‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದಲ್ಲಿ ‘ದಂಗಾಲ್’ ನಟಿ ಫಾತಿಮಾ ಸನಾ ಅವರು ನಟಿಸಬೇಕೇ, ಬೇಡವೇ ಎಂಬ ಬಗ್ಗೆ ಅಮೀರ್ ಖಾನ್ ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಮೀರ್ ಪತ್ನಿ, ನಿರ್ದೇಶಕಿ ಕಿರಣ್ ರಾವ್ ಹೇಳಿರುವುದು ಕುತೂಹಲ ಹುಟ್ಟಿಸಿದೆ.
ಈ ಚಿತ್ರಕ್ಕೆ ಫಾತಿಮಾ ಹೆಸರನ್ನು ಅಮೀರ್ ಖಾನ್ ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು.
ಯಶ್ ರಾಜ್ ಫಿಲ್ಮ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ, ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಹಾಗೂ ಅಮೀರ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ.
‘ನಾವು ಪಾತ್ರಗಳ ಆಯ್ಕೆಯಲ್ಲಿ ಮೂಗು ತೂರಿಸುವುದಿಲ್ಲ. ಕಲಾವಿದರ ಬಗ್ಗೆ ಆದಿತ್ಯ ಚೋಪ್ರಾ, ವಿಜಯ್ ಕೃಷ್ಣ ಆಚಾರ್ಯ ಹಾಗೂ ಅಮೀರ್ ನಿರ್ಧರಿಸಲಿದ್ದಾರೆ. ಇದು ದೊಡ್ಡ ಬಜೆಟ್ ಚಿತ್ರವಾಗಿದ್ದರಿಂದ ಫಾತಿಮಾ ಅವರಿಗೆ ಪಾತ್ರ ನೀಡುವ ಬಗ್ಗೆ ಯೋಚನೆ ಮಾಡಿ ನಿರ್ಧರಿಸುತ್ತಾರೆ’ ಎಂದು ಕಿರಣ್ ಪ್ರತಿಕ್ರಿಯಿಸಿದ್ದಾರೆ.
‘ದಂಗಾಲ್’ನಲ್ಲಿ ಕುಸ್ತಿಪಟು ಗೀತಾ ಫೊಗಟ್ ಪಾತ್ರದಲ್ಲಿ ಫಾತಿಮಾ ಸನಾ ನಟಿಸಿದ್ದರು. ಇತ್ತೀಚೆಗೆ ಅಮೀರ್ ಅವರು ಫಾತಿಮಾ ಜತೆ ಹೆಚ್ಚು ಒಡನಾಟ ಹೊಂದಿದ್ದರಿಂದ ತಮ್ಮ ಎರಡನೇ ಪತ್ನಿ ಕಿರಣ್ ರಾವ್‌ಗೂ ವಿಚ್ಛೇದನ ನೀಡಿ, ಮೂರನೇ ಮದುವೆ ಆಗಲಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.