ADVERTISEMENT

ಬೆಮಲ್ ಬೋಗಿಗಳು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಬೆಮಲ್ ಬೋಗಿಗಳು
ಬೆಮಲ್ ಬೋಗಿಗಳು   

ಬೆಂಗಳೂರಿನಲ್ಲಿ ಭಾಗಶಃ `ಮೆಟ್ರೊ~ ರೈಲು ಸಂಚಾರ ಆರಂಭಗೊಂಡು ಇನ್ನೇನು ಒಂದು ವರ್ಷವಾಗಲಿದೆ. ಮಹಾತ್ಮ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ಸಂಚರಿಸುತ್ತಿರುವ `ಮೆಟ್ರೊ~ ಈಗೊಂದು ಪ್ರವಾಸಿತಾಣವಾಗಿ ಪರಿವರ್ತನೆಯಾಗಿದೆ.

ಕಳೆದ ನವೆಂಬರ್‌ನಲ್ಲಿ `ಮೆಟ್ರೊ~ ಸೇವೆ ಆರಂಭವಾದ ದಿನವೇ ಇನ್ನೊಂದು ಮೆಟ್ರೊ ಸ್ಟೇಷನ್ ಉದ್ಘಾಟನೆಗೊಂಡಿತು. ಆದರೆ ಈ ಸ್ಟೇಷನ್‌ನಲ್ಲಿ ಪ್ರಯಾಣಿಕರು ಹತ್ತುವುದೂ ಇಲ್ಲ, ಇಳಿಯುವುದೂ ಇಲ್ಲ. `ಮೆಟ್ರೊ~ ರೈಲಂತೂ ಇದೆ.  ಆದರೆ ಅದು ಓಡಾಡುವುದಿಲ್ಲ. 
ಇದು ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್ (ಬೆಮಲ್) ರೈಲ್ವೇ ಸ್ಟೇಷನ್. ಬೆಮಲ್ ಕಾರ್ಖಾನೆಯ ಮುಂಭಾಗದಲ್ಲಿರುವ `ಮೆಟ್ರೊ~ ರೈಲು ಪ್ರತಿಕೃತಿ ಪ್ರತಿದಿನ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಆದರೆ ಅದು ಬೆಮಲ್ ಕಾರ್ಖಾನೆಯ ಹೆಮ್ಮೆ ಎಂಬುದು ಅನೇಕರಿಗೆ ತಿಳಿದಿಲ್ಲ. 

ಎಚ್.ಎ.ಎಲ್ ಕಾರ್ಖಾನೆಯಲ್ಲಿ ಮೊದ ಮೊದಲಿಗೆ ರೈಲ್ವೇ ಬೋಗಿಗಳು ತಯಾರಾಗುತ್ತಿದ್ದವು. 1962ರಲ್ಲಿ ಬೆಮಲ್ ಕಾರ್ಖಾನೆಯನ್ನು ಸ್ಥಾಪಿಸಿದಾಗ ರೈಲ್ವೇ ಬೋಗಿ ತಯಾರಿಕಾ ಘಟಕ ಎಚ್.ಎ.ಎಲ್‌ನಿಂದ ವರ್ಗಾಯಿಸಲಾಯಿತು. ಆಗಿನಿಂದ ಭಾರತೀಯ ರೈಲ್ವೇಗೆ ಅನೇಕ ಬಗೆಯ ಬೋಗಿಗಳನ್ನು ಬೆಮಲ್ ತಯಾರಿಸಿಕೊಟ್ಟಿದೆ. 
ನವದೆಹಲಿಯಲ್ಲಿ ಆರಂಭಗೊಂಡಿರುವ, ಭಾರತದ ಮೊದಲ `ಮೆಟ್ರೊ~ಗೆ 100ಕ್ಕೂ ಹೆಚ್ಚು ಬೋಗಿಗಳನ್ನು ಸಿದ್ಧಪಡಿಸಿರುವುದು ಬೆಂಗಳೂರಿನ ಬೆಮಲ್ ಕಾರ್ಖಾನೆ.

ಭಾರತವೇ ಅಲ್ಲದೇ ಆಫ್ರಿಕಾದಂತಹ ಅನೇಕ ದೇಶಗಳಿಗೆ ರೈಲ್ವೇ ಬೋಗಿಗಳನ್ನು ತಯಾರಿಸಿ ಕೊಟ್ಟಿರುವ ಭಾರತ್ ಅರ್ಥ್ ಮೂವರ್ಸ್‌ ಈ ಕಂಪೆನಿ ಇತ್ತೀಚೆಗೆ ಸ್ಟೇನ್‌ಲೆಸ್ ಸ್ಟೀಲ್‌ನಿಂದಲೇ ಪೂರ್ಣವಾಗಿ ರೈಲ್ವೆ ಬೋಗಿಯನ್ನು ಭಾರತೀಯ ರೈಲ್ವೇಗೆ ಅಭಿವೃದ್ಧಿಪಡಿಸಿಕೊಟ್ಟಿದೆ.

ಬೆಂಗಳೂರಿನ `ಮೆಟ್ರೊ~ಗೂ ಬೋಗಿಗಳನ್ನು ತಯಾರಿಸಿಕೊಡುವ ಹೊಣೆ ಹೊತ್ತುಕೊಂಡಿರುವ, ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಬೆಮಲ್ ಕಾರ್ಖಾನೆಯೊಡನೆ ಅನೇಕ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಬೆಮಲ್‌ನ ಬೆಂಗಳೂರು ಕಾರ್ಖಾನೆ ಮುಂಭಾಗದಲ್ಲಿ ಬೆಂಗಳೂರು ಮೆಟ್ರೊ ರೈಲಿನ ಪ್ರತಿಕೃತಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.