ADVERTISEMENT

ಬೆಂಗಳೂರು ಟ್ರಾಫಿಕ್ ಗುರು...

ರೇಷ್ಮಾ ಶೆಟ್ಟಿ
Published 21 ಜುಲೈ 2016, 19:30 IST
Last Updated 21 ಜುಲೈ 2016, 19:30 IST
ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್‌ ಆರ್‌. ಹಿತೇಂದ್ರ ಹಾಗೂ ಆರ್‌ಜೆ ಪ್ರದೀಪ್ ಅವರೊಂದಿಗೆ ನಮ್ಮನೆ ಪ್ರೊಡಕ್ಷನ್‌ ತಂಡ
ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್‌ ಆರ್‌. ಹಿತೇಂದ್ರ ಹಾಗೂ ಆರ್‌ಜೆ ಪ್ರದೀಪ್ ಅವರೊಂದಿಗೆ ನಮ್ಮನೆ ಪ್ರೊಡಕ್ಷನ್‌ ತಂಡ   

ಟ್ರಾಫಿಕ್‌ ಜಾಮ್‌ ಕುರಿತು ಎಲ್ಲರೂ ಗೊಣಗುತ್ತಾರೆಯೇ ಹೊರತು ಆ ಸಮಸ್ಯೆಯ ಪರಿಹಾರ ಮಾಡುವಲ್ಲಿ ತಮ್ಮ ಪಾತ್ರ ಏನಿರಬಹುದು ಎಂದು ಚಿಂತಿಸುವರು ವಿರಳ. ಟ್ರಾಫಿಕ್‌ ಜಾಮ್‌ ಸರಿಪಡಿಸಲು ನಮಗೆ ಸಾಧ್ಯವಿಲ್ಲದಿರಬಹುದು. ಆದರೆ ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬಹುದು ಎಂಬ ಉದ್ದೇಶದಿಂದ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ‘ಬೆಂಗಳೂರು ಟ್ರಾಫಿಕ್‌ ಗುರು’ ಎಂಬ ವಿಡಿಯೊ ರೂಪಿಸಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಭೂತ ಕಾಡದ ಸ್ಥಳವಿಲ್ಲ. ಈ ಟ್ರಾಫಿಕ್ ಭೂತ ಬೆಂಗಳೂರಿಗರನ್ನು ಎಷ್ಟು ಭಯ ಬೀಳಿಸಿದೆ ಎಂದರೆ ಅದಕ್ಕೆ ಹೆದರಿ ಜನ ಹೊರಗೆ ಕಾಲಿಡಲು ಭಯಪಡುತ್ತಾರೆ.

ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಯೋಚಿಸಿ, ಯೋಚಿಸಿ ಕೂದಲು ಹಣ್ಣಾದವರಿದ್ದಾರೆಯೇ ಹೊರತು ಟ್ರಾಫಿಕ್ ಮಾತ್ರ ಕಡಿಮೆಯಾಗಿರಲಿಲ್ಲ. ಈ ಟ್ರಾಫಿಕ್ ಸಮಸ್ಯೆ ವಿದ್ಯಾರ್ಥಿಗಳನ್ನೂ ಬಿಟ್ಟಿಲ್ಲ. ಎಷ್ಟೇ ಬೇಗ ಮನೆ ಬಿಟ್ಟರೂ ಟ್ರಾಫಿಕ್‌ನಿಂದ  10 ನಿಮಿಷ ಕ್ಲಾಸ್‌ಗೆ ಲೇಟಾಯ್ತು ಎಂದು ಅವಲತ್ತುಕೊಳ್ಳುವ ವಿದ್ಯಾರ್ಥಿಗಳು ಕೂಡ ನಗರದಲ್ಲಿ ಕಡಿಮೆ ಇಲ್ಲ.

ಟ್ರಾಫಿಕ್ ಸಮಸ್ಯೆ ನಿವಾರಿಸಲು ನಾವು ನಮ್ಮ ಕೈಲಾದ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕ ವಿದ್ಯಾರ್ಥಿಗಳು ಸೇರಿ ‘ಬೆಂಗಳೂರು ಟ್ರಾಫಿಕ್‌ ಗುರು’ ಎಂಬ ಮ್ಯೂಸಿಕ್ ವಿಡಿಯೊ ಒಂದನ್ನು ಹೊರತಂದಿದ್ದಾರೆ.

‘ನಮ್ಮನೆ ಪ್ರೊಡಕ್ಷನ್‌’ ಎಂಬ ಹೆಸರಿನಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸೇರಿ ವಿಡಿಯೊ ರಚಿಸಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಗಾಡಿಗಳ ಸಂಖ್ಯೆ ಹೆಚ್ಚುತ್ತಿದೆ, ಟ್ರಾಫಿಕ್ ಕಂಟ್ರೋಲ್ ಮಾಡಲು ಟ್ರಾಫಿಕ್ ಪೊಲೀಸರ ಪರದಾಟ, ಈ ಮಧ್ಯೆ ವಾಹನ ಸವಾರರ ದರ್ಬಾರ್ ಇವೆಲ್ಲವೂ ಈ ಹಾಡಿನ ಶೀರ್ಷಿಕೆಯಲ್ಲಿದೆ.

ಆ ಇಪ್ಪತ್ತು ಮಂದಿ ವಿದ್ಯಾರ್ಥಿಗಳ ಅಭಿರುಚಿ ಒಂದೇ  ಆಗಿತ್ತು. ಆದರೆ ಎಲ್ಲರಲ್ಲೂ ವಿಭಿನ್ನ ಕಲೆ ಹಾಗೂ ಆಸಕ್ತಿ ಇತ್ತು. ಒಬ್ಬರಿಗೆ ಕ್ಯಾಮೆರಾ ಉಪಯೋಗಿಸುವುದು ಗೊತ್ತಿದ್ದರೆ, ಇನ್ನೊಬ್ಬರಿಗೆ ಗೀತೆ ರಚನೆಯಲ್ಲಿ ಆಸಕ್ತಿ ಇತ್ತು. ಮತ್ತೊಬ್ಬರಿಗೆ ಸಂಗೀತ ಸಂಯೋಜನೆ ತಿಳಿದಿತ್ತು. ಈ ಎಲ್ಲವುಗಳ ಸಮ್ಮಿಶ್ರಣವೇ ಈ ‘ಬೆಂಗಳೂರು ಟ್ರಾಫಿಕ್‌ ಗುರು’.

ನಗರದ ಟ್ರಾಫಿಕ್‌ ಬಗ್ಗೆ ಮ್ಯೂಸಿಕ್ ವಿಡಿಯೊ ಹೊರತರಬೇಕು ಎಂಬುದು ಕೂಡ ಆ ತಂಡದ ಒಮ್ಮತದ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಸುಮಾರು ಎರಡು ತಿಂಗಳುಗಳ ಕಾಲ ಶ್ರಮಿಸಿದ್ದಾರೆ ಈ ವಿದ್ಯಾರ್ಥಿಗಳು. ಹೆಸರುಘಟ್ಟ, ಬನ್ನೇರುಘಟ್ಟ, ಮಡಿವಾಳ, ಬಿಟಿಎಂ, ಎಂ.ಜಿ. ರಸ್ತೆಯಂತಹ ವಾಹನ ದಟ್ಟಣೆ ಹೆಚ್ಚಿರುವ  ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಈ ಹಾಡಿನಲ್ಲಿ ‘ನಮ್ಮನೆ ಪ್ರೋಡಕ್ಷನ್‌’ನ ವಿದ್ಯಾರ್ಥಿಗಳು ಮಾತ್ರವಲ್ಲದೇ ಸಿನಿಮಾ ಹಾಗೂ ಧಾರಾವಾಹಿಯ ನಟರೂ ಬಂದು ಹೋಗುವುದು ಇನ್ನೊಂದು ವಿಶೇಷ. ಸಾಮಾನ್ಯ ಜನರು ಹೇಳುವುದಕ್ಕಿಂತ ಸಿನಿಮಾ ತಾರೆಯರು ಬಂದು ಹೇಳಿದರೆ ಅದರ ಪರಿಣಾಮ ಹೆಚ್ಚು ಎಂಬುದನ್ನು ಅರಿತ ಈ ವಿದ್ಯಾರ್ಥಿಗಳು ಅವರನ್ನು ಕೂಡ ಈ ವಿಡಿಯೊದಲ್ಲಿ ಸೇರಿಸಿಕೊಂಡಿದ್ದಾರೆ.

ಶ್ರೀನಾಥ್‌, ರಮೇಶ್‌ ಅರವಿಂದ್, ವಿ. ಮನೋಹರ್, ರಂಗಾಯಣ ರಘು, ಗುರುಪ್ರಸಾದ್‌, ಮಾಸ್ಟರ್ ಆನಂದ್‌, ಧನಂಜಯ ಸೇರಿದಂತೆ ಇನ್ನೂ ಕೆಲವು ನಟರು ಈ ಹಾಡಿನಲ್ಲಿ ಕಾಣಿಸಿಕೊಳ್ಳುವ ಮುಖಗಳು.

‘ನಾವು ಈ ಎಲ್ಲ ನಟರ ಬಳಿ ನಮ್ಮ ಪರಿಕಲ್ಪನೆಯನ್ನು ಹೇಳಿ ನಮಗೆ ನಿಮ್ಮ ಸಹಕಾರ ಬೇಕು ಎಂದು ಕೇಳಿಕೊಂಡೆವು. ಅವರು ತುಂಬು ಮನಸ್ಸಿನಿಂದ ಕೈ ಜೋಡಿಸಿದರು’ ಎಂದು ಸಂತಸದಿಂದ ಹೇಳುತ್ತಾರೆ ನಮ್ಮನೆ ಪ್ರೋಡಕ್ಷನ್‌ನ ತಂಡದಲ್ಲಿ ಒಬ್ಬರಾದ ಸೌರಭ್‌ ಕುಲಕರ್ಣಿ. 

ಬೀದಿ ನಾಟಕ, ಕರಪತ್ರಗಳನ್ನು ಹಂಚಿ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡಲು ಹಾಗೂ ಟ್ರಾಫಿಕ್ ರೂಲ್ಸ್ ಪಾಲನೆ ಮಾಡಲು ಸಾಧ್ಯವಿಲ್ಲ. ಆದಷ್ಟು ಜನರನ್ನು ಇದು ತಲುಪಲು ಯ್ಯೂಟೂಬ್‌ನಿಂದ ಅಷ್ಟೇ ಸಾಧ್ಯ ಎಂದು ಮನಗಂಡ ಇವರು  ಅದನ್ನು ಯ್ಯೂಟೂಬ್‌ನಲ್ಲಿ ಹರಿಬಿಡಲು ಚಿಂತಿಸಿದರು.

ADVERTISEMENT

ಇದನ್ನು ಬಿಡುಗಡೆಗೊಳಿಸಲು ರೇಡಿಯೊ ಸಿಟಿ ಎಫ್‌ಎಂ ಸ್ಟೇಶನ್‌ನ ಬಾಗಿಲನ್ನೂ ತಟ್ಟಿದರು. ಅಲ್ಲಿಯೂ ಕೂಡ ಈ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಉತ್ತಮ ಸಹಕಾರ ದೊರೆಯಿತು. ಆರ್‌ಜೆ ಪ್ರದೀಪ ಕೂಡ ಇವರಿಗೆ ಬೆಂಬಲ ನೀಡುವ ಜೊತೆಗೆ, ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್‌. ಹಿತೇಂದ್ರ ಅವರನ್ನು ಕರೆಸಿ ಈ ಹಾಡನ್ನು ಬಿಡುಗಡೆಗೊಳಿಸಿದರು. 

ಇಲ್ಲಿಯವರೆಗೆ ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ವಿದ್ಯಾರ್ಥಿಗಳೇ ಸೇರಿ ಟ್ರಾಫಿಕ್ ನಿಯಮ ಪಾಲನೆ ಹಾಗೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯೋಚಿಸಿದ ಈ ಪರಿ ನಿಜಕ್ಕೂ ಶ್ಲಾಘನೀಯ.

ಮ್ಯೂಸಿಕ್ ವಿಡಿಯೊವನ್ನು ನೋಡಲು youtu.be/sP4RDPzSTkE  ಲಿಂಕ್‌ ಕ್ಲಿಕ್ಕಿಸಿ.  

ತಂಡದ ಸದಸ್ಯರು
ಅರವಿಂದ ರಾವ್‌, ಸೌರಭ್ ಕುಲಕರ್ಣಿ, ಜಯಂತ್‌, ಹರ್ಷಿತ್, ಆಕಾಶ್‌, ರೋಹಿತ್‌, ಜೀವನ್ ಗಂಗಾಧರಯ್ಯ, ನಿಕಿಲ್‌, ಅಚ್ಯುತ್‌, ಮಾದೇಶ್‌, ಅಕ್ಷಿತಾ, ಅಮೋಘ್‌, ಅಪೂರ್ವಾ, ಶರಣ್ಯ, ನಮನ್‌, ಶ್ವೇತಾ, ಚೈತ್ರಾ, ಸುಮಧುರ್, ಸುಮುಖ, ಐಶ್ವರ್ಯಾ, ಅಭಿಲಾಷ್‌, ರಾಧಿಕಾ, ಶರತ್‌,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.