ADVERTISEMENT

ಬಾಯ್‌ಫ್ರೆಂಡ್ ಇಲ್ಲದ ಹುಡುಗಿಯ ಆಟದ ಪ್ರೀತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಬೇಸಿಗೆಯಲ್ಲಿ ತಪ್ಪದೇ ಬೆಂಗಳೂರಿಗೆ ಬರುತ್ತೇನೆ ಎನ್ನುವ ಈಕೆಗೆ ಎಂ.ಜಿ.ರೋಡ್, ಬ್ರಿಗೇಡ್ ರೋಡ್‌ನಲ್ಲಿ ಶಾಪಿಂಗ್ ಮಾಡುವುದೆಂದರೆ ತುಂಬಾ ಇಷ್ಟವಂತೆ. ಬೆಂಗಳೂರು ಕೂಡ ಚೆನ್ನೈನಂತೆಯೇ ಇದೆಯಂತೆ.

ಇಲ್ಲಿನ ಹವಾಗುಣ ತುಂಬಾ ಇಷ್ಟ. ಆದರೆ, ನಗರದ ಟ್ರಾಫಿಕ್ ತುಂಬಾ ಹಿಂಸೆ ನೀಡುತ್ತೆ ಅಂತ ಮುಖ ಕಿವುಚುತ್ತಾರೆ. ಮುಂಬರುವ ಒಲಿಂಪಿಕ್‌ನಲ್ಲಿ ಪದಕ ಮುಡಿಗೇರಿಸಿ ಕೊಳ್ಳುವುದು ಹೆಬ್ಬಯಕೆ. ಸದ್ಯಕ್ಕೆ ಬಾಯ್‌ಫ್ರೆಂಡ್ ಬೇಡ ಎಂಬುದು ಸಂಕಲ್ಪ. ಅಂದಹಾಗೆ, ಈಕೆಯ ಹೆಸರು `ಕ್ವೀನ್ ಆಫ್ ದಿ ಕೋರ್ಟ್ಸ್~ ಅನಿಸಿಕೊಂಡಿರುವ ದೀಪಿಕಾ ರೆಬೆಕಾ ಪಲ್ಲಿಕಲ್.

ಕ್ರೀಡೆ ಮತ್ತು ಸೌಂದರ್ಯ ಒಂದೆಡೆ ಸೇರಿದರೆ ಮಾರುಕಟ್ಟೆ ಹಾಗೂ ನೋಡುಗರ ನೋಟ ಅತ್ತ ಹರಿಯವುದು ಈ ಕಾಲಮಾನದಲ್ಲಿ ಸಹಜ. ದೀಪಿಕಾ ಪಲ್ಲಿಕಲ್ ಅವರೂ ಕ್ರೀಡೆ, ಸೌಂದರ್ಯ ಹದವರಿತು ಬೆರೆತಂಥವರೇ. ತಮ್ಮ ಆಟದಿಂದಷ್ಟೇ ಅಲ್ಲ; ಚೆಲುವಿನಿಂದಲೂ ಸುದ್ದಿಯಾದವರು ಅವರು. ಸ್ವ್ಕಾಷ್‌ನಲ್ಲಿ 14ನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ದೀಪಿಕಾ ಆ ಕ್ರೀಡೆಯಲ್ಲಿ ದೇಶದ ಭರವಸೆ.

ಯುರೋಪಿಯನ್ ಜೂನಿಯರ್ ಸ್ಕ್ವಾಷ್ ಗೆದ್ದ ನಂತರ ದೀಪಿಕಾ ಜನಪ್ರಿಯತೆಯ ಗ್ರಾಫ್ ಸಾಕಷ್ಟು ಏರಿದೆ. ಆಟ, ಓದು ಎರಡರಲ್ಲೂ ಮುಂದಿರುವ ಅವರು ಸದ್ಯಕ್ಕೆ ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ. ಬಿಡುವಿದ್ದಾಗ ಸಂಗೀತ ಕೇಳುವುದು, ಸಿನಿಮಾ ನೋಡುವುದು ಹವ್ಯಾಸ.

ದೀಪಿಕಾ ಅವರಿಗೆ ಸ್ಕ್ವಾಷ್ ಅಂದರೆ ಪ್ರಾಣವಂತೆ. `ಹನ್ನೊಂದನೇ ವಯಸ್ಸಿನಲ್ಲಿ ಹತ್ತಿಸಿಕೊಂಡ ಸ್ಕ್ವಾಷ್ ಗೀಳು 21ಕ್ಕೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇದಕ್ಕಾಗಿ ಬಾಲ್ಯದ ಅನೇಕ ಖುಷಿಯ ಸಂಗತಿಗಳನ್ನು ತ್ಯಾಗ ಮಾಡಿದ್ದೇನೆ. ಆ ಬಗ್ಗೆ ನನ್ನ ಮನದಲ್ಲಿ ವಿಷಾದದ ಒಂದು ಸಣ್ಣ ಗೆರೆ ಹಾದು ಹೋಗಿಲ್ಲ~ ಎನ್ನುವ ಅವರಿಗೆ ಸ್ಕ್ವಾಷ್‌ನಲ್ಲಿ ಗೆದ್ದಾಗಲೆಲ್ಲಾ ಬಾಲ್ಯಕ್ಕೆ ಮರಳುವ ಖುಷಿ ಉಂಟಾಗುತ್ತದಂತೆ.

`14ನೇ ವಯಸ್ಸಿನಲ್ಲೇ ನಾನು ಈಜಿಪ್ಟ್‌ಗೆ ಹೋದೆ. ಅಲ್ಲಿಂದ ಊರಿಗೆ ಬಂದಾಗ ಕೇವಲ ಗೆಳತಿಯರ ಜತೆ ಕಾಲ ಕಳೆದು ಮತ್ತೆ ವಾಪಾಸಾಗುತ್ತಿದ್ದೆ. ಇನ್ನು ನನ್ನ ಬಹುತೇಕ ಸಮಯ ಆಟ ಮತ್ತು ಪ್ರವಾಸದಲ್ಲೇ ಕಳೆದು ಹೋಗುತ್ತಿತ್ತು. ಜೀವನ ಹೀಗಿದ್ದಾಗ ಬಾಯ್‌ಫ್ರೆಂಡ್ ಹುಡುಕುವುದಕ್ಕೆ ಸಮಯವೆಲ್ಲಿ ಸಿಗುತ್ತದೆ.

ಈಗ ಕಷ್ಟ. ಯಾಕೆಂದರೆ ನಾನೀಗ ಸ್ವ್ಕಾಷ್, ಪ್ರವಾಸದ ನಡುವೆ ಕಳೆದು ಹೋಗಿದ್ದೇನೆ. ಈ ಬಿಡುವಿಲ್ಲದ ಬದುಕಿನಿಂದ  ಹೊರಬಂದ ಮೇಲಷ್ಟೇ ಬಾಯ್‌ಫ್ರೆಂಡ್ ಚಿಂತೆ~ ಎನ್ನುತ್ತಾರೆ ಅವರು. 

ಸಾಗರ ಖಾದ್ಯಗಳ ಜತೆಗೆ ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರವನ್ನು ಇಷ್ಟಪಡುವ ದೀಪಿಕಾ ಈಜು ಸ್ಪರ್ಧೆಗಳು ಹಾಗೂ ಕ್ರಿಕೆಟ್ ಪಂದ್ಯಗಳನ್ನು ತಪ್ಪದೇ ನೋಡುತ್ತಾರೆ. ಹರಿಹರನ್ ಸಂಗೀತವನ್ನು ತನ್ಮಯತೆಯಿಂದ ಕೇಳುವ ಅವರಿಗೆ ಬಿಗ್ ಬಿ ಅಮಿತಾಬ್ ಬಚ್ಚನ್, ರಜನಿಕಾಂತ್, ತ್ರಿಷಾ ನೆಚ್ಚಿನ ನಟ-ನಟಿಯರು.

ನಿಮ್ಮ ರೂಪರಾಶಿಯ ಗುಟ್ಟೇನು ಅಂದರೆ, `ಆರೋಗ್ಯಯುತ ಆಹಾರ ಮತ್ತು ಏರೋಬಿಕ್ಸ್~ ಅನ್ನುತ್ತಾರೆ. ಸದ್ಯಕ್ಕೆ ಮಾಡೆಲ್ ಆಗಿಯೂ ಬಣ್ಣದ ಬೆಳಕಿಗೆ ಮೈಯೊಡ್ಡಿರುವ ಅವರನ್ನು ದಕ್ಷಿಣ ಭಾರತದ ಚಿತ್ರರಂಗ ಸಿನಿಮಾ ಜಗತ್ತಿಗೆ ಎಳೆದು ತರುವ ಹವಣಿಕೆಯಲ್ಲಿದೆ.

ಈ ಬಗ್ಗೆ ಕೇಳಿದರೆ, `ಕಾಲಿವುಡ್‌ನಿಂದ ಸಾಕಷ್ಟು ಆಫರ್‌ಗಳು ಬಂದಿದ್ದವು. ಆದರೆ ಆಕೆ ಅವೆಲ್ಲವನ್ನೂ ತಿರಸ್ಕರಿಸಿದೆ. ಸದ್ಯಕ್ಕೆ ಸ್ಕ್ವಾಷ್‌ನಲ್ಲಿ ಧ್ಯಾನ ಕೇಂದ್ರೀಕರಿಸಿದ್ದೇನೆ~ ಎನ್ನುತ್ತಾರೆ ಅವರು.

`ನಿಮಗೆ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಅದಕ್ಕಾಗಿ ನಿಮ್ಮ ಸಮಯ ಮತ್ತು ಶ್ರದ್ಧೆಯನ್ನು ಮೀಸಲಿಡಿ. ಛಲವನ್ನು ಎಂದಿಗೂ ಬಿಟ್ಟುಕೊಡಬೇಡಿ. ಅದು ನಿಮ್ಮನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ~- ಇದು ಯುವಕರಿಗೆ ದೀಪಿಕಾ ಕಿವಿಮಾತು.
 
ತಮ್ಮನ್ನು ಅಭಿಮಾನಿಗಳು ಪ್ರೀತಿಯಿಂದ `ಇಂಡಿಯನ್ ಶರಪೊವಾ~ ಕರೆದಾಗಲೆಲ್ಲಾ ಅವರು ಪುಳಕಿತರಾಗುತ್ತಾರಂತೆ. ಯಾವ ಆಮಿಷವೂ ತಮ್ಮ ಆಟಪ್ರೀತಿಯನ್ನು ಮಾತ್ರ ತುಸುವೂ ಕಡಿಮೆ ಮಾಡಲಾಗದು ಎಂಬ ಧಾಟಿಯ ಅವರ ಮಾತಿನಲ್ಲೇ ಅವರು ಇಟ್ಟುಕೊಂಡಿರುವ ಗುರಿ ಎಂಥದೆಂಬುದು ಸ್ಪಷ್ಟವಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.