಪಿಜ್ಜಾ ತಯಾರಿಸುವುದಾಗಿತ್ತು. ಕೋರಮಂಗಲದಲ್ಲಿರುವ ಸಿಪಿಕೆಯಲ್ಲಿ ಭಾಗವಹಿಸಿದೆ. ಅಲ್ಲಿ ಪಿಜ್ಜಾ ತಯಾರಿಸಿ ಅಂತಿಮ ಸುತ್ತಿಗೆ ಆಯ್ಕೆಯಾದೆ. 

* ಸ್ಪರ್ಧೆಗಾಗಿ ಯಾವ ರೀತಿ ತಯಾರಿ ಮಾಡಿಕೊಂಡಿರಿ?
ಮನೆಯಲ್ಲಿ ದಿನವೂ ಪಿಜ್ಜಾ ಮಾಡುತ್ತಿದ್ದೆ. ತರಕಾರಿಯನ್ನು ಸರಿಯಾದ ರೀತಿಯಲ್ಲಿ ಕತ್ತರಿಸುವುದನ್ನು ಅಭ್ಯಾಸ ಮಾಡಿಕೊಂಡೆ. ಜತೆಗೆ ಪಿಜ್ಜಾದ ಬಗ್ಗೆ ಒಂದಿಷ್ಟು ವಿಷಯವನ್ನು ಸಂಗ್ರಹಿಸಿಟ್ಟುಕೊಂಡೆ. ಪಿಜ್ಜಾಕ್ಕೆ ಬಳಸುವ ಸಾಸ್‌ಗಳನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆಯೂ ಗಮನ ಹರಿಸಿದ್ದೆ. ಇದೆಲ್ಲದರ ಜತೆಗೆ ನನ್ನ ಅಮ್ಮ ನನಗೆ ಬೆಂಬಲವಾಗಿ ನಿಂತರು. ನೆರೆಹೊರೆಯವರು, ಸ್ನೇಹಿತರು ನಾನು ಮಾಡುತ್ತಿದ್ದ ಪಿಜ್ಜಾ ರುಚಿ ನೋಡಿ ಪ್ರೋತ್ಸಾಹ ನೀಡುತ್ತಿದ್ದರು.

* ನೀವು ಯಾವ ಬಗೆಯ ಪಿಜ್ಜಾ ತಯಾರಿ ಮಾಡಿದ್ದೀರಿ? ಅದರ ವಿಶೇಷತೆ ಏನು?
ನಾನು ಒಂಬತ್ತು ಪಿಜ್ಜಾ ಹಾಗೂ ಎರಡು ಬಗೆಯ ಸಾಸ್‌ ಸಿದ್ಧಪಡಿಸಿದ್ದೆ. ಇದಕ್ಕಾಗಿ ಎರಡು ಭಿನ್ನವಾದ ಚೀಸ್‌ ಉಪಯೋಗಿಸಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ತರಕಾರಿ ಪಿಜ್ಜಾ ಆಗಿರುವುದರಿಂದ ಸಾಕಷ್ಟು ತರಕಾರಿಗಳನ್ನು ಉಪಯೋಗಿಸಿದ್ದೆ. ಪುಟಾಣಿ ಟೊಮೆಟೊ, ಕಾರ್ನ್, ಅಣಬೆ, ಕ್ಯಾಪ್ಸಿಕಂ, ಇದರ ಜತೆಗೆ ಹೆಚ್ಚು ರುಚಿ ನೀಡಿದ್ದು ಎಂದರೆ ಬ್ರೊಕೋಲಿ. ಸಾಕಷ್ಟು ಬ್ರೊಕೊಲಿ ಹಾಕಿದ್ದರಿಂದ ಪಿಜ್ಜಾದ ರುಚಿ ಹೆಚ್ಚಿತ್ತು. ನೋಡುವುದಕ್ಕೂ ತುಂಬಾ ಕಲರ್‌ಫುಲ್‌ ಆಗಿತ್ತು. ಅದಕ್ಕೆ ‘ಸಿಮರ್‌ ವೆಜ್ಜಿ ಮೀಲ್’ ಎಂದು ನಾಮಕರಣ ಮಾಡಿದ್ದೇನೆ.

* ನೀವು ಇದೇ ಮೊದಲ ಬಾರಿಗೆ ಇಂಥ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದಾ?
ಹೌದು. ತುಂಬಾ ಖುಷಿ ಸಿಕ್ಕಿತು. ಈ ಸ್ಪರ್ಧೆಯಿಂದ ನನ್ನ ಆತ್ಮವಿಶ್ವಾಸ ಮತ್ತಷ್ಟೂ ಹೆಚ್ಚಿದೆ.

* ಅಡುಗೆಯಲ್ಲಿ ನಿಮಗೆ ಆಸಕ್ತಿ ಮೂಡಿದ್ದು ಹೇಗೆ, ಯಾವಾಗ?
ಮಾಸ್ಟರ್‌ ಶೆಫ್‌ ಕಾರ್ಯಕ್ರಮ ನೋಡುವುದು ನನಗೆ ತುಂಬಾ ಇಷ್ಟ. ಅಮ್ಮ ಅಡುಗೆ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಅವರು ತುಂಬಾ ಖುಷಿಯಿಂದ ಅಡುಗೆ ಮಾಡುತ್ತಾರೆ. ನನಗೆ ನಾಲ್ಕು ವರ್ಷವಿರುವಾಗ ಅಮ್ಮ ನನ್ನನ್ನು ಅಡುಗೆ ಮನೆಯ ಕಟ್ಟೆಯ ಮೇಲೆ ಕೂರಿಸುತ್ತಿದ್ದರು. ನನಗಾಗಿ ಪುಟಾಣಿ ರೋಟಿ ಮಾಡಿಕೊಡುತ್ತಿದ್ದರು. ಇದೆಲ್ಲಾ ನನಗೆ ಅಡುಗೆ ಮಾಡುವುದಕ್ಕೆ ಸ್ಫೂರ್ತಿ ನೀಡಿದವು.

* ನಿಮ್ಮ ಅಡುಗೆ ಪ್ರೀತಿಗೆ ಮನೆಯವರ ಬೆಂಬಲ ಹೇಗಿತ್ತು?
ಸ್ಪರ್ಧೆಯ ವೇಳೆಯಲ್ಲಿ ಅಮ್ಮ ತುಂಬಾ ಬೆಂಬಲ ನೀಡಿದ್ದಾರೆ. ಉಳಿದ ಸಮಯವೂ ಅಷ್ಟೇ ಅಮ್ಮ ನಿಂತು ಮಾರ್ಗದರ್ಶನ ನೀಡುತ್ತಾರೆ.

* ನಿಮಗೆ ಯಾವ ರೀತಿಯ ಆಹಾರ ಇಷ್ಟ? ಸಮಯ ಸಿಕ್ಕಾಗ ಮನೆಯಲ್ಲಿ ಅಡುಗೆ ಮಾಡುತ್ತೀರಾ?
ಪಾಸ್ತಾ, ಪಂಜಾಬಿ ಪರೋಟ ನನಗೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ತರಕಾರಿ ಕತ್ತರಿಸುವುದು, ಡೈನಿಂಗ್‌ ಟೇಬಲ್‌ ಸಿಂಗರಿಸುವುದು ನನಗೆ ಖುಷಿ ನೀಡುವ ಸಂಗತಿಗಳು.

* ಸ್ಪರ್ಧೆಯಲ್ಲಿ ಗೆದ್ದಾಗ ಹೇಗನಿಸಿತು?
ಖುಷಿಯಾಗಿತ್ತು. ಪಿಜ್ಜಾದ ಬೇಸ್‌ ಮಾಡುವುದಕ್ಕೆ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಅಂತಿಮ ಸುತ್ತಿನಲ್ಲಿ ಒಂಬತ್ತು ಬೇಸ್‌ ಮಾಡಿದ್ದೆ. ಇದು ನನ್ನ ಆತ್ಮವಿಶ್ವಾಸಕ್ಕೆ ಸಾಕ್ಷಿ.

* ನಿಮ್ಮ  ಇತರೆ ಹವ್ಯಾಸಗಳೇನು?
ಬ್ಯಾಡ್‌ಮಿಂಟನ್‌ ಆಡುವುದು, ನೃತ್ಯ ಮಾಡುವುದು, ಪುಸ್ತಕ ಓದುವುದು ನನಗೆ ಇಷ್ಟ.

* ಮುಂದೆ ಏನಾಗಬೇಕು ಎಂಬ ಆಸೆ?
ಬ್ಯಾಲೆ ನೃತ್ಯಗಾರ್ತಿ ಆಗಬೇಕು ಎಂಬುವುದು ನನ್ನ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.