ADVERTISEMENT

ಬೀದಿಯಲ್ಲಿ ಆಟದ ಕಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಕಸ್ತೂರಿ ನಗರದಲ್ಲಿ ಈಚೆಗೆ ಭಾನುವಾರ ರಸ್ತೆಗಳೆಲ್ಲವೂ ಆಟದ ಕಣಗಳಾಗಿದ್ದವು. ಚೌಕಬಾರಾ, ಪಗಡೆ ಆಟ, ಅಳೆಗುಳಿಮಣಿ ಜೊತೆಗೆ ಕುಂಟಾಬಿಲ್ಲೆ ಮುಂತಾದ ಆಟಗಳನ್ನು ಆಡಲು ಚಿಣ್ಣರಿಗೆ ಅವಕಾಶ ಕಲ್ಪಿಸಲಾಗಿತ್ತು.

‘ಇವ್ಯಾಂಜಿಕಲ್‌ ಸೋಷಿಯಲ್‌ ಆ್ಯಕ್ಷನ್‌ ಫೋರ್ಮ್‌’ನಿಂದ ಮಂಜು ಜಾರ್ಜ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಮಲಾ ಗೌಡ ಅವರ ಪ್ರೋತ್ಸಾಹದಿಂದ ಬಡಾವಣೆಯ ಎಲ್ಲ ಮಕ್ಕಳೂ ಈ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನಪದ ಆಟಗಳಿಂದ ದೂರ ಸರಿದಿದ್ದ ಮಕ್ಕಳಿಗೆ ಈ ಒಂದು ದಿನದ ಬೀದಿ ಆಟಗಳು ಖುಷಿ ನೀಡಿದವು. ಮಕ್ಕಳಲ್ಲಿ ಗಣಿತ ಮತ್ತು ವಿಶ್ಲೇಷಣಾ ಬುದ್ಧಿಯನ್ನು ಚುರುಕುಗೊಳಿಸುವ ಈ ಆಟಗಳನ್ನು ಜನಪ್ರಿಯಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಮನಸು, ದೇಹ, ಬುದ್ಧಿ ಮೂರು ಅಂಶಗಳ ನಡುವೆ ಸಂಯೋಜನೆ, ಸಹಕಾರಗಳನ್ನು ಉತ್ತೇಜಿಸುವಂಥ ಈ ಆಟಗಳತ್ತ ಮಕ್ಕಳು ಮತ್ತೆ ಮರಳಲಿ ಎಂದು ಇಂಥ ಆಟಗಳನ್ನು ಆಯ್ಕೆ ಮಾಡಲಾಗಿತ್ತು. ಭಾನುವಾರ ಟೀವಿಯಿಂದ ದೂರ ಸರಿದ ಮಕ್ಕಳು, ಅಂಗಳವಿರದ ಮನೆಗಳಿಂದ ಬಂದ ಮಕ್ಕಳು ಒಂದೆರಡು ದಶಕಗಳ ಹಿಂದಿನ ಬಾಲ್ಯವನ್ನು ಮತ್ತೆ ಸವಿದರು. ಆಟವಾಡಿ, ನಕ್ಕು ನಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.