ADVERTISEMENT

ಬೂದು ಬೆಕ್ಕು ತರಲೆ ಜಿರಲೆಗಳ ಕತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ನೀಲಿ ಬೆಕ್ಕೊಂದು ಆಹಾರ ಮೆಲ್ಲುತ್ತಿದ್ದರೆ ಮೂರು ತರಲೆ ಜಿರಲೆಗಳು ಗೋಳು ಹೊಯ್ದುಕೊಳ್ಳುತ್ತವೆ. ಈ ಒಂದು ಎಳೆಯೇ ಅರ್ಧಗಂಟೆಯವರೆಗೆ ದೊಡ್ಡವರು ಸಣ್ಣವರೆನ್ನದೆ ನೋಡಿ ಹಗುರಾಗುವಂತೆ ಮಾಡುತ್ತದೆ ಆಗ್ಗಿ ಅಂಡ್ ಕಾಕ್ರೋಚಸ್.

ಜೊಂಯ್ ಜೊಂಯ್ ಎನ್ನುವ ಹಿನ್ನೆಲೆ ಸಂಗೀತ ಬಂದರೆ ಸಾಕು ಮಕ್ಕಳೆಲ್ಲರೂ ರಿಮೋಟ್ ಬಚ್ಚಿಟ್ಟುಕೊಂಡು ಟೀವಿಯ ಮುಂದೆ ಪ್ರತಿಷ್ಠಾಪಿಸುತ್ತಾರೆ. ಇಷ್ಟಕ್ಕೂ ಏನಿದೆ ಈ ಆಗ್ಗಿ ಮತ್ತು ಜಿರಲೆಗಳ ನಡುವೆ?

ಇದೊಂದು ಫ್ರೆಂಚ್ ಶೋ. ಆಗ್ಗಿ ಎಂಬ ಡುಮ್ಮನೆಯ ತಿಂಡಿಪೋತ ಸೋಂಭೇರಿ ನೀಲಿ ಬೆಕ್ಕಿಗೆ ಏನಾದರೂ ಮೆಲ್ಲುತ್ತ ಟೀವಿ ನೋಡುವುದೇ ಚಟ. ಇಲ್ಲದಿದ್ದರೆ ಅಡುಗೆ ಮನೆಯಲ್ಲಿ ಏನಾದರೂ ಅಡುಗೆ ತಯಾರಿಸಿಕೊಳ್ಳುವುದು ಅತಿ ಇಷ್ಟದ ಕೆಲಸ. ಹಿಂದಿ ಅವತರಣಿಕೆಯಲ್ಲಿ ಆಗ್ಗಿ ಪಾತ್ರಕ್ಕೆ ಶಾರುಖ್ ಖಾನ್ ಕಂಠದಾನ ಮಾಡಿದ್ದಾರೆ.

ಆಗ್ಗಿಯ ಎಲ್ಲ ಕೆಲಸಗಳಲ್ಲಿಯೂ ತಡೆಯೊಡ್ಡುವುದೇ ತರಲೆ ಜಿರಲೆಗಳ ಕೆಲಸ.
ಈ ಜಿರಲೆಗಳಲ್ಲಿಯೂ ಒಂದು ತಿಂಡಿಪೋತ ಜಿರಲೆ ಇದೆ. ಅದರ ಹೆಸರು `ಡೀ ಡೀ~. ಸದಾ ಹಸಿವಿನಿಂದ ಕಂಗೆಟ್ಟ ಈ ಜಿರಲೆಗೆ ಆಗ್ಗಿಯ ತಿನಿಸಿನ ಮೇಲೆ ಸದಾ ಒಂದು ಕಣ್ಣು. ಯಾವಾಗಲೂ ಏನಾದರೂ ಮೆಲ್ಲುತ್ತಲೇ ಇರುವ ಜಿರಲೆಗೆ ನೀಲಿ ದೇಹ, ಕಿತ್ತಲೆ ಬಣ್ಣದ ಮುಖ ಮತ್ತು ಹಸಿರು ಕಂಗಳಿವೆ.
 
ನಿಕ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ಅವತರಣಿಕೆಯಲ್ಲಿ ಸುನೀಲ್ ಶೆಟ್ಟಿ ಡೀಡಿಗೆ ಕಂಠದಾನ ಮಾಡಿದ್ದರು. ಇದೀಗ ಪರೇಶ್ ರಾವಲ್ ಡೀಡಿಗೆ ಮಾತು ನೀಡುತ್ತಿದ್ದಾರೆ. ಡೀಡಿ ಇಲ್ಲಿ ಮೋಟು ಎಂಬ ಹೆಸರಿನೊಂದಿಗೆ ಪರಿಚಿತವಾಗಲಿದೆ.

ಡೀಡಿಯೊಂದಿಗೆ ಸದಾ ಗಮನಸೆಳೆಯುವ ಗುಲಾಬಿ ಕಂಗಳ ಜಿರಲೆಯೇ ಮಾರ್ಕಿ. ಮಾರ್ಕಿಗೆ ಲಂಬು ಎಂದು ಕರೆಯಲಾಗಿದೆ. ಸಾಹಸ ಮನೋಭಾವದ ಬೂದುಬಣ್ಣದ ದೇಹ, ಹಸಿರು ಮುಖವಿರುವ ಮಾರ್ಕಿ ಆಗ್ಗಿಯನ್ನು ಕಾಡಿಸುವುದರಲ್ಲಿ ಸದಾ ಮುಂದಿರುವ ಜಿರಲೆ. ಮೊದಲು ಮಾರ್ಕಿಯಾಗಿ ಅಕ್ಷಯ್ ಕುಮಾರ್ ಮಾತನಾಡುತ್ತಿದ್ದರು. ಇದೀಗ ಸುನೀಲ್‌ಶೆಟ್ಟಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಜೋಯ್ ಮೂರನೆಯ ಜಿರಲೆ. ಇದಕ್ಕೆ ಹಿಂದಿಯಲ್ಲಿ ಛೋಟು ಎಂದು ಹೆಸರಿಸಲಾಗಿದೆ. ಮುನ್ನಾಭಾಯ್ ಚಿತ್ರದ ಸರ್ಕಿಟ್ ಖ್ಯಾತಿಯ ಅರ್ಶದ್ ವಾರ್ಸಿ ಜೋಯ್‌ಗೆ ಧ್ವನಿ ನೀಡಲಿದ್ದಾರೆ.

ಗುಲಾಬಿ ದೇಹ, ಬೂದು  ಮುಖ, ಒಂದು ಗುಲಾಬಿ ಇನ್ನೊಂದು ಹಳದಿ ಬಣ್ಣದ ಕಣ್ಣುಗಳಿರುವ ಈ ವಿಲಕ್ಷಣ ಕುಳ್ಳ ಜಿರಲೆಯೇ ತಂಡದ ನಾಯಕನಂತೆ ವರ್ತಿಸುತ್ತದೆ.  ಕೆಲವೊಮ್ಮೆ ಉಳಿದ ಜಿರಲೆಗಳಿಗೆ ಜೊಯ್ ಉಪಾಯಗಳೆಲ್ಲ ಅರ್ಥಹೀನ ಎನಿಸುವುದರಿಂದ ಜೊಯ್ ಅಥವಾ ಛೋಟು ಒಂಟಿಯಾಗಿಯೇ ಆಗ್ಗಿಯನ್ನು ಕಾಡುತ್ತದೆ.

ಈ ಬೂದು ಬಣ್ಣದ ಬೆಕ್ಕು ಮತ್ತು ತರಲೆ ಜಿರಲೆಗಳೊಂದಿಗೆ ಇನ್ನೊಂದು ಬೆಕ್ಕು ಸಹ ಇದೆ. ಅದು ಜ್ಯಾಕ್. ಹಿಂದಿಯಲ್ಲಿ ಫೌಜಿ ಎಂದು ಹೆಸರಿಡಲಾಗಿದೆ. ಇದಕ್ಕೆ ಸನ್ನಿ ಡಿಯೋಲ್ ಧ್ವನಿ ನೀಡಿದ್ದಾರೆ.

ಎಲ್ಲರನ್ನೂ ನಕ್ಕು ನಗಿಸುವ ಈ ಕಾರ್ಯಕ್ರಮ ಇದೀಗ ನಿಕ್ ವಾಹಿನಿಯಿಂದ ಕಾರ್ಟೂನ್ ನೆಟ್‌ವರ್ಕ್‌ಗೆ ಬದಲಾವಣೆಯಾಗಿದೆ. ಕಾರ್ಟೂನ್ ನೆಟ್‌ವರ್ಕ್ ವಾಹಿನಿಯು ಇದೇ 23ರಿಂದ ಆ.1ರವರೆಗೂ ವಿಶೇಷ ಸ್ಪರ್ಧೆಯನ್ನೂ ಏರ್ಪಡಿಸಿದೆ.

ಈ ಅವಧಿಯಲ್ಲಿ ಆಗ್ಗಿ ಕಾರ್ಯಕ್ರಮವನ್ನು ವೀಕ್ಷಿಸಿ, ಕೊನೆಯಲ್ಲಿ ಕೇಳುವ ಸರಳ ಪ್ರಶ್ನೆಗೆ ಎಸ್‌ಎಂಎಸ್ ಮೂಲಕ ಉತ್ತರ ಹೇಳಬೇಕು. ಸಾಕಷ್ಟು ಆಕರ್ಷಕ ಉಡುಗೊರೆಗಳೊಂದಿಗೆ 50, 000 ರೂಪಾಯಿಗಳ ಬಂಪರ್ ಬಹುಮಾನವೂ ನೀಡಲಾಗುವುದು ಎಂದು ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್‌ನ ಜನರಲ್ ಮ್ಯಾನೇಜರ್ ಮೋನಿಕಾ ಟಾಟಾ ತಿಳಿಸಿದ್ದಾರೆ. ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗುವ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ. 

ಈ ಕಾರ್ಯಕ್ರಮವು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. ಕೇಳುವ ಪ್ರಶ್ನೆಗೆ ಉತ್ತರಗಳನ್ನು ಎ ಅಥವಾ ಬಿ ಆಯ್ಕೆಯೊಂದಿಗೆ
CN (space) (A or B) to 58888 ಎಸ್‌ಎಂಎಸ್ ಕಳುಹಿಸಬಹುದಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.