ADVERTISEMENT

ಬೋಪಣ್ಣಗೆ ಮಕ್ಕಳ ಸರ್ವ್

ಸವಿತಾ ಎಸ್.
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ತಿಳಿನೀಲಿ ಬಣ್ಣದ ಟೀ ಶರ್ಟ್. ಬ್ರೌನ್ ಬರ್ಮುಡಾ, ಬಿಳಿ ಶೂ, ಕಣ್ಣಿಗೆ ಕಪ್ಪು ಬಣ್ಣದ ಸನ್‌ಗ್ಲಾಸ್. ವಿಶಾಲ ಗ್ರೌಂಡ್‌ನಲ್ಲಿ ರ‌್ಯಾಕೆಟ್ ಹಿಡಿದು ಆಡುತ್ತಿದ್ದ ಬೋಪಣ್ಣ ಅವರಿಗೆ ಸಂಜೆಯ ಸೂರ್ಯನ ಬಿಸಿ ಕಿರಣ ಮೈಗೆ ತಾಕಿದಂತಿರಲಿಲ್ಲ. ಮಕ್ಕಳೊಂದಿಗೆ ಆಟದಲ್ಲಿ ಮೈಮರೆತಿದ್ದ ಅವರ ಬಾಯಲ್ಲಿ `ಹಿಟ್, ಟೇಕ್, ವೊ...ಯೇ...~ ದನಿ. ನೆಲದ ಮೇಲೆ ಚೆಂಡಿನ ಟಪ್ ಟಪ್ ಪುಟಿತ ಸತತ.

ಅಂತರರಾಷ್ಟ್ರೀಯ ಟೆನಿಸ್ ಆಟಗಾರ ನಗರದ ಕಬ್ಬನ್ ಪಾರ್ಕ್‌ನ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್‌ನಲ್ಲಿ ಮಕ್ಕಳಿಗಾಗಿ ಮೀಸಲಿಟ್ಟ ಸಮಯ ಬರೋಬ್ಬರಿ 50 ನಿಮಿಷ. ಆಟದ ಮಧ್ಯೆಯೇ ಎನ್‌ಡಿಟಿವಿ ಏರ್ಪಡಿಸಿದ್ದ `ಮಾರ್ಕ್ಸ್ ಫಾರ್ ಸ್ಪೋರ್ಟ್ಸ್~ ಪ್ರಚಾರಕಾರ್ಯಕ್ಕಾಗಿ ಬೈಟ್ ನೀಡುತ್ತಿದ್ದರು.
 
ಟು ಬೌನ್ಸ್ ಟೆನಿಸ್ ಅಕಾಡೆಮಿ ತಂಡದ ಎಲ್ಲಾ ಮಕ್ಕಳು ತಮ್ಮ ಸರದಿಗಾಗಿ ಕಾದು ಕ್ಯೂನಲ್ಲಿ ನಿಂತಿದ್ದರು. ಎಲ್ಲರ ಕೈಗಳಲ್ಲಿದ್ದ ರ‌್ಯಾಕೆಟ್‌ಗಳಿಗೂ `ಇಂಡೋ ಪಾಕ್ ಎಕ್ಸ್‌ಪ್ರೆಸ್~ ಖ್ಯಾತಿಯ ಬೋಪಣ್ಣ ಅವರ ರ‌್ಯಾಕೆಟ್‌ನಿಂದ ಹೊಮ್ಮಿಬಂದ ಬಾಲ್‌ಗೆ ಉತ್ತರ ನೀಡುವ ತವಕ.

ಈ ಮಧ್ಯೆ ಅವರು ಹಿಟ್ ಮಾಡಿದ ಚೆಂಡೊಂದು ಎನ್‌ಡಿಟಿವಿ ಕ್ಯಾಮೆರಾಮನ್ ಮೇಲೆ ಬಿದ್ದಾಗ ನೆರೆದವರಲ್ಲಿ ನಗೆಯ ಅಲೆ.

ಕ್ಯಾಮೆರಾ ಮುಂದಿನ ಮಾತು ಮುಗಿಯುತ್ತಲೇ ಮುತ್ತಿಕೊಳ್ಳುತ್ತಿದ್ದ ಮಕ್ಕಳ ಪ್ರಶ್ನೆಗಳ ಬಾಣವನ್ನು ಎದುರಿಸಲು ಪರದಾಡುತ್ತಲೇ ಇದ್ದರು. ರೋಹನ್ ಅವರ ಆಪ್ತ ಸಲಹೆಗಾರ್ತಿ ಪದೇಪದೇ ಬೇಗ ತೆರಳಬೇಕೆಂಬ ಸೂಚನೆ ನೀಡುತ್ತಿದ್ದರೂ ಪೋರರು ಕೇಳುತ್ತಿದ್ದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಚಿಣ್ಣರು- ಬೋಪಣ್ಣ ನಡುವಿನ ಮಾತುಕತೆಯ ಕೆಲವು ತುಣುಕುಗಳು...

ಆಕ್ಟಿಂಗ್‌ನಲ್ಲಿ ಆಸಕ್ತಿ ಇದೆಯೇ...

ಇನ್ನೂ ನಿರ್ಧರಿಸಿಲ್ಲ. ನಟನೆಗೆ ಹೋಗಲೋ ಬೇಡವೋ ಎಂಬ ನಿರ್ಧಾರಕ್ಕೆ ಮೊದಲು ನಿನ್ನನ್ನು ಸಂಪರ್ಕಿಸುವೆ!

ನಿಮ್ಮ ಫಿಟ್‌ನೆಸ್ ಸೀಕ್ರೆಟ್.
ಅದು ಟಾಪ್ ಸೀಕ್ರೆಟ್; ಹೇಳೋಕಾಗಲ್ಲ!

ನಿಮ್ಮ ಆಹಾರ...
ಪ್ರತಿನಿತ್ಯ ಹಳದಿ ಭಾಗದ ಲೋಳೆ ಹೊರತುಪಡಿಸಿದ ಎರಡು ಮೊಟ್ಟೆ, ಬ್ರೌನ್ ಬ್ರೆಡ್, ಕಡಿಮೆಯೆಂದರೆ 3 ಲೀಟರ್ ನೀರು, ಎರಡು ಬಾಳೆಹಣ್ಣು, ಮತ್ತಷ್ಟು ಇತರೆ ಹಣ್ಣುಗಳು.
(ನೀವೇನು ತಿನ್ನುತ್ತೀರಿ-ನಿಮಗೇನು ಇಷ್ಟ ಎಂದು ಮಕ್ಕಳನ್ನು ಕೇಳಿದಾಗ `ಬಿರಿಯಾನಿ~ ಎಂಬ ಉತ್ತರ ಬಂತು). ಇದೇ ತಪ್ಪು.

ಅಮ್ಮ ದಿನಕ್ಕೆರಡು ಲೋಟ ಹಾಲು ಕೊಟ್ಟರೆ ಒಲ್ಲದ ನೆಪ ಹೇಳಿ ದೂರತಳ್ಳುತ್ತೀರಿ. ಈಗಲೇ ಫಾಸ್ಟ್‌ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದಿರಿ. ನನ್ನಂತೆ ಫಿಟ್‌ನೆಸ್ ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಅಮ್ಮ ಕೊಡುವ ಎಲ್ಲಾ ತಿನಿಸುಗಳನ್ನು ನೆಪ ಹೇಳದೆ ತಿನ್ನಿ. ಈಗಲೇ ಡಯಟ್ ಮಾಡುವ ಪ್ರಯತ್ನ ಬೇಡ.

ಪ್ರತಿನಿತ್ಯ ಎಷ್ಟು ಗಂಟೆ ಅಭ್ಯಾಸ ಮಾಡುತ್ತೀರಿ?
ನಿಮ್ಮ ವಯಸ್ಸಿನಲ್ಲಿದ್ದಾಗ ಕನಿಷ್ಠ ಐದರಿಂದ ಆರು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಈಗ ಮೂರು ಗಂಟೆ ಮೀಸಲಿಟ್ಟಿದ್ದೇನೆ.

ಪಂದ್ಯದಲ್ಲಿ ನಿಮ್ಮ ಮುಂದಿನ ಪಾರ್ಟ್‌ನರ್
ನನ್ನ ಗಮನ ಏನಿದ್ದರೂ ಸಿಂಗಲ್ಸ್‌ನತ್ತ. ಅಲ್ಲಿ ಉತ್ತಮ ಫಲಿತಾಂಶ ತಂದ ಬಳಿಕವಷ್ಟೇ ಡಬಲ್ಸ್ ಕುರಿತು ಚಿಂತಿಸುವೆ.

ದಿನಕ್ಕೆಷ್ಟು ಸರ್ವ್ ಮಾಡುತ್ತೀರಿ?
ಕನಿಷ್ಠ ನೂರು.

ನಿಮ್ಮ ಮುಂದಿನ ಗುರಿ
ಯುಎಸ್ ಓಪನ್‌ನಲ್ಲಿ ಸ್ಪರ್ಧಿಸುವುದು, ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬಾಚಿಕೊಳ್ಳುವುದು.

ನಮಗೆ (ವಿದ್ಯಾರ್ಥಿಗಳಿಗೆ) ನಿಮ್ಮ ಸಲಹೆ...
ಇದು ಓದುವ ಸಮಯ. ಹೆಚ್ಚಿನ ಸಮಯ ಅದಕ್ಕಾಗಿ ಮೀಸಲಿಡಿ. ಆಟವೂ ಓದಿನ ಜತೆಗಿರಲಿ.

ಖಾಸಗಿ ಕಾರ್ಯಕ್ರಮದ ನಿಮಿತ್ತ ಬೇಗ ತೆರಳಬೇಕೆಂದು ಮಾಧ್ಯಮದವರಿಂದ ಜಾರಿಕೊಂಡ ಬೋಪಣ್ಣ ಮಕ್ಕಳ ಪ್ರಶ್ನೆಗಳ ಜಾಲದಿಂದ ಮಾತ್ರ ಬಚಾವಾಗಲು ಸಾಧ್ಯವಾಗಲೇ ಇಲ್ಲ.

ಒಬ್ಬರ ಬಳಿಕ ಒಬ್ಬರಂತೆ `ಲಾಸ್ಟ್ ಒನ್ ಪ್ಲೀಸ್~ ಎಂದು ಗೋಗರೆದು ಅಂಗಿಯ ಹಿಂಭಾಗ, ಕೈ, ಪುಸ್ತಕ, ಬ್ಯಾಟ್‌ನ ಮೇಲೆಲ್ಲಾ ಆಟೋಗ್ರಾಫ್ ಬರೆಸಿಕೊಂಡರು. ಅಭ್ಯಾಸಕ್ಕಾಗಿ ಬಂದಿದ್ದ ಸಾರ್ವಜನಿಕರ ನಡುವೆಯೂ ಫೋಟೋ ತೆಗೆಸಿಕೊಳ್ಳಲು ಪೈಪೋಟಿ.
 
ಈ ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದೆ. ಕೋಚ್ ಹೇಳಿದಂತೆ ಕೇಳಿ. ಪ್ರತಿಭೆಯನ್ನು ಒರೆಗೆಹಚ್ಚುವವರು ಅವರೇ ಎನ್ನುತ್ತಾ ಕೊನೆಯ ಹಸ್ತಾಕ್ಷರದೊಂದಿಗೆ ರ‌್ಯಾಕೆಟ್ ಅನ್ನು ತುಂಟ ಪ್ರಶ್ನೆ ಕೇಳುತ್ತಿದ್ದ ಆದಿತ್ಯನ ಕೈಗಿಟ್ಟು ನಿರ್ಗಮಿಸಿದರು. 
 

ಶಾಲಾ ಕಾಲೇಜುಗಳಲ್ಲಿ ಕ್ರೀಡೆಯನ್ನು ಶೈಕ್ಷಣಿಕ ಪಠ್ಯಕ್ರಮದೊಳಗೆ ಸೇರಿಸಬೇಕೆಂಬ ಸಾಮಾಜಿಕ ಕಳಕಳಿಯಿಂದ ಎನ್‌ಡಿಟಿವಿ ದೇಶದಾದ್ಯಂತ ಸ್ಫೋರ್ಟ್ಸ್ ಪ್ರಚಾರ ಏರ್ಪಡಿಸಿತ್ತು.

`ಫಿಟ್ ಇಂಡಿಯಾ ಕೇರ್ `ಎನ್~ ಪ್ಲೇ ಡೇ~ ಕಾರ್ಯಕ್ರಮದ ಮೂಲಕ ದೇಶದೆಲ್ಲೆಡೆ ಕ್ರೀಡಾ ಸೆಲೆಬ್ರಿಟಿಗಳೊಂದಿಗೆ ಮಕ್ಕಳು ಕಲೆಯುವ ಅಪರೂಪದ ಅವಕಾಶ ಒದಗಿಸಿತ್ತು. ಇನ್ನು ಮುಂದೆ ಪ್ರತಿ ವರ್ಷವೂ ಫೆ.5ನೇ ದಿನವನ್ನು ಇದೇ ಪ್ರಚಾರಕ್ಕಾಗಿ ಬಳಸುವ ಇರಾದೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT