ADVERTISEMENT

ಪುಟ್ಟ ಕಾಲುಗಳಿಗೆ ಮಂಡಿ ಮಟ್ಟದ ಶೂ

ಮಂಜುಶ್ರೀ ಎಂ.ಕಡಕೋಳ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಪುಟ್ಟ ಕಾಲುಗಳಿಗೆ ಮಂಡಿ ಮಟ್ಟದ ಶೂ
ಪುಟ್ಟ ಕಾಲುಗಳಿಗೆ ಮಂಡಿ ಮಟ್ಟದ ಶೂ   

ಚಳಿ ಇದೆ ಬಾಮ್ಮಾ... ಈ ಉದ್ದನೆಯ ಪ್ಯಾಂಟ್, ಸಾಕ್ಸ್ ಹಾಕ್ತೀನಿ. ಬಾ... ಚಿನ್ನಾ...’ ಜೇನುತುಂಬಿದ ಅಮ್ಮನ ಸಿಹಿ ಮಾತುಗಳಿಗೆ ಮಗಳು ಕಿವಿ ಕೇಳಿಸಿದರೂ ಕೇಳಿಸದಂತಿದ್ದಳು... ಅಮ್ಮ ಇನ್ನೂ ಒತ್ತಾಯಿಸಿದಾಗ ಎರಡೂವರೆ ವರ್ಷದ ಪುಟಾಣಿ ನನಗೆ ಪ್ಯಾಂಟೂ ಬೇಡ, ಸಾಕ್ಸ್‌ ಹಾಕಲ್ಲ... ಎನ್ನುತ್ತಾ ಸ್ಲೀವ್‌ಲೆಸ್ ಡ್ರೆಸ್‌ನಲ್ಲೇ ಹೊರಗೋಡಿದಳು.

‘ಹೊರಗೆ ಚಳಿ ಅಂದ್ರೆ ಚಳಿ. ಡಾಕ್ಟರ್ ಕಾಲು ಬೆಚ್ಚಗಿಡಬೇಕು ಅಂತ ಹೇಳಿದ್ದಾರೆ. ಇವಳು ಉದ್ದನೆಯ ಪ್ಯಾಂಟ್  ಹಾಕಿಕೊಳ್ಳುವುದಿರಲಿ, ಕಾಲನ್ನು ಬೆಚ್ಚಗಿಡುವ ಅವಳಿಷ್ಟದ ಉದ್ದನೆಯ ಬೂಟಾದರೂ ಹಾಕಿಕೊಂಡರೆ ಸಾಕು’ ಅಂತ ಅಮ್ಮ ನಿಟ್ಟುಸಿರುಬಿಟ್ಟಳು.

ಚಳಿಗಾಲ ಬಂದರೆ ಸಾಕು ಪುಟ್ಟ ಮಕ್ಕಳನ್ನು ಬೆಚ್ಚಗಿಡುವುದರತ್ತಲೇ ತಾಯಿ ಕಾಳಜಿ. ಹೇಗಾದರೂ ಓಲೈಸಿ ಉದ್ದದ ಪ್ಯಾಂಟು, ಸ್ವೆಟರ್, ಸಾಕ್ಸ್, ಶೂ ಹಾಕಿಬಿಟ್ಟರೆ ಸಾಕು ಹೊರಗೆ ತಿರುಗಾಡಿದರೂ ತುಸುವಾದರೂ ಶೀತವನ್ನು ತಡೆಯಬಹುದೆಂಬ ಲೆಕ್ಕಾಚಾರ ಅಮ್ಮನದ್ದು. ಅಮ್ಮನ ಚಳಿಗಾಲದ ಈ ಲೆಕ್ಕಾಚಾರಕ್ಕೆ ಸಹಕಾರ ನೀಡುವಂತಿವೆ ‘ನೀ ಲೆಂಗ್ತ್‌ ಶೂ’ (ಮಂಡಿ ತನಕದ ಶೂ).

ADVERTISEMENT

ಹೌದು. ಚಳಿಗಾಲಕ್ಕೆ ಪುಟ್ಟ ಮಕ್ಕಳಿಗೆ ಮಂಡಿ ಮಟ್ಟದ ಈ ಶೂಗಳು ಹೇಳಿಮಾಡಿಸಿದಂತಿವೆ. ವಿದೇಶಗಳಲ್ಲಿ 60ರ ದಶಕದಲ್ಲೇ ಫ್ಯಾಷನ್ ಲೋಕದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದ ಹೆಗ್ಗಳಿಕೆ ಈ ಮಾದರಿಯ ಶೂಗಳದ್ದು. ಅವುಗಳನ್ನು ಧರಿಸುವುದು ಆಗ ಹೆಣ್ಣು ಮಕ್ಕಳಿಗೆ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಸೇರಿದಂತೆ ಸ್ಥಳೀಯ ಮಾರುಕಟ್ಟೆಗಳಲ್ಲೂ ಮಂಡಿ ಮಟ್ಟದ ಶೂಗಳು ದೊರೆಯುತ್ತಿವೆ.

ಆಗ ತಾನೇ ನಡೆಯಲು ಕಲಿತ ಪುಟ್ಟ ಮಗುವಿನಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರ ತನಕ ‘ನೀ ಲೆಂಗ್ತ್‌ ಶೂ’ ಗಳು ಫ್ಯಾಷನೇಬಲ್ ಎನಿಸಿಕೊಂಡಿವೆ. ನೋಡಲು ಆಕರ್ಷಕವಾಗಿರುವ, ಕಾಲಿನ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವ ಈ ಶೂಗಳು ಆಧುನಿಕತೆಯ ಜತೆಗೆ ಗ್ಲಾಮರಸ್ ನೋಟವನ್ನೂ ನೀಡುತ್ತವೆ. ಲೇಸ್‌ ಮತ್ತು ಜಿಪ್ ಎಂಬ ಎರಡು ಮಾದರಿಗಳಲ್ಲಿ ‘ನೀ ಲೆಂಗ್ತ್‌ ಶೂ’ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಚಳಿಗಾಲಕ್ಕೂ ಈ ಶೂಗಳಿಗೂ ಅವಿನಾಭಾವ ಸಂಬಂಧ. ಪಾದದಿಂದ ಮಂಡಿ ತನಕ ಆವರಿಸುವ ಈ ಶೂಗಳು ಕಾಲುಗಳನ್ನು ಬೆಚ್ಚಗಿಡುತ್ತವೆ. ‘ನೀ ಲೆಂಗ್ತ್‌ ಶೂ’ಗಳಲ್ಲಿ ಎತ್ತರ ಹಿಮ್ಮಡಿಯ ಶೂಗಳು ಸೇರಿದಂತೆ ಫ್ಲ್ಯಾಟ್ ಸೋಲ್ ವಿನ್ಯಾಸದ ಶೂಗಳು ಕೂಡಾ ದೊರೆಯುತ್ತವೆ. ಮಾರುಕಟ್ಟೆಯಲ್ಲಿ ಆಕರ್ಷಕ ಬಣ್ಣಗಳಲ್ಲಿ ದೊರೆಯುವ ಈ ಶೂಗಳು ವೆಲ್ವೆಟ್‌, ಲೆದರ್, ಸ್ಯಾಟಿನ್ ಬಟ್ಟೆ, ರೆಗ್ಸಿನ್ ಮೆಟಿರೀಯಲ್‌ಗಳಲ್ಲೂ ಲಭ್ಯ. ಕಪ್ಪು ಮತ್ತು ಕಂದು ಬಣ್ಣದ ಶೂಗಳು ಈ ಬಾರಿಯ ಚಳಿಗಾಲದ ಫ್ಯಾಷನ್‌ನಲ್ಲಿ ಮುಂಚೂಣಿಯಲ್ಲಿವೆ.

ಪುಟ್ಟ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಚೆನ್ನಾಗಿ ಒಪ್ಪುವ ಈ ಮಾದರಿಯ ಶೂಗಳು ಚಿಣ್ಣರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸದಾ ಒಂದೇ ಮಾದರಿಯ ಶೂಗಳನ್ನು ಧರಿಸುವ ಬದಲು ಶಾಪಿಂಗ್, ಪಾರ್ಟಿ ಅಥವಾ ಸುತ್ತಾಟಕ್ಕೆ ಹೋಗುವಾಗ ಇವುಗಳನ್ನು ಧರಿಸಿದರೆ ಟ್ರೆಂಡಿಯಾಗಿರುತ್ತದೆ.

ಪುಟ್ಟಮಕ್ಕಳಿಗೆ ಎತ್ತರದ ಹಿಮ್ಮಡಿಗಿಂತ ಫ್ಲ್ಯಾಟ್ ಸೋಲ್ ಶೂ ಖರೀದಿಸುವುದು ಉತ್ತಮ. ಇದರಿಂದ ಮಕ್ಕಳು ಆಯತಪ್ಪಿ ಬೀಳುವ ಅಪಾಯವಿರುವುದಿಲ್ಲ ಎನ್ನುತ್ತಾರೆ ಗೃಹಿಣಿ ಕಾವ್ಯಾ ವಿಲಾಸ್.

‘ಮೊನ್ನೆ ಶಿವಾಜಿ ನಗರಕ್ಕೆ ಶಾಪಿಂಗ್‌ಗೆ ಹೋದಾಗ ಮಗಳಿಗಾಗಿ ಗುಲಾಬಿ ಬಣ್ಣದ ನೀಲೆಂಗ್ತ್‌ ಶೂ ಖರೀದಿಸಿದೆ. ₹ 250ಕ್ಕೆ ಆಕರ್ಷಕ ವಿನ್ಯಾಸದ, ನೋಡಲು ಸ್ಟೈಲಿಷ್ ಆಗಿರುವ ಶೂಗಳು ಲಭ್ಯ ಇವೆ. ಶಾರ್ಟ್‌ ಫ್ರಾಕ್, ಶಾರ್ಟ್‌ ಡಂಗ್ರಿ, ಉದ್ದನೆಯ ಫ್ರಾಕ್‌ಗೂ ಇವು ಹೊಂದುತ್ತವೆ. ಇದನ್ನು ಧರಿಸುವಾಗ ಸಾಕ್ಸ್ ಕೂಡಾ ಧರಿಸುವ ಅಗತ್ಯವಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.