ADVERTISEMENT

ಬಣ್ಣದಲ್ಲಿ ಮಣ್ಣಿನ ಮೋಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST
ಬಣ್ಣದಲ್ಲಿ ಮಣ್ಣಿನ ಮೋಡಿ
ಬಣ್ಣದಲ್ಲಿ ಮಣ್ಣಿನ ಮೋಡಿ   

`ನಮ್ಮ ಮಣ್ಣಿನ ಸೊಗಡೇ ಬೇರೆ, ಇಲ್ಲಿನ ಸಂಸ್ಕೃತಿ, ಜನತೆ, ಪ್ರಕೃತಿ, ವಿವಿಧತೆಯಲ್ಲೂ ಏಕತೆಯನ್ನು ಕಂಡುಕೊಳ್ಳುವ ಪರಿ ಎಲ್ಲಕ್ಕೂ ವಿಶಿಷ್ಟ ಅರ್ಥವಿದೆ. ಇವೆಲ್ಲವನ್ನೂ ಚಿತ್ರದಲ್ಲಿ ಹಿಡಿದಿಡಬೇಕೆಂಬ ತವಕ ಚಿಕ್ಕಂದಿನಿಂದ ನನಗೇ ಗೊತ್ತಿಲ್ಲದಂತೆ ನನ್ನೊಳಗೆ ಬೆಳೆದುಬಂದಿತ್ತು. ಇದು ನನ್ನ ಮತ್ತು ಕಲೆಯ ನಂಟು~ ಎಂದು ಮಾತಿಗೆ ತೆರೆದುಕೊಂಡರು ಕಾರ್ತಿಕಾ ಗೋಯೆಲ್.

ಕಲೆ ಒಬ್ಬೊಬ್ಬರಿಗೆ ಒಂದೊಂದು ಅನುಭವ ನೀಡುತ್ತದೆ. ಅಂತೆಯೇ ನನಗೆ ಪ್ರಕೃತಿಯ ಆಳ ಹರಹನ್ನೂ ನನ್ನ ಅಂತರಾಳಕ್ಕೆ ತಾಕುವಂತೆ ಮಾಡಿದ್ದು ಚಿತ್ರಕಲೆ. ಮೂಲತಃ ನಾನು ಬಿ.ಕಾಂ ಪದವೀಧರೆ. ಜೊತೆಗೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಪಡೆದುಕೊಂಡೆ. ಆದರೆ ಚಿತ್ರಕಲೆಯಲ್ಲಿದ್ದ ಅಪರಿಮಿತ ಆಸಕ್ತಿ ನನ್ನ ಹೆಚ್ಚಿನ ಸಮಯವನ್ನು ಬಣ್ಣದೊಂದಿಗೆ ಹಂಚಿಕೊಳ್ಳುವಂತೆ ಮಾಡಿತು ಎಂದರು ಗೋಯೆಲ್.

ಸುಮಾರು 12 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ತಿಕಾ ಗೋಯೆಲ್ ಅವರ ಇತ್ತೀಚಿನ ಕಲಾಕೃತಿಗಳು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುತ್ತಿವೆ. `ಸ್ಯಾಂಡ್ಸ್ ಆಫ್ ಟೈಮ್...~ (ಮಣ್ಣಿನೊಂದಿಗಿನ ಸಮಯ...) ಎಂಬ ಶೀರ್ಷಿಕೆಯಲ್ಲಿ ಇವರ ಸುಮಾರು 30 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.

ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದನ್ನು ಇವರ ಚಿತ್ತಾರಗಳು ತಿಳಿಸಿಕೊಡಬಲ್ಲವು. ಅಮೂರ್ತ, ಸಮಕಾಲೀನ ಚಿತ್ರಣ, ಸಾಂಪ್ರದಾಯಿಕ, ಲ್ಯಾಂಡ್‌ಸ್ಕೇಪ್, ಹೀಗೆ ಎಲ್ಲಾ ಪ್ರಕಾರದ ಚಿತ್ರಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದಿ ಸೌಂಡ್ಸ್ ಆಫ್ ದಿ ಫಾರೆಸ್ಟ್ (ಕಾಡಿನ ಶಬ್ದಗಳು), ಲುಕ್ ಆಫ್ ಲವ್ (ಪ್ರೀತಿಯ ನೋಟ), ಪೊಯೆಟ್ರಿ ಆಫ್ ಲವ್ (ಪ್ರೀತಿಯ ಕವನ), ಹಾರ್ಮೊನಿ (ಸಹಬಾಳ್ವೆ), ರಿನೈಸನ್ಸ್ (ಪುನರುತ್ಥಾನ) ಟುಗೆದರ್‌ನೆಸ್, ಒನ್ ಲೈಫ್, ಗ್ರೇಪ್ ವೈನ್, ಯುನಿಟಿ ಇನ್ ನೇಚರ್ (ಪ್ರಕೃತಿಯಲ್ಲಿ ಏಕತೆ), ರಾಧಾ ಕೃಷ್ಣ, ಎಂಡ್ಲೆಸ್ ಫೇತ್ (ಕೊನೆಗಾಣದ ನಂಬಿಕೆ), ಜರ್ನಿ ಆಫ್ ಲೈಫ್ ಹೀಗೆ ಹಲವು ಶೀರ್ಷಿಕೆಯಲ್ಲಿ ತಮ್ಮ ಬಣ್ಣದ ಮೋಡಿಯನ್ನು ತೋರಿಸಿದ್ದಾರೆ. ಅದರಲ್ಲೂ ಬುದ್ಧನಿಗೆ ತಮ್ಮ ಕಲೆಯಲ್ಲಿ ವಿಶೇಷ ಸ್ಥಾನ ಎನ್ನುವ ಗೋಯೆಲ್ ಆತನ ಪ್ರಶಾಂತತೆ ಕುರಿತೂ ಕಲೆಯಲ್ಲಿ ಕೈಚಳಕ ತೋರಿದ್ದಾರೆ.

ಮನುಷ್ಯನ ಸಂಬಂಧಗಳ ಸೂಕ್ಷ್ಮತೆ, ನೈಜ ಚಿತ್ರಣ, ಪ್ರಕೃತಿಯ ತುಣುಕುಗಳನ್ನು ಹೆಚ್ಚಾಗಿ ಇವರು ಕಂಡುಕೊಂಡಿರುವುದು ಆಯಿಲ್ ಪೇಂಟಿಂಗ್ ಮೂಲಕ. ಈ ಬಾರಿ ಪ್ರಕೃತಿ ಮತ್ತು ಮಣ್ಣಿನ ಬಣ್ಣಗಳನ್ನು ಬಳಸಿಕೊಂಡು ರೂಪಿಸಿದ ಚಿತ್ರಗಳಿರುವುದರಿಂದ `ಸ್ಯಾಂಡ್ಸ್ ಆಫ್ ಟೈಮ್...~ ಎಂಬ ಹೆಸರು ಇಟ್ಟಿದ್ದೇನೆ ಎನ್ನುತ್ತಾರೆ ಗೋಯೆಲ್.

ಪ್ರಕೃತಿಯಲ್ಲಿ ಬಣ್ಣಗಳು ನೂರಾರು. ಅಂತಹ ಅಮಿತ ಬಣ್ಣಗಳಲ್ಲಿ ಕೆಲವನ್ನು ನನ್ನ ಕುಂಚದಲ್ಲಿ ತೆರೆದಿಡಲು ಯತ್ನಿಸಿದ್ದೇನೆ, ಪ್ರಕೃತಿಗೆ ನನ್ನದೇ ಕಲ್ಪನೆಯಲ್ಲಿ ಜೀವ ತುಂಬಿದ್ದೇನೆ ಎನ್ನುತ್ತಾರೆ ಅವರು.
 
ಬಣ್ಣಗಳು, ಭಾವನೆಗಳು ಮತ್ತು ಸನ್ನಿವೇಶಗಳೇ ನನ್ನ ಕಲೆಗೆ ಬಂಡವಾಳ ಎನ್ನುವ ಗೋಯೆಲ್ ಅವರು ಕಳೆದ ಬಾರಿ ರಿಫ್ಲೆಕ್ಷನ್ ಮತ್ತು ಡಿಫರೆಂಟ್ ಸ್ಟ್ರೋಕ್ಸ್ ಎಂಬ ಹೆಸರಿನಲ್ಲಿ ಪ್ರದರ್ಶನ ನಡೆಸಿದ್ದರು. ಇವರ `ಸ್ಯಾಂಡ್ಸ್ ಆಫ್ ಟೈಮ್...~ ಕಲಾ ಪ್ರದರ್ಶನ ಇದೇ 22ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.