ADVERTISEMENT

ಪ್ರಸಾಧನ ಕಥನ

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST
ನಟಿ ಭವ್ಯಾಗೆ ಮೇಕಪ್
ನಟಿ ಭವ್ಯಾಗೆ ಮೇಕಪ್   

ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕವನ್ನು ಅಪ್ಪಿಕೊಂಡವರು ಫಣೀಶ್ ಕಶ್ಯಪ್. ಮೊಗ ಅಂದವಿರಲಿ, ಇಲ್ಲದೇ ಇರಲಿ, ಅವರ ಪಳಗಿದ ಕೈಗೆ ಸಿಕ್ಕರೆ ಚಹರೆಗೆ ಅಂದದ ಪದರು. ತಿದ್ದಿ ತೀಡಿ ಮುಖವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಜೀವನ ಸಾಗಿಸಲು ಸಂಪಾದನೆ ಬೇಕೇ ಹೊರತು ಸಂಪಾದನೆಯೇ ಜೀವನವಾಗಬಾರದು ಎಂಬುದು ಇವರ ಮಾತು. ಹದಿನೆಂಟು ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ಫಣೀಶ್ ಅವರಿಗೆ ಎಂದಿಗೂ ಈ ಕೆಲಸ ಬೇಸರ ಮೂಡಿಸಿಲ್ಲವಂತೆ. ಹೊಸ ಹೊಸ ಪ್ರಯೋಗ ಮಾಡುವುದೇ ಇವರ ನೆಚ್ಚಿನ ಹವ್ಯಾಸ. ‘ಸಾಕಷ್ಟು ನೀರು ಕುಡಿಯಿರಿ, ಮುಖದ ಕಾಂತಿ ಹೆಚ್ಚುತ್ತದೆ’ –ಇದು ಇವರು ನೀಡುವ ಬ್ಯೂಟಿ ಟಿಪ್ಸ್.

ನಿಮ್ಮ ಕೌಟುಂಬಿಕ ಹಿನ್ನೆಲೆ, ಶಿಕ್ಷಣದ ಬಗ್ಗೆ ಹೇಳಿ?
ನಾನು ಬೆಂಗಳೂರಿನವನು. ನಮ್ಮದು ಚಿಕ್ಕ ಕುಟುಂಬ. ಪಿಯುಸಿವರೆಗೆ ಓದಿದ್ದೇನೆ. ಅಪ್ಪ–ಅಮ್ಮನಿಗೆ ಮಗ ಕೈತುಂಬಾ ಸಂಬಳ ತರಬೇಕು ಎಂಬ ಆಸೆ. ನನಗೋ ಮೇಕಪ್ ಕಲಾವಿದನಾಗುವ ಬಯಕೆ. ಮೇಕಪ್‌ ಕಲಾವಿದನಾಗಿದ್ದು ತೀರ ಆಕಸ್ಮಿಕವೇನೂ ಅಲ್ಲ.

ಹೈಸ್ಕೂಲು, ಕಾಲೇಜಿನಲ್ಲಿರುವಾಗ ನಾಟಕದಲ್ಲಿ ಭಾಗವಹಿಸುತ್ತಿದ್ದೆ. ಆಗ ಕನ್ನಡಿ ಮುಂದೆ ನಿಂತು ಮುಖಕ್ಕೆ ಒಂದಿಷ್ಟು ಪೌಡರ್, ತುಟಿಗೆ ಕಂಡೂ ಕಾಣದಂತೆ ರಂಗು ತೀಡಿಕೊಳ್ಳುತ್ತಿದ್ದಾಗ ಎಲ್ಲರೂ ಎಷ್ಟು ಚೆನ್ನಾಗಿ ಮೇಕಪ್ ಮಾಡಿಕೊಳ್ಳುತ್ತೀಯ ಎಂದು ಹೊಗಳುತ್ತಿದ್ದರು.

ಒಂದು ದಿನ ಕನ್ನಡಿಯ ಮುಂದೆ ನಿಂತು ನನ್ನನ್ನೇ ನೋಡಿಕೊಂಡೆ. ನಾನ್ಯಾಕೆ ಮೇಕಪ್ ಕಲಾವಿದನಾಗಬಾರದು ಎಂದು ಅನಿಸಿತು. ಆ ಕ್ಷಣದ ನಿರ್ಧಾರ ನನ್ನ ಜೀವನವನ್ನು ಬದಲಾಯಿಸಿಬಿಟ್ಟಿತು.

ಮೇಕಪ್‌ ಕಲಾವಿದ ಮೂರ್ತಿ ಬೆಂಗ್ಳೂರ್‌ಕರ್ ಅವರ ಬಳಿ ಹೋದೆ. ಅವರು ನನ್ನ ಮೊದಲ ಗುರು. ಮೇಕಪ್ ಸೂಕ್ಷ್ಮಗಳನ್ನು ಚೆನ್ನಾಗಿ ತಿಳಿಸಿಕೊಟ್ಟರು. ಅವರ ಅನುಭವದ ಗರಡಿಯಲ್ಲಿ ಬೆಳೆದ ನನಗೆ ವೃತ್ತಿ ಜೀವನ ಕಷ್ಟವಾಗಲಿಲ್ಲ.

ಇಂದು ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಬಣ್ಣದ ಬದುಕೇ ನನಗೆ ಕಣ್ಣು ತುಂಬ ಕನಸು, ನಿದ್ದೆ ನೀಡಿದೆ.

ಮೇಕಪ್ ಬಗ್ಗೆ ನೀವು ನೀಡುವ ವ್ಯಾಖ್ಯಾನ?
ಮುಖಕ್ಕೆ ಬಣ್ಣ ಹಚ್ಚುವುದು ಸುಲಭದ ಕೆಲಸವಲ್ಲ. ಮೇಕಪ್ ಕಲಾವಿದ ಎರಡನೇ ಬ್ರಹ್ಮನಿದ್ದಂತೆ. ಬ್ರಹ್ಮ ಒಂದು ರೂಪ ನೀಡಿರುತ್ತಾನೆ. ಮೇಕಪ್‌ ಕಲಾವಿದರ ಕೈಯಲ್ಲಿ ಮುಖವೊಡ್ಡಿದಾಗ ಅವರು ಒಂದು ರೂಪ ನೀಡುತ್ತಾರೆ. ಚಹರೆ ಬದಲಾಯಿಸುವುದು ಕಠಿಣ ಕಲೆ.

ಸಿನಿಮಾದಲ್ಲಿ ನಟ–ನಟಿಯರು ನಮ್ಮ ಮೇಲೆ ನಂಬಿಕೆಯಿಟ್ಟು ಮುಖ ನೀಡುತ್ತಾರೆ. ಅವರ ನಂಬಿಕೆ ಉಳಿಸಿಕೊಳ್ಳುವುದರ ಜತೆಗೆ ಯಾವುದೇ ರೀತಿ ಹಾನಿಯಾಗದಂತೆ ಮೇಕಪ್ ಮಾಡುವುದು ನಮ್ಮ ಜವಾಬ್ದಾರಿ. ಈ ಕೆಲಸ ಶ್ರದ್ಧೆ, ತಾಳ್ಮೆಯನ್ನು ಬೇಡುತ್ತದೆ. ಜತೆಗೆ ಮೇಕಪ್ ಕಲಾವಿದನಾದವನು ಸದಾ ಕ್ರಿಯಾಶೀಲನಾಗಿರಬೇಕು. ಪ್ರಯೋಗಕ್ಕೆ ತನ್ನನ್ನು ತಾನು ತೆರೆದುಕೊಂಡರಷ್ಟೇ ಈ ಕ್ಷೇತ್ರದಲ್ಲಿ ಉಳಿಗಾಲ.

ಮೇಕಪ್ ಕಲಾವಿದನಾಗಿ ಎಷ್ಟು ವರ್ಷದ ಅನುಭವ? ನಿಮ್ಮಿಂದ ಮೇಕಪ್ ಮಾಡಿಸಿಕೊಂಡ ಕಲಾವಿದರು ಯಾರು?
ಹದಿನೆಂಟು ವರ್ಷದಿಂದ ಈ ಕ್ಷೇತ್ರದಲ್ಲಿದ್ದೇನೆ. ನಾನು ಮೊದಲು ಮೇಕಪ್ ಮಾಡಿದ್ದು ನಟಿ ಸುಮನ್ ನಗರ್ಕರ್್ಗೆ. ನಂತರ ಸುಹಾಸಿನಿ, ಅಂಬಿಕಾ, ಭವ್ಯಾ, ಅವರಿಗೆ ಮೇಕಪ್ ಮಾಡಿದ್ದೇನೆ. ಗಿರೀಶ್ ಕಾರ್ನಾಡ್, ನಾಗತಿಹಳ್ಳಿ ಚಂದ್ರಶೇಖರ, ರಮೇಶ್, ಕಮಲ ಹಾಸನ್, ಧ್ಯಾನ್ ಅವರಿಗೆ ಮೇಕಪ್ ಮಾಡಿದ ಅನುಭವ ನನ್ನದು. ಈ ಎಲ್ಲಾ ಕಲಾವಿದರ ಜತೆಗೆ ಕೆಲಸ ಮಾಡಿದ್ದು ಹೊಸ ಹೊಸ ಅನುಭವಗಳನ್ನು ನೀಡಿದೆ. ಎಲ್ಲವೂ ಪರಿಪೂರ್ಣವಾಗಬೇಕೆಂಬ ಶಿಸ್ತನ್ನು ಇವರೆಲ್ಲರ ಬಳಿ ಕಲಿತಿದ್ದೇನೆ. ಸುಹಾಸಿನಿ ಸಹಜ ಸುಂದರಿ. ಅವರಿಗೆ ಹೆಚ್ಚು ಮೇಕಪ್ ಇಷ್ಟವಾಗುವುದಿಲ್ಲ. ಭವ್ಯಾ ಶಿಸ್ತು, ಪರಿಪೂರ್ಣತೆಗೆ ಹೆಚ್ಚು ಒತ್ತು ನೀಡುತ್ತಾರೆ. ಕಮಲ ಹಾಸನ್ ಅವರ ಜತೆ ಕೆಲಸ ಮಾಡಿದ್ದು ಇಂದಿಗೂ ನನಗೆ ಹೆಮ್ಮೆ ಅನಿಸುತ್ತದೆ. ಅಷ್ಟು ದೊಡ್ಡ ನಟನಾದರೂ ಸ್ವಲ್ಪವೂ ಅಹಂ ಇಲ್ಲದೆ, ‘ಚೆನ್ನಾಗಿ ಮೇಕಪ್ ಮಾಡಿದ್ದೀರಿ’ ಎಂದು ಬೆನ್ನು ತಟ್ಟಿದಾಗ ನನ್ನ ಖುಷಿ ಮೇರೆ ಮೀರಿತ್ತು.

ಯಾವ ರೀತಿಯ ಕ್ರೀಂ, ಪೌಡರ್‌ಗಳನ್ನು ಉಪಯೋಗಿಸುತ್ತೀರಿ? ನೀವು ಮಾಡಿದ ಮೇಕಪ್‌ನಿಂದ ಯಾರಿಗಾದರೂ ಅಲರ್ಜಿಯಾಗಿತ್ತೆ?
ಮ್ಯಾಕ್ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತೇನೆ. ನಾವು ಹಚ್ಚುವ ಬಣ್ಣ ಇನ್ನೊಬ್ಬರ ಬದುಕಿಗೆ ರಂಗು ತುಂಬಬೇಕೇ ಹೊರತು ಅವರ ಅಂದ ಕೆಡಿಸಬಾರದು. ಹಾಗಾಗಿ ಮೊದಲು ಅವರ ಚರ್ಮವನ್ನು ನೋಡುತ್ತೇವೆ. ತುಂಬಾ ಸೆನ್ಸಿಟಿವ್ ಆಗಿದ್ದರೆ ಲೈಟ್ ಆಗಿ ಮೇಕಪ್ ಮಾಡುತ್ತೇವೆ. ಕೆಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯಾಗುತ್ತದೆ. ಅಂತಹವರಿಗೆ ಅದರ ಬದಲಿಗೆ ಯಾವುದು ಸರಿಹೊಂದುತ್ತದೆ ಎಂದು ಪರೀಕ್ಷಿಸುತ್ತೇವೆ. ಇಲ್ಲಿಯವರೆಗೆ ನನ್ನ ಮೇಕಪ್‌ನಿಂದಾಗಿ ಯಾರ ಮುಖವೂ ಹಾಳಾಗಿಲ್ಲ.

ಮೇಕಪ್ ಮಾಡುವಾಗ ನಿಮ್ಮ ತಯಾರಿ ಹೇಗಿರುತ್ತದೆ? ಯಾರ ಮೇಲೆ ಹೊಸ ಪ್ರಯೋಗಗಳನ್ನು ಮಾಡುತ್ತೀರಿ?
ಅನುಭವ ಸಾಕಷ್ಟು ಕಲಿಸಿದೆ. ಆದರೂ ಕಲಿಕೆ ಇನ್ನೂ ನಿಂತಿಲ್ಲ. ಇದು ನಿರಂತರ ಪ್ರಕ್ರಿಯೆ. ಈಗ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಯುವ ಪೀಳಿಗೆಯವರೂ ಈ ಕ್ಷೇತ್ರದತ್ತ ಒಲವು ತೋರಿಸುತ್ತಿದ್ದಾರೆ. ಮೇಕಪ್‌ನಲ್ಲಿ ನಾಲ್ಕೈದು ವಿಧಗಳಿವೆ. ಬ್ಯೂಟಿ ಪಾರ್ಲರ್ ಮೇಕಪ್ (ತುಂಬಾ ಸುಂದರವಾಗಿ ಕಾಣುವಂತೆ ಮಾಡುವುದು), ಕ್ಯಾರೆಕ್ಟರ್ ಮೇಕಪ್ (ದಾಡಿ, ಮೀಸೆ ಅಂಟಿಸುವುದು, ವಿಗ್ ಹಾಕುವುದು, ಚಿಕ್ಕವರನ್ನು ವಯಸ್ಸಾದವರಂತೆ ಕಾಣಿಸುವುದು), ಜನರಲ್‌ ಮೇಕಪ್ (ಇದು ಸಾಮಾನ್ಯವಾಗಿರುತ್ತದೆ), ಫ್ಯಾಷನ್ ಮೇಕಪ್ (ಮಾಡೆಲ್‌ಗಳಿಗೆ ಮಾಡುವಂಥದ್ದು) ಹೀಗೆ. ಪ್ರಯೋಗಗಳನ್ನು ನನ್ನ ಮೇಲೆಯೇ ಮಾಡಿಕೊಳ್ಳುತ್ತೇನೆ. ಹೆಂಡತಿ ಕೂಡ ನನ್ನ ಮೇಕಪ್‌ಗೆ ಮುಖ ಒಡ್ಡುತ್ತಾಳೆ. ಕೆಲವೊಮ್ಮೆ ಅಪ್ಪ ಕೂಡ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಇವರ ಮೇಲೆಲ್ಲಾ ಪ್ರಯೋಗ ಮಾಡುತ್ತಾ ನನ್ನ ಕೈ ಮತ್ತಷ್ಟು ಪಳಗುತ್ತದೆ.

ಮೊದಲಿನ ಮೇಕಪ್‌ ವಿಧಾನಕ್ಕೂ ಈಗಿನದ್ದಕ್ಕೂ ವ್ಯತ್ಯಾಸ ಏನು? ಮೇಕಪ್‌ ಹಾಳಾಗದೆ ದಿನವಿಡೀ ತಾಜಾತನದಿಂದ ಕಾಣಿಸಿಕೊಳ್ಳುವಂತೆ ಮಾಡಲು ಏನನ್ನು ಉಪಯೋಗಿಸುತ್ತೀರಿ?
ಮೊದಲೆಲ್ಲಾ ಗಾಢವಾದ ಮೇಕಪ್‌ ಇರುತ್ತಿತ್ತು. ಎರಡು ಮೂರು ಬಗೆಯ ಬಣ್ಣಗಳ ಮಿಶ್ರಣ ಮಾಡಿ ಮುಖಕ್ಕೆ  ಹಚ್ಚಬೇಕಿತ್ತು. ಈಗ ಹಾಗಿಲ್ಲ. ತುಂಬಾ ಹೊತ್ತು ಉಳಿಯುವಂತಹ, ಉತ್ತಮ ಗುಣಮಟ್ಟದ ಮೇಕಪ್‌ ಕಿಟ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹೆಚ್ಚು ಹೊತ್ತು ಉಳಿಯುವಂತೆ ಮಾಡಲು ಕೆಲವು ಬಣ್ಣಗಳನ್ನು ಬೆರೆಸುತ್ತೇವೆ. ಕೆಲವು ವೃತ್ತಿ ಗುಟ್ಟುಗಳನ್ನು ಹೇಳಲು ಸಾಧ್ಯವಿಲ್ಲ (ನಗು).

ಸಿನಿಮಾ ಕಲಾವಿದರು ಮತ್ತು ರೂಪದರ್ಶಿಗಳ ಮೇಕಪ್‌ನಲ್ಲಿ ಏನು ವ್ಯತ್ಯಾಸ?
ಸಿನಿಮಾದಲ್ಲಿ ಒಂದು ಮಿತಿ ಇರುತ್ತದೆ. ಪಾತ್ರಕ್ಕೆ ತಕ್ಕ ಮೇಕಪ್‌ ಅಲ್ಲಿ ಅಗತ್ಯ. ಫ್ಯಾಷನ್‌ನಲ್ಲಿ ಹಾಗಲ್ಲ. ಕ್ರಿಯಾಶೀಲತೆ ಇರುತ್ತದೆ. ಉಡುಪಿಗೆ ತಕ್ಕ ಕಣ್ಣಿನ ಅಲಂಕಾರ ಬೇಕಾಗುತ್ತದೆ. ಕಣ್ಣಿನ ಮೇಲೆ ಬರೆಯುವಾಗ ತಾಳ್ಮೆ ಮುಖ್ಯ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮತ್ತೆ ಅಳಿಸಿ ಬರೆಯುವುದು ಕಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.