ADVERTISEMENT

ಬಸವಣ್ಣನೊಡನೆ ಹೆಜ್ಜೆ ಗೆಜ್ಜೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಅನುಭವ ಮಂಟಪದ ಶಿಲ್ಪಿ ಬಸವೇಶ್ವರ ಅವರ ಜಯಂತಿಯನ್ನು `ಬಸವ ಉತ್ಸವ~ವನ್ನಾಗಿ ವಚನಜ್ಯೋತಿ ಬಳಗವು ಅಕ್ಷಯ ತೃತೀಯ ದಿನ ಅಂದರೆ ಏಪ್ರಿಲ್ 24ರ ಮಂಗಳವಾರ ಆಚರಿಸುತ್ತಿದೆ.

ಬಸವೇಶ್ವರ ಉತ್ಸವ ಮೂರ್ತಿ ಹಾಗೂ ವಚನ ಸಂಪುಟಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಜಾನಪದ ಕಲಾ ತಂಡಗಳಾದ ವೀರಗಾಸೆ, ನಂದಿಧ್ವಜ, ಕಂಸಾಳೆ, ಡೊಳ್ಳುಕುಣಿತ, ಪಟ ಕುಣಿತ, ನಂದಿಕೋಲು, ಗೊರವರ ಕುಣಿತ, ಪುರವಂತಿಕೆ ಮೊದಲಾದ ಕಲಾವಿದರು ವೇಷಧರಿಸಿ ಪಾಲ್ಗೊಳ್ಳಲಿದ್ದಾರೆ. 

ಜತೆಗೆ ಬಸವಣ್ಣ ಹಾಗೂ ಇತರ ವಚನಕಾರರ ಭಿತ್ತಿಚಿತ್ರಗಳನ್ನು ಹೊತ್ತ ವಾಹನಗಳು ಮೆರವಣಿಗೆಯ ರಂಗನ್ನು ಹೆಚ್ಚಸಲಿವೆ. `ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿ~ ಎಂಬ ಉದ್ಘೋಷ ಮೆರವಣಿಗೆಯ ಭಾಗವಾಗಿರುತ್ತದೆ.

ನಾಡಿನ ಖ್ಯಾತ ವಿದ್ವಾಂಸರಾದ ನಾಡೋಜ ಡಾ. ಎಂ. ಚಿದಾನಂದ ಮೂರ್ತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಅಧ್ಯಕ್ಷರಾದ ಡಾ.ಸಾ. ಶಿ. ಮರುಳಯ್ಯ, ಪ್ರೊ. ಎನ್. ಬಸವಾರಾಧ್ಯ, ಪ್ರಾಧ್ಯಾಪಕರಾದ ಡಾ.ಎಸ್. ವಿದ್ಯಾಶಂಕರ್, ಡಾ.ಸಿ. ಯು. ಮಂಜುನಾಥ್, ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಗಾಯಕ ರವೀಂದ್ರ ಸೊರಗಾವಿ, ರಂಗಭೂಮಿ ಕಲಾವಿದರಾದ ಶಿವಕುಮಾರಾರಾಧ್ಯ, ನಾಗರಾಜಮೂರ್ತಿ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು ಬೆಳಗ್ಗೆ 6.30ಕ್ಕೆ ವಿಜಯನಗರ ಟೆಲಿಫೋನ್‌ಎಕ್ಸ್‌ಚೇಂಜ್ ಸಮೀಪವಿರುವ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಬಸವೇಶ್ವರ ಮೆರವಣಿಗೆ ಆರಂಭವಾಗಲಿದ್ದು, ವಿಜಯನಗರ, ಹೊಸಹಳ್ಳಿ ಹಾಗೂ ಹಂಪಿನಗರ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ವಿದ್ಯಾರ್ಥಿ ನಿಲಯಕ್ಕೆ ಮರಳುತ್ತದೆ. 

ಹದಿನೈದು ವರ್ಷಗಳಿಂದ ವಚನಜ್ಯೋತಿ ಬಳಗವು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಶಾಲೆಯಿಂದ ಶಾಲೆಗೆ ವಚನಜ್ಯೋತಿ; ಕನ್ನಡ ಸಂಸ್ಕೃತಿ ಸಂಚಾರ ವಚನ ಸಂಜೆ, ವಚನಾಮೃತ ವರ್ಷಿಣಿ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.