ADVERTISEMENT

`ಪ್ಯಾಕ್‌ಗಳ ಹಂಗೆನಗಿಲ್ಲ'

ಎಚ್.ಎಸ್.ರೋಹಿಣಿ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಶ್ರೀನಗರ ಕಿಟ್ಟಿ ಫಿಟ್‌ನೆಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಹೆಚ್ಚು ಹೆಚ್ಚು ನೀರು ಕುಡಿಯುವುದೇ ತಮ್ಮ ತೆಳ್ಳನೆ ಕಾಯದ ಗುಟ್ಟು ಎಂದು ನಗುವ ಅವರು ಕಟ್ಟುನಿಟ್ಟು ಡಯಟ್ ಹಾಗೂ ವ್ಯಾಯಾಮಕ್ಕೆ ಒಗ್ಗಿಕೊಂಡವರಲ್ಲ. ಬದಲಿಗೆ ತೆಳ್ಳನೆ ದೇಹ ನಿರ್ವಹಣೆ ಕಡೆ ಹೆಚ್ಚು ಗಮನ ಹರಿಸಿದವರು.

`ಇಂತಿ ನಿನ್ನ ಪ್ರೀತಿಯ' ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ್ದು, `ಸಂಜು ವೆಡ್ಸ್ ಗೀತಾ'ಗಾಗಿ 8 ಕೆಜಿ ಇಳಿಸಿದ್ದು, `ಹುಡುಗರು'ಗಾಗಿ 7 ಕೆಜಿ ದಪ್ಪ ಆಗಿದ್ದು, ಅದರ ನಡುವೆಯೇ `ಸಂಜು ವೆಡ್ಸ್ ಗೀತಾ' ಚಿತ್ರೀಕರಣಕ್ಕಾಗಿ ಮತ್ತೆ 8 ಕೆಜಿ ತೆಳ್ಳಗಾಗಿದ್ದ ಅವರಿಗೆ ಆಗ ಆಯಾಸ ತುಂಬಾ ಕಾಡಿತ್ತಂತೆ. ಜ್ಯೂಸ್ ಕುಡಿಯುವ ಮೂಲಕ ಅದನ್ನು ಸರಿದೂಗಿಸಿದ್ದ ಅವರು ಆರೋಗ್ಯಕರವಾಗಿರಲು ಕೊಂಚ ವ್ಯಾಯಾಮ ಸಾಕು ಎನ್ನುವಂಥವರು. ಜಿಮ್‌ಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಕಿಟ್ಟಿಗೆ ಅಚ್ಚರಿಯ ಸಂಗತಿಯಾಗಿದೆ.

`ಈ ಮೊದಲು ಎಲ್ಲೆಂದರಲ್ಲಿ ಬಾರ್‌ಗಳು ಕಾಣಿಸುತ್ತಿದ್ದವು. ಈಗ ಜಿಮ್, ಏರೋಬಿಕ್ಸ್, ಯೋಗ ಕೇಂದ್ರಗಳು ಹುಟ್ಟಿಕೊಂಡಿವೆ. ಸಿನಿಮಾದವರಲ್ಲಿ ಮಾತ್ರವಲ್ಲ ಸಾಮಾನ್ಯ ಜನರಲ್ಲಿಯೂ ಫಿಟ್‌ನೆಸ್ ಮೇನಿಯಾ ಶುರುವಾಗಿದೆ' ಎನ್ನುವ ಕಿಟ್ಟಿ ಪ್ರತಿದಿನ ಜಿಮ್‌ಗೆ ಹೋಗುವ ಅಭ್ಯಾಸ ಇಟ್ಟುಕೊಂಡವರಲ್ಲ.
ನಿರ್ದಿಷ್ಟವಾಗಿ ತೂಕ ಇಳಿಸಬೇಕೆಂದು ತೀರ್ಮಾನಿಸಿದಾಗ ಮಾತ್ರ ಜಿಮ್ ಕಡೆ ಹೆಜ್ಜೆ ಹಾಕುವ ಅವರು ಮನೆಯಲ್ಲಿಯೇ ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡುವುದು ಉತ್ತಮ ಎಂದುಕೊಂಡಿದ್ದಾರೆ. ಇನ್ನು ಅನ್ನ ಕಡಿಮೆ ತಿನ್ನುತ್ತಾ, ಎಣ್ಣೆ, ಮಸಾಲೆ ಪದಾರ್ಥಗಳಿಂದ ದೂರ ಉಳಿದರೆ ಅದಕ್ಕಿಂತ ದೊಡ್ಡ ಡಯಟ್ ಬೇರೆ ಇಲ್ಲ ಎಂದು ನಂಬಿದ್ದಾರೆ.

`ದಕ್ಷಿಣ ಭಾರತೀಯರಿಗೆ ಅನ್ನ ತಿನ್ನದಿದ್ದರೆ ಊಟ ಪೂರ್ಣವಾದಂತೆ ಅನಿಸುವುದಿಲ್ಲ. ನಾನು ಅನ್ನ ಕಡಿಮೆ ತಿನ್ನುವುದು ಒಮ್ಮಮ್ಮೆ ಬೇಸರ ಎನಿಸುತ್ತದೆ. ಆದರೂ ನಟನಾಗಿರುವುದರಿಂದ ಅನಿವಾರ್ಯ ಎನಿಸಿದೆ' ಎನ್ನುವ ಕಿಟ್ಟಿ ಅವರಿಗೆ ಸಿಕ್ಸ್‌ಪ್ಯಾಕ್ ಕಡೆಗೆ ಆಕರ್ಷಣೆ ಇಲ್ಲ. `ದೇವರು ಕೊಟ್ಟ ಒಂದು ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಲವು ಸಿನಿಮಾಗಳಿಗೆ ಸಿಕ್ಸ್‌ಪ್ಯಾಕ್ ಅಗತ್ಯ ಇರುತ್ತದೆ. ಆಗ ಮಾಡಲೇಬೇಕಿರುತ್ತದೆ. ಆದರೆ ಕೆಲವರು ಅಗತ್ಯ ಇಲ್ಲದಿದ್ದರೂ ತೋರಿಕೆಗಾಗಿ ಸಿಕ್ಸ್‌ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ನಾನಂತೂ ಪಾತ್ರಕ್ಕೆ ಅಗತ್ಯ ಇದ್ದರೆ ಮಾತ್ರ ಸಿಕ್ಸ್‌ಪ್ಯಾಕ್ ಮಾಡುವೆ' ಎಂದು ಖಡಕ್ಕಾಗಿ ಹೇಳುವ ಕಿಟ್ಟಿ ಅವರದು `ತೊಡುವ ಉಡುಪು ನಮ್ಮನ್ನು ಚೆಂದ ಕಾಣಿಸುತ್ತದೆಯೇ ಹೊರತು ಬರಿ ಮೈ ಅಲ್ಲ' ಎಂಬ ಅಭಿಪ್ರಾಯ.

ಸದ್ಯ `ಅನಾರ್ಕಲಿ', `ಪಾರು ವೈಫ್ ಆಫ್ ದೇವದಾಸ್', `ಟೋನಿ' ಚಿತ್ರಗಳಲ್ಲಿ ತೊಡಗಿಕೊಂಡಿರುವ ಅವರಿಗೆ ಮತ್ತೊಂದು `ಬಾಲ್‌ಪೆನ್' ಚಿತ್ರದಂಥ ಕತೆ ಸಿಕ್ಕರೆ ಸಿನಿಮಾ ಮಾಡುವಾಸೆ. ಕಮರ್ಷಿಯಲ್ಲಾಗಿ `ಬಾಲ್‌ಪೆನ್' ಚಿತ್ರ ಸೋತಿದ್ದರೂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದು ಅವರಿಗೆ ಸಮಾಧಾನ ತಂದಿದೆ. ಇದರ ನಡುವೆಯೇ ಕಿಟ್ಟಿ ಅಣಜಿ ನಾಗರಾಜ್ ಮತ್ತು ಮಾದೇಶ ಅವರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.