ADVERTISEMENT

ಬಿಲ್ಡಿಂಗ್ ಬ್ಲಾಕ್ಸ್‌ಗೆ ಬಂಪರ್ ದೇಣಿಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ಬಿಲ್ಡಿಂಗ್ ಬ್ಲಾಕ್ಸ್‌ಗೆ ಬಂಪರ್ ದೇಣಿಗೆ
ಬಿಲ್ಡಿಂಗ್ ಬ್ಲಾಕ್ಸ್‌ಗೆ ಬಂಪರ್ ದೇಣಿಗೆ   

ರೂಪೇನಹಳ್ಳಿ ಅಗ್ರಹಾರದಲ್ಲಿ ಕೊಳೆಗೇರಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಬಿಲ್ಡಿಂಗ್ ಬ್ಲಾಕ್ಸ್ ಸಂಘಟನೆಯ ಬ್ಲೂಬೆಲ್ ಶಾಲೆ ಮಕ್ಕಳಿಗೆ ಅಂದು ಅಚ್ಚರಿ ಕಾದಿತ್ತು.

ವಿದೇಶಿ ದಂಪತಿಗಳಾದ ಡಾ. ಇವಾನ್ ಮಿಸ್ನರ್ ಮತ್ತು ಎಲಿಜಬೆತ್ ಮಿಸ್ನರ್ ಬಂದು ಮಕ್ಕಳೊಂದಿಗೆ ಖುಷಿಯಿಂದ ಸ್ವಲ್ಪ ಸಮಯ ಕಳೆದರು.ಲೋಕಾಭಿರಾಮವಾಗಿ ಹರಟಿದರು. ಕೊಳಚೆ ಪ್ರದೇಶ ಎಂದು ಮುಖ ಸಿಂಡರಿಸಿಕೊಳ್ಳದೆ ಕೆಲ ಮಕ್ಕಳ ಮನೆಗಳಿಗೆ ಭೇಟಿ ಕೊಟ್ಟು ಅವರ ಪೋಷಕರ ಜತೆ ಮಾತನಾಡಿದರು. ಶಾಲೆಯ ಶೈಕ್ಷಣಿಕ ಚಟುವಟಿಕೆಗಾಗಿ 20 ಸಾವಿರ ಡಾಲರ್ (ಸುಮಾರು 9 ಲಕ್ಷ ರೂ) ದೇಣಿಗೆ ನೀಡಿದರು.

ಈ ದಂಪತಿ ಬಂದದ್ದು ಅಮೆರಿಕದ ಕ್ಯಾಲಿಫೋರ್ನಿಯದಿಂದ. ಅಲ್ಲಿನ ಅಪ್‌ಲ್ಯಾಂಡ್‌ನಲ್ಲಿ 11 ವರ್ಷಗಳ ಹಿಂದೆ ‘ಬಿಎನ್‌ಐ ಮಿಸ್ನರ್’ ಎಂಬ ಧರ್ಮಾರ್ಥ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ವಿಶ್ವದ ವಿವಿಧೆಡೆ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಪ್ರತಿಷ್ಠಾನದ ಮೂಲಕ 10 ಲಕ್ಷ ಡಾಲರ್‌ಗೂ ಹೆಚ್ಚು ನೆರವು ನೀಡಿದ್ದಾರೆ. ಅಂತೆಯೇ ಬ್ಲೂಬೆಲ್ ಶಾಲೆಗೂ ಸಹಾಯ ಹಸ್ತ ಚಾಚಿದರು.

ಮಿಸ್ನರ್ ಅವರ ಬಿಎನ್‌ಐ ಸಂಸ್ಥೆ ವ್ಯಾಪಾರ, ವ್ಯವಹಾರ ಅಭಿವೃದ್ಧಿಪಡಿಸಿಕೊಳ್ಳಲು ಅಗತ್ಯವಾದ ರೆಫರಲ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರು ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದೆ.ಬ್ಲೂಬೆಲ್ ಶಾಲೆ ಸುತ್ತಲಿನ ಕೊಳೆಗೇರಿಗಳ ಮೂರುವರೆಯಿಂದ ಐದು ವರ್ಷದ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡುತ್ತಿರುವುದಕ್ಕೆ ಮಿಸ್ನರ್ ಖುಷಿಪಟ್ಟರು. ಇಂದಿನ ಜಾಗತಿಕ, ಆರ್ಥಿಕ ಸ್ಥಿತಿಯಲ್ಲಿ ಯಶಸ್ಸಿಗೆ ಶಿಕ್ಷಣ ಅತ್ಯಂತ ಮುಖ್ಯ ಎಂದರು.

ನೂತನ ಶಾಲೆಗಳ ಆರಂಭ ಮತ್ತು ಮಾಸಿಕ ನಿರ್ವಹಣಾ ವೆಚ್ಚ ಭರಿಸಲು ಪ್ರತಿಷ್ಠಾನದ ನೆರವಿನಿಂದ ಅನುಕೂಲವಾಗಲಿದೆ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಬಿಲ್ಡಿಂಗ್ ಬ್ಲಾಕ್ಸ್‌ನ ಸ್ಥಾಪಕ ಜೇಮ್ಸ್ ಅಂಬಟ್ ಹೇಳಿದರು. ಪ್ರತಿಷ್ಠಾನ ನೀಡಿದ ನೆರವಿನಲ್ಲಿ 40 ಸೌಲಭ್ಯವಂಚಿತ ಮಕ್ಕಳಿಗೆ ಒಂದೂವರೆ ವರ್ಷದ ವರೆಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಶಾಲೆಗೆ ಮತ್ತೊಂದು ಕೊಠಡಿ ನಿರ್ಮಿಸಲು ಕೂಡ ಸಹಾಯವಾಗಲಿದೆ.

ಬಿಲ್ಡಿಂಗ್ ಬ್ಲಾಕ್ಸ್
ಬಿಲ್ಡಿಂಗ್ ಬ್ಲಾಕ್ಸ್ ಉಚಿತ ಶೈಕ್ಷಣಿಕ ಕಾರ್ಯಕ್ರಮ ಮತ್ತು ಕಲಿಕಾ ಕೇಂದ್ರ. ಮೂರೂವರೆಯಿಂದ ಐದು ವರ್ಷದ ವರೆಗಿನ ಕೊಳೆಗೇರಿ ಮಕ್ಕಳಿಗೆ ಸರಳ ಗಣಿತ, ಬರವಣಿಗೆ ಮತ್ತು ಓದು ಕಲಿಸುವುದಲ್ಲದೆ ಅವರ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.  ಇದು ಪ್ರಮುಖ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪಡೆಯಲು ವಿನ್ಯಾಸಗೊಳಿಸಲಾಗಿರುವ ಪಠ್ಯಕ್ರಮ ಹೊಂದಿದೆ. ಮಕ್ಕಳು ಇಲ್ಲಿ ರಂಗಕಲೆ, ಹಾಡು ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಕಲಿಯುತ್ತಾರೆ. ಇಲ್ಲಿನ ತರಗತಿಗಳು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯುತ್ತವೆ. ಮಕ್ಕಳಿಗೆ ವಾರದ ಆರೂ ದಿನ ಪೌಷ್ಟಿಕಾಂಶಯುಕ್ತ ಊಟ ಮತ್ತು ತಿಂಡಿ, ಶಾಲಾ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ.  ಈ ಮಕ್ಕಳಿಗೆ 10ನೇ ತರಗತಿ ವರೆಗಿನ ಶಿಕ್ಷಣ ಮುಗಿಸಲು ಪ್ರಾಯೋಜಕರನ್ನು ಹುಡುಕಿ ನೆರವು ಒದಗಿಸಿಕೊಡುತ್ತದೆ. ಉಚಿತ ವೈದ್ಯಕೀಯ ತಪಾಸಣೆ, ಸಣ್ಣಪುಟ್ಟ ಪ್ರವಾಸ, ಪ್ರತಿ ಮಗುವಿನ ಜನ್ಮದಿನ ಆಚರಣೆ ಇಲ್ಲಿನ ವಿಶೇಷ.
ಮಾಹಿತಿಗೆ: 98800 21920, 97398 88196.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.