ADVERTISEMENT

‘ಮತ್ತೆ ಮದುವೆ ಆಗಲಿಲ್ಲ’

ಮಂಜುಶ್ರೀ ಎಂ.ಕಡಕೋಳ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
ನಂದಿನಿಲೇಔಟ್‌ನ ಚಂದ್ರಕಾಂತ್‌ ಜೆ.ಕೆ. ಅವರ ಆರು ತಿಂಗಳ ಮಗು ರಿಧಿ
ನಂದಿನಿಲೇಔಟ್‌ನ ಚಂದ್ರಕಾಂತ್‌ ಜೆ.ಕೆ. ಅವರ ಆರು ತಿಂಗಳ ಮಗು ರಿಧಿ   

ಹಿರಿಯ ರಂಗಸಂಗೀತಜ್ಞ ಎಚ್.ಎಸ್‌. ನಾಗರಾಜ ರಾವ್ ಅವರು ಮಗಳು, ನೃತ್ಯಗಾರ್ತಿ  ಶ್ವೇತಾರಾವ್ ಅವರ ಪಾಲಿಗೆ ಅಮ್ಮನೂ ಹೌದು. ಮಗಳೊಂದಿಗೆ ತಾವೂ ಬೆಳೆದ ಬಗೆಯನ್ನು ನಾಗರಾಜ ರಾವ್  ಅವರ ಮಾತಲ್ಲೇ ಕೇಳಬೇಕು...

* ಅಮ್ಮನ ಪಾತ್ರವನ್ನು ಹೇಗೆ ನಿರ್ವಹಿಸಿದಿರಿ?
ನನ್ನ ಹೆಂಡತಿ ಮತ್ತು ಮಗ ಅಪಘಾತವೊಂದರಲ್ಲಿ ತೀರಿಹೋದಾಗ ಮಗಳಿಗೆ ಕೇವಲ 11 ವರ್ಷ. ಆಘಾತದಿಂದ ಚೇತರಿಸಿಕೊಳ್ಳಲು ಮಗಳು ಮತ್ತು ನನಗೆ ದೀರ್ಘಕಾಲವೇ ಬೇಕಾಯಿತು. ಆದರೆ, ಬದುಕು ಇಷ್ಟಕ್ಕೇ ನಿಲ್ಲುವುದಿಲ್ಲವಲ್ಲ. ಮಗಳಿಗೆ ಅಪ್ಪ–ಅಮ್ಮ ಎರಡೂ ಆಗಿ ನೋಡಿಕೊಂಡೆ. ಆರಂಭದಲ್ಲಿ ತುಂಬಾ ಕಷ್ಟವೆನಿಸುತ್ತಿತ್ತು. ಆದರೆ, ಮನಸ್ಸು ಗಟ್ಟಿಮಾಡಿಕೊಂಡು ಮಗಳನ್ನು ಚೆನ್ನಾಗಿ ಬೆಳೆಸಬೇಕೆಂದು ನಿರ್ಧರಿಸಿದೆ. ಎಷ್ಟೋ ಬಾರಿ ಅವಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗೆಲ್ಲಾ ಆಪ್ತರ ನೆರವು ಪಡೆಯುತ್ತಿದ್ದೆ. ನಿಧಾನಕ್ಕೆ ಅವಳೂ ನನ್ನನ್ನು ಅರ್ಥಮಾಡಿಕೊಂಡಳು.

(ಮಗಳು ಶ್ವೇತಾರಾವ್ ಜತೆ ನಾಗರಾಜ ರಾವ್)

ADVERTISEMENT

* ಆರಂಭದ ದಿನಗಳು ಹೇಗಿದ್ದವು?
ಖಂಡಿತಾ ಸುಲಭವಾಗಿರಲಿಲ್ಲ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದೆ. ಪ್ರತಿನಿತ್ಯದ ದಿನಚರಿಗಳಿಂದ ಹಿಡಿದು  ವಿದ್ಯಾಭ್ಯಾಸ, ವೈಯಕ್ತಿಕ ಅಭಿಲಾಷೆ ಹೀಗೆ ಎಲ್ಲಾ ವಿಷಯಗಳನ್ನು ನಿಭಾಯಿಸುವ ಕಲೆಯನ್ನು ಮಗಳಿಗೆ ಹೇಳಿಕೊಟ್ಟೆ.

ಇನ್ನು ಅಡುಗೆ ವಿಚಾರಕ್ಕೆ ಬಂದರೆ, ನನಗೆ ಹೆಚ್ಚು ಅಡುಗೆ ಬರುತ್ತಿರಲಿಲ್ಲ. ನಾನು ಚಿತ್ರಾನ್ನದ ಗಿರಾಕಿ. ಅನ್ನ, ಸಾರು, ಪಲ್ಯ ಮಾಡಲು ಬರುತ್ತಿತ್ತು. ಮಗಳಿಗೆ ಅದನ್ನೇ ಹೇಳಿಕೊಟ್ಟೆ. ದೊಡ್ಡವಳಾದ ಮೇಲೆ ಅವಳು ಇತರ ಅಡುಗೆಗಳನ್ನು ತಾನೇ ಕಲಿತುಕೊಂಡಳು.

* ಹೆಣ್ತನದ ಸಮಸ್ಯೆ ಎದುರಿಸುವುದನ್ನು ಹೇಗೆ ಹೇಳಿಕೊಟ್ಟಿರಿ?
ವಯಸ್ಸಿಗೆ ಬಂದಾಗ ಮಗಳನ್ನು ಅರ್ಥಮಾಡಿಕೊಳ್ಳಲು ತಂದೆಯಾದ ನನಗೆ ಕಷ್ಟವೆನಿಸಿತು. ಆದರೆ, ಪ್ರಕೃತಿದತ್ತವಾಗಿ ಹೆಣ್ಣಿನಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಳಿಗೆ ತಿಳಿಹೇಳುತ್ತಿದ್ದೆ. ಮಗಳು ಬೇಗ ಅರ್ಥ ಮಾಡಿಕೊಳ್ಳುತ್ತಿದ್ದಳು. ಹಾಗಾಗಿ, ಹೆಚ್ಚು ಕಷ್ಟವೆನಿಸಲಿಲ್ಲ.

* ವೈಯಕ್ತಿಕ ಬಯಕೆಗಳನ್ನು ಹೇಗೆ ನಿಯಂತ್ರಿಸಿಕೊಂಡಿರಿ?
ನನಗೆ ಎರಡನೇ ಮದುವೆ ಆಗು ಎಂದು ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ತುಂಬಾ ಒತ್ತಾಯಿಸಿದರು. ಆದರೆ, ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕಾರಣದಿಂದ ಮತ್ತೊಂದು ಮದುವೆಯಾಗಲಿಲ್ಲ. ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಮರುಮದುವೆ ಅಡ್ಡಿಯಾಗಬಾರದು ಎಂಬುದು ನನ್ನ ಇಂಗಿತವಾಗಿತ್ತು.

* ಒಂಟಿ ಪೋಷಕರಿಗೆ ಏನು ಹೇಳಲು ಬಯಸುತ್ತೀರಿ?
ಕಷ್ಟಗಳಿಗೆ ಹೆದರದೇ ಧೈರ್ಯವಾಗಿ ಎದುರಿಸಿ. ಆಗಿದ್ದು ಆಗಿ ಹೋಯಿತು. ಅದಕ್ಕೆ ಕೊರಗದಿರಿ. ಯಾವುದಕ್ಕೂ ಧೃತಿಗೆಡದೆ ಜೀವನ ಎದುರಿಸಿ ಎಂಬುದಷ್ಟೇ ನನ್ನ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.