ADVERTISEMENT

ಬಡತನ ನಿವಾರಿಸಲು ನಡಿಗೆ

ಸುಮಲತ ಬಿ., ದಾವಣಗೆರೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಕಾಲ್ನಡಿಗೆಯನ್ನೇ ಟ್ರೇಲ್‌ವಾಕರ್ ಎಂದು ಕರೆಯುತ್ತಾರೆ. ಈ ಪದ ಅಥವಾ ಈ ಹವ್ಯಾಸ ಇತ್ತೀಚೆಗೆ ಬೆಳೆದಿರುವುದಲ್ಲ. ಆದರೆ ಭಾರತಕ್ಕೆ ಇದು ಹೊಸತು. ಟ್ರೇಲ್‌ವಾಕರ್ ಎಂದರೆ ಏನು? ಈ ಹವ್ಯಾಸ ಬೆಳೆದುಬಂದಿದ್ದು ಹೇಗೆ? ಇದರ ಮೂಲ ಏನು? ಹೀಗೆ ಹಲವು ಪ್ರಶ್ನೆಗಳು ಟ್ರೇಲ್‌ವಾಕರ್ ಎಂದಾಕ್ಷಣ ಕಣ್ಮುಂದೆ ಹಾದು ಹೋಗುವುದು ಸಹಜ.
ಟ್ರೇಲ್‌ವಾಕರ್ ಎಂದರೆ ಮೂಲತಃ ಕಾಲ್ನಡಿಗೆ.
 
ಆದರೆ ಈ ಪರಿಕಲ್ಪನೆ ಆರಂಭವಾಗಿದ್ದು ಎಲ್ಲಿ ಅನ್ನುವುದು ಮಾತ್ರ ತುಂಬಾ ಕುತೂಹಲಕಾರಿ. ಎಷ್ಟೇ ಮುಂದೆ ಸಾಗಿದರೂ ಹಿಂದೆ ತಿರುಗುವುದನ್ನು ಮರೆಯಬಾರದು ಎಂಬುದನ್ನು ಮತ್ತೆ ಮತ್ತೆ ನೆನಪು ಮಾಡುತ್ತದೆ ಟ್ರೇಲ್‌ವಾಕರ್‌ನ ಇತಿಹಾಸ.

ಅದೊಂದು ಕಾಲ. ಮನುಷ್ಯ ತನ್ನ ಮೂಲವನ್ನು ತಾನೇ ಕಂಡುಕೊಳ್ಳುವಷ್ಟು ಬೆಳವಣಿಗೆ ಹೊಂದಿರದ ಹಂತ. ಅಲೆಮಾರಿಯಾಗಿ ಅಲೆಯುತ್ತಿದ್ದ ಜನರಿಗೆ ನಡೆದಿದ್ದೇ ದಾರಿ. ಕಾಡು ಬೆಟ್ಟ ಗುಡ್ಡಗಳಲ್ಲಿ ಅಲೆದು ಜೀವನ ಸಾಗಿಸಬೇಕಾದುದು ಅಂದಿಗೆ ಅನಿವಾರ್ಯ.

ನಂತರ ಜೀವನ ಶೈಲಿಯಲ್ಲಿ ಕಿಂಚಿತ್ತು ಬದಲಾವಣೆಯಾಗಿ ಸಣ್ಣ ಪುಟ್ಟ ಗ್ರಾಮ ನೆಲೆಕಂಡವು. ಅಲ್ಲಲ್ಲಿ ಜನ ನೆಲೆಸಲು ಆರಂಭಿಸಿ ಕೃಷಿಯನ್ನು ವೃತ್ತಿಯನ್ನಾಗಿಸಿಕೊಂಡರು. ಆದರೆ ಎಲ್ಲ ಕಾಲಕ್ಕೂ ಕೃಷಿ ಸಾಧ್ಯವಾಗದಿದ್ದಾಗ ಕಾಲಕ್ಕೆ ತಕ್ಕಂತೆ ಗುಳೆ ಹೋಗುವ ಪದ್ದತಿ ಪ್ರಾರಂಭವಾಯಿತು. ಸಣ್ಣ ಪುಟ್ಟ ಅನ್ವೇಷಣೆ, ಆವಿಷ್ಕಾರಗಳು ನಡೆದವು.

ಸಾರಿಗೆಯಲ್ಲೂ ಕೆಲವು ಬದಲಾವಣೆ ಕಂಡುಬಂದವು. ಮೊದಲು ಚಕ್ರವನ್ನು ಕಂಡುಹಿಡಿಯಲಾಯಿತು. ನಂತರ ತಳ್ಳುವ ಗಾಡಿ, ಆನಂತರ ಸೈಕಲ್. ನಂತರ ಬೈಕ್, ಕಾರು, ಬಸ್ಸು, ರೈಲು ಹೀಗೆ ಆಧುನಿಕತೆ ಬೆಳೆದಂತೆ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹಂತ ಹಂತವಾಗಿ ಸಾಗಿತ್ತು.

ಆದರೆ ಆಧುನಿಕತೆ ಭರದಲ್ಲಿ ಹಿಂದೆ ನೋಡದಷ್ಟು ಮುಂದೆ ಸಾಗಿದ ಮಾನವ ನಿಗೆ ಅದೇನೋ ಅಳುಕು ಕಾಡತೊಡಗಿತ್ತು. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಪ್ರಕೃತಿ ವಿಕೋಪ ಆತ್ಮವಿಶ್ವಾಸವನ್ನು ಕದಲಿಸಿತ್ತು.

ಆಗಷ್ಟೆ ಹೊಳೆದಿದ್ದು ತಾನು ಪ್ರಕೃತಿಯೆಡೆಗೆ ತೋರಿದ ನಿರ್ಲಕ್ಷ್ಯ. ಇದೇ ಕಾರಣಕ್ಕೆಂದು ಪರಿಸರ ಪ್ರೇಮಿಗಳು ತಮ್ಮ ಹಿಂದಿನ ಜಾಡನ್ನು ಹಿಡಿಯಲು ಆರಂಭಿಸಿದರು. ತಮ್ಮ ಹೆಜ್ಜೆ ಗುರುತುಗಳನ್ನು ಕಾಡು ಮೇಡು, ಹಳ್ಳಿಗಳಲ್ಲು ಹುಡುಕಲು ಯತ್ನಿಸಿದರು.

ಆಗಾಗ್ಗೆ ಹಳ್ಳಿ, ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ಕೊಡುವ ಅಭ್ಯಾಸ ಬೆಳೆಸಿಕೊಂಡರು. ಈ ಅಭ್ಯಾಸವೇ ಇದೀಗ ಹವ್ಯಾಸವಾಗಿ ಬೆಳೆದು ನಿಂತಿದೆ. ಆಧುನಿಕತೆಯ ತೆಕ್ಕೆಗೆ ಬಿದ್ದವರು ಪ್ರಕೃತಿ ಆಸ್ವಾದಿಸಲು ಟ್ರೇಲ್‌ವಾಕರ್, ಟ್ರೆಕ್ಕಿಂಗ್, ಸೈಕ್ಲಿಂಗ್, ಪರ್ವತಾರೋಹಣ ಈ ಎಲ್ಲಾ ದಾರಿಗಳನ್ನು ಹುಡುಕಿಕೊಂಡರು.

 ವಿಶ್ವದಾದ್ಯಂತ ಅಲ್ಲಲ್ಲಿ ಆಗಾಗ್ಗೆ ಟ್ರೇಲ್‌ವಾಕರ್ ನಡೆಯುತ್ತಲೇ ಇರುತ್ತದೆ. ಟ್ರೇಲ್ ವಾಕರ್‌ಗೆಂದೇ ಆಕ್ಸ್‌ಫಾಮ್ ಎಂಬ ಸಂಸ್ಥೆಯೂ ತುಂಬಾ ಹಿಂದೆಯೇ ಹುಟ್ಟಿಕೊಂಡಿದೆ.
ಸುಮಾರು 90 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಕ್ಸ್‌ಫಾಮ್, ಕಾಲ್ನಡಿಗೆ ವ್ಯರ್ಥವಾಗುವ ಬದಲು ಸಮಾಜವನ್ನು ಸರಿಪಡಿಸುವ ಕಾರಣವಾಗಲಿ ಎಂಬ ಧ್ಯೇಯ ಹೊಂದಿದೆ.
 
ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದು ಇಡೀ ವಿಶ್ವಕ್ಕೆ ಸಾರುವ ಉದ್ದೇಶದಿಂದ ಆರಂಭಗೊಂಡ ಆಕ್ಸ್‌ಫಾಮ್ ಮಾನವನ ಪ್ರಯತ್ನದಿಂದ ಬಡತನ ನಿರ್ಮೂಲನೆ ಸಾಧ್ಯ ಎಂಬುದನ್ನು ತೋರಿಸಲು ಹೊರಟಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರೇಲ್ ವಾಕರ್ ಆಯೋಜಿಸಿದೆ.

ಸುಮಾರು 65 ತಂಡಗಳು ಭಾಗವಹಿಸಲಿರುವ ಈ ಸ್ಪರ್ಧೆ ಫೆಬ್ರುವರಿ 10 ರಿಂದ 12ರವರೆಗೆ ನಡೆಯಲಿದ್ದು, 48 ಗಂಟೆ ಅವಧಿಯಲ್ಲಿ 100 ಕಿ.ಮೀ ಅಂತರವನ್ನು ಕ್ರಮಿಸುವ ಸವಾಲು ಸ್ಪರ್ಧಿಗಳ ಎದುರಿಗಿದೆ. 60 ವರ್ಷದ ವೃದ್ಧೆ ಮಾರ್ಗರೆಟ್ ಲೀ ಪಾಲ್ಗೊಳ್ಳುತ್ತಿರುವುದು ಅತ್ಯಂತ ಕುತೂಹಲಕಾರಿ ಮತ್ತು ವಿಶೇಷ ಸಂಗತಿಯಾಗಿದೆ.

ಮಾರ್ಗರೆಟ್ ಲೀ
ಪ್ರವಾಸಿಪ್ರಿಯ ಮಾರ್ಗರೆಟ್ ಲೀ ಅವರಿಗೆ 60 ವರ್ಷ. ಮೊಗದಲ್ಲಿ ವಯಸ್ಸಿದ್ದವರೂ ಕೂಡ ನಾಚುವಷ್ಟು ಚೈತನ್ಯ. ಸದಾ ಉತ್ಸಾಹದ ಚಿಲುಮೆಯಂತಿರುವ ಈಕೆ ಈ ಬಾರಿ ಟ್ರೇಲ್ ವಾಕರ್‌ನಲ್ಲಿ ಭಾಗವಹಿಸುತ್ತಿರುವ ಹಿರಿಯ ಮಹಿಳೆ.
 
ಈಕೆಯದು ಮೂಲತಃ ಇಂಗ್ಲೆಂಡ್. ಆದರೆ ನರ್ಸ್ ವೃತ್ತಿಯಿಂದ ನಿವೃತ್ತಿಯಾಗಿ ಸುಮಾರು 5 ವರ್ಷದಿಂದ ಭಾರತ ಮತ್ತು ನೇಪಾಳದಲ್ಲಿ ನೆಲೆಸಿದ್ದಾರೆ. ಆಗಾಗ್ಗೆ ಗೋವಾದಲ್ಲಿ ನೆಲೆಸುವುದು ರೂಢಿ.

ನಡಿಗೆ ಮತ್ತು ಟ್ರೆಕ್ಕಿಂಗ್ ನನ್ನ ಅಚ್ಚುಮೆಚ್ಚಿನ ಹವ್ಯಾಸ ಎನ್ನುವ ಈಕೆಗೆ ಈ ಬಾರಿಯ ಟ್ರೇಲ್ ವಾಕಿಂಗ್‌ನಲ್ಲಿ ಭಾಗವಹಿಸುವುದು ಹೆಚ್ಚು ಉತ್ಸುಕತೆಯ ಸಂಗತಿ. ಪ್ರಕೃತಿ ಆಸ್ವಾದ, ಫೋಟೊಗ್ರಫಿಯಲ್ಲಿ ಅಪರಿಮಿತ ಆಸಕ್ತಿ.

ಆದರೆ ನಿರ್ದಿಷ್ಟ ಅವಧಿಯಲ್ಲಿ ತುಂಬಾ ದೂರ ನಡೆದು ಅಭ್ಯಾಸವಿಲ್ಲ, ಈ ಹಿಂದೆ ಮೂರು ಟ್ರೇಲ್‌ವಾಕರ್‌ಗಳಲ್ಲಿ ಪಾಲ್ಗೊಂಡಿದ್ದ ನನ್ನ ಮಗಳು ಲೌರಾ ನನಗೆ ಸ್ಫೂರ್ತಿ ಎನ್ನುತ್ತಾರೆ.

ನನಗೆ ಭಾರತವೆಂದರೆ ಅಚ್ಚುಮೆಚ್ಚು. ಆದರೆ ಅನ್ಯಾಯ, ಬಡತನವೆಂದರೆ ನೋವಾಗುತ್ತದೆ. ಆದ್ದರಿಂದ ಭಾರತದಲ್ಲಿ ಟ್ರೇಲ್‌ವಾಕರ್ ನಡೆಯುತ್ತಿದೆ ಎಂದಾಕ್ಷಣ ಒಳ್ಳೆ ಅವಕಾಶವೆಂದು ಭಾಗವಹಿಸುತ್ತಿದ್ದೇನೆ, ಇದು ನನಗೆ ಸವಾಲಿದ್ದಂತೆ ಎಂದರು.

ತಮ್ಮ ಹಿಂದಿನ ಅನುಭವಗಳನ್ನು ತೆರೆದಿಡುತ್ತಾ, ನನ್ನ ಮಗಳು ಟ್ರೇಲ್‌ವಾಕರ್ ಸಂದರ್ಭದಲ್ಲಿ ಜಾಫಾ ಕೇಕ್, ಜೆಲ್ಲಿಗಳನ್ನು ಹೆಚ್ಚು ತಿನ್ನುತ್ತಿದ್ದಳು. ಆದ್ದರಿಂದ ನಮ್ಮ ತಂಡಕ್ಕೆ `ಜಾಫಾ ಕೇಕ್ ಜೆಲ್ಲಿ ಬೇಬೀಸ್~ ಎಂಬ ಹೆಸರನ್ನು ಇಡಲಾಗಿದೆ ಎಂಬ ಗುಟ್ಟನ್ನು ರಟ್ಟು ಮಾಡಿದರು.

ಅಷ್ಟೇ ಅಲ್ಲ, ಈಗಾಗಲೇ ಗೋವಾದಲ್ಲಿ ತಾಲೀಮು ನಡೆಸುತ್ತಿದ್ದು, ಬಡಜನರಿಗಾಗಿ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿದರು. ಜೀವನವೆಂದರೆ ಬರೀ ಮೋಜಲ್ಲ. ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಸಾರ್ಥಕತೆ ಅಡಗಿದೆ. ಅದಕ್ಕೆ ಆಕ್ಸ್‌ಫಾಮ್ ಉತ್ತಮ ವೇದಿಕೆ ಒದಗಿಸಿದೆ ಎಂದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.