ADVERTISEMENT

ಬಂಗಾರದ ದಿನಗಳು!

ಪವಿತ್ರ ಶೆಟ್ಟಿ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಬಂಗಾರದ ಬೆಲೆ ಯಾರ ಅಂಕೆಗೂ ನಿಲುಕುತ್ತಿಲ್ಲ. ನಾಗಾಲೋಟದಲ್ಲಿ ಏರಿಕೆ ಕಂಡು ಬಡವರ ಪಾಲಿಗೆ ಗಗನ ಕುಸುಮವಾಗಿದ್ದ ಚಿನ್ನದ ಮೇಲಿನ ಆಮದು ಸುಂಕವನ್ನು ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಏರಿಸಿದ್ದರಿಂದ ಇನ್ನಷ್ಟು ಬೆಲೆ ಹೆಚ್ಚಾದೀತು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ ಕಾಣುತ್ತಿದ್ದಂತೆ ದಾಸ್ತಾನುಗಾರರಲ್ಲಿ ಆತಂಕ ಮೂಡಿತು. ಖರೀದಿದಾರರಲ್ಲಿ ಮಾತ್ರ ಉತ್ಸಾಹ.

ಸಾಮಾನ್ಯರಿಗೂ ದಕ್ಕಿತು
`ಬಂಗಾರದ ಬೆಲೆ ಕಡಿಮೆಯಾಗಿದ್ದರಿಂದ ಬೇಡಿಕೆ ಕೂಡ ಹೆಚ್ಚಿದೆ. ಮೂರು ವರ್ಷದ ನಂತರ ಗ್ರಾಹಕರ ಮೊಗದಲ್ಲಿ ನಗು ಮೂಡಿದೆ. ಮೂರು ದಿನದಿಂದ ನಮ್ಮ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗಿದೆ. ಮೊದಲೆಲ್ಲಾ ಅಂಗಡಿಗೆ ಬಂದಾಗ ಚಿನ್ನದ ಬೆಲೆ ಯಾವಾಗ ಕಡಿಮೆಯಾಗುತ್ತದೆ ಎಂಬ ಪ್ರಶ್ನೆ ಕೇಳುತ್ತಿದ್ದರು. ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಸಂತಸ ತಂದಿದೆ. ಕೇವಲ ಶ್ರೀಮಂತರಿಗೆ ಮಾತ್ರವಲ್ಲ ಬಡವರು ಕೂಡ ಚಿನ್ನ ಖರೀದಿಸಬಹುದಾಗಿದೆ. 

ಬೆಲೆ ಜಾಸ್ತಿ ಇದ್ದಾಗ ಗಟ್ಟಿ ಚಿನ್ನ ಬೇಡ, ಹಗುರವಾದ, ನೋಡೋದಕ್ಕೆ ದಪ್ಪಗಿರುವ ವಿನ್ಯಾಸ ತೋರಿಸಿ ಎನ್ನುತ್ತಿದ್ದರು. ಕೆಲವರು ಮಗಳ ಮದುವೆಗೆ 100 ಗ್ರಾಂ ಚಿನ್ನ ತೆಗೆದುಕೊಳ್ಳುವವರು 50 ಗ್ರಾಂ ಸಾಕು ಎಂದು ಸುಮ್ಮನಾಗುತ್ತಿದ್ದರು. ಮುಂದಿನ ತಿಂಗಳು ಅಕ್ಷಯ ತೃತೀಯ ಇರುವುದರಿಂದ ಚಿನ್ನದ ಬೆಲೆ ಮತ್ತೆ ಏರುವುದೋ ಎಂಬ ಭಯದಿಂದ ಜನ ಒಂದು ಗ್ರಾಂ, 2 ಗ್ರಾಂ ನಾಣ್ಯಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಬೆಲೆ ಇನ್ನು ಕುಸಿಯುತ್ತದೆಯೋ, ಹೆಚ್ಚಾಗುತ್ತದೆಯೋ ಎಂಬ ಬಗ್ಗೆ ನಮಗೂ ಕೂಡ ಮಾಹಿತಿಯಿಲ್ಲ. ಒಟ್ಟಾರೆ ಎಲ್ಲ ವರ್ಗದ ಜನರು ಚಿನ್ನವನ್ನು ಮುಟ್ಟುವಂತಾಯಿತು ಇದು ನಮಗೆ ಖುಷಿ ತಂದಿದೆ' ಎಂದು ಹೇಳುತ್ತಾರೆ ಶ್ರೀ ಗಣೇಶ್ ಡೈಮೆಂಡ್ ಜ್ಯುವೆಲ್ಲರ್‌ನ ನಿರ್ದೇಶಕ ತೇಜ್‌ಮಲ್. 

ಗ್ರಾಹಕರಿಗೆ ಹಬ್ಬ
`ವ್ಯಾಪಾರ ಚೆನ್ನಾಗಿದೆ. ಬಡವರ ಪಾಲಿಗೆ ಇದು ಹಬ್ಬ. ದಾಸ್ತಾನು ಮಾಡಿಟ್ಟುಕೊಂಡ ಚಿನ್ನದ ಅಂಗಡಿಯವರಿಗೆ ಸ್ವಲ್ಪಮಟ್ಟಿನ ನಷ್ಟ. ಚಿನ್ನದ ಬೆಲೆ ಜಾಸ್ತಿ ಇದ್ದಾಗ ಜನ ಗಟ್ಟಿ ಚಿನ್ನವನ್ನು ಕೊಳ್ಳುತ್ತಿರಲಿಲ್ಲ. ಬೆಲೆ ಇಳಿಕೆ ನೋಡಿ ಈಗ ಎಲ್ಲರೂ ಗಟ್ಟಿ ವಸ್ತುವಾದ ಬಳೆ, ನೆಕ್ಲೆಸ್‌ಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ' ಎಂದು ಹೇಳುತ್ತಾರೆ ನವರತನ್ ಜುವೆಲ್ಲರ್‌ನ ವ್ಯವಸ್ಥಾಪಕ ನಿರ್ಮಲ್ ಕುಮಾರ್.

ಗಟ್ಟಿ ಚಿನ್ನದ ಖರೀದಿ ಜೋರು
`ಚಿನ್ನದಲ್ಲಿ ಗಟ್ಟಿ ಚಿನ್ನ, ಟೊಳ್ಳು ಚಿನ್ನ ಎಂಬ ಎರಡು ವಿಧಗಳಿವೆ. ಬೆಲೆ ಜಾಸ್ತಿ ಇದ್ದಾಗ ಟೊಳ್ಳು ಚಿನ್ನವನ್ನು ಹೆಚ್ಚು ತೆಗೆದುಕೊಳ್ಳುತ್ತಿದ್ದರು. ಈಗ ಕಡಿಮೆಯಾಗಿದೆ. ಹಾಗಾಗಿ ಎಲ್ಲರ ಕಣ್ಣು ಗಟ್ಟಿ ಚಿನ್ನದ ಮೇಲೆ ಬಿದ್ದಿದೆ. ಬೆಲೆ ಇನ್ನೂ ಕಡಿಮೆಯಾಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಹಠಾತ್ತನೇ ಏರಲೂಬಹುದು, ಇಳಿಯಲೂಬಹುದು. ಇದು ಗ್ರಾಹಕರಿಗೆ ಮಾತ್ರ ಒಳ್ಳೆಯ ಕಾಲ ಎಂದು ಹೇಳಬಹುದು' ಎನ್ನುತ್ತಾರೆ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಕೆ.ಪಿ. ನಂಜುಂಡಿ.

ಯೋಗ್ಯ ಸಮಯ
`ಚಿನ್ನ ಖರೀದಿಗೆ ಇದು ಯೋಗ್ಯ ಸಮಯ. ಆದರೆ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡವರಿಗೆ ಇದು ಸ್ವಲ್ಪ ಮಟ್ಟಿನ ನಷ್ಟ ಎಂದು ಹೇಳಬಹುದು. 28 ವರ್ಷದ ಹಿಂದೆ ಇಷ್ಟು ಕಡಿಮೆಯಾಗಿತ್ತು. ಚಿನ್ನದ ಬೆಲೆ ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಿತ್ತು. ಆದರೆ ಇಷ್ಟು ಆಕಸ್ಮಿಕವಾಗಿ ಕಡಿಮೆಯಾಗಿದ್ದು ನಿಜಕ್ಕೂ ಆಶ್ಚರ್ಯ. ಹೂಡಿಕೆಗಾಗಿ ಜನ ಹೆಚ್ಚು ಬಂಗಾರವನ್ನು ಕೊಳ್ಳುತ್ತಾರೆ. ನನ್ನ ಪ್ರಕಾರ ಈಗಲೇ ಕೊಂಡುಕೊಳ್ಳುವುದು ಒಳ್ಳೆಯದು. ಇದು ಮತ್ತೆ ಯಾವಾಗ ಜಾಸ್ತಿಯಾಗುತ್ತೋ ಗೊತ್ತಿಲ್ಲ' ಎಂದು ಸಲಹೆ ನೀಡುತ್ತಾರೆ ಜುವೆಲ್ಲರಿ ಸಂಘದ ಕಾರ್ಯದರ್ಶಿ ದವನಂ ರಮೇಶ್.

ಬೆಲೆ ಕಡಿಮೆ ಆಗುವ ನಿರೀಕ್ಷೆ
`ನಗರದಲ್ಲಿ ಸುಮಾರು 7,000 ಚಿನ್ನದ ಮಳಿಗೆಗಳಿವೆ. ಚಿನ್ನದ ಬೇಡಿಕೆ ಎಷ್ಟಿದೆ ಎಂಬುವುದು ಇದು ಸೂಚಿಸುತ್ತದೆ. ಐರೋಪ್ಯ ರಾಷ್ಟ್ರಗಳಾದ  ಸ್ಪೈನ್, ಇಟಲಿ, ಪೋರ್ಚುಗಲ್ ರಾಷ್ಟ್ರಗಳು ಸಂದಿಗ್ಧ ಸ್ಥಿತಿಯಲ್ಲಿ ತಮ್ಮಲ್ಲಿದ್ದ ಚಿನ್ನವನ್ನು ಮಾರುತ್ತಿದ್ದಾರೆ ಇದರ ಸಲುವಾಗಿ ಚಿನ್ನದ ಬೆಲೆ ಕಡಿಮೆಯಾಗಿದೆ. ಇನ್ನೂ ಶೇ 2, 3ರಷ್ಟು ಬೆಲೆ ಕಡಿಮೆಯಾಗಲಿದೆ. ಇದು ಬಡವರಿಗೆ ವರದಾನವಾಗಿದೆ' ಎಂದು ಹೇಳುತ್ತಾರೆ ಜುವೆಲ್ಲರ್ ಸಂಘದ ಮಾಜಿ ಅಧ್ಯಕ್ಷ ವೆಂಕಟ್.

ಬೆಲೆ ಬಾಧಿಸಿಲ್ಲ
`ಚಿನ್ನದ ಬೆಲೆ ಏರಲಿ, ಇಳಿಯಲಿ ಜನ ಚಿನ್ನ ಕೊಳ್ಳುವುದನ್ನು ಕಡಿಮೆ ಮಾಡಿಲ್ಲ. ನನ್ನ ಮಳಿಗೆಗೆ ಮೊದಲು ಎಷ್ಟು ಜನ ಬರುತ್ತಿದ್ದರೋ ಈಗಲೂ ಅಷ್ಟೇ ಜನ ಬರುತ್ತಿದ್ದಾರೆ. ಬೆಲೆ ಜಾಸ್ತಿ ಇದ್ದಾಗ ದೊಡ್ಡ ಆಭರಣಗಳ ಬೇಡಿಕೆ ಕಡಿಮೆ ಇತ್ತು. ಆಗ ಚಿಕ್ಕ ಆಭರಣಗಳನ್ನು ಜನ ಹೆಚ್ಚು ಖರೀದಿಸುತ್ತಿದ್ದರು. ಉಂಗುರ, ಕಿವಿಯೋಲೆಗೆ ಬೇಡಿಕೆ ಹೆಚ್ಚಿತ್ತು' ಎಂದು ಹೇಳುತ್ತಾರೆ ಆಭರಣ ವಿನ್ಯಾಸಕಿ ದೀಪ್ತಿ ಸುಧೀಂದ್ರ.

ಹೂಡಿಕೆಗಲ್ಲ ಚಿನ್ನ
`ಈಗ ಚಿನ್ನದ ಬೆಲೆ ಕಡಿಮೆಯಾಗಿದೆ. ಆದರೆ ನಾನು ಮೊದಲೇ ಚಿನ್ನ ತೆಗೆದುಕೊಂಡಿದ್ದರಿಂದ ಬೇಜಾರಾಗಿದೆ. ನಮ್ಮ ಹತ್ತಿರ ಹಣ ಇರುವಾಗ ಚಿನ್ನದ ಬೆಲೆಯೂ ಜಾಸ್ತಿ ಇತ್ತು. ಹಣ ಕಡಿಮೆ ಇರುವಾಗ ಚಿನ್ನದ ಬೆಲೆ ಕೂಡ ಕಡಿಮೆ ಇದೆ. ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಸಮಸ್ಯೆ. ಹೂಡಿಕೆಗಾಗಿ ಚಿನ್ನ ಖರೀದಿಸುವ ಮಂದಿ ನಾವಲ್ಲ. ಆಭರಣಕ್ಕಾಗಿ ಖರೀದಿಸುತ್ತೇವೆ ಹಾಗಾಗಿ ಚಿನ್ನದ ಬೆಲೆ ಕಡಿಮೆ ಆದರೆ ಒಳ್ಳೆಯದು' ಎಂದು ಹೇಳುತ್ತಾರೆ ಐಟಿ ಉದ್ಯೋಗಿ ಅಂಬಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.