ADVERTISEMENT

ಪ್ರವಾಸ ಹೊರಡುವ ದಿನವೇ ಶುಭದಿನ

ರೋಹಿಣಿ ಮುಂಡಾಜೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ಅಲೆಪ್ಪಿಯ ಬೋಟ್‌ ಹೌಸ್‌ನಲ್ಲಿ ಅವನೀಶ್‌ ಜೊತೆ ಮಂಜುನಾಥ ಹೇರ್ಳೆ, ಪ್ರಗ್ಯಾ ಮೊಹಾಪಾತ್ರ
ಅಲೆಪ್ಪಿಯ ಬೋಟ್‌ ಹೌಸ್‌ನಲ್ಲಿ ಅವನೀಶ್‌ ಜೊತೆ ಮಂಜುನಾಥ ಹೇರ್ಳೆ, ಪ್ರಗ್ಯಾ ಮೊಹಾಪಾತ್ರ   

‘ಅವನೀಶ್‌ಗೆ ಯಾವಾಗ ರಜೆ ಶುರುವಾಗುತ್ತದೋ ಎಂದು ಅವನಿಗಿಂತಲೂ ಹೆಚ್ಚು ನಾವಿಬ್ಬರು ಕಾಯ್ತಾ ಇರ್ತೇವೆ. ಶಾಲೆಗೆ ಇರುವಾಗ ಪ್ರವಾಸ ಕರೆದುಕೊಂಡು ಹೋಗುವುದಕ್ಕಿಂತ ನಾವಿಬ್ಬರೂ ಅವನ ರಜಾ ಅವಧಿಯಲ್ಲಿ ರಜೆ ಹಾಕುತ್ತೇವೆ. ದಸರಾ ರಜೆ ಅಥವಾ ಏಪ್ರಿಲ್‌ ಮೇನಲ್ಲಿ ಬರುವ ವಾರ್ಷಿಕ ರಜೆಗೆ ಪ್ರತಿ ವರ್ಷ ಪ್ರವಾಸ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ’ ಎಂದರು ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿ ಪ್ರಗ್ಯಾ ಮೊಹಾಪಾತ್ರ.

‘ಈಗ ಅವನೀಶ್‌ಗೆ ಏಳು ವರ್ಷ. ಪ್ರವಾಸ ತಾಣ ಅಥವಾ ಊರಿನ ಬಗ್ಗೆ ನಿರ್ಧರಿಸೋದಕ್ಕೆ ಅವನಿಗೆ ಆಗೋದಿಲ್ಲ. ಆದರೆ ಬೀಚ್‌, ಕಾಡು, ರೆಸಾರ್ಟ್‌, ಪರ್ವತಪ್ರದೇಶ, ನದಿ, ಹೌಸ್‌ಬೋಟ್‌ ಹೀಗೆ ಅವನಿಗೆ ಇಷ್ಟವಾದ ಸ್ಥಳವನ್ನು ಹೇಳ್ತಾನೆ. ಅದಕ್ಕೆ ತಕ್ಕಂತೆ ಎಷ್ಟು ಪ್ರವಾಸವನ್ನು ಯೋಜಿಸಿ ಆನ್‌ಲೈನ್‌ನಲ್ಲೇ ಎಲ್ಲಾ ಬುಕ್‌ ಮಾಡಿಬಿಡ್ತೀವಿ. ನಮ್ಮ ಪ್ರವಾಸದ ಕೇಂದ್ರಬಿಂದು ಮಗನೇ ಆಗಿರುವ ಕಾರಣ ಅವನಿಗೆ ಇಷ್ಟವಾಗಬಹುದಾದ ಸೌಲಭ್ಯಗಳನ್ನೇ ಆಯ್ಕೆ ಮಾಡ್ತೀವಿ. ಪ್ರವಾಸ ಹೋದ ಮೇಲೆ ಕೂಡಾ ಬೋರ್‌ ಆಗುವುದಿದೆ. ಆದ್ದರಿಂದ ಅಲ್ಲಿ ಸಮಯ ಕಳೆಯಲು ಏನೇನಿದೆ ಎಂಬುದನ್ನೂ ಮೊದಲೇ ಪರಿಚಯಸ್ಥರಿಂದ ಮತ್ತು ಗೂಗಲ್‌ನಿಂದ ತಿಳಿದುಕೊಳ್ಳುತ್ತೇವೆ’ ಎಂದು ಪ್ರಗ್ಯಾ ಗಂಡ ಮಂಜುನಾಥ ಹೇರ್ಳೆ ಹೇಳುತ್ತಾರೆ.

‘ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಪ್ರವಾಸ ಕರೆದುಕೊಂಡು ಹೋಗುವುದರಿಂದ ಅವರಲ್ಲಿ ನಿರೋಧಕ ಶಕ್ತಿ (ರೆಸಿಸ್ಟೆನ್ಸ್ ಪವರ್‌) ಬೆಳೀತಾ ಹೋಗುತ್ತದೆ. ಹಾಗಾಗಿ ಅವನು ಸಣ್ಣ ಮಗುವಿರುವಾಗಲೇ ನಾವು ಊಟಿಗೆ ಕರೆದುಕೊಂಡು ಹೋಗಿದ್ದೆವು. ಆರೋಗ್ಯದ ಸಮಸ್ಯೆ ಏನೂ ಕಾಡಲಿಲ್ಲ. ಕಳೆದ ವರ್ಷ ಕೇರಳದ ಬೋಟ್‌ ಹೌಸ್‌ ಮತ್ತು ಹಿಲ್‌ ಸ್ಟೇಷನ್‌ ನೋಡಬೇಕು ಎಂದು ಆಸೆಪಟ್ಟಿದ್ದ. ಅಲೆಪ್ಪಿ, ಮುನ್ನಾರ್‌, ಕೊಚ್ಚಿಯಲ್ಲಿ ಬಾಹುಬಲಿ ಚಿತ್ರದ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿದ್ದೆವು. ಅಲ್ಲಿ ಯಾವುದೇ ಭಯವಿಲ್ಕುಲದೆ ದುರೆ ಸವಾರಿ ಮಾಡಿದ. ಪ್ರವಾಸ, ಮಕ್ಕಳ ಪಾಲಿಗೆ ಮನರಂಜನೆಯ ಜೊತೆಗೆ ನೈತಿಕ ಶಿಕ್ಷಣ ಕೊಡುವ ಬಾಬತ್ತೂ ಹೌದು. ಅವನೀಶನನಲ್ಲಿರುವ ಧೈರ್ಯ, ಶಿಸ್ತು, ಹೊಂದಾಣಿಕೆ ಮನೋಭಾವಗಳಲ್ಲಿ ಪ್ರವಾಸಗಳ ಪಾತ್ರವೂ ಇದೆ ಎಂದು ನಾವು ಭಾವಿಸುತ್ತೇವೆ’ ಎನ್ನುತ್ತಾರೆ, ಮಂಜುನಾಥ್‌ ಮತ್ತು ಪ್ರಗ್ಯಾ.

ADVERTISEMENT

*


ರಜೆ ಎಂದರೆ ಆಟ, ಮೋಜು, ಪಿಕ್‌ನಿಕ್‌
ಸಂಗೀತ ಕ್ಷೇತ್ರದಲ್ಲಿ ಕೊನ್ನಕ್ಕೋಲ್‌ ಮೂಲಕ ಜನಪ್ರಿಯರಾಗಿರುವ ಸೋಮಶೇಖರ ಜೋಯಿಸ್‌ ಅವರು ತಮ್ಮ ಮಗಳು, ಆರು ವರ್ಷದ ಮಗಳು ಅನ್ನು ರಜಾ ದಿನಗಳಲ್ಲಿ ಅವಳ ಪಾಡಿಗೆ ಆಟವಾಡಲು ಬಿಡುತ್ತಾರಂತೆ. ರಜಾ ದಿನಗಳೆಂದರೆ ಅವಳಿಗೆ ಮನೋ ಇಚ್ಛೆ ಕಾಲ ಕಳೆಯುವ ಸಮಯ.

‘ನನ್ನ ಪತ್ನಿ ರಮ್ಯಾ ಸಾಫ್ಟ್‌ವೇರ್‌ ಎಂಜಿನಿಯರ್‌. ನಾನು ಸಂಗೀತ ಕಛೇರಿಗಳಲ್ಲಿ ಬ್ಯುಸಿಯಾಗಿರುತ್ತೇನೆ. ಹಾಗಾಗಿ ವಾರಾಂತ್ಯಗಳಲ್ಲಿ ಅರ್ಧ ದಿನವೋ, ಒಂದಿಡೀ ದಿನವೋ ಸಣ್ಣ ಪುಟ್ಟ ಪಿಕ್‌ನಿಕ್‌ ಹೋಗುವುದು ಇದ್ದೇ ಇರುತ್ತದೆ. ಮಗಳಿಗಾಗಿ ಸಮಯ ಕೊಡದಷ್ಟು ನಾವು ವರ್ಕೋಹಾಲಿಕ್‌ ಅಲ್ಲ. ಪ್ರವಾಸವೆಂದ ತಕ್ಷಣ ಯಾವುದೋ ದೂರದ ಊರಿಗೆ ಹೋಗಬೇಕು ಎಂಬ ಕಟ್ಟುಪಾಡು ಹಾಕಿಕೊಳ್ಳಬೇಕಿಲ್ಲ. ಮಕ್ಕಳಿಗೆ ಶಾಲೆ ಮತ್ತು ಮನೆಯ ಏಕತಾನತೆಯಿಂದ ಹೊರತಂದು ಹೊಸ ಹುಮ್ಮಸ್ಸು ತುಂಬುವ ಮತ್ತು ಅಪ್ಪ ಅಮ್ಮನೊಂದಿಗೆ ಒಂದಿಡೀ ದಿನ ಕಳೆದೆವು ಎಂಬ ಖುಷಿ ತುಂಬಲು ಆಗಾಗ ಅವಳೊಂದಿಗೆ ಹೊರಗೆ ಸುತ್ತಾಡಲು ಹೋಗುತ್ತಲೇ ಇರುತ್ತೇವೆ. ಈ ಬಾರಿ ಅವಳು ಯು.ಕೆ.ಜಿ. ಮುಗಿಸಿದ್ದಾಳಷ್ಟೇ. ಹಾಗಾಗಿ ಅವಳ ಈ ವಯಸ್ಸಿಗೆ ಮೈಸೂರೂ ಒಂದೇ ಮಲೇಷ್ಯಾವೂ ಒಂದೇ. ಸ್ವಲ್ಪ ದೊಡ್ಡವಳಾದ ಮೇಲೆ ದೂರ ಪ್ರವಾಸ ಕರೆದುಕೊಂಡು ಹೋಗಬಹುದು’ ಎಂಬುದು ಸೋಮಶೇಖರ್‌ ಅಭಿಪ್ರಾಯ.

‘ನಾವಿರೋದು ಉತ್ತರಹಳ್ಳಿಯಲ್ಲಿ, ಅಜ್ಜ ಅಜ್ಜಿ ಮನೆ ಪದ್ಮನಾಭನಗರದಲ್ಲಿ. ಅಲ್ಲಿ ಹೋದರೆ ಇನ್ನೂ ಒಂದಷ್ಟು ಮಕ್ಕಳು ಸಿಗ್ತಾರೆ. ಹಾಗಾಗಿ ಅಲ್ಲಿಗೆ ಹೋಗೋದು ಅವಳಿಗೆ ತುಂಬಾ ಇಷ್ಟ. ಬೆಳಿಗ್ಗೆ ಅವಳಾಗಿ ಎದ್ದೇಳುವವರೆಗೂ ಕಾಯುತ್ತೇವೆ. ಶಾಲೆಗೆ ಹೋಗುವಾಗ ಎಲ್ಲಾ ಬಗೆಯ ಒತ್ತಡ ಇದ್ದೇ ಇರುತ್ತದೆ. ಹಾಗಾಗಿ ರಜೆಯ ದಿನಗಳಲ್ಲಿ ಅವಳು ಸ್ವಚ್ಛಂದವಾಗಿ ಕಾಲ ಕಳೆಯಬೇಕು ಎಂಬುದೇ ನಮ್ಮ ಆಸೆ. ಸಂಗೀತ ಮತ್ತು ನೃತ್ಯ ತರಗತಿಗೆ ಹೋಗಿ ಬಂದ ಮೇಲೆ ಅವಳ ಆಯ್ಕೆಯಂತೆ ಏನಾದರೂ ಕಾರ್ಯಕ್ರಮ ಪ್ಲಾನ್‌ ಮಾಡುತ್ತೇವೆ. ಏನಿಲ್ಲವೆಂದರೂ ಅವಳೊಂದಿಗೆ ಎಲ್ಲರೂ ಸೇರಿ ಆಟವಾದರೂ ಆಡುತ್ತೇವೆ. ಮೊನ್ನೆ ಶನಿವಾರವಷ್ಟೇ ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿರುವ ‘ಪ್ರಾಣಿ’ಗೆ ಭೇಟಿ ನೀಡಿದೆವು. ಅಲ್ಲಿನ ಪ್ರಾಣಿಗಳೊಂದಿಗೆ ಆಟವಾಡುತ್ತಾ ಕಾಲ ಕಳೆದಳು. ರಜೆ ಮುಗಿಯುವುದರೊಳಗೆ ಇಂತಹ ಸಣ್ಣ ಪುಟ್ಟ ಪಿಕ್‌ನಿಕ್‌, ಡೇ ಔಟ್‌ಗಳು ನಡೆಯುತ್ತಲೇ ಇರುತ್ತವೆ’ ಎಂದು ವಿವರಿಸುತ್ತಾರೆ, ರಮ್ಯಾ.

*


ಮಗನ ರಜೆಯಲ್ಲಿ ಹಳ್ಳಿ ಕಡೆಗೆ
ಭವ್ಯಶ್ರೀ ರೈ ಮತ್ತು ಪತಿ ಸುರೇಶ್‌ ರೈ ಕಿರುತೆರೆ ಮತ್ತು ಹಿರಿತೆರೆ ನಟನೆಯಲ್ಲಿ ಸದಾ ಬ್ಯುಸಿ. ಆದರೆ ಶಾಲೆಗೆ ರಜೆ ಮಗ ಸುಪ್ರಭಮ್‌ ರೈಗೆ ಶಾಲೆಗೆ ರಜೆ ಸಿಗುತ್ತಲೇ ಸಾಧ್ಯವಾದಷ್ಟೂ ಚಿತ್ರೀಕರಣಗಳನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾರಂತೆ.

‘ಅವನಿಗೆ ರಜೆ ಸಿಗುವುದಕ್ಕೂ ಮೊದಲೇ ನಮ್ಮಿಬ್ಬರ ಊರಿಗೆ (ಮಂಗಳೂರು ಬಳಿ) ಹೋಗಿಬಿಡುತ್ತೇವೆ. ಹಳ್ಳಿಯ ವಾತಾವರಣದಲ್ಲಿ ಅವನು ಕಳೆಯಬೇಕು ಎಂಬುದು ಮುಖ್ಯ ಕಾರಣ. ಹಿರಿಯರು, ಸಂಬಂಧಿಕರು ಅಲ್ಲಿಯೇ ಇರುವುದರಿಂದ ಸಂಬಂಧಗಳ ನಂಟು ಇರಬೇಕು ಎಂಬುದು ಇನ್ನೊಂದು ನೆಪ. ಊರಿಗೆ ಹೋದಾಗ ಸಮುದ್ರದಂಡೆಗೆ ಪ್ರತಿದಿನ ಹೋಗುತ್ತೇವೆ. ಅಲ್ಲಿ ಆಟವಾಡಿ, ಈಜಾಡಿ ಸಂಭ್ರಮಿಸುತ್ತೇವೆ. ಅವನಿಗೆ ಬೀಚ್‌ ಎಂದರೆ ಬಹಳ ಇಷ್ಟ. ನಮ್ಮೊಂದಿಗೆ ನನ್ನ ತಂಗಿಯ ಕುಟುಂಬವೂ ಬರುವ ಕಾರಣ ಅವಳ ಮಗಳು ಮತ್ತು ಇವನು ಜೊತೆಯಾಗಿರುತ್ತಾರೆ. ಒಟ್ಟಿನಲ್ಲಿ ಮಗನಿಗೆ ಶಾಲೆಗೆ ರಜೆ ಎಂದರೆ ನಮಗೂ ರಜೆ.

*


ವರ್ಷಕ್ಕೊಂದು ಪ್ರವಾಸ
‘ಮಗ ಆರ್ಣವ್‌ಗೆ ಶಾಲೆಗೆ ವಾರಾಂತ್ಯದ ರಜೆ ಇದ್ದಾಗಲೂ ನನ್ನ ಕ್ಲಿನಿಕ್‌ಗೆ ಕರೆತರುತ್ತೇನೆ. ಮನೆಯಲ್ಲೇ ಇದ್ದರೂ ಅವನು ಬ್ಯುಸಿಯಾಗಿರುವಂತೆ ಚಿತ್ರಕಲೆ, ಬ್ಲಾಕ್‌ಗಳನ್ನು ಜೋಡಿಸಿ ಚಿತ್ರ ಸಿದ್ಧಪಡಿಸುವ ಪಜಲ್‌ಗಳ ಆಟ, ಮುಖವಾಡ ತಯಾರಿಸುವುದು ಹೀಗೆ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವಂತೆ ಮಾಡುತ್ತೇವೆ. ನನ್ನ ಪತಿ ಡಾ. ಶ್ರೀನಿವಾಸ ಹೊಳ್ಳ ಆರ್ಥೊಪೆಡಿಕ್‌ ತಜ್ಞರು. ಅವರು ಮನೆಗೆ ಬಂದ ಮೇಲೆ ಅವರ ಸಮಯವೆಲ್ಲಾ ಆರ್ಣವ್‌ಗೇ ಮೀಸಲು. ಅಕ್ಟೋಬರ್‌ ಇಲ್ಲವೇ ಏಪ್ರಿಲ್‌–ಮೇ ತಿಂಗಳ ರಜೆಯಲ್ಲಿ ಅವನೊಂದಿಗೆ ಎಲ್ಲಾದರೂ ಪ್ರವಾಸ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ನಾವು ಬ್ಯುಸಿ ಇದ್ದೇವೆ ಎಂದು ಅವನಿಗೆ ಶಾಲೆ ಇರುವಾಗ ರಜೆ ಹಾಕಿಸಿ ಪ್ರವಾಸ ಕರೆದುಕೊಂಡು ಹೋಗುವುದು ಒಳ್ಳೆಯ ಮಾದರಿಯಲ್ಲ. ಅದಕ್ಕಾಗಿ ನಾವಿಬ್ಬರೂ ಅವನ ರಜಾ ದಿನಗಳಲ್ಲಿ ಪ್ರವಾಸ, ಪಿಕ್‌ನಿಕ್‌ ಯೋಜನೆ ಹಾಕುತ್ತೇವೆ’ ಎನ್ನುತ್ತಾರೆ, ಕೋಣನಕುಂಟೆ ಬಳಿಯ ಚರ್ಮ ರೋಗ ತಜ್ಞೆ ಡಾ.ಶಿಲ್ಪಾ ಭಟ್‌.

‘ಮಕ್ಕಳು ಶಾಲಾ ದಿನಗಳಲ್ಲಿ ನಾವು ಮತ್ತು ಶಿಕ್ಷಕರ ಹೇಳಿದಂತೆ ಕೇಳುತ್ತಾರೆ, ಅಕಾಡೆಮಿಕ್‌ ಆಗಿ ಬ್ಯುಸಿ ಇರುತ್ತಾರೆ. ಕನಿಷ್ಠ ಪಕ್ಷ ರಜಾ ದಿನಗಳಲ್ಲಿಯಾದರೂ ನಾವು ಅವರಿಗೆ ಮನರಂಜನೆಗೆ ಅವಕಾಶ ನೀಡದೆ ನಮ್ಮ ದುಡಿಮೆಯಲ್ಲಿ ತೊಡಗಿಸಿಕೊಂಡರೆ ಹೇಗೆ? ಅದಕ್ಕೆ ನಾವಿಬ್ಬರೂ ವರ್ಷಕ್ಕೊಂದು ಪ್ರವಾಸ ಎಂಬ ಶಿಸ್ತಿಗೆ ಬದ್ಧರಾಗಿದ್ದೇವೆ’ ಎಂದು ನಗುತ್ತಾರೆ ಡಾ.ಶ್ರೀನಿವಾಸ್‌.

*


ಮೂವರೂ ಸೇರಿ ಯೋಜನೆ ರೂಪಿಸ್ತೀವಿ
ಸೆಲೆಬ್ರಿಟಿ ಸೌಂದರ್ಯ ಚಿಕಿತ್ಸಕಿ ಎಂದೇ ಗುರುತಿಸಿಕೊಂಡಿರುವ ದೀಪಾ ತಮ್ಮ ಮಗಳು ಪ್ರಜ್ಞಾಳಿಗಾಗಿ ಪ್ರತಿ ವರ್ಷ ದೂರದೂರಿಗೆ ಪ್ರವಾಸ ಹಮ್ಮಿಕೊಳ್ಳುತ್ತಾರಂತೆ. ಮೆಡಿಕಲ್‌ ರೆಪ್ರಸೆಂಟೇಟಿವ್‌ ಆಗಿರುವ ಪತಿ ನಾಗೇಶ್‌, ಅಮ್ಮ ಮಗಳ ಯೋಜನೆಗೆ ಸದಾ ಕೈಜೋಡಿಸುತ್ತಾರಂತೆ. ಮೂವರೂ ಕುಳಿತು, ರಜೆಗೆ 2–3 ತಿಂಗಳಿರುವಾಗಲೇ ಯೋಜನೆ ಸಿದ್ಧಪಡಿಸುತ್ತಾರಂತೆ.

‘ಕಳೆದ ವರ್ಷ ಕೈಗೊಂಡ ಎರಡು ತಿಂಗಳ ಪ್ರವಾಸ ಅವಿಸ್ಮರಣೀಯವಾದುದು. ಡಾರ್ಜಿಲಿಂಗ್‌, ನೇಪಾಳ ಮತ್ತು ಸಿಲಿಗುರಿಗೆ ಭೇಟಿ ನೀಡಿದ್ದೆವು. ಮೂರು ತಿಂಗಳಿಗೆ ಮೊದಲೇ ಬುಕಿಂಗ್‌ ಮಾಡಿದ್ದರಿಂದ ವಿಮಾನ ಯಾನ, ಹೋಟೆಲ್‌ ವೆಚ್ಚದಲ್ಲಿ ಭರ್ಜರಿ ಉಳಿತಾಯವಾಗಿತ್ತು. ಪ್ರತಿ ಬೇಸಿಗೆಯಲ್ಲಿ ತಂಪಾದ ಗಿರಿಧಾಮಗಳಿಗೆ ಪ್ರವಾಸ ರೂಪಿಸುತ್ತೇವೆ. ಮೂವರೂ ಡ್ರೆಸ್ ಕೋಡ್‌ ಪಾಲಿಸುವುದು, ಆಯಾ ಪ್ರದೇಶದ ವಿಶೇಷ ವಸ್ತುಗಳನ್ನು ಖರೀದಿಸುವುದು, ವಿಶಿಷ್ಟ ಆಹಾರಗಳನ್ನು ಸೇವಿಸುವುದು, ಸಾಧ್ಯವಾದಷ್ಟೂ ಮೊಬೈಲ್‌ ಫೋನ್‌ ಮತ್ತು ಟಿ.ವಿ.ಯಿಂದ ದೂರವಿರುವುದು ನಮ್ಮ ಪ್ರವಾಸದ ಮುಖ್ಯಾಂಶ ಆಗಿರುತ್ತದೆ’ ಎಂದು ವಿವರಿಸುತ್ತಾರೆ, ದೀಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.