ADVERTISEMENT

ಮಕ್ಕಳ ಸೆಳೆಯುತ್ತಿರುವ ‘ರೋಬೊ’ ಸ್ಕೂಲ್‌

ಎಸ್‌.ಸಂಪತ್‌
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಮಕ್ಕಳ ಸೆಳೆಯುತ್ತಿರುವ ‘ರೋಬೊ’ ಸ್ಕೂಲ್‌
ಮಕ್ಕಳ ಸೆಳೆಯುತ್ತಿರುವ ‘ರೋಬೊ’ ಸ್ಕೂಲ್‌   

ಗಣಿತ, ವಿಜ್ಞಾನ, ತಂತ್ರಜ್ಞಾನದತ್ತ ಮಕ್ಕಳನ್ನು ಸೆಳೆಯಲು, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಕೌಶಲ ಹೆಚ್ಚಿಸಲು ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ‘ರೊಬೊ’ ಸ್ಕೂಲ್‌ಗಳು ಮತ್ತು ‘ರೊಬೊಟಿಕ್ಸ್‌ ಕೋರ್ಸ್‌’ಗಳು ಹೆಚ್ಚಾಗ ತೊಡಗಿವೆ.

ರೊಬೊ ಎಂದರೆ ಮಕ್ಕಳಷ್ಟೇ ಅಲ್ಲ ದೊಡ್ಡವರಲ್ಲೂ ಆಸಕ್ತಿ ಕೆರಳುತ್ತದೆ. ವಿವಿಧ ಕಾರ್ಯಗಳಿಗೆ ಬಳಸಬಹುದಾದ ರೊಬೊಟ್‌ಗಳ ತಯಾರಿಕೆಗೆ ದೇಶ, ವಿದೇಶಗಳಲ್ಲಿ ನಿತ್ಯ ಸಂಶೋಧನೆಗಳು ನಡೆಯುತ್ತಲೇ ಇವೆ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಇದೂ ಒಂದು. ಭಾರತದಲ್ಲೂ ಈ ಕ್ಷೇತ್ರ ಮಕ್ಕಳು, ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ಇತ್ತೀಚೆಗೆ ಉದ್ಯಾನನಗರಿಯಲ್ಲಿ ಕೆಲವು ರೊಬೊ ಸ್ಕೂಲ್‌ಗಳು ತಲೆಯೆತ್ತಿವೆ. ಅಲ್ಲದೆ ಇಲ್ಲಿನ ಕೆಲ ಅಂತರರಾಷ್ಟ್ರೀಯ ಶಾಲೆಗಳು, ಪ್ರತಿಷ್ಠಿತ ಖಾಸಗಿ ಶಾಲೆಗಳು ರೊಬೊ ತಂತ್ರಜ್ಞಾನ ಕುರಿತ ತರಗತಿಗಳನ್ನು ನಡೆಸುತ್ತಿವೆ. ಕಂಪ್ಯೂಟರ್‌ ಲ್ಯಾಬ್‌, ಫಿಸಿಕ್ಸ್‌ ಲ್ಯಾಬ್‌, ಕೆಮಿಸ್ಟ್ರಿ ಲ್ಯಾಬ್‌ಗಳಂತೆಯೇ ಕೆಲ ಶಾಲೆಗಳು ರೊಬೊಟಿಕ್‌ ಕುರಿತ ಕೌಶಲ ವೃದ್ಧಿಗೆ ‘ಅರ್ಲಿ ಸೈನ್ಸ್‌ ಲ್ಯಾಬ್‌’ಗಳನ್ನು ತೆರೆದಿವೆ.

ADVERTISEMENT

‘ರೊಬೊಟಿಕ್‌ ಕೌಶಲ ಕಲಿಕೆಗಾಗಿಯೇ ಮಾರುಕಟ್ಟೆಯಲ್ಲಿ ‘ಲೆಗೊ ಎಜು ಕಿಟ್‌’ಗಳು (ವಿವಿಧ ರೀತಿ ಜೋಡಿಸಬಹುದಾದ ಪ್ಲಾಸ್ಟಿಕ್‌ ಆಟಿಕೆಗಳು) ದೊರೆಯುತ್ತಿವೆ. ಮಕ್ಕಳ ವಯಸ್ಸು ಮತ್ತು ಅವರ ಬೌದ್ಧಿಕ ಮಟ್ಟಕ್ಕೆ ತಕ್ಕಂಥ ಕಿಟ್‌ಗಳು ಲಭ್ಯವಿವೆ. ಇವುಗಳ ಕಲಿಕಾಭ್ಯಾಸದಲ್ಲಿ ತೊಡಗಲು ಸೂಕ್ತ ತರಬೇತಿದಾರರು ಅವಶ್ಯ’ ಎಂದು ಹೇಳುತ್ತಾರೆ ‘3ಬಿ ರೊಬೊ ಸ್ಕೂಲ್‌’ನ ಮುಖ್ಯ ತರಬೇತಿದಾರರಾದ ದುರ್ಗಾ ದೇವಿ.

ಎಸ್‌ಟಿಇಎಂ ಆಧಾರಿತ ಕಲಿಕೆ:

‘ರೊಬೊಟಿಕ್‌’ ಎಂಬುದು ಮುಖ್ಯವಾಗಿ ಎಸ್‌ಟಿಇಎಂ (STEM) ಆಧಾರಿತ ಕಲಿಕೆ. ಅಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ ವಿಷಯಗಳನ್ನು ಇದು ಒಳಗೊಂಡಿರುತ್ತದೆ. ಉನ್ನತ ಶಿಕ್ಷಣ ಮತ್ತು ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ವಿಷಯಗಳನ್ನು ಆಳವಾಗಿ ಓದುತ್ತಾರೆ. ಆದರೆ ರೊಬೊಟಿಕ್‌ ಕಲಿಕೆಯಲ್ಲಿ ತೊಡಗುವ ಮಕ್ಕಳಿಗೆ ಈ ನಾಲ್ಕೂ ವಿಷಯಗಳ ಪರಿಚಯ ಬಲು ಬೇಗನೇ ಆಗುತ್ತದೆ. ಜತೆಗೆ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ವಿಷಯಗಳ ಪರಿಚಯವೂ ಆಗುತ್ತದೆ. ವಿದ್ಯುತ್‌ ಸಂಪರ್ಕ, ಪ್ರೋಗ್ರಾಮಿಂಗ್‌ ಮತ್ತು ಜೋಡಿಸುವಿಕೆ ಕುರಿತ ಅವರ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಕುತೂಹಲ ತಣಿಸುವ ರೊಬೊ ಕಲಿಕೆ:

‘ಕಾರು ಅಥವಾ ಬಸ್‌ನಲ್ಲಿರುವ ಗೇರ್‌ಗಳು ಹೇಗೆ ಕೆಲಸ ಮಾಡುತ್ತವೆ, ಮಾಲ್‌ ಅಥವಾ ದೊಡ್ಡ ಅಂಗಡಿ ಮಳಿಗೆಗಳಲ್ಲಿ ಗಾಜಿನ ಬಾಗಿಲುಗಳು ಹೇಗೆ ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬುದೂ ಸೇರಿದಂತೆ ಹಲವು ರೀತಿಯ ಕುತೂಹಲಕಾರಿ ಪ್ರಶ್ನೆಗಳು ಮಕ್ಕಳಲ್ಲಿ ಇರುತ್ತವೆ. ರೊಬೊಟಿಕ್‌ ತರಬೇತಿಯು ಮಕ್ಕಳಲ್ಲಿ ಇಂಥ ಹಲವಾರು  ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ವೇಗ, ವೇಗದ ಗತಿ ಮತ್ತು ವೇಗದ ಹೆಚ್ಚಳ ಕುರಿತು ಅತಿ ಸರಳ ವಿಧಾನದ ಮೂಲಕ ತಿಳಿಯಲು ಇದು ಸಹಕಾರಿ’ ಎನ್ನುತ್ತಾರೆ ‘3ಬಿ ರೊಬೊ ಸ್ಕೂಲ್‌’ನ ನಿರ್ದೇಶಕ ಎನ್‌. ಶಿವ.

‘ಮಕ್ಕಳಿಗೆ ತಮ್ಮ ಆಲೋಚನೆ, ಕಲ್ಪನೆಯನ್ನು ಆಧರಿಸಿ ಹೊಸ ಆವಿಷ್ಕಾರ, ಸಂಶೋಧನೆ ಕೈಗೊಳ್ಳಲು ಇದು ಪ್ರೇರೇಪಿಸುತ್ತದೆ. ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಳದ ಜತೆಗೆ ವಿವಿಧ ವಿಷಯಗಳು, ಕ್ಷೇತ್ರಗಳ ಪರಿಚಯವೂ ಅವರಿಗೆ ಆಗುತ್ತದೆ. ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ, ಸಾಮರ್ಥ್ಯವನ್ನು ರೊಬೊಟಿಕ್‌ ಕಲಿಕೆಯು ಹೊರಹಾಕುತ್ತದೆ. ಅದರ ಕಲಿಕೆಯಿಂದಾಗಿ ಭವಿಷ್ಯದಲ್ಲಿ ಅವರಿಗೆ ಉದ್ಯೋಗಾವಕಾಶಗಳು ಹೆಚ್ಚಿಗೆ ಸಿಗುತ್ತವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.