ADVERTISEMENT

ಬೊಗಸೆ ಕಂಗಳ ಹುಡುಗಿ ಲಾವಣ್ಯ ಲಾವಣಿ

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಬೊಗಸೆ ಕಂಗಳ ಹುಡುಗಿ ಲಾವಣ್ಯ ಲಾವಣಿ
ಬೊಗಸೆ ಕಂಗಳ ಹುಡುಗಿ ಲಾವಣ್ಯ ಲಾವಣಿ   
ಮಾಡೆಲಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾವ ಉದ್ದೇಶಕ್ಕೆ? 
ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಕೇವಲ ಹವ್ಯಾಸಕ್ಕಾಗಿ. ಆದರೆ ಅದೇ ಈಗ ನನ್ನ ವೃತ್ತಿಯಾಗಿ ಬಿಟ್ಟಿದೆ. ಮೊದಲಿನಿಂದಲೂ ನನಗೆ ವೇದಿಕೆ ಮೇಲೆ ಇರುವುದು ತುಂಬಾ ಇಷ್ಟ. ಬಾಲ್ಯದಿಂದಲೂ ನಾಟಕ, ನೃತ್ಯ, ಸಂಗೀತದಲ್ಲಿ ಆಸಕ್ತಿ ಇತ್ತು. ಆ ಆಸಕ್ತಿಯೇ ಇಂದು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
 
ಈ ಕ್ಷೇತ್ರ ಬಿಟ್ಟು ಬೇರೆ ಯಾವುದಾದರೂ ಆಸಕ್ತಿ ಇದೆಯಾ?
ನನಗೆ ಪೇಂಟಿಂಗ್ ಇಷ್ಟ. ಕಂಡಿದ್ದನ್ನು, ಮನಸ್ಸಿಗೆ ತೋಚಿದ್ದನ್ನು ಖಾಲಿ ಹಾಳೆಯ ಮೇಲೆ ಗೀಚುತ್ತಾ ಇರುತ್ತೇನೆ. ನನ್ನ ಮನಸ್ಸಿನ ಭಾವನೆಗಳು ಅಲ್ಲಿ ರೂಪ ತಳೆದಾಗ ಮನಸ್ಸಿಗೂ ಖುಷಿಯಾಗುತ್ತದೆ. ದೂರದ ಊರಿಗೆ ಪ್ರಯಾಣ ಮಾಡುವುದು, ಹೊಸ ಹೊಸ ಜಾಗಗಳನ್ನು ನೋಡುವುದು ನನಗೆ ಇಷ್ಟ. ಸಮಯ ಸಿಕ್ಕಾಗ, ಅನುಕೂಲವಾದಾಗ ಇಡೀ ಜಗತ್ತನ್ನು ನೋಡಬೇಕು ಎಂದುಕೊಂಡಿದ್ದೇನೆ. ಅದಕ್ಕಿಂತ ಮೊದಲು ನನ್ನ ದೇಶವನ್ನು ನೋಡಬೇಕು. ಇದನ್ನೇ ಸರಿಯಾಗಿ ನೋಡದೆ ಬೇರೆ ದೇಶ ನೋಡಲು ಹೋದರೆ ಏನು ಉಪಯೋಗ. ನಮ್ಮ ದೇಶದಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳಗಳಿವೆ. ಕಲೆಯ ಬೀಡು ಈ ದೇಶ.

ಫ್ಯಾಷನ್ ಲೋಕಕ್ಕೆ ಬಂದು ಎಷ್ಟು ವರ್ಷವಾಯಿತು? ಇಲ್ಲಿ ಏನಿಷ್ಟ? ಏನಿಷ್ಟವಾಗಿಲ್ಲ?
ಕಾಲೇಜಿನಿಂದಲೇ ನಾನು ರ‌್ಯಾಂಪ್ ವಾಕ್ ಮಾಡುತ್ತಿದ್ದೆ. ಹವ್ಯಾಸವನ್ನು ವೃತ್ತಿಯಾಗಿ ಬದಲಾಯಿಸಿಕೊಂಡು ಎರಡು ವರ್ಷವಾಯಿತು. ಇಲ್ಲಿ ಎಲ್ಲಾ ರೀತಿಯ ಜನ ಇರುತ್ತಾರೆ. ನಾವು ಅನುಸರಿಸಿಕೊಂಡು ಹೋಗಬೇಕು. ಜತೆಗೆ ಈ ಕ್ಷೇತ್ರ ಕುತೂಹಲಕಾರಿಯಾಗಿದೆ. ಇವತ್ತು ನಾನು ರ‌್ಯಾಂಪ್ ಮೇಲೆ ಇರುತ್ತೇನೆ. ಒಂದು ತಿಂಗಳು ಬಿಟ್ಟು ನನಗೆ ಶೋಗಳು ಸಿಗುತ್ತವೆಯೋ ಇಲ್ಲವೋ ಗೊತ್ತಿರುವುದಿಲ್ಲ. ಇದು ಒಂದನೇ ತಾರೀಕಿಗೆ ಸಂಬಳ ಬರುವ ಕೆಲಸ ಅಲ್ಲ. ಇಲ್ಲಿ ನಾವೇ ಬಾಸ್. ಬೇಡ ಅನಿಸಿದ ಶೋಗೆ ಹೋಗಲ್ಲ. ವೈಯಕ್ತಿಕ ನಿರ್ಧಾರಕ್ಕೆ ಇಲ್ಲಿ ಅವಕಾಶವಿದೆ. ಜತೆಗೆ ವಿವಿಧ ಸ್ಥಳಗಳನ್ನು ನೋಡಬಹುದು, ಬೇರೆ ಜನರ ಜತೆ ಬೆರೆಯಬಹುದು.
 
ಅಪ್ಪ-ಅಮ್ಮನ ಬೆಂಬಲ ಹೇಗಿತ್ತು?
ಅವರು ನನ್ನ ಪಾಲಿನ ದೇವರು. ಇಂದಿನವರೆಗೆ ನನ್ನ ಯಾವ ಆಸೆಗಳಿಗೂ ಇಲ್ಲ ಎಂದು ಹೇಳಿಲ್ಲ. ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ನಾನು ಮಾಡುವ ಕೆಲಸಕ್ಕೆ ಸದಾ ಬೆಂಬಲ ನೀಡಿದ್ದಾರೆ. ಯಾವುದೇ ಶೋಗೆ ಹೋದರೂ ನನ್ನ ಜತೆ ಬರುತ್ತಾರೆ.
 
ಫ್ಯಾಷನ್ ಬಗ್ಗೆ ನಿಮ್ಮ ಅಭಿಪ್ರಾಯ?ಫ್ಯಾಷನ್ ನಿಂತ ನೀರಲ್ಲ; ಹರಿಯುವ ನೀರು. ಯಾವಾಗಲೂ ಬದಲಾಗುತ್ತಾ ಇರುತ್ತದೆ. ಇಂದು ಬೆಲ್‌ಬಾಟಮ್ ಪ್ಯಾಂಟ್ ಇದ್ದರೆ, ನಾಳೆ ಟೈಟ್ ಪ್ಯಾಂಟ್ ಟ್ರೆಂಡ್ ಬರುತ್ತದೆ. ಜನ ಅದರತ್ತ ಆಕರ್ಷಿತರಾಗುತ್ತಾರೆ. ಹಾಗಾಗಿ ಫ್ಯಾಷನ್‌ಗೆ ನಾವು ಹೊಂದಿಕೊಳ್ಳುತ್ತಾ ಹೋಗಬೇಕು. ಇದು ಕ್ರಿಯಾತ್ಮಕವಾದದ್ದು.
 
ಬಾಲ್ಯದಲ್ಲಿ ಮರೆಯಲಾಗದ ಘಟನೆ ಯಾವುದು?
ನಾನು ತುಂಬಾ ಚೂಟಿ ಹುಡುಗಿಯಾಗಿದ್ದೆ. ಚಿಕ್ಕವಳಿರುವಾಗಲೇ ವೇದಿಕೆ ಮೇಲೆ ನೃತ್ಯ, ನಾಟಕ ಕಾರ್ಯಕ್ರಮ ನೀಡುತ್ತಿದ್ದೆ. ಸುಮಾರು ಐದು ವರ್ಷವಿರಬಹುದು. ಶಾಲೆಯಲ್ಲಿ ಒಂದು ಸಮೂಹ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದರು. ಡ್ರೆಸ್ ಮಾಡಿಕೊಂಡು ವೇದಿಕೆಯ ಮೇಲೆ ಬಂದು ನಿಂತೆ. ಪ್ರೇಕ್ಷಕರ ಸಾಲಿನಲ್ಲಿ ಅಪ್ಪ-ಅಮ್ಮ ಕುಳಿತಿದ್ದರು. ಅವರನ್ನು ನೋಡಿದ ಖುಷಿಯಲ್ಲಿ ಸಮೂಹ ನೃತ್ಯವೆಲ್ಲಾ ಮರೆತು ನಾನೊಬ್ಬಳೇ ಬೇರೊಂದು ನೃತ್ಯ ಮಾಡುತ್ತಿದ್ದೆ. ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದರು. ಈಗಲೂ ನೆನೆದರೆ ಆ ಕ್ಷಣ ಕಣ್ಮುಂದೆ ಬಂದು ನಗು ಉಕ್ಕುತ್ತದೆ.
 
ನಿಮ್ಮ ಸೌಂದರ್ಯದ ಬಗ್ಗೆ ಸಿಕ್ಕ ಕಮೆಂಟ್‌ಗಳೇನು?
ಕೆಲವರು ನಗು ಚಂದ ಎನ್ನುತ್ತಾರೆ. ಮತ್ತೆ ಕೆಲವರು ಕಣ್ಣು ಚೆನ್ನಾಗಿದೆ ಎಂದು ಹೇಳುತ್ತಾರೆ. ಬೇಯಿಸಿದ ಮೊಟ್ಟೆಯನ್ನು ಕಟ್ ಮಾಡಿದ ಹಾಗೇ ಇದೆ ನಿನ್ನ ಕಣ್ಣು ಎಂದು ಗೆಳತಿಯರೆಲ್ಲಾ ಹೇಳುತ್ತಾರೆ. ನನ್ನದು ದೊಡ್ಡ ಕಂಗಳು.
 
ಈ ಕ್ಷೇತ್ರಕ್ಕೆ ಬಾರದಿದ್ದರೆ ಏನಾಗುತ್ತಿದ್ದಿರಿ?
ನನ್ನ ಮನಸ್ಸಿಗೆ ಏನು ತೋಚುತ್ತಿತ್ತೋ ಅದೇ ಆಗುತ್ತ್ದ್ದಿದೆ. ಹೀಗೇ ಆಗಬೇಕೆಂಬ ಯೋಜನೆಗಳಿಲ್ಲ. ಜೀವನ ಹೇಗೆ ಬರುತ್ತದೋ ಹಾಗೇ ಅದನ್ನು ಎದುರಿಸುವ ಛಲ ನನ್ನಲ್ಲಿದೆ. ಯೋಜನೆ ಹಾಕಿಕೊಂಡು ಅದು ಕಾರ್ಯರೂಪಕ್ಕೆ ಬಾರದೇ ಇದ್ದಾಗ ಕೊರಗಿ ಕಣ್ಣೀರು ಹಾಕುವುದು ನನಗಿಷ್ಟವಿಲ್ಲ.
 
ಸಿನಿಮಾದಲ್ಲಿ ನಟಿಸಲು ಇಷ್ಟವಿದೆಯಾ?
ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದವಳು. ನಟನೆಗೆ ಅವಕಾಶ ಸಿಕ್ಕಿದೆ. ಒಳ್ಳೆಯ ಬ್ಯಾನರ್, ಉತ್ತಮ ಚಿತ್ರಕತೆ ಇರುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ.
 
ಈ ಕ್ಷೇತ್ರಕ್ಕೆ ಬರುವ ಕಿರಿಯರಿಗೆ ನಿಮ್ಮ ಸಲಹೆ?
ಗ್ಲಾಮರಸ್ ಆಗಿದೆ ಎಂದು ಈಗ ಎಲ್ಲರೂ ಓದನ್ನು ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ. ಈ ಕ್ಷೇತ್ರಕ್ಕೆ ಬರುವ ಮೊದಲು ನಿಮ್ಮ ಶಿಕ್ಷಣ ಮುಗಿಸಿ. ಓದು ಇದ್ದರೆ ಮಾತ್ರ ನಾವು ಏನಾದರೂ ಮಾಡಲು ಸಾಧ್ಯ. ಜತೆಗೆ ಆತ್ಮವಿಶ್ವಾಸ, ಕುಟುಂಬದವರ ಬೆಂಬಲ ಕೂಡ ಇರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.