ADVERTISEMENT

ಪ್ರಾಣಿಗಳ ನೆನಪಲ್ಲಿ

ಸುರೇಖಾ ಹೆಗಡೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಪ್ರಾಣಿಗಳ ನೆನಪಲ್ಲಿ
ಪ್ರಾಣಿಗಳ ನೆನಪಲ್ಲಿ   

`ಶೀಬಾಗೆ ಹುಷಾರಿರಲಿಲ್ಲ ಅಂತ ಬನ್ನೇರುಘಟ್ಟ ಉದ್ಯಾನವನದವರೇ ಮನೆಗೆ ತಂದು ಬಿಟ್ಟಿದ್ದರು. ಒಂದುವರೆ ವರ್ಷ ಇಲ್ಲೇ ಆಟವಾಡಿಕೊಂಡಿತ್ತು~ ಎಂದು ತಾವು ಕುಳಿತ ಸೋಫಾ ಕಡೆ ಕೈ ಮಾಡಿದರು ಜಾನಕಿ.

`ನಾವು ಸಸ್ಯಾಹಾರಿಗಳು. ನಮ್ಮ ಮನೆಯಲ್ಲಿ ಸಾಕಿದ್ದ ಪ್ರಾಣಿಗಳಿಗಾಗಿ ಮಾಂಸ ತಂದು ಹಾಕುತ್ತಿದ್ದೆವು. ಒಮ್ಮೆ ಶೀಬಾ (ಸಿಂಹ) ಗಂಟಲಲ್ಲಿ ಸಿಕ್ಕಿಕೊಂಡ ಮಾಂಸವನ್ನು ನನ್ನ ಮಗ ಕೈಹಾಕಿ ತೆಗೆದ. ಬನ್ನೇರುಘಟ್ಟದವರು ತಂದ ಪಂಜರದೊಳಗೆ ಹೋಗುವುದಿಲ್ಲವೆಂದು ಹಟ ಹಿಡಿದಿತ್ತು.

ಅದನ್ನು ಮರಳಿಸಲು ಮಗ ಒಂದು ದಿನ ಪೂರ್ತಿ ಆ ಪಂಜರದೊಳಗೆ ಕುಳಿತುಕೊಳ್ಳಬೇಕಾಯಿತು. ಮಗನ ಬಳಿ ಹೋದ ಶೀಬಾಗೆ ಆ ಪಂಜರದೊಂದಿಗೆ ವಿದಾಯ ಹೇಳುವುದು ಎಲ್ಲರಿಗೂ ಕಷ್ಟವಾಗಿತ್ತು.

ಈಗ ಶೀಬಾ ಹೇಗಿದೆಯೋ ಏನೊ? ನಮಗೂ ಹೋಗಿ ನೋಡೋಕೆ ಆಗಲಿಲ್ಲ~ ಎಂದು ಕಣ್ಣೊರೆಸಿಕೊಂಡರು.  `ಅದರ ಪೋಷಣೆಗಾಗಿ ಪ್ರತಿದಿನ ತಂದು ಹಾಕುತ್ತಿದ್ದ ಮಾಂಸಾಹಾರದ ಒಂದು ಪೈಸೆ ಕೂಡ ನಮಗೆ ಕೊಟ್ಟಿಲ್ಲ.

ADVERTISEMENT

ಆದರೆ ಕಾನೂನು ಅಂತ ನಮ್ಮೆಲ್ಲಾ ಪ್ರಾಣಿಗಳನ್ನು ಒಮ್ಮೆಲೇ ಎಳೆದೊಯ್ದರಲ್ಲ ತುಂಬಾ ಬೇಸರವಾಗುತ್ತಿದೆ ಅಗತ್ಯವಿದ್ದಾಗ ನಮ್ಮನ್ನು ಬಳಸಿಕೊಂಡರಾ? ಎಂದೆನಿಸಿ, ಆಕ್ರೋಶ ಉಕ್ಕಿದರೂ ಕಾನೂನಿನ ಅಸಹಾಯಕತನದಲ್ಲಿ ಅದು ಕೊನೆಗಾಣುತ್ತದೆ.

ಸುಮಾರು 35 ವರ್ಷಕ್ಕೂ ಹೆಚ್ಚು ಕಾಲ ಪ್ರಾಣಿಗಳನ್ನು ಸಾಕಿಕೊಂಡಿದ್ದ ಜಾನಕಿ ಅವರಿಗೆ 2007ರಲ್ಲಿ ಜಾರಿಯಾದ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ ಎಂಬ ಕಾನೂನು ಆಘಾತ ಉಂಟುಮಾಡಿತ್ತು. 1967ರಿಂದ ವಿಷಕಾರಿ ಹಾವು, ಐದು ಜಾತಿಯ ಗೂಬೆಗಳು, ನರಿ, ಕಾಡು ಹಂದಿ, ಬಾವಲಿಗಳು, ಸಿಂಹದ ಮರಿ, ಬೇರೆ ಬೇರೆ ಜಾತಿಯ ಹಕ್ಕಿಗಳು ಎಲ್ಲವನ್ನೂ ಸಾಕಿಕೊಂಡಿದ್ದರು.

ಅದೂ ಅಲ್ಲದೆ ಜಾನಕಿ ಅವರ ಪತಿ ಮೊದಲಿನಿಂದ ಪ್ರಾಣಿ ಪ್ರೀತಿ ಹೊಂದಿದ್ದವರು. ಅಸಹಾಯಕ ಸ್ಥಿತಿಯಲ್ಲಿದ್ದ ಪ್ರಾಣಿ ಪಕ್ಷಿಗಳನ್ನು ಜನರು ತಂದು ಇವರ ಮನೆಗೆ ಕೊಡುತ್ತಿದ್ದರು. ಹಗಲು ಇರುಳೆನ್ನದೆ ಅವಕ್ಕೆ ಶುಶ್ರೂಷೆ ನೀಡಿ ಪ್ರೀತಿ ತೋರುತ್ತಿದ್ದ ಈ ಮನೆ ತೊರೆದು ಹೋಗಲು ಅವಕ್ಕೂ ಇಷ್ಟವಿರಲಿಲ್ಲ. ಇವರ ಮನೆಗೆ `ಮಿನಿ ಜೂ~ ಎಂದು ಜನರೇ ಹೆಸರಿಟ್ಟಿದ್ದಾರೆ.

ಈ ಕುಟುಂಬದ ಎಂ.ಕೆ. ಶ್ರೀನಿವಾಸ ಅಯ್ಯಂಗಾರ್ ಹುಟ್ಟು ಕಲಾವಿದರು. ಅವರ ಸಂಗಾತಿಯಾದ ಜಾನಕಿ ಕೂಡ ಎಂಬ್ರಾಯ್ಡರಿ ಕಲಾವಿದೆ. ಆಯಿಲ್ ಪೇಂಟಿಂಗ್, ಸಿಮೆಂಟ್ ಕಲಾಕೃತಿ, ಬಾಲ್ ಪೆನ್ ಪೇಂಟಿಂಗ್ ಮುಂತಾದ ಶೈಲಿಯಲ್ಲಿ ಚಿತ್ರ ಬಿಡಿಸುತ್ತಿದ್ದ ಪತಿಯನ್ನು ಜಾನಕಿ ಅವರು ಎಂಬ್ರಾಯ್ಡರಿ ಕಲೆಯ ಮೂಲಕ ಅನುಸರಿಸುತ್ತಿದ್ದರು.

ಪ್ರಾಣಿ ಪಕ್ಷಿಗಳಲ್ಲಿ ಹೆಚ್ಚಾಗಿ ಯಾರೂ ಗುರುತಿಸಿರದ ವಿಶೇಷ ಲಕ್ಷಣಗಳನ್ನು ಗುರುತಿಸಿ, ಚಿತ್ರ ಬಿಡಿಸಿ ಬೇರೆ ಬೇರೆ ಕಡೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಆ ರೀತಿಯ ಸುಮಾರು 100ಕ್ಕೂ ಹೆಚ್ಚು ಚಾರ್ಟ್‌ಗಳು, ಪೇಂಟಿಂಗ್‌ಗಳು ಅಲ್ಲಿವೆ.

ಅಪ್ಪ-ಅಮ್ಮ ಪ್ರೀತಿಯಿಂದ ಮಾಡಿದ ಚಿತ್ರಕೃತಿಗಳನ್ನೆಲ್ಲಾ ಸೇರಿಸಿ ಮಗ ಶಶಿಧರ್, ಜಾನಕಿ ಅವರ 80ನೇ ವರ್ಷದ ಹುಟ್ಟುಹಬ್ಬಕ್ಕೆ `ಅಯ್ಯಂಗಾರ್ ಗ್ಯಾಲರಿ~ ಹೆಸರಿನಲ್ಲಿ ಉಡುಗೊರೆ ನೀಡಿದ್ದಾರೆ. `ನಾವು ಮಾಡಿದ ಇನ್ನೂ ಎಷ್ಟೋ ಚಿತ್ರಗಳು ಕಪಾಟಿನಲ್ಲಿ ಹಾಗೆಯೇ ಬಿದ್ದಿವೆ.

ಹಾಕುವುದಕ್ಕೆ ಜಾಗ ಇಲ್ಲ. ಹುಳ ತಿನ್ನುವುದನ್ನು ನೋಡೋಕೂ ಆಗುತ್ತಿಲ್ಲ~ ಎಂದು ಬೇಸರಿಸುತ್ತಾ ತಮ್ಮ ಇನ್ನೊಂದಿಷ್ಟು ಸಾಧನೆಗಳ ಬಗ್ಗೆ ಜಾನಕಿ ಮಾತು ಮುಂದುವರೆಸಿದರು.

`ನೋಡಿ ಈ ಚಿತ್ರ, ಹಾವು ಹಿಡಿಯುತ್ತಿದ್ದೆ. ನನ್ನ ಕೈಗೆ ಎಷ್ಟು ಪ್ರೀತಿಯಿಂದ ಸುತ್ತುಕೊಂಡಿದೆ... ಈಗಲೂ ಫೋನ್ ಬರತ್ತೆ ಹಾವು ಬಂದಿದೆ ಹಿಡಿದುಕೊಡಿ ಎಂದು. ಬಿಬಿಎಂಪಿ ನಂಬರ್ ಕೊಟ್ಟು ಸುಮ್ಮನಾಗುತ್ತೇವೆ. ಕಾನೂನು ಬಂತಲ್ಲ. ನನ್ನ ಪ್ರತಿಭೆಯನ್ನೂ ಕಿತ್ತುಕೊಂಡುಬಿಟ್ಟಿತು.

ಎಂಬ್ರಾಯ್ಡರಿಯಲ್ಲಿ ನಾನು ಬಿಡಿಸುತ್ತಿದ್ದ ಪ್ರಾಣಿಗಳ ಚಿತ್ರವನ್ನು ಪ್ರಾಣಿ ನೋಡೋಕೆ ಬಂದ ಮಕ್ಕಳು ಕೊಂಡುಕೊಂಡು ಖುಷಿ ಪಡುತ್ತಿದ್ದರು. ಗ್ರೀಟಿಂಗ್ ಮಾಡುತ್ತಿದ್ದೆ. ಇದೋ ನೋಡಿ ಎಲ್ಲಾ ಪ್ರಾಣಿಗಳ ಮಾದರಿ ಮಾಡಿಟ್ಟಿದ್ದೇವೆ.

ಇವೆಲ್ಲವನ್ನೂ ಮಾಡಿದ್ದು ನನ್ನ ಪತಿ. ಅಳಿವಿನಂಚಿನಲ್ಲಿರುವ ಕ್ರಿಮಿ, ಕೀಟ, ಪ್ರಾಣಿ ಪಕ್ಷಿ ಎಲ್ಲವನ್ನೂ ಅವುಗಳ ಪೀಳಿಗೆ ಪ್ರಕಾರ ರಚಿಸಿಟ್ಟಿದ್ದೇವೆ. ಗುಡಿಬಂಡ ಅಮೆರಿಕ ಫ್ರೆಂಡ್‌ಶಿಪ್ ರೆಸಿಡೆನ್ಶಿಯಲ್ ಸ್ಕೂಲ್‌ಗೆ ಬೃಹತ್ತಾದ ಡೈನೋಸಾರ್ ನಿರ್ಮಿಸಿಕೊಟ್ಟಿದ್ದೆವು.

ಅದು ಈಗ ಯಾವ ಸ್ಥಿತಿಯಲ್ಲಿದೆಯೋ. ಜಿರಾಫೆ ಚಿತ್ರ ನೋಡಿ ನಿಜವಾದದ್ದು ಎನಿಸುತ್ತದೆ. ಕಬ್ಬಿಣದ ಸರಳಿನಿಂದ ಮೊದಲು ಆಕೃತಿ ತಯಾರಿಸಿ ಆ ನಂತರ ಸಿವೆುಂಟ್ ಹಚ್ಚಿ ಪೇಂಟ್ ಮಾಡಿದ್ದು. ಹಂಸ, ಬಾತುಕೋಳಿ, ಕೋಬ್ರಾ, ಹಕ್ಕಿಗಳು ಈಗ ಮಾಡೆಲ್ ರೂಪದಲ್ಲಿ ನಮ್ಮಂದಿಗಿವೆ.

ಜೀವಂತ ಪ್ರಾಣಿಯೊಂದಿಗೆ ಇರುವ ನಮ್ಮ ಆಸೆಯಂತೂ ನನಸಾಗುವುದಿಲ್ಲವಲ್ಲ~ ಮತ್ತೆ ಜಾನಕಿಯವರ ಮುಖದಲ್ಲಿ ವಿಷಾದ ಆವರಿಸಿತು.  `ಸುಮಾರು 35 ವರ್ಷಗಳಿಂದ ಅವರು ಪ್ರಾಣಿಗಳನ್ನು ಸಾಕಿಕೊಂಡಿದ್ದರು. 24 ಗಂಟೆ ಮನೆಮಕ್ಕಳನ್ನು ನೋಡಿಕೊಂಡಂತೆ ಶುಶ್ರೂಷೆ ಮಾಡಿದ್ದಾರೆ.

ಆದರೆ ಸರ್ಕಾರದಿಂದ ಈವರೆಗೆ ಯಾವುದೇ ಗೌರವವಾಗಲೀ, ಮನ್ನಣೆಯಾಗಲೀ ಸಿಗಲಿಲ್ಲ. ಇಷ್ಟು ವರ್ಷದ ಪ್ರಾಣಿ ಪ್ರೀತಿಗೆ ಕಾಡುಪ್ರಾಣಿ ಸಾಕಬಾರದು ಎಂದು ಸರ್ಕಾರದ ಆದೇಶ ಒಂದೇ ಸಿಕ್ಕ ಉಡುಗೊರೆ. ಅದೂ ಅಲ್ಲದೆ ಬೇರೆ ಬೇರೆ ಪ್ರಾಣಿಗಳಿರುವಾಗ ಗೂಡು ನಿರ್ಮಿಸುವುದು ಅನಿವಾರ್ಯವಾಗುತ್ತಿತ್ತು.

ಅದಕ್ಕೆ ಪಂಜರದಲ್ಲಿಡುತ್ತಾರೆ ಎಂದು ಹೀಯಾಳಿಸಿದರು. ನಾವು ತೋರಿದ ಪ್ರೀತಿಗೆ ಮನ್ನಣೆ ಸಿಗಲೇ ಇಲ್ಲ ಎಂದು ಒಮ್ಮಮ್ಮೆ ಬೇಸರವಾಗುತ್ತದೆ~ ಎಂದು ಜಾನಕಿ ಅವರ ಸೊಸೆ ಶಾರದಾ ಶಶಿಧರ್ ಬೇಸರಿಸುತ್ತಾರೆ.

ಪ್ರಾಣಿಗಳೂ ಮನುಷ್ಯರಂತೆ. ನಾವು ಅವಕ್ಕೆ ಯಾವ ರೀತಿಯ ನಡವಳಿಕೆ ಕಲಿಸುತ್ತೇವೆ ಎನ್ನುವುದರ ಮೇಲೆ ಅವುಗಳು ನಡೆದುಕೊಳ್ಳುತ್ತವೆ.  ಆದರೆ ನಿಜವಾದ ಪ್ರೀತಿಯಿಂದ ಪ್ರಾಣಿ ಸಾಕುವ ನಮ್ಮಂಥವರಿದ್ದಾರೆ.

ಈಗಲೂ ಕಾನೂನು ಬದಲಾಗಿ ಪ್ರಾಣಿ ಸಾಕುವ ಅವಕಾಶ ಕೊಟ್ಟರೆ ನನ್ನಷ್ಟು ಖುಷಿ ಪಡುವವರು ಯಾರೂ ಇರುವುದಿಲ್ಲ ಎನ್ನುತ್ತಾ ಮನಸ್ಸಿನಲ್ಲಿ ಇನ್ನೂ ಇರುವ ಪ್ರಾಣಿ ಸಾಕುವ ಆಕಾಂಕ್ಷೆಯನ್ನು ಹೊರಗೆಡಹಿದರು 80 ವರ್ಷದ ಜಾನಕಿ ಅಜ್ಜಿ. 

ಹಾಳಾದ ಹಾವಿನ ಮೊಟ್ಟೆ, ಸ್ಟಾರ್‌ಫಿಶ್ ಕಳೇಬರ, ಹಾವಿನ ಪೊರೆ, ಮಂಗನ ಅಸ್ತಿಪಂಜರ, ಹಕ್ಕಿಗಳ ಗರಿ, ಕೆಲವೇ ಕೆಲವು ವಾರಗಳ ಭ್ರೂಣ ಮುಂತಾದವುಗಳ ಸಂಗ್ರಹಣೆ ಇಲ್ಲಿದೆ.

ಅಂದ ಹಾಗೆ ಈ ಎಲ್ಲವುಗಳನ್ನು ವೀಕ್ಷಿಸಲು ಆಸಕ್ತಿ ಇರುವವರು ಒಂದು ಫೋನ್ ಮಾಡಿ ತಿಳಿಸಿದರೆ ಯಾವಾಗ ಬೇಕಾದರೂ ಬಂದು ನೋಡಿ ಹೋಗುವ ಅವಕಾಶ ಕಲ್ಪಿಸಿಕೊಡಲಾಗಿದೆ. ಸಂಪರ್ಕಕ್ಕೆ: 2639 2572.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.