ADVERTISEMENT

ಮತಜಾಗೃತಿಗಾಗಿ ‘ಒಂದು ಮತದ ಸುತ್ತ’

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಮತಜಾಗೃತಿಗಾಗಿ ‘ಒಂದು ಮತದ ಸುತ್ತ’
ಮತಜಾಗೃತಿಗಾಗಿ ‘ಒಂದು ಮತದ ಸುತ್ತ’   

ಸರ್ವಾಧಿಕಾರ ಇರುವ ರಾಷ್ಟ್ರಗಳಲ್ಲಿ ಚುನಾವಣೆ ಎಂಬ ಪದಕ್ಕೆ ಆಸ್ಪದವೇ ಇರುವುದಿಲ್ಲ. ಇನ್ನ ಪ್ರಜಾಪ್ರಭುತ್ವವೆಂಬದು ಅಲ್ಲಿನ ಜನರಿಗೆ ಗಗನ ಕುಸುಮವೇ ಸರಿ.

ಅಂತಹ ದೇಶಗಳಿಗೆ ಹೋಲಿಸಿಕೊಂಡರೆ, ಭಾರತೀಯರು ಎಷ್ಟೋ ಸುಖಿಗಳು. ಹಾಗಾಗಿ, ಕುಸಿಯುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಿಕೊಂಡು, ಸುಭದ್ರ ರಾಷ್ಟ್ರ ಕಟ್ಟಬೇಕಾದರೆ ಚುನಾವಣೆ ಎಂಬ ಅಸ್ತ್ರದ ಮಹತ್ವವನ್ನು ಎಲ್ಲರೂ ಅರಿಯಬೇಕು.

ಹಿರಿ ಮತ್ತು ಕಿರಿ ತಲೆಮಾರು ಚುನಾವಣೆ ಬಗ್ಗೆ ಹೊಂದಿರುವ ಇಂತಹದ್ದೊಂದು ಮನೋಭಾವದ ಎಳೆಯನ್ನಿಟ್ಟುಕೊಂಡು 14 ನಿಮಿಷದ ‘ಒಂದು ಮತದ ಸುತ್ತ’ ಚಿತ್ರವನ್ನು ತಯಾರಿಸಲಾಗಿದೆ. ಮೇ 2ರಂದು ಯೂಟ್ಯೂಬ್ ತೆರೆಗೆ ಬಂದಿರುವ ಈ ಚಿತ್ರವನ್ನು 5,088 ಮಂದಿ ವೀಕ್ಷಿಸಿದ್ದಾರೆ.

ADVERTISEMENT

ಚುನಾವಣೆಯ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಗಳಿಲ್ಲದೆ ಬಣಗುಡುವ ಕಾಲೇಜಿನ ತರಗತಿ ದೃಶ್ಯದೊಂದಿಗೆ ಕಥೆ ಆರಂಭವಾಗುತ್ತದೆ.

ತರಗತಿಗೆ ಬರುವ ಪ್ರಾಧ್ಯಾಪಕನಿಗೆ (ಸುಭಾಷ್ ನರೇಂದ್ರ) ವಿದ್ಯಾರ್ಥಿಗಳ ಗೈರು ಹಾಜರಿಯ ಕಾರಣ ಬೇಸರ ತರಿಸುತ್ತದೆ. ಆಗ ಆತ ಪಠ್ಯ ಪಾಠದ ಬದಲಿಗೆ, ಮತದಾನ ವಿಷಯದ ಬಗ್ಗೆ ಪಾಠ ಮಾಡಿ, ಮತ ಮೌಲ್ಯದ ಅರಿವು ಮೂಡಿಸುತ್ತಾನೆ.

ಅದುವರೆಗೆ ಪಾಕೆಟ್‌ ಮನಿಗಾಗಿ ರಾಜಕೀಯ ಪಕ್ಷಗಳ ಪರ ಪ್ರಚಾರಕ್ಕೆ ಹೋಗುವ ವಿದ್ಯಾರ್ಥಿಗಳು, ಕೆಲವರು ಮತದಾನದ ದಿನ ಪಿಕ್‌ನಿಕ್‌ ಪ್ಲಾನ್ ಮಾಡುವ ಸ್ನೇಹಿತರೂ ಮತದಾನ ಜಾಗೃತಿಗೆ ಮುಂದಾಗುತ್ತಾರೆ.

‘ಆರೋಗ್ಯ ಕೆಟ್ಟಾಗ ಉತ್ತಮ ವೈದ್ಯನನ್ನು ಹುಡುಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವಂತೆ, ಚುನಾವಣೆ ಸಂದರ್ಭದಲ್ಲೂ ದೇಶದ ಮತ್ತು ನಾಡಿನ ಆರೋಗ್ಯ ಕಾಪಾಡುವಂತಹ ಜನಪ್ರತಿನಿಧಿಗಳಿಗೆ ಮತ ಹಾಕಿ ಆಯ್ಕೆ ಮಾಡಬೇಕು’ ಎಂಬ ಸಂಭಾಷಣೆಯ ಸಾಲೊಂದು ಇಡೀ ಚಿತ್ರದ ಕಥೆಯ ಸಂದೇಶವನ್ನು ಹಿಡಿದಿಡುತ್ತದೆ. ಕಥೆಯ ಓಘಕ್ಕೆ ತಕ್ಕಂತೆ ಇರುವ ಹಾಡಿಗೆ ಮನಸ್ಸಿನಲ್ಲಿ ಉಳಿಯುವ ಸಾಮರ್ಥ್ಯವಿದೆ.

ನಿರ್ದೇಶನದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಮೊದಲ ಸಲ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ರಾಘವೇಂದ್ರ ಪಂತ್‌, ಭರವಸೆ ಮೂಡಿಸಿದ್ದಾರೆ. ಚಿತ್ರಕ್ಕೆ ಸಿನಿಮಾಟೊಗ್ರಫಿ ಜತೆಗೆ ಸಂಕಲನ ಮಾಡಿರುವ ರಾಘವೇಂದ್ರ ಅವರ ಸೋದರ ಕೃಷ್ಣಪಂತ್ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.

ಕಿರುಚಿತ್ರ: ಒಂದು ಮತದ ಸುತ್ತ

ನಿರ್ದೇಶನ: ರಾಘವೇಂದ್ರ ಪಂತ್

ಸಿನಿಮಾಟೊಗ್ರಫಿ–ಸಂಕಲನ: ಕೃಷ್ಣ ಪಂತ್

ಕಥೆ: ಭವಾನಿ ಪ್ರಸಾದ್ ಪಂತ್

ಹಿನ್ನೆಲೆ ಗಾಯನ: ಶಿವಾನಿ ಅಕ್ಕಿ

ಸಾಹಿತ್ಯ: ವಿಶಾಲಾ ಮಲ್ಲಾಪುರ

‌ತಾರಾಗಣದಲ್ಲಿದ್ದಾರೆ ಸುಭಾಷ್ ನರೇಂದ್ರ, ಪ್ರಕಾಶ್ ಧುಳೆ,
ಕೇಶವ ಕರ್ಜಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.