ADVERTISEMENT

ಬದಲಾಗುವ ಪ್ರಾಚಿ ಕನಸುಗಳು ...

ಪ್ರಜಾವಾಣಿ ವಿಶೇಷ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಫೆಮಿನಾ’ ನಿಯತಕಾಲಿಕೆ ನಗರದ ಜುರಿ ಹೋಟೆಲ್‌ನಲ್ಲಿ ಇತ್ತೀಚೆಗೆ ‘ಫೆಮಿನಾ ಸ್ಟೈಲ್‌ ದಿವಾ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಗರದ 16 ಯುವ ಫ್ಯಾಷನಿಸ್ಟ್‌ಗಳಿಗೆ ತಮ್ಮ ಸ್ಟೈಲ್‌ ಪ್ರದರ್ಶಿಸಲು ಇಲ್ಲಿ ಅವಕಾಶ ನೀಡಲಾಯಿತು.

ಅಲ್ಲಿ ತೀರ್ಪುಗಾರರಾಗಿ ಬಂದಿದ್ದು ಬಾಲಿವುಡ್‌ ಸಿನಿಮಾ ನಿರ್ದೇಶಕ ಪುನೀತ್‌ ಮಲ್ಹೋತ್ರ, ನಟಿಯರಾದ ಪ್ರಾಚಿ ದೇಸಾಯಿ ಹಾಗೂ ಪ್ರಿಯಾ ಮಣಿ. ಸ್ಟೈಲ್‌ ದಿವಾ ಮತ್ತು ತಮ್ಮ ವೃತ್ತಿ ಬದುಕಿನ ಕುರಿತು ಕಪ್ಪು ದಿರಿಸಿನಲ್ಲಿ ಮಿನುಗುತ್ತಿದ್ದ ನಟಿ ಪ್ರಾಚಿ ದೇಸಾಯಿ ‘ಮೆಟ್ರೊ’ದೊಂದಿಗೆ ಒಂದಿಷ್ಟು ಹೊತ್ತು ಹರಟಿದರು.

‘ಸ್ಟೈಲ್‌ ದಿವಾ’ ಆದದ್ದು ಹೇಗನ್ನಿಸಿತು?
ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಎಲ್ಲರಿಗೂ ಅವರದೇ ಆದ ಸ್ಟೈಲ್‌ ಇದೆ. ಅದನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆಯ ವೇದಿಕೆ.

ಫ್ಯಾಷನ್‌ ಬಗ್ಗೆ ನಿಮ್ಮ ಅಭಿಮತವೇನು?
ನಮಗೆ ಯಾವ ಉಡುಗೆ ಹೊಂದುತ್ತದೆಯೋ ಆ ಉಡುಗೆಯನ್ನು ಧರಿಸಬೇಕು. ಆತ್ಮವಿಶ್ವಾಸದಿಂದ ಇರಬೇಕು.

ಸೌಂದರ್ಯದ ಬಗ್ಗೆ ನಿಮ್ಮ ಕಲ್ಪನೆ ಏನು?
ಬಾಹ್ಯ ಸೌಂದರ್ಯಕ್ಕೆ ಒಳ್ಳೆಯ ಆಹಾರವನ್ನು ಸೇವಿಸಿ. ಚೆನ್ನಾಗಿ ನೀರು ಕುಡಿಯಿರಿ, ವ್ಯಾಯಾಮ ಮಾಡಿ. ರಾತ್ರಿ ಮಲಗುವಾಗ ಮೇಕಪ್‌ ತೆಗೆಯಿರಿ. ಇವೆಲ್ಲಕ್ಕಿಂತ ಮುಖ್ಯವಾದದ್ದು ಆಂತರಿಕ ಸೌಂದರ್ಯ. ನಮ್ಮ ಮನಸ್ಸನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಆಗ ಮುಖದ ಸೌಂದರ್ಯ ಕೂಡ ಹೆಚ್ಚುತ್ತದೆ. ಮನಸ್ಸಿನಲ್ಲಿ ಕೆಟ್ಟ ಯೋಚನೆ ತುಂಬಿಕೊಂಡು ಮುಖಕ್ಕೆ ನೀವು ಎಷ್ಟೇ ಪೌಡರ್‌, ಕ್ರೀಮ್ ಹಾಕಿದರೂ ಏನೂ ಪ್ರಯೋಜನವಿಲ್ಲ.

ನಟಿ ಆಗದಿದ್ದರೆ ಏನಾಗಬೇಕೆಂಬ ಕನಸಿತ್ತು ನಿಮಗೆ?
ಕನಸುಗಳು ಯಾವತ್ತೂ ಬದಲಾಗುತ್ತಾ ಇರುತ್ತವೆ. ಬಾಲ್ಯದಲ್ಲಿ ಟೀಚರ್‌ ನೋಡಿದಾಗ ನಾನು ಟೀಚರ್‌ ಆಗಬೇಕು ಎಂಬ ಆಸೆ ಇತ್ತು. ಸ್ವಲ್ಪ ದೊಡ್ಡವಳಾದ ಮೇಲೆ ಗಗನಸಖಿ ಆಗಬೇಕು ಎಂಬ ಆಸೆ ಗರಿಗೆದರಿತ್ತು. ಮತ್ತೆ ಮನಃಶಾಸ್ತ್ರ ಓದಬೇಕು ಎಂದು ಕನಸು ಕಂಡೆ. ಸೈಕಾಲಾಜಿ ನನ್ನಿಷ್ಟದ ವಿಷಯ. ಆ ಕನಸುಗಳೆನ್ನೆಲ್ಲಾ ಮರೆತು ಈಗ ಡೈಲಾಗ್‌ ಹೇಳುವುದರಲ್ಲಿಯೇ ಬ್ಯುಸಿ ಆಗಿಬಿಟ್ಟೆ.

ನಿಮ್ಮ ನಟನೆಗೆ ಸಿಕ್ಕ ಮೊದಲ ಸಂಬಳದಿಂದ ಏನು ಖರೀದಿಸಿದಿರಿ?
ಮೊದಲ ಚೆಕ್‌ ನನ್ನ ಕೈಗೆ ಸಿಕ್ಕಾಗ ತುಂಬಾನೆ ಥ್ರಿಲ್‌ ಆಗಿದ್ದೆ. ನಾನು ದುಡಿದ ಹಣ ನನ್ನ ಕೈಯಲ್ಲಿತ್ತು. ತುಂಬಾ ದೊಡ್ಡ ಮಟ್ಟದ ಹಣವೇನೂ ಸಿಕ್ಕಿರಲಿಲ್ಲ. ಆದರೆ ಖುಷಿ ಇತ್ತು. ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಆ ಹಣದಿಂದ ಏನೇನೋ ಮಾಡಬೇಕು ಎಂಬ ಉತ್ಸಾಹವಿತ್ತು. ಅದು ಎಲ್ಲರಿಗೂ ಇರುವಂತಹ ಒಂದು ರೀತಿಯ ಮುಗ್ಧತೆ.

ಮೊದಲ ಸಂಬಳದಿಂದ ನನ್ನ ತಂದೆ–ತಾಯಿಗೆ, ಸ್ನೇಹಿತರಿಗೆ ಉಡುಗೊರೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಮೊದಲು ನನ್ನ ತಲೆಗೆ ಬಂತು. 12 ಉಡುಗೊರೆಗಳನ್ನು ನಾನು ಸಂಪಾದಿಸಿದ ಹಣದಿಂದ ಕೊಂಡುಕೊಂಡೆ. ಆ ಉಡುಗೊರೆಯನ್ನು ಹಂಚಿದಾಗ ಮನೆಯವರ ಮುಖದಲ್ಲಿ ಕಂಡ ನಗು ನನಗೆ ಖುಷಿ ನೀಡಿತು. ನಂತರ ನನ್ನ ಮೊದಲ ಸಂಬಳವನ್ನು ಸ್ವಲ್ಪ ಉಳಿಸಿಕೊಂಡಿದ್ದೆ. ನನ್ನ ಮೊದಲ ಕಾರು ತೆಗೆದುಕೊಂಡಾಗ ಆ ಹಣವನ್ನು ವಿನಿಯೋಗಿಸಿದ್ದೆ.

ಸೆಲೆಬ್ರಿಟಿ ಆದ ಮೇಲೂ ನಿಮ್ಮ ಸ್ನೇಹಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದೀರಾ?
ಕೆಲವರು ಈಗಲೂ ಇದ್ದಾರೆ. ಇನ್ನು ಕೆಲವರ ಜತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಸಮಯದ ಅಭಾವವೇ ಇದಕ್ಕೆ ಕಾರಣ. ನನಗೆ ಫ್ರೆಂಡ್ಸ್‌ ಜತೆ ಸುತ್ತಾಡುವುದು ಎಂದರೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ಇ–ಮೇಲ್ ಮಾಡುತ್ತೇನೆ, ಮಾತನಾಡುತ್ತೇನೆ. ಅವರ ಜತೆ ಸಂಪರ್ಕವಿಲ್ಲ ಎಂದಮಾತ್ರಕ್ಕೆ ನಾನು ಅವರನ್ನು ಮರೆತಿದ್ದೇನೆ ಎಂದರ್ಥವಲ್ಲ.

ನಿಮ್ಮ ಕನಸಿನ ಸಹ ನಟ ಯಾರು?
ರಣಬೀರ್‌ ಕಪೂರ್

ನಿಮ್ಮನ್ನು ಹೇಗೆ ಡಿಫೈನ್‌ ಮಾಡಿಕೊಳ್ಳುತ್ತೀರಿ?
ನಾನು ತುಂಬಾ ಡಿಫರೆಂಟ್‌ ಹುಡುಗಿ. ಯಾವಾಗಲೂ ಖುಷಿಯಾಗಿರುತ್ತೇನೆ. ನನ್ನ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ.

ಟೀಕೆಯನ್ನು ಹೇಗೆ ಎದುರಿಸುತ್ತೀರಿ?
ಇದು ತುಂಬಾ ಕಷ್ಟ. ಕೆಲವು ಸಮಯ ಟೀಕೆ ನಮ್ಮನ್ನು ಮತ್ತೆ ಮೇಲೇಳದ ಹಾಗೆ ಮಾಡುತ್ತದೆ. ಅದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಇಡೀ ಜೀವನ ಹಾಳಾಗುತ್ತೆ. ಏನೇ ಟೀಕೆ ಬಂದರೂ ಪಾಸಿಟಿವ್‌ ಆಗಿ ತೆಗೆದುಕೊಳ್ಳುತ್ತೇನೆ. ಒಂದಲ್ಲ ಒಂದು ದಿನ ಸತ್ಯ ಗೊತ್ತಾಗುತ್ತದೆ ಎಂಬ ನಂಬಿಕೆಯಿದೆ.

ಡೇಟಿಂಗ್‌ ಕುರಿತು ನಿಮ್ಮ ಅಭಿಪ್ರಾಯ?
ನಟನೆಯಲ್ಲಿ ಬ್ಯುಸಿಯಾಗಿರುವುದರಿಂದ  ಡೇಟಿಂಗ್‌ ಮಾಡುವುದಕ್ಕೆ ಸಮಯ ಸಿಗುವುದಿಲ್ಲ. ಡೇಟಿಂಗ್‌ಗೆ ಸರಿಯಾದ ಸಂಗಾತಿ ಕೂಡ ಅವಶ್ಯ. ಸಂಗಾತಿಯನ್ನು ಹುಡುಕುವುದಕ್ಕೆ ಸಮಯವಿಲ್ಲ. ಡೇಟಿಂಗ್‌ ತಪ್ಪು ಎಂದು ನಾನು ಹೇಳಲ್ಲ. ಅದು ಅವರವರ ಖಾಸಗಿ ವಿಚಾರ.
–ಸಂದರ್ಶನ: ಪವಿತ್ರಾ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT