ಮನುಷ್ಯ ಸಾಕು ಪ್ರಾಣಿಗಳನ್ನು ಕೇವಲ ಮುದ್ದು ಅಥವಾ ಸ್ವಾರ್ಥಕ್ಕಾಗಿ ಸಾಕುತ್ತಾನೆ. ಆದರೆ ಮನೆಯವರು ಕೊಡುವ ಒಂದು ತುತ್ತು ಅನ್ನಕ್ಕೆ ಋಣಿಯಾಗಿರುವ ಪ್ರಾಣಿಗಳು ನಿಸ್ವಾರ್ಥ ಪ್ರೀತಿಯನ್ನು ನೀಡುತ್ತವೆ. ಇಂತಹ ನಿಸ್ವಾರ್ಥ ಜೀವಿಗಳಿಂದ ಮಕ್ಕಳಿಗೆ ಆಗುವ ಪ್ರಯೋಜನಗಳು ಹಲವು.
* ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದರಿಂದ ಮಕ್ಕಳಿಗೆ ಜವಾಬ್ದಾರಿ ಏನು ಎಂದು ಅರ್ಥವಾಗುತ್ತದೆ.
* ಪ್ರಾಣಿಗಳಿಗೂ ಮನುಷ್ಯನಂತೆ ಆಹಾರ, ವ್ಯಾಯಾಮ, ಪ್ರೀತಿ, ಆರೈಕೆ ಮತ್ತು ಆಶ್ರಯದ ಅಗತ್ಯ ಇದೆ ಎಂದು ತಿಳಿದುಕೊಳ್ಳುತ್ತಾರೆ.
* ಮಕ್ಕಳು ಮೂರು ವರ್ಷದವರಾಗಿದ್ದಾಗ ಪ್ರಾಣಿಗಳೊಂದಿಗೆ ಆಟವಾಡುತ್ತಾರೆ. ಐದು ವರ್ಷದವರಾದಾಗ ಪ್ರಾಣಿಗಳು ವಾಸಿಸುವ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ. 10 ರಿಂದ 17ನೇ ವಯಸ್ಸಿನಲ್ಲಿ ಸ್ವತಂತ್ರವಾಗಿ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಾರೆ.
* ಅವುಗಳಿಗೆ ಸ್ನಾನ ಮಾಡಿಸುವುದು, ಊಟ ಕೊಡುವುದು ಹೀಗೆ ಪ್ರಾಣಿಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಇಂಥವರು ಸಹಜವಾಗಿಯೇ ಮನುಷ್ಯರ ಕಷ್ಟಗಳಿಗೂ ಸ್ಪಂದಿಸುವ ಗುಣ ಬೆಳೆಸಿಕೊಳ್ಳುತ್ತಾರೆ.
* ಪ್ರಾಣಿಗಳ ಒಡನಾಟದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
* ನಿತ್ಯ ಮಕ್ಕಳು ಜೋರಾಗಿ ಓದಿದರೆ ಯಾರು ಕೇಳಿಸಿಕೊಳ್ಳುತ್ತಾರೆ. ಆದರೆ ಸಾಕು ಪ್ರಾಣಿಗಳು ತಾಳ್ಮೆಯಿಂದ ಮಕ್ಕಳು ಹೇಳುವುದನ್ನು ಆಲಿಸುತ್ತವೆ. ಇದು ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು ಸಹಕಾರಿ.
* ಚಿಕ್ಕಂದಿನಿಂದಲೇ ಪ್ರಾಣಿಗಳೊಂದಿಗೆ ಒಡನಾಟ ಬೆಳೆಯುವುದರಿಂದ ಕೆಲ ಬಗೆ ಅಲರ್ಜಿಗಳು ಮಕ್ಕಳಿಗೆ ಬರುವುದಿಲ್ಲ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
* ಸದಾ ಕಂಪ್ಯೂಟರ್, ಮೊಬೈಲ್ ಹಾಗೂ ವಿಡಿಯೊ ಗೇಮ್‌ನಲ್ಲಿ ಆಡುವ ಮಕ್ಕಳಿಗೆ ಸಾಕುಪ್ರಾಣಿಗಳೊಂದಿಗಿನ ಒಡನಾಟ ದೈಹಿಕ ಚಟುವಟಿಕೆಗೆ ಅವಕಾಶ ಕಲ್ಪಿಸುತ್ತದೆ.
* ಇತರರೊಂದಿಗೆ ಸ್ನೇಹದಿಂದ ವರ್ತಿಸುವ ಗುಣವನ್ನು ಮಕ್ಕಳು ಪ್ರಾಣಿಗಳಿಂದ ಕಲಿಯುತ್ತಾರೆ. ಪ್ರಾಣಿಗಳು ಸಂಬಂಧಗಳನ್ನು ಬೆಸೆಯುವ ಸೇತುವೆಯಂತೆ ಕೆಲಸ ಮಾಡುತ್ತವೆ.
* ಸಾಕು ಪ್ರಾಣಿಗಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದಾಗಲೆಲ್ಲ ಮಕ್ಕಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವುದರಿಂದ, ಪ್ರಾಣಿಗಳ ಆರೈಕೆ, ಆರೋಗ್ಯ ಕುರಿತಂತೆ ಸಾಕಷ್ಟು ಮಾಹಿತಿ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.