ADVERTISEMENT

ಮಕ್ಕಳ ನೆಚ್ಚಿನ ಸಂಗೀತ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ನರಹರಿ ದೀಕ್ಷಿತ್
ನರಹರಿ ದೀಕ್ಷಿತ್   

ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ಪೈಕಿ ಸಂಗೀತ ಕಾರ್ಯಕ್ರಮಗಳೇ ಹೆಚ್ಚು ಮನ್ನಣೆ ಪಡೆದಿವೆ. ಪುಟ್ಟ ಮಕ್ಕಳು ವೇದಿಕೆ ಮೇಲೆ ನಿಂತು ನಿರ್ಭೀತವಾಗಿ, ಸುಲಲಿತವಾಗಿ ಹಾಗೂ ತಮ್ಮ ಸುಮಧುರ ಕಂಠಸಿರಿಯಿಂದ ಹಾಡುವ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ.

‘ಅರೇ, ಆ ಮಗು ಎಷ್ಟು ಚೆಂದವಾಗಿ ಹಾಡುತ್ತೆ. ಇಷ್ಟು ಚಿಕ್ಕ ವಯಸ್ಸಿಗೆ ಇದು ಹೇಗೆ ಸಾಧ್ಯ’ ಎಂದು ನೋಡುಗರಲ್ಲಿ ಪ್ರಶ್ನೆ ಮೂಡುವುದು ಸಹಜ. ಅಂತಹ ಕೆಲ ಮಕ್ಕಳ ಹಾಡುಗಾರಿಕೆಯ ಕೌಶಲದ ಹಿಂದೆ ಈ ಗಾಯಕನ ಪರಿಶ್ರಮ ಅಡಗಿದೆ.

‘ಸೃಜನ ಸಂಗೀತ ಶಾಲೆ’ ಸ್ಥಾಪಿಸಿರುವ ‌ನರಹರಿ ದೀಕ್ಷಿತ್ ಉತ್ತಮ ಗಾಯಕ. ಈವರೆಗೆ ಸಾವಿರಾರು ಮಕ್ಕಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ರಿಯಾಲಿಟಿ ಶೋಗಳಿಗೆ ಮಕ್ಕಳನ್ನು ರೂಪಿಸುವುದಕ್ಕೆ ಇವರ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಇವರನ್ನು ರಿಯಾಲಿಟಿ ಗುರು ಎಂದೇ ಮಕ್ಕಳು ಕರೆಯುತ್ತಾರೆ.

ADVERTISEMENT

ಶಿವಮೊಗ್ಗದ ಮಂಚಾಲೆಯವರಾದ ನರಹರಿ, ಎಲ್‌ಎಲ್‌ಬಿ ಪದವೀಧರು. ಸಂಗೀತದಲ್ಲಿಯೇ ಬದುಕು ಕಂಡು ಕೊಳ್ಳಬೇಕು ಎಂದು ನಿರ್ಧರಿಸಿ, 1995ರಲ್ಲಿ ‘ಸೃಜನ ಸಂಗೀತ ಶಾಲೆ’ ಆರಂಭಿಸಿದರು. ಪ್ರಾರಂಭದಲ್ಲಿ ಶಾಲೆಗೆ ಸೇರಿದ್ದು ಬೆರಳೆಣಿಕೆಯಷ್ಟೇ ಮಕ್ಕಳಾದರು ಇಂದು ಆ ಶಾಲೆ ರಾಜ್ಯದ 15ಕ್ಕೂ  ಹೆಚ್ಚು ಸ್ಥಳಗಳಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದೆ.

ಇಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ಟಿವಿಗಳ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ, ವಿದೇಶದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಈ ಶಾಲೆಯಲ್ಲಿ  ಕಲಿತ ವಿದ್ಯಾರ್ಥಿಗಳು ಗಾಯನ ಪ್ರದರ್ಶನ ನೀಡಿದ್ದಾರೆ.

ಸದ್ಯ ನರಹರಿ ದೀಕ್ಷಿತ್ ಅವರ ಸಂಗೀತ ಸೇವೆ ಗುರುತಿಸಿರುವ ಅಖಿಲ ಹವ್ಯಕ ಮಹಾಸಭಾವು ಅವರನ್ನು ‘ಹವ್ಯಕ ಶ್ರೀ’ ಪ‍್ರಶಸ್ತಿಗೆ ಆಯ್ಕೆ ಮಾಡಿದೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಇದೇ 15ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಅಂದು ನರಹರಿ ಅವರನ್ನು ಗೌರವಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.