ADVERTISEMENT

ಮನೀಷ್ ವಿನ್ಯಾಸದ ರ್‍ಯಾಂಪ್ ಮೆರವಣಿಗೆ

ಪವಿತ್ರ ಶೆಟ್ಟಿ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಮನೀಷ್ ವಿನ್ಯಾಸದ ರ್‍ಯಾಂಪ್ ಮೆರವಣಿಗೆ
ಮನೀಷ್ ವಿನ್ಯಾಸದ ರ್‍ಯಾಂಪ್ ಮೆರವಣಿಗೆ   

ವಿಶಾಲವಾದ ವೇದಿಕೆ ಮೇಲೆ ಒಮ್ಮೆ ಶಾರುಖ್ ಖಾನ್, ಮತ್ತೊಮ್ಮೆ ವಿದ್ಯಾ ಬಾಲನ್ ರರ್‍ಯಾಂಪ್ವಾಕ್ ಮಾಡಿದಾಗ ಸೇರಿದ್ದ ಜನರೆಲ್ಲರೂ ಚಪ್ಪಾಳೆ ಹೊಡೆಯಲು ಶುರು ಮಾಡಿದರು. ಆದರೆ ಹಾಗೇ ಕಾಣಿಸಿಕೊಂಡಿದ್ದು ನಿಜವಾದ ಶಾರುಖ್, ವಿದ್ಯಾ ಬಾಲನ್ ಅಲ್ಲ. `ಓಂ ಶಾಂತಿ ಓಂ' ಸಿನಿಮಾದಲ್ಲಿ ಶಾರುಖ್ ಖಾನ್ ಸ್ಟೈಲ್‌ನಲ್ಲಿ ಒಬ್ಬ ಮಾಡೆಲ್ ಕಾಣಿಸಿಕೊಂಡರೆ, ಇನ್ನೊಬ್ಬಳು `ಡರ್ಟಿ ಪಿಕ್ಚರ್'ನ ಹಾಡಿನ ದೃಶ್ಯದಲ್ಲಿ ವಿದ್ಯಾ ಬಾಲನ್ ಹಾಕಿದ್ದ ದಿರಿಸಿನ ವಿನ್ಯಾಸದಂಥದ್ದೇ ಉಡುಗೆ ತೊಟ್ಟು ಮಿಂಚಿದಳು.

ವಿದ್ಯಾ ಬಾಲನ್ ವೇಷದಲ್ಲಿ ಬಂದ ಆ ಬೆಡಗಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಿಳಿ ಚುಕ್ಕಿ ಇರುವ ಬ್ಲೌಸ್ ಮುಂಗೈ ತನಕ ಮಾತ್ರ ಮುಚ್ಚಿತ್ತು. ಅವಳ ಹಾಲು ಬಣ್ಣದ ಹೊಟ್ಟೆ, ನಡು, ಎದೆಯ ಭಾಗ ಎದ್ದು ಕಾಣಿಸುತ್ತಿತ್ತು. ನೆರೆದಿದ್ದವರೆಲ್ಲರೂ ಕಣ್ಣು ಬಾಯಿ ಬಿಟ್ಟು ಅವಳನ್ನು ನೋಡುತ್ತಿದ್ದರು. ಬಿಳಿ ಬಣ್ಣದ ತಂಪು ಕನ್ನಡಕ ಹಾಕಿದ್ದ ಅವಳು ಥೇಟ್ ವಿದ್ಯಾ ಬಾಲನ್ ಹಾಗೆಯೇ ಕಾಣಿಸುತ್ತಿದ್ದದ್ದು ವಿಶೇಷ ಆಕರ್ಷಣೆ.

ನಗರದ ಎಂಬೆಸಿ ಗ್ರೂವ್ ಹೊಟೇಲ್‌ನಲ್ಲಿ ವಿನೂತನ ಸ್ಟೈಲ್‌ಗೆಂದೇ `ಸ್ಟೈಲ್‌ಟ್ಯಾಗ್ ಡಾಟ್ ಕಾಮ್' ಆಯೋಜಿಸಿದ್ದ ಫ್ಯಾಷನ್ ಶೋನ ಝಲಕ್ ಇದು. ಬಾಲಿವುಡ್ ನಟ-ನಟಿಯರಿಗೆ ವಸ್ತ್ರವಿನ್ಯಾಸ ಮಾಡಿ ಸೈ ಎನಿಸಿಕೊಂಡ ವಿನ್ಯಾಸಕ ಮನೀಷ್ ಮಲ್ಹೋತ್ರ ಅವರು ವಿನ್ಯಾಸ ಮಾಡಿದ ಉಡುಪುಗಳನ್ನು ತೊಟ್ಟ ರೂಪದರ್ಶಿಯರು ಅಲ್ಲಿ ಎಲ್ಲರ ಕಣ್ಮನ ತಣಿಸಿದರು.

ರಾತ್ರಿ ಹತ್ತಕ್ಕೆ ಶುರುವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದವರಲ್ಲಿ ಉನ್ನತ ವರ್ಗದವರೇ ಹೆಚ್ಚು. ಮೈಗಂಟಿದ, ತುಸು ಮೈ ತೋರುವಂತೆ ಉಡುಗೆ ತೊಟ್ಟ ಅವರನ್ನು ನೋಡುವುದೋ, ರರ್‍ಯಾಂಪ್ಮೇಲೆ ನಡೆದಾಡುವ ರೂಪದರ್ಶಿಯರನ್ನು ನೋಡುವುದೋ ಎಂದು ಗೊಂದಲಕ್ಕೆ ಬಿದ್ದವರೂ ಅಲ್ಲಿದ್ದರೆನ್ನಿ. ಪದೇಪದೇ ಟ್ರೇಯಲ್ಲಿ ತಿಂಡಿ ಹಿಡಿದುಕೊಂಡು ಬಂದು ಎಲ್ಲರಿಗೂ ನೀಡುವ ಪರಿಚಾರಕರ ಮುಖದ ನಗು ಮಾಸಲೇ ಇಲ್ಲ. ಪಾನಪ್ರಿಯರಿಗೆ ತಂಪು ಪಾನೀಯವಲ್ಲದೆ ಬಿಯರ್, ವೈನ್ ಆಯ್ಕೆ ಇತ್ತು. ದೊಡ್ಡ ವೇದಿಕೆ. ಅದರ ಅಕ್ಕಪಕ್ಕ ಅತಿಥಿಗಳು ಕುಳಿತುಕೊಳ್ಳಲು ವ್ಯವಸ್ಥೆ. ಒಂದು ಕಡೆ ದೊಡ್ಡ ದನಿಯ ಸಂಗೀತ. ಮತ್ತೊಂದು ಕಡೆ ಕಲಾಕೃತಿಗಳ ಹರಾಜು ಪ್ರಕ್ರಿಯೆ. ನಗರದ `ಒನ್ ನೈಟ್ ಸ್ಟ್ಯಾಂಡ್' ಬ್ಯಾಂಡ್‌ನ ರಾಕ್, ರೆಟ್ರೋ ಮತ್ತು ಜಾಸ್ ವಾತಾವರಣಕ್ಕೆ ಕಳೆ ಕಟ್ಟಿತ್ತು. ಹೊರಗಡೆಯ ಮಳೆಗೆ ಒಳಗಡೆಯ ಸಂಗೀತ ಸಾಥ್ ನೀಡಿತ್ತು.

ಅಷ್ಟು ಹೊತ್ತು ಕಾಯುತ್ತಿದ್ದವರು ಫ್ಯಾಷನ್ ಶೋ ಶುರುವಾಗುತ್ತಿದ್ದಂತೆ ತಮ್ಮ ಜಾಗದಲ್ಲಿ ಆಸೀನರಾದರು. ಬೂದು ಬಣ್ಣದ ಗಾಗ್ರಾ ಚೋಲಿ ಹಾಕಿಕೊಂಡ ನೀಳ ಕಾಯದ ಸುಂದರಿ ವೇದಿಕೆಯ ಒಂದು ಕಡೆ ಬಂದು ನಿಂತಳು. ಅವಳಿಗೆ ಎದುರಾಗಿ ಅವಳಷ್ಟೇ ಎತ್ತರದ ಚಿಗುರು ಮೀಸೆಯ ಹುಡುಗ ಕುರ್ತಾ ಪೈಜಾಮಾ ಹಾಕಿಕೊಂಡು ಬಂದು ನಿಂತ. ಅವರ ಕಣ್ಣುಗಳು ಸಂಧಿಸಿ ಅಲ್ಲಿಯೇ ಮುಗುಳುನಗೆ ಬೀರಿದರು. ಮದುಮಕ್ಕಳಂತೆ ನಿಧಾನವಾಗಿ ನಡೆದು ಬರುತ್ತಿದ್ದ ಅವರನ್ನು ಜನರು ಕಣ್ಣೆವೆಯಿಕ್ಕದೆ ನೋಡುತ್ತಿದ್ದರು. ಹಿನ್ನೆಲೆಯಲ್ಲಿ `ಗಾತಾ ರಹೇ ಮೇರಾ ದಿಲ್' ಹಾಡು ಅವರ ಹೆಜ್ಜೆಗೆ ತಕ್ಕಂತೆ ಮೂಡಿಬರುತ್ತಿತ್ತು. ಆ ಬೆಡಗಿ ಹಿಂದೆ ತಿರುಗಿದಾಗ ಅವಳ ಬಲೆ ಶೈಲಿಯ ರವಿಕೆಯ ಮೇಲೆ ಹೆಂಗಳೆಯರ ಕಣ್ಣು ನಾಟಿತ್ತು.

ಗಾಗ್ರಾದಷ್ಟೇ ಸೊಗಸಾಗಿ ಸೀರೆ ಮತ್ತು ಚೂಡಿದಾರದ ವಿನ್ಯಾಸ ಕೂಡ ಮೆಚ್ಚುಗೆ ಗಳಿಸಿದ್ದವು. ರೂಪದರ್ಶಿಗಳು ಧರಿಸಿದ್ದ ಉಡುಪಿನ ಮೇಲೆ ಬಿಳಿ ಬಣ್ಣದ ಹೂವುಗಳ ಚಿತ್ತಾರವಿತ್ತು. ಕೆಲವು ದಿರಿಸುಗಳು ನೋಡಲು ಸರಳವಾಗಿದ್ದರೂ ವಿನ್ಯಾಸ ವಿಶೇಷವಾಗಿತ್ತು. ಬೂದು ಬಣ್ಣದ ಉಡುಪಿನಲ್ಲಿ ಒಂದು ಬಾರಿ ರರ್‍ಯಾಂಪ್ ಏರಿ ಬಂದ ರೂಪದರ್ಶಿಗಳು ಇನ್ನೊಮ್ಮೆ ಗುಲಾಬಿ ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡರು. ಹಳೆಯ ಹಿಂದಿ ಹಾಡುಗಳು ರೂಪದರ್ಶಿಗಳ ಹೆಜ್ಜೆಗೆ ಸಾಥ್ ನೀಡಿದ್ದು ಅಲ್ಲಿದ್ದವರ ಗಮನ ಸೆಳೆದಿತ್ತು.

ಕೊನೆಯದಾಗಿ ಎಲ್ಲ ಮಾಡೆಲ್‌ಗಳು ಒಟ್ಟಾಗಿ ವೇದಿಕೆಯ ಮೇಲೆ ಬಂದು ಸಾಲಾಗಿ ಹೋಗುತ್ತಿದ್ದ ದೃಶ್ಯ ಮಾತ್ರ ಯಾವುದೋ ಮದುವೆ ಮನೆ ದಿಬ್ಬಣಕ್ಕೆ ಹೊರಟವರಂತೆ ಅವರು ಕಾಣಿಸುತ್ತಿದ್ದರು. ಅವರ ಮಧ್ಯೆ ಬಂದ ಮನೀಷ್ ಸರಳವಾದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. 

ಬ್ಯುಸಿ ವಿನ್ಯಾಸಕ
ವೇದಿಕೆಯ ಮೇಲೆ ಐದು ನಿಮಿಷವೂ ನಿಲ್ಲದ ಮನೀಷ್ ತುಂಬಾ ಬ್ಯುಸಿ ವಿನ್ಯಾಸಕ. ಅವರು ವಿನ್ಯಾಸ ಮಾಡಿದ ಉಡುಪುಗಳನ್ನು `ರಂಗೀಲಾ' ಹಿಂದಿ ಚಿತ್ರದಲ್ಲಿ ಊರ್ಮಿಳಾ ಹಾಕಿಕೊಂಡು ಮೆರೆದರೆ, `ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದಲ್ಲಿ ಕಾಜೋಲ್ ಹಾಕಿಕೊಂಡು ಕುಣಿದಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಶಾರೂಖ್ ಖಾನ್, ಇಮ್ರಾನ್ ಖಾನ್‌ಗೂ ವಸ್ತ್ರ ವಿನ್ಯಾಸ ಮಾಡಿದ ಅನುಭವ ಇವರದ್ದು. ಇತ್ತಿಚೆಗಷ್ಟೇ ಬಿಡುಗಡೆಯಾದ `ಯೇ ಜವಾನಿ ಹೈ ದೀವಾನಿ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ವಸ್ತ್ರವಿನ್ಯಾಸ ಮಾಡ್ದ್ದಿದು ಇವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT