ADVERTISEMENT

`ಬಿ3' ಗುನುಗು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಧ್ವನಿಮುದ್ರಿಕೆ ಬಿಡುಗಡೆಯ ಮಜಲು ತಲುಪಿದ್ದಳು `ಬಿ3'. ವೇದಿಕೆ ಮೇಲೆ ಸರಬರನೆ ಓಡಾಡುತ್ತಿತ್ತು ಸಡಗರ. ತೆರೆಯ ಮೇಲೆ ಮೂಡುತ್ತಿದ್ದ ಹಾಡುಗಳು ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ರ ಕೌಶಲಕ್ಕೆ ಕನ್ನಡಿ ಹಿಡಿದಿದ್ದವು. ಈ ವರ್ಷ ಅವರಿಗೆ ಸಾಲು ಸಾಲು `ಹಿಟ್' ಸಿಕ್ಕಿದೆ. `ಮದರಂಗಿ', `ಪರಾರಿ' ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿವೆ. ಅದರ ಬೆನ್ನಿಗೇ `ಬಿ3'ಯ `ಕಣ್ಣಲ್ಲೇ ಹಾಡು ಕವ್ವಾಲಿಯ...' ಗೀತೆ ಕೂಡ ಜಾಲಿಗರ ಮನಗೆದ್ದಿದೆ. ಇದೂ ಸೇರಿದಂತೆ ಚಿತ್ರದಲ್ಲಿರುವುದು ಒಟ್ಟು ಐದು ಹಾಡುಗಳು.

ಹಾಡುಗಾರರಾದ ಅನುರಾಧ ಭಟ್, ನಕುಲ್, ಎಲ್.ಎನ್. ಶಾಸ್ತ್ರಿ, ಸಂಗೀತಾ, ಗೀತರಚನೆಕಾರ ಅರಸು ಅಂತಾರೆ ಸಿ.ಡಿ.ಗಳನ್ನು ಬಿಡುಗಡೆ ಮಾಡಿದ್ದು ಕಾರ್ಯಕ್ರಮಕ್ಕೆ ಹೊಸ ಸ್ಪರ್ಶ ತಂದಿತ್ತು. ಎಲ್ಲ ಗಾಯಕರೂ ಕರ್ನಾಟಕದವರೇ ಎಂಬುದನ್ನು ಅನೂಪ್ ಒತ್ತಿ ಹೇಳಿದರು. ಮಾತ್ರವಲ್ಲ ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಕೂಡ ಸಾಹಿತ್ಯ ರಚಿಸಿದ್ದಾರೆ.

`ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಚಿತ್ರದ ನಾಯಕ ನಟ. ಅವರ ಪಾಲಿಗೆ ಇದು ಕನಸಿನ ಯೋಜನೆ. ಕತೆ, ಸಂಗೀತ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿರುವುದು ಅವರಿಗೆ ಖುಷಿ ತಂದಿದೆ. ಅದೇ ಖುಷಿಯಲ್ಲಿ ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ನಟಿ ಹರ್ಷಿಕಾ ಚಿತ್ರದ ಕುರಿತು ಭರ್ತಿ ನಿರೀಕ್ಷೆಗಳನ್ನು ತುಂಬಿಕೊಂಡಿದ್ದಾರೆ. ಏಕೆಂದರೆ ಅವರು ಚಿತ್ರದ ಮೂಲಕ ಬಬ್ಲಿ ಪಾತ್ರದಿಂದ ಬೋಲ್ಡ್ ಪಾತ್ರಕ್ಕೆ ಬದಲಾಗಿದ್ದಾರೆ. ತೆರೆ ಮೇಲೆ ಮೂಡುತ್ತಿದ್ದ ದೃಶ್ಯಗಳು ಕೂಡ ಈ ಮಾತಿಗೆ ಜೈಕಾರ ಹಾಕುತ್ತಿದ್ದವು.

ಚಿತ್ರಕ್ಕೆಂದು ಮೊದಲು ನಾಲ್ಕೇ ಹಾಡುಗಳು ಇದ್ದದ್ದು. ಆದರೆ ಕೊನೆಯಲ್ಲೊಂದು ಹಾಡು ಸೇರ್ಪಡೆಯಾಯಿತು. ಅದೇ ಈಗ ಆಸಕ್ತರ ಬಾಯಲ್ಲಿ ನಲಿಯುತ್ತಿರುವ `ಕಣ್ಣಲ್ಲೇ...' ಗೀತೆ. ತಾಳ್ಮೆಯಿಂದ ಕಡೆ ಘಳಿಗೆಯಲ್ಲಿ ಉತ್ತಮ ಹಾಡನ್ನು ಹೆಣೆದ ಅನೂಪ್ ಅವರಿಗೆ ನಿರ್ಮಾಪಕ ಬಸವರಾಜ್ ಮಂಚಯ್ಯ ವಂದನೆ ಸಲ್ಲಿಸಿದರು.

ಸೌಂಡಿಸೈನ್ ಸಂಸ್ಥೆಯ ಧರ್ಮ ವಿಶ್ ಹಾಡುಗಳನ್ನು ಹೊರತರುತ್ತಿದ್ದಾರೆ. ಅಂದಹಾಗೆ ಇದು ಹುಡುಗ ಹುಡುಗಿಯ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮತ್ತೊಂದು ಮುಖ್ಯ ಪಾತ್ರವೂ ಕತೆಯಲ್ಲಿದೆ. ಸುಮಾರು ಐವತ್ತು ದಿನಗಳ ಕಾಲ ಬೆಂಗಳೂರು, ಫಿಲಂಸಿಟಿ ಹಾಗೂ ಸುನಾಮಿಯಿಂದ ತತ್ತರಿಸಿದ ತಮಿಳುನಾಡಿನ ಧನುಷ್ಕೋಟಿಯ ಪಾಳುಮನೆಗಳಲ್ಲಿ ಚಿತ್ರೀಕರಣ ನಡೆದಿದೆ. ಮೇ ಹೊತ್ತಿಗೆ `ಬಿ3' ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾಳೆ. ಹಿರಿಯ ಕೊಳಲು ವಾದಕ ಸುಂದರಮೂರ್ತಿ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.