ADVERTISEMENT

ಪ್ರಚಾರ ತಂತ್ರ; ಜನಪ್ರಿಯತೆ ಮಂತ್ರ

ಬೆಂಗಳೂರಿನ ಅತಿಥಿ

ಸತೀಶ ಬೆಳ್ಳಕ್ಕಿ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST
ಸೌರಭ್ ಯಾಗ್ನಿಕ್
ಸೌರಭ್ ಯಾಗ್ನಿಕ್   

ವಿಶಿಷ್ಟ ಸಿನಿಮಾಗಳ ಮೂಲಕ ಹಾಲಿವುಡ್‌ನ ಅದ್ಭುತ ಜಗತ್ತನ್ನು ಮನೆ ಮನೆಗೂ ಪರಿಚಯಿಸಿದ ಕೀರ್ತಿ ಸೋನಿ ಪಿಕ್ಸ್ ಇಂಗ್ಲಿಷ್ ಚಾನೆಲ್‌ಗೆ ಸಲ್ಲುತ್ತದೆ. ಇದು ಹಾಲಿವುಡ್ ಸಿನಿಮಾ ಮೋಹಿಗಳ ನೆಚ್ಚಿನ ವಾಹಿನಿ. ಸೋನಿ ಪಿಕ್ಸ್ ಯಾವುದೇ ಒಂದು ಹಾಲಿವುಡ್ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರದರ್ಶಿಸುವ ಮುನ್ನ ಅದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಪ್ರಚಾರ ಹಮ್ಮಿಕೊಳ್ಳುತ್ತದೆ.

ಜನರನ್ನು ಕಾರ್ಯಕ್ರಮದ ಒಂದು ಭಾಗವನ್ನಾಗಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಪ್ರಚಾರದ ಮೇಲೆಯೇ ನಮ್ಮ ಚಾನೆಲ್‌ನ ಜನಪ್ರಿಯತೆ ಅಡಗಿದೆ ಎನ್ನುವ ಸೋನಿ ಪಿಕ್ಸ್ ಇಂಗ್ಲಿಷ್ ಚಾನೆಲ್‌ನ ಬಿಸಿನೆಸ್ ಹೆಡ್ ಸೌರಭ್ ಯಾಗ್ನಿಕ್ `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ. 

“ದೇಶದ ಮೊದಲ ಸಂವಹನ ಮಾದರಿಯ ಕಾರ್ಯಕ್ರಮಕ್ಕೆ ಸೋನಿ ಪಿಕ್ಸ್ ಚಾಲನೆ ನೀಡಿದೆ. `ಮೆನ್ ಇನ್ ಬ್ಲಾಕ್-3' ಚಿತ್ರ ಕಿರುತೆರೆಯಲ್ಲಿ ಮಾರ್ಚ್ 10ರಂದು ಬಿಡುಗಡೆಗೊಂಡಿತ್ತು. ಇದೀಗ ಅದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡು `ಆ್ಯಂಟಿ ಏಲಿಯನ್ ಡೇ' ಎಂಬ ಮೂರು ಹಂತದ ಪ್ರಚಾರ ಕಾರ್ಯಕ್ಕೆ ಸೋನಿ ಪಿಕ್ಸ್ ಆರಂಭಿಸಿದೆ.

ಅನ್ಯಗ್ರಹ ಜೀವಿಗಳಿಂದ ಭೂಮಿಯನ್ನು ರಕ್ಷಿಸುವ ಹೊಣೆ ಹೊತ್ತ ವೀಕ್ಷಕರು ಅದರ ಮಾರ್ಗೋಪಾಯಗಳನ್ನು ಹುಡುಕಬೇಕು. ಭೂಮಿಯ ರಕ್ಷಣೆ ಅಂದರೆ, ಬೇಕೆಂದಲ್ಲಿ ಉಗುಳುವವರು, ಕರೆದಲ್ಲಿಗೆ ಬಾರದ ಆಟೊ ಚಾಲಕರು ಇವರೇ ಆ ಅನ್ಯಗ್ರಹ ಜೀವಿಗಳು. ಈ ಮೂಲಕ ಒಂದು ಸಾಮಾಜಿಕ ಸಂದೇಶವನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು' ಎನ್ನುತ್ತಾರೆ ಸೌರಭ್.

ಇದು ತುಂಬ ಜನಪ್ರಿಯವಾದ ಅಭಿಯಾನ. ಇದರಲ್ಲಿ ವೀಕ್ಷಕರು ಟ್ವಿಟ್ಟರ್ ಮೂಲಕ ಏಲಿಯನ್‌ಗಳ ಕುರಿತು ತಮ್ಮ ಮತ ಚಲಾಯಿಸಿದರು. ಈಗಾಗಲೇ ಚಾಲನೆ ನೀಡಲಾಗಿರುವ ಈ ಜಾಥಾಕ್ಕೆ ಏಳು ಮೆಟ್ರೊ ನಗರಿಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು. ಅಲ್ಲದೇ ಫೇಸ್‌ಬುಕ್ ಮೂಲಕ ಒಂದು ಲಕ್ಷ ಅಭಿಮಾನಿಗಳು ಇದರ ಭಾಗವಾಗಿದ್ದಾರೆ.

ADVERTISEMENT

ಇದರ ಮೂಲಕ 10.8 ಲಕ್ಷ ಮಂದಿ ಏಳು ದಿನಗಳಲ್ಲಿ 66 ಸಾವಿರ ಲೈಕ್‌ಗಳನ್ನು ಇದು ಸಂಗ್ರಹಿಸಿದೆ. ಟ್ವಿಟರ್ ಖಾತೆಯಲ್ಲಿ ಈಗಾಗಲೇ 2ಲಕ್ಷ ಸಂದೇಶಗಳು ಶೇಖರಗೊಂಡಿವೆ. `ಮೆನ್ ಇನ್ ಬ್ಲಾಕ್-3' ರೀತಿ ನಾವು `ಅಮೇಜಿಂಗ್ ಸೂಪರ್ ಹೀರೋ' ಎಂಬ ಮತ್ತೊಂದು ಜನಪ್ರಿಯ ಆನ್‌ಲೈನ್ ಅಭಿಯಾನ ಹಮ್ಮಿಕೊಂಡಿದ್ದೆವು.

ಈ ಅಭಿಯಾನದ ಮೂಲಕ ನಾವು ವೀಕ್ಷಕರಲ್ಲಿ ಪ್ರೀತಿ, ಕಾಳಜಿ, ಪರೋಪಕಾರಿ ಮನೋಭಾವ, ಸಾಮಾಜಿಕ ಕಳಕಳಿ, ನಂಬಿಕೆ ಮೊದಲಾದ ಗುಣಗಳನ್ನು ಬೆಳೆಸುವ ಗುರಿಯಿತ್ತು. ಇದರ ಜತೆಗೆ ಅಭಿಯಾನ ಮೂಲಕ ನಾವು ವೀಕ್ಷಕರೊಂದಿಗೆ ಸಂವಹನ ನಡೆಸುವುದರ ಜತೆಗೆ ಸಂಭಾಷಣೆಯನ್ನೂ ನಡೆಸಿದೆವು' ಎನ್ನುತ್ತಾರೆ ಸೌರಭ್.

ಆನ್‌ಲೈನ್ ಅಭಿಯಾನವನ್ನು ಮೂರು ಹಂತದಲ್ಲಿ ನಡೆಸಲಾಯಿತು. ಹಾಲಿವುಡ್ ಸಿನಿಮಾಗಳಲ್ಲಿ ಬರುವ ಸೂಪರ್ ಹೀರೊಗಳ ಸಾಹಸ ಪ್ರವೃತ್ತಿ ಹಾಗೂ ಅವರ ಜನೋಪಕಾರಿ ಗುಣವನ್ನು ಜನರಿಗೆ ತಿಳಿಸುವುದರ ಜತೆಗೆ ಜನಜಾಗೃತಿ ಮೂಡಿಸುವುದು ಇದರ ಉದ್ದೇಶ. ಈ ಸಲುವಾಗಿ ಪ್ರಚಾರ, ಪ್ರೋಮೊ, ಡಿಜಿಟಲ್ ಬ್ಯಾನರ್‌ಗಳನ್ನು ಬಳಕೆ ಮಾಡಲಾಗಿತ್ತು. ಈ ಅಭಿಯಾನ ಜನರಿಗೆ ಮನರಂಜನೆ ನೀಡುವುದರ ಜತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಿತ್ತು.

`ಕಿರುತೆರೆ ಮತ್ತು ಬೆಳ್ಳಿತೆರೆ ವೀಕ್ಷಕರ ನಡುವೆ ಸಾಕಷ್ಟು ಸಾಮ್ಯ ಮತ್ತು ವ್ಯತ್ಯಾಸಗಳಿವೆ. ಜನ ಏನನ್ನು ವೀಕ್ಷಿಸುತ್ತಾರೆ ಮತ್ತು ಯಾಕೆ ವೀಕ್ಷಿಸುತ್ತಾರೆ ಎಂಬುದು ಪ್ರಮುಖವಾದುದು. ವೀಕ್ಷಕರು ಬೆಳ್ಳಿಪರದೆ ಅಥವಾ ಕಿರುತೆರೆಯಲ್ಲಿ ವೀಕ್ಷಿಸುವುದು ಜನಪ್ರಿಯ ಕಾರ್ಯಕ್ರಮಗಳನ್ನಷ್ಟೇ. ಒಂದು ಕಾರ್ಯಕ್ರಮವನ್ನು ವೀಕ್ಷಕರು ನೋಡುತ್ತಾರೆ ಎಂದರೆ, ಅವರ ಮೇಲೆ ಜನಪ್ರಿಯ ತಾರೆಗಳು, ಪ್ರಚಾರ, ಅಭಿಯಾನ ಇವೆಲ್ಲವೂ ಪ್ರಭಾವ ಬೀರುತ್ತವೆ.

ಮತ್ತೆ ಟೀವಿ ವೀಕ್ಷಣೆಗೆ ಮನೆಯ ಸದಸ್ಯರು ತಮ್ಮ ಬಿಡುವಿನ ವೇಳೆಯನ್ನಷ್ಟೇ ಮೀಸಲಿಡುತ್ತಾರೆ. ಆದರೆ, ಥಿಯೇಟರ್‌ಗೆ ಹೋಗಬೇಕೆಂದರೆ ಅದಕ್ಕಾಗಿ ಸಮಯ ನಿಗಧಿ ಮಾಡಿಕೊಳ್ಳುವುದು ಅನಿವಾರ್ಯ. ಹಾಲಿವುಡ್ ಚಿತ್ರವೊಂದು ತಯಾರಾಗಿ ಅದು ಟೀವಿಯಲ್ಲಿ ಪ್ರಸಾರಗೊಳ್ಳಲು ಕನಿಷ್ಟ ಆರರಿಂದ ಎಂಟು ತಿಂಗಳ ಕಾಲಾವಧಿ ಬೇಕು. ಹಾಗೆಯೇ ಬಾಲಿವುಡ್ ಸಿನಿಮಾಗಳಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡರಿಂದ ಮೂರು ತಿಂಗಳು ಬೇಕು' ಎಂಬುದು ಸೌರಭ್ ವಿಶ್ಲೇಷಣೆ.

ಯಾವುದೇ ಒಂದು ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದಕ್ಕೂ, ಕಿರುತೆರೆಯಲ್ಲಿ ಬಿಡುಗಡೆ ಮಾಡುವುದಕ್ಕೂ ಒಂದೇ ಬಗೆಯ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ. ಆಗ ಮಾತ್ರ ನಾವು ವೀಕ್ಷಕರನ್ನು ಸೆಳೆಯಲು ಸಾಧ್ಯ ಎನ್ನುತ್ತಾರೆ ಅವರು.
ಎಂಜಿಎಂ ಪ್ರೊಡಕ್ಷನ್ ಜತೆ ಸೋನಿ ಪಿಕ್ಸ್ ಮೂರು ವರ್ಷದ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಅವರ ಬಳಿ ಇರುವ 50-60ಕ್ಕೂ ಅಧಿಕ ಸಿನಿಮಾಗಳನ್ನು ಪ್ರದರ್ಶಿಸಿಸುವ ಅವಕಾಶವನ್ನು ಸೋನಿ ಪಡೆದುಕೊಂಡಿದೆ.

“ಸೋನಿ ಪಿಕ್ಸ್‌ನಿಂದ `ಸ್ಪೈಡರ್‌ಮ್ಯಾನ್' ಬಿಡುಗಡೆ ಮಾಡುವ ಉದ್ದೇಶವಿದೆ. ಈ ಚಿತ್ರ ಈಗಾಗಲೇ ಜಾಗತಿಕವಾಗಿ ಯಶಸ್ಸು ಪಡೆದಿದೆ. ಭಾರತೀಯರು ಸಹ ಈ ಚಿತ್ರವನ್ನು ಕಿರುತೆರೆಯಲ್ಲಿ ವೀಕ್ಷಿಸಲು ಕಾತರರಾಗಿದ್ದಾರೆ. ನಾವು ಯಾವುದೇ ಒಂದು ಜನಪ್ರಿಯ ಚಿತ್ರವನ್ನು ಕಿರುತೆರೆಯಲ್ಲಿ ಪ್ರದರ್ಶಿಸುವ ಮುನ್ನ ಅದರ ಪ್ರಚಾರ ಕಾರ್ಯಕ್ರಮವನ್ನು ಎಲ್ಲ ಕೋನದಿಂದಲೂ ನಡೆಸಿ ಅತಿ ಹೆಚ್ಚು ಜನರನ್ನು ತಲುಪಲು ಬಯಸುತ್ತೇವೆ.

ಅದಕ್ಕಾಗಿ ನಮ್ಮ ಚಾನೆಲ್ ಜತೆಗೆ ಇತರೆ ಚಾನೆಲ್‌ಗಳನ್ನೂ ಬಳಕೆ ಮಾಡಿಕೊಳ್ಳುತ್ತೇವೆ. ಸೋನಿ ಪಿಕ್ಸ್‌ನಲ್ಲಿ ಮುಂದೆ `ಐರನ್ ಮ್ಯಾನ್ 1 ಮತ್ತು 2', ಮಿಷನ್ ಇಂಪಾಸಿಬಲ್ 1,2,3 ಹಾಗೂ `ಮ್ಯಾನ್ 1' ಮತ್ತು `ಮ್ಯಾನ್ 2' ಚಿತ್ರಗಳನ್ನು ಸದ್ಯದಲ್ಲೇ ಪ್ರದರ್ಶಿಸುವ ಯೋಜನೆ ಇದೆ' ಎಂದು ಮುಂದಿನ ಯೋಜನೆಗಳನ್ನು ಬಿಡಿಸಿಡುತ್ತಾರೆ ಸೌರಭ್.
-ಕೆ.ಎಂ.ಸತೀಶ್ ಬೆಳ್ಳಕ್ಕಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.