ADVERTISEMENT

ಭೋರ್ಗರೆದ ಲಯವಾದ್ಯಗಳು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ರವೀಂದ್ರನಾಥ ಠಾಗೋರ್ ನಗರ ಕಲ್ಚರಲ್ ಅಸೋಸಿಯೇಷನ್ ವಾರ್ಷಿಕ ಸಂಗೀತೋತ್ಸವವನ್ನು ತರಳಬಾಳು ಕೇಂದ್ರದ ಸಹಯೋಗದೊಂದಿಗೆ ಕಳೆದ ವಾರ ಆಚರಿಸಿತು. ಪ್ರತಿಭಾವಂತ ಕಲಾವಿದ ಆನೂರು ಅನಂತಕೃಷ್ಣ ಶರ್ಮ ಅವರ ನಿರ್ದೇಶನದಲ್ಲಿ ಗಂಗಾ ಕಾವೇರಿ ಎಂಬ ವಾದ್ಯಗೋಷ್ಠಿ ಮೊದಲ ದಿನ ನಡೆಯಿತು.

ಎಂ.ಕೆ. ಪ್ರಾಣೇಶ್ (ಕೊಳಲು) ಮತ್ತು ಪ್ರವೀಣ್ ಗೋಡ್ಖಿಂಡಿ (ಬಾನ್ಸುರಿ) ಅವರನ್ನು ಆರು (ಕರ್ನಾಟಕ, ಹಿಂದುಸ್ತಾನಿ ಹಾಗೂ ವಿದೇಶಿ) ಲಯವಾದ್ಯಗಳು ಜೊತೆಗೂಡಿದವು.
ಎವರಿಬೋಧ ವರ್ಣದಿಂದ ಚುರುಕಾಗಿ ಪ್ರಾರಂಭಿಸಿದರು.

ಆನೂರು ಅನಂತಕೃಷ್ಣ ಶರ್ಮ ಅವರು ರಚಿಸಿರುವ ಕದನಕುತೂಹಲ ರಾಗದ ವಾದ್ಯ ಪ್ರಬಂಧವೂ ಆಕರ್ಷಕವಾಗಿತ್ತು. ರಂಜನೀಯ ರಾಗ ಕೀರವಾಣಿಯನ್ನು ಇಬ್ಬರೂ ಹಂಚಿಕೊಂಡು ಹಂತಹಂತವಾಗಿ ಬೆಳೆಸಿದರು. ಲಯ ವಾದ್ಯಗಳ ಹಿನ್ನೆಲೆಯೊಂದಿಗೆ ನುಡಿಸಿದ ತಾನವೂ ಬೆಳಗಿತು.

ತನಿಯಲ್ಲಿ ಲಯವಾದ್ಯಗಳು ಭೋರ್ಗರೆದವು. ಮೃದಂಗ (ಆನೂರು ಅನಂತಕೃಷ್ಣ ಶರ್ಮ), ಖಂಜರಿ (ಗುರು ಪ್ರಸನ್ನ), ಲ್ಯಾಟಿನ್ ಲಯವಾದ್ಯಗಳು (ಪ್ರಮಥ  ಕಿರಣ್) ಡ್ರಮ್ಸ (ಅರುಣ ಕುಮಾರ್), ತಬಲ (ಜಗದೀಶ್ ಮತ್ತು ಮಧುಸೂದನ್) ವಾದ್ಯಗಳು ಮೊದಲು ತನಿಯಾಗೂ ನಂತರ ಎಲ್ಲವೂ ಒಟ್ಟಿಗೇ ಮೇಳೈಸಿದವು. ದೇವರನಾಮದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ನೂತನ ಸಭೆ ಪೂರ್ವಿ
ಬೆಂಗಳೂರಿನ ಉತ್ತರ ಭಾಗದಲ್ಲಿ  ಸಂಗೀತ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಹೊಸ ಸಂಸ್ಥೆ ಪೂರ್ವಿಯನ್ನು ಕಳೆದ ವಾರ ಪದ್ಮಭೂಷಣ ಡಾ. ಆರ್.ಕೆ. ಶ್ರಿಕಂಠನ್ ಉದ್ಘಾಟಿಸಿದರು. ಮೂರು ತಿಂಗಳಿಗೆ ಒಮ್ಮೆ ಹಿಂದುಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಮಲ್ಲೇಶ್ವರದ ಬಿ.ಪಿ. ಇಂಡಿಯನ್ ಶಾಲೆಯಲ್ಲಿ ನಡೆಸಲು ಸಂಸ್ಥೆ ಯೋಜಿಸಿದೆ.

ನಳಿನಾ ಮೋಹನ್ ಅವರ ಪಿಟೀಲು, ಸಿ. ಚೆಲುವರಾಜ ಅವರ ಮೃದಂಗ ಹಾಗೂ ಟಿ.ಎನ್. ರಮೇಶ್ ಅವರ ಘಟದೊಂದಿಗೆ ಎಂ.ಎಸ್. ಶೀಲಾ ಅವರು ಗಾಯನ ಕಛೇರಿಯನ್ನು ನಡೆಸಿಕೊಟ್ಟರು. ಮಾಮೂಲಿ ವರ್ಣದ ಬದಲು ನಳಿನಕಾಂತಿ ರಾಗದ ವರ್ಣವನ್ನು ಆಯ್ದುದು ಅಭಿನಂದನೀಯ.

ತ್ಯಾಗರಾಜರ  ತುಳಸೀದಳ ಕೃತಿಯು ಒಂದು ದಿವನಾದ ರಚನೆ. ಅದಕ್ಕೆ ನೆರವಲ್ ಮಾಡಿ, ಸ್ವರ ಪ್ರಸ್ತಾರವನ್ನೂ ಚಿಕ್ಕದಾಗಿ ಸೇರಿಸಿದರು. ಜಯಮನೋಹರಿ ರಾಗದ ಕೀರ್ತನೆಯಲ್ಲಿ ದಿವ್ಯ ಸ್ವರೂಪನಾದ ಶ್ರಿರಾಮನ ದರ್ಶನದಿಂದ ಆನಂದ ಪರವಶರಾಗಿ ತ್ಯಾಗರಾಜ ಸ್ವಾಮಿಯು ಶ್ರಿರಾಮನ ಕಲ್ಯಾಣ ಗುಣಗಳನ್ನು ಕೀರ್ತಿಸುವ ಶ್ರಿ ರಮ್ಯ ಚಿತ್ತಾಲಂಕಾರ ಸ್ವರೂಪ ಕೃತಿಗೆ ಕಿರು ಸ್ವರವನ್ನೂ ಸೇರಿಸಿ ಹಾಡಿದರು.

ಹೆಚ್ಚಾಗಿ ಕೇಳದ ಈ ಕೃತಿಯ ಆಯ್ಕೆಯೂ ಸ್ವಾಗತಾರ್ಹ. ಪೂರ್ವಿ ಕಲ್ಯಾಣಿಯನ್ನು ವಿಸ್ತರಿಸಿ  ಮರಿಚಿತ ವೇಮೋನನ್ನು ಕೃತಿಗೆ ನೆರವಲ್ (ಧರಣೀಜ ಮಾನಸಾಂಭೋರುಹ ಭಾಸ್ಕರ) ಮತ್ತು ಸ್ವರಗಳನ್ನೂ ಕೂಡಿಸಿ, ಇಂಪಾಗಿ ಹಾಡಿದರು. ನಿನ್ನನ್ನೇ ನಂಬಿದೆ ಕೃಷ್ಣಾ    ಉಗಾಭೋಗದ ಮುನ್ನುಡಿಯೊಂದಿಗೆ ಸುಪರಿಚಿತ ಗೋವಿಂದ ಗೋಪಾಲ ಸಹ ಆಹ್ಲಾದಕರವಾಗಿ ಮೂಡಿತು.

ಮಿಂಚಿದ ನರ್ತಕ
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್‌ನ ಹೊರೈಜಾನ್ ಸರಣಿಯಲ್ಲಿ  ನರ್ತಿಸಿದ ಡಾ. ಶೇಷಾದ್ರಿ ಅಯ್ಯಂಗಾರ್ ನಗರದ ನೃತ್ಯಾಸಕ್ತರಿಗೆ ಪರಿಚಿತರೇ. ಪದ್ಮಿನಿ ರವಿ ಅವರ ಶಿಷ್ಯರಾಗಿ, ರಾಜ್ಯ-ಹೊರ ರಾಜ್ಯ-ಹೊರ ದೇಶಗಳಲ್ಲಿ ನರ್ತಿಸುತ್ತಾ ನರ್ತಕ, ಬೋಧಕ ಹಾಗೂ ನೃತ್ಯ ಸಂಯೋಜಕರಾಗಿ ಅನುಭವ ಗಳಿಸುತ್ತಿದ್ದಾರೆ.

ಅಲ್ಲದೆ ಲಂಡನ್‌ನ ಸೃಷ್ಟಿ ಡಾನ್ಸ್ ಕಂಪನಿಗಾಗೂ ನರ್ತಿಸುತ್ತಿದ್ದು, ದಿ ಪ್ಯಾಲೆಸ್ ಪ್ರೈಸ್-2006 ರ ಬಹುಮಾನ ಗಳಿಸಿದ ಕ್ವಿಕ್‌ನಲ್ಲೂ ಪಾಲ್ಗೊಂಡ ಹೆಗ್ಗಳಿಕೆ, ಅವರದು. ನಗರದ ಅಯ್ಯಂಗಾರ್ ಸೆಂಟರ್ ಫಾರ್ ಫೈನ್ ಆರ್ಟ್ಸ್ ನ ನಿರ್ದೇಶಕರಾಗಿ ನೃತ್ಯ, ಯೋಗಗಳನ್ನು ಆಸಕ್ತರಿಗೆ ಕಲಿಸುತ್ತಿದಾರೆ. ಮೇರು ನೃತ್ಯ ಸಂಯೋಜಕಿ ಸರೋಜಖಾನ್ ಅವರ ಬಳಿ ಬಾಲಿವುಡ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.

ಡಾ. ಶೇಷಾದ್ರಿ ಅಯ್ಯಂಗಾರ್ ತಮ್ಮ ನೃತ್ಯ ಕಾರ್ಯಕ್ರಮವನ್ನು ಪುಷ್ಪಾಂಜಲಿಯೊಂದಿಗೆ ಸಾಂಪ್ರದಾಯಿಕವಾಗಿ ಪ್ರಾರಂಭಿಸಿದರು. ನಾಟ ರಾಗದಲ್ಲಿ ನರ್ತನ ಗಣಪತಿಯಿಂದ ಚುರುಕು ನಡೆಯಿಂದ ಆರಂಭಿಸಿ, ಒಳ್ಳೆಯ ಚಾಲನೆ ನೀಡಿದರು. ಲಾಲ್‌ಗುಡಿ ಜಯರಾಮನ್‌ರ ಚಾರುಕೇಶಿ ರಾಗದ ವರ್ಣ ಇನ್ನುಂ ಎನ್‌ಮನಂ ಆಯ್ದು ಅದರಲ್ಲಿ ತನ್ನ ಶಿಕ್ಷಣ-ಸಾಧನೆಗಳನ್ನು ಮೆರೆದರು.

ಅಲ್ಲಲ್ಲಿ ಸೊಬಗಿನಿಂದ ಕಾಣುತ್ತಿದ್ದು, ಒಳ್ಳೆ ಜತಿಗಳನ್ನೂ ಹೆಣಿದಿದ್ದರು. ಅನುಭವದಿಂದ ಸುಲಲಿತವಾಗಿ ನರ್ತಿಸಿದರೂ, ವರ್ಣ ಇನ್ನೂ ಗಾಢ ಅನುಭವ ನೀಡಬಹುದಿತ್ತು ಎಂದೆನಿಸಿತು. ಮುಂದೆ ವಾತ್ಸಲ್ಯ (ಚಿನ್ನ ಚಿನ್ನ ಕಿಳಿಯೇ), ಭಕ್ತಿ (ಮೇರೆ ತೊ ಗಿರಿಧರ ಗೋಪಾಲ) ಹಾಗೂ ಶೃಂಗಾರ ಭಾವ (ಶ್ಯಾಮ ಕೋ)ಗಳನ್ನು ಭಾವಪೂರ್ಣವಾಗಿ ಅಭಿನಯಿಸಿದರು. ನಾರಾಯಣ ತೀರ್ಥ ಮತ್ತು ಮೀನಾಕ್ಷಿ ಸುಬ್ರಹ್ಮಣ್ಯಂ ಅವರ ರಚನೆಗಳೊಂದಿಗೆ ಮಂಗಳವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.