ADVERTISEMENT

ಬಾಳಸಂಜೆಯ ಬಂಧುಗಳಿಗೂ ಒಂದು ದಿನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಎಪ್ಪತ್ತರ ಹರೆಯದ ಬಾಬುರಾಯರಿಗೆ ಒಬ್ಬನೇ ಮಗ. ಎಂಜಿನಿಯರ್ ಆಗಿ ಕೆಲಸ ಸಿಕ್ಕಿದ ಮೇಲೆ ವಿದೇಶಕ್ಕೆ ಹಾರಿದ. ಕೆಲ ವರ್ಷದಲ್ಲೇ ಪತ್ನಿಯನ್ನೂ ಕಳೆದುಕೊಂಡ ಮೇಲೆ ರಾಯರು ಒಬ್ಬಂಟಿ. ಹೀಗಾಗಿ ರಾಯರಿಗೆ ಮನೆಯಲ್ಲಿ ಒಬ್ಬರೇ ಇರಲು ಸಾಧ್ಯವಾಗಲಿಲ್ಲ. ಆಗ ಅವರು ನೆಲೆ ಕಂಡದ್ದು ನಿಸರ್ಗ ಪ್ರಬುದ್ಧಾಲಯದಲ್ಲಿ.

ಅಲ್ಲಿ ಚಿಣ್ಣರ ಕಲರವವಿಲ್ಲ, ಮಕ್ಕಳ ಒಡನಾಟವಿಲ್ಲ. ಯಾವುದೋ ಕಾರಣಕ್ಕೆ ಮಕ್ಕಳಿಂದ, ಮನೆ ಮಂದಿಯಿಂದ ದೂರವಾಗಿ ಬದುಕಿನ ಇಳಿಹೊತ್ತಿನಲ್ಲಿ ನೆಮ್ಮದಿ ಅರಸಿ ಬಂದ ಸಮಾನ ಮನಸ್ಕ ಹಿರಿಯರು ಮಾತ್ರ ಒಂದೆಡೆ ಸೇರಿ ಬದುಕುತ್ತಿದ್ದಾರೆ.

ಒಂದಲ್ಲ ಒಂದು ಕಾರಣಕ್ಕಾಗಿ ಮನೆ ಬಿಡಬೇಕಾಗಿ ಬಂದ ಹಿರಿಯ ಜೀವಗಳಿಗೆ ನೆಮ್ಮದಿಯ ತಾಣವಾಗಿ ರೂಪುಗೊಂಡಿದೆ ಈ ಪ್ರಬುದ್ಧಾಲಯ. ಹೀಗೆ ಇಲ್ಲಿ ಒಟ್ಟು 100 ಮಂದಿ ಬದುಕಿನ ಕಷ್ಟ ಸುಖ ಹಂಚಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ.

ಬನ್ನೇರುಘಟ್ಟ ಸಮೀಪದ ವಿಎಲ್‌ಎನ್ ನಿಸರ್ಗ ಬಡಾವಣೆಯಲ್ಲಿರುವ ಸುಸಜ್ಜಿತ ಕಟ್ಟಡದಲ್ಲಿ ಈ ಪ್ರಬುದ್ಧಾಲಯವಿದೆ. ಸಾಮಾಜಿಕ ಕಳಕಳಿ, ಸಮಾಜ ಸೇವೆಯನ್ನು ಗುರಿಯಾಗಿಟ್ಟುಕೊಂಡು ವಿವಿಧ ಕಾರ್ಯಗಳಲ್ಲಿ ತೊಡಗಿರುವವರು ನಿಸರ್ಗ ಪ್ರಬುದ್ಧಾಲಯದ ರೂವಾರಿ ವಿ. ಲಕ್ಷ್ಮೀನಾರಾಯಣ. ಮಾನಸಿಕ ನೆಮ್ಮದಿ ಬಯಸುವ ಹಿರಿಯ ನಾಗರಿಕರು ಇಲ್ಲಿ ಆಸರೆ ಪಡೆಯಬಹುದು.

`ಪ್ರಬುದ್ಧಾಲಯ ಸದಾ ಚಟುವಟಿಕೆಯ ತಾಣ. ಇಲ್ಲಿ ಹುಟ್ಟುಹಬ್ಬ, ಇತರೇ ಹಬ್ಬ ಹರಿದಿನಗಳ ಆಚರಣೆ ಮಾಡಲಾಗುತ್ತದೆ. ಉಪನ್ಯಾಸ, ಹಾಸ್ಯ, ಸಂಗೀತ, ನೃತ್ಯಗಳಂತಹ ಮನರಂಜನೆಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ~ ಎಂದು ಮಾಹಿತಿ ನೀಡುತ್ತಾರೆ ಇಲ್ಲಿನ ಲಯನೆಸ್ ಕ್ಲಬ್‌ನ ಅಧ್ಯಕ್ಷೆ ಭಾರತಿ ಗಿರೀಶ್.
ಇದೀಗ `ಹಿರಿಯರ ದಿನ~ ಆಚರಣೆಗೆ ಪ್ರಬುದ್ಧಾಲಯ ಸಜ್ಜಾಗಿದೆ.

ಇಲ್ಲಿನ ಬಂಧುಗಳಿಗಾಗಿಯೇ ಲಯನೆಸ್ ಕ್ಲಬ್ ಕೌನ್ಸಿಲ್, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಹಿರಿಯ ನಾಗರಿಕ ಸಂಘ ಈ `ಹಿರಿಯರ ದಿನ~ವನ್ನು ಇಲ್ಲಿನ ಪುರಂದರ ಮಂಟಪದಲ್ಲಿ ಗುರುವಾರ ಸಂಜೆ 4 ಗಂಟೆಗೆ ಏರ್ಪಡಿಸಿದೆ. ಇದೇ ಸಂದರ್ಭದಲ್ಲಿ 10 ಮಂದಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುವುದು.

ಎಂ.ಎಸ್.ಎನ್. ಮೂರ್ತಿ ಅವರ `ಹಾಸ್ಯ ರಸಾಯನ~ ಕಾರ್ಯಕ್ರಮವಿದೆ. ಲಯನ್ಸ್ ಕ್ಲಬ್‌ನ ವಿ.ರೇಣುಕುಮಾರ್, ಮಮತಾ ಸುಂದರರಾಜು, ಶ್ರೀವಿದ್ಯಾ ಅತಿಥಿಗಳಾಗಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.