ADVERTISEMENT

ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST
ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್
ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್   

ನೋಡಲವಳು ಲವ್ಲಿ ಲವ್ಲಿ...ಈ ಹಾಡು ಕೇಳಿದಾಗಲೆಲ್ಲ ದೇಹವನ್ನು ಬಳ್ಳಿಯಂತೆ ಬಳುಕಿಸುವ ಮಂಗಳೂರು ಮೂಲದ ಬೆಡಗಿ ಜೆನಿಲಿಯಾ ಡಿಸೋಜ ಚಿತ್ರ ಕಣ್ಮುಂದೆ ಹಾದು ಹೋಗುತ್ತದೆ. ಪಿಂಕಿ ಪಿಂಕಿಯಾಗಿರೋ ಈ ಬಬ್ಲಿ ಹುಡುಗಿಯ ಹಿಡಿ ಪ್ರೀತಿಗಾಗಿ ಸಾವಿರಾರು ಹುಡುಗರು ಆಕೆಯ ಬೆನ್ನುಹತ್ತಿದ್ದರು.
 
ಯಾರಿಗೂ ಸಿಗದೇ ಮಾಯಾಜಿಂಕೆಯಂತೆ ಚಂಗನೆ ಜಿಗಿದಾಡುತ್ತಿದ್ದ ಈ ಮಿಂಚುಳ್ಳಿ ಪ್ರೇಮಪಾಶದಲ್ಲಿ ಸಿಲುಕಿ ಎಂಟು ವರ್ಷಗಳೇ ಆಗಿತ್ತು. ಈಗ ಆ ಪ್ರೀತಿಗೆ ಮದುವೆಯ ರುಜು.  ಜೆನಿಲಿಯಾ ಪ್ರೇಮಪಾಶಕ್ಕೆ ಸಿಕ್ಕ ಅದೃಷ್ಟವಂತ ರಿತೇಶ್ ದೇಶ್‌ಮುಖ್. ಸಹಜವಾದ ಹಾಸ್ಯಪ್ರಜ್ಞೆ ಇರುವ ದೇಶ್‌ಮುಖ್ ಮಾತಿಗೆ ಮರುಳಾದವರ ದಂಡೇ ಚಿತ್ರೋದ್ಯಮದಲ್ಲಿದೆ.

2003ರಲ್ಲಿ `ತುಝೆ ಮೇರಿ ಕಸಮ್~ನಲ್ಲಿ ನಟಿಸಿದ ಜೋಡಿ ಈಗ ಮದುವೆಯಾಗುತ್ತಿದೆ. ಅಪ್ಪ ವಿಲಾಸ್‌ರಾವ್ ದೇಶ್‌ಮುಖ್ ರಾಜಕೀಯದಲ್ಲಿ ಸಾಗಿದರೆ, ಮಗ ಬಣ್ಣದ ಗೀಳಿಗೆ ಬಿದ್ದರು. `ಸನಮ್ ತೇರಿ ಕಸಮ್~ನಲ್ಲಿ ಜನರ ಮೊಗದಲ್ಲಿ ನಗು ಮೂಡಿಸಿ ಕಾಮಿಡಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಸಪೂರ ದೇಹದ ಜೆನಿಲಿಯಾ ಹೂನಗೆಗೆ ಇನ್ನಿಲ್ಲದ ಬೇಡಿಕೆ. `ಬಾಯ್ಸ~ ಚಿತ್ರದ ಮೂಲಕ ಗಮನ ಸೆಳೆದ ಅವರು ತೆಲುಗು. ಹಿಂದಿ, ಕನ್ನಡ, ತಮಿಳು, ಮಲೆಯಾಳಂನಲ್ಲೂ ಛಾಪು ಮೂಡಿಸಿದ್ದಾರೆ.

`ಲೈಫ್ ಸೆಟಲ್ ಆಯ್ತು. ಇನ್ನು ಉಳಿದಿರುವುದು ಮದುವೆ. ಜಾನ್ ಅಬ್ರಹಾಂ ಜೊತೆ ಮದುವೆಯಾಯ್ತು ಎಂಬ ಗಾಸಿಪ್‌ನ ಹೊಗೆ ಎದ್ದು ತಣ್ಣಾಗಾಯಿತು. ಆದರೆ ಈ ಬೆಡಗಿಯ ಎಂಟು ವರ್ಷದ ಪ್ರೇಮ ಕತೆಯ ನಾಯಕ ರಿತೇಶ್. ನಾಳೆ (ಫೆಬ್ರುವರಿ 3) ರಿತೇಶ್- ಜೆನಿಲಿಯಾ ಸಪ್ತಪದಿ ತುಳಿಯ ಲಿದ್ದಾರೆ. ಇಷ್ಟು ದಿನ ಗುಟ್ಟು ಮಾಡಿದ್ದ ಸುದ್ದಿ ಈಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ,  ಅಪ್ಸರಾ ಪ್ರಶಸ್ತಿಯ `ಬ್ಯಾಂಡ್ ಬಾಜಾ ಬಾರಾತ್~ ಕಾರ್ಯಕ್ರಮದ ಮೂಲಕ ತಮ್ಮ ಮುಚ್ಚಿಟ್ಟ ಪ್ರೀತಿಯನ್ನು ಜಗಜ್ಜಾಹೀರುಗೊಳಿಸಿದರು.

ಜೆನಿಲಿಯಾ ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಾರಂತೆ. ಮರಾಠಿ ಕುಟುಂಬದ ರಿತೇಶ್‌ಗೆ ಅವರದೇ ಸಮುದಾಯದ ಹುಡುಗಿಯನ್ನು ಮದುವೆಯಾಗು ಎಂದು ಕುಟುಂಬದವರು ಒತ್ತಾಯ ಮಾಡಿದರೂ ತನ್ನ ಪ್ರೀತಿಯನ್ನು ತೊರೆಯದೇ ಜೆನಿಲಿಯಾ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.