ADVERTISEMENT

ಪ್ರಚಲಿತ ಘಟನೆಗಳಿಗೆ ಚಿತ್ರರೂಪ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಮಾರ್ಚ್ 2011, 19:30 IST
Last Updated 11 ಮಾರ್ಚ್ 2011, 19:30 IST

ಚಿತ್ರ ಕಲೆಯ ಮೂಲಕ ಪ್ರಚಲಿತ ವಿದ್ಯಮಾನಗಳ ಅವಲೋಕನ. ಬದುಕಿನ ಸೂಕ್ಷ್ಮ ಸಂವೇದನೆಗಳಿಗೆ ವರ್ಣ ರೂಪ. ಕ್ಯಾನ್‌ವಾಸ್ ಮೇಲೆ ಮನುಷ್ಯ ಮತ್ತು ಪ್ರಾಣಿ ಪ್ರಪಂಚದ ಆಯಾಮಗಳ ಚಿತ್ರಣ. ಇದು ಯುವ ಕಲಾವಿದ ಸುಜಿತ್ ಕುಮಾರ್ ಮಂಡ್ಯ ಅವರ ಕುಂಚದಲ್ಲಿ ಮೈದಳೆದಿರುವ ಕಲಾಕೃತಿಗಳ ವೈಶಿಷ್ಟ್ಯ.

ಸಮಕಾಲೀನ ಮಾಧ್ಯಮದ ಮೂಲಕ ಆಧುನಿಕ ಮತ್ತು ಸಾಂಪ್ರದಾಯಿಕ ಚಿತ್ರಕಲೆಗಳು ಕುಂಚದಲ್ಲಿ ಅರಳಿವೆ. ನೀರಿನ ಸಮಸ್ಯೆಯಿಂದ ಮುಂದೆ ಉಂಟಾಗಬಹುದಾದ ಅಪಾಯಗಳು, ಸೈಕಲ್‌ಗಳಿಗೂ ತಪ್ಪದ ಟ್ರಾಫಿಕ್ ಸಮಸ್ಯೆ, ಧ್ಯಾನ ಮುಖ ನಿತ್ಯಾನಂದನ ಕಾಮ ಕಥಾನಕ, ತಿಂಗಳಿಗೊಮ್ಮೆ ಏರುವ ಸರ್ಕಾರಿ ಬಸ್ಸುಗಳ ಟಿಕೆಟ್ ದರ, ಬಡತನದ ಬದುಕಿನ ವಿವಿಧ ಮಜಲುಗಳು, ಪರಿಸರ ಮತ್ತು ಮನುಷ್ಯನ ಸಂಬಂಧ, ಕೃಷ್ಣನ ವಿವಿಧ ಅವತಾರಗಳು. ಹೀಗೆ ಸಮಾಜದ ಪ್ರತಿ ಘಟನೆ, ಸಮಸ್ಯೆಗಳನ್ನು  ಕಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ.

ಅಕ್ರಾಲಿಕ್, ಡ್ರೈ ಪೇಸ್ಟ್, ವಾಟರ್ ಕಲರ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಲಾಕೃತಿಗಳು ಮೈದಳೆದಿವೆ. ಇವರ ಕಲಾಕೃತಿಗಳಲ್ಲಿ ಸೌಂದರ್ಯಕ್ಕೂ ಪಾಲಿದೆ. ಆಧುನಿಕ ಕಲೆಯಲ್ಲಿ ಅರಳಿರುವ ಲಲನೆ. ಪ್ರಕೃತಿ ಮತ್ತು ಪುರುಷನ ಸಂಬಂಧ, ಹೂದಾನಿಗಳ ವೈವಿಧ್ಯಗಳು ರಸಸ್ವಾದನೆಯ ಸೊಬಗನ್ನು ಹೊತ್ತಿವೆ.

28ರ ಹರೆಯದ ಸುಜಿತ್ ಕುಮಾರ್ ಕಳೆದ 10 ವರ್ಷಗಳಿಂದ ಕಲಾ ಚಟುವಟಿಕೆಯಲ್ಲಿ ಸಕ್ರೀಯ. ಬಾಲ್ಯದಿಂದಲೇ ಕಲೆಯ ಗೀಳು ಹತ್ತಿಸಿಕೊಂಡವರು.

ಕಲಾವಿದ ಆರಂಭದಲ್ಲಿ ಬಣ್ಣ ಮತ್ತು ಕಲಾ ಮಾಧ್ಯಮಕ್ಕೆ ಆದ್ಯತೆ ಕೊಟ್ಟರೂ ನಂತರ ಸಮಾಜದ ಸಮಸ್ಯೆಗಳು, ಜನ ಜೀವನದ ಮೇಲೆ ಬೆಳಕು ಚೆಲ್ಲಲ್ಲಬೇಕು ಎನ್ನುತ್ತಾರೆ ಸುಜೀತ್ ಕುಮಾರ್. ಇಲ್ಲಿಯವರೆಗೆ ರಾಜ್ಯ ಮತ್ತು ಹೊರ ರಾಜ್ಯದ ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕಲಾರಸಿಕರು ಸುಜಿತ್ ಅವರ ಕಲಾಕೃತಿಗಳ ರಸಸ್ವಾದನೆ ಸವಿದಿದ್ದಾರೆ.  ಸೋಮವಾರದವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಇವರ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ.
                                                                                         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.