ADVERTISEMENT

ಬೆಳ್ಳಿ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST
ಬೆಳ್ಳಿ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ
ಬೆಳ್ಳಿ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ   

ಟುವ್ವಿ... ಟುವ್ವಿ... ಟುವ್ವಿ ಎಂದು ಹಾಡುತ್ತಾ ಚಿತ್ರರಂಗ ಪ್ರವೇಶಿಸಿದ ಶಿವರಾಜ್ ಕುಮಾರ್ ಬೆಳ್ಳಿತೆರೆಗೆ ಕಾಲಿಟ್ಟು ಈಗ 25 ವರ್ಷ. ಚೊಚ್ಚಲ ಚಿತ್ರ ‘ಆನಂದ್’, ನಂತರ ಬಂದ ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ಯ ಯಶಸ್ಸಿನಿಂದಾಗಿ ಶಿವರಾಜ್ 80, 90ರ ದಶಕದಲ್ಲಿ ಯುವಕರ ಮನಸ್ಸು ಅರಳಿಸಿದ್ದರು. ಮೊದಲ ಮೂರು ಚಿತ್ರಗಳ ಯಶಸ್ಸು ಹ್ಯಾಟ್ರಿಕ್ ಹೀರೋ ಪಟ್ಟವನ್ನೂ ಅವರಿಗೆ ತಂದುಕೊಟ್ಟಿತ್ತು. ಅವರ ನೂರನೇ ಚಿತ್ರ ‘ಜೋಗಯ್ಯ’ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಮೇರುನಟ ದಿ. ರಾಜಕುಮಾರ್ ಅವರ ಪುತ್ರನಾಗಿದ್ದರೂ ಅಪ್ಪನ ನೆರಳಿನಿಂದ ಆಚೆ ಬಂದು ವೈವಿಧ್ಯಮಯ ಚಿತ್ರಗಳಲ್ಲಿ ನಟಿಸಿದ ಕೀರ್ತಿ ಅವರದ್ದು. ತ್ರಿಕೋನ ಪ್ರೇಮದ ಕಥೆಯುಳ್ಳ ‘ನಮ್ಮೂರ ಮಂದಾರ ಹೂವೇ’, ಆಕ್ಷನ್ ಭರಿತ ‘ಓಂ’,  ಗ್ರಾಮೀಣ ಸೊಗಡಿನ ‘ಜೋಗಿ’ಯಂತಹ ಪಾತ್ರಗಳಲ್ಲಿ ಸಮನಾಗಿ ಮಿಂಚಿದವರು ಶಿವರಾಜ್.

ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್‌ಗೆ ಸನ್ಮಾನ ಮಾಡಲು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಮಹಾಶಿವರಾತ್ರಿಯ ದಿನ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಭಾಗವಹಿಸಲಿದ್ದಾರೆ. ಖ್ಯಾತ ಗಾಯಕ, ಗಾಯಕಿಯರು ಹಾಡಿ, ಕಲಾವಿದರ ಕುಣಿದು ರಂಜಿಸಲಿದ್ದಾರೆ.

ಶಿವರಾಜ್ ಬೆಳ್ಳಿತೆರೆಯಲ್ಲಿ ನಡೆದು ಬಂದ ಹಾದಿ ಅಂದು ಅನಾವರಣಗೊಳ್ಳಲಿದೆ. ಪ್ರವೇಶ ಉಚಿತ.ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ (ಮೇಕ್ರಿ ವೃತ್ತದ ಬಳಿ).  ಸಂಜೆ 6.30ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.