ಪಂಡಿತ್ ಭೀಮಸೇನ ಜೋಶಿ ಎನ್ನುವ ಹೆಸರು ಪ್ರಸ್ತಾಪವಾದ ಕೂಡಲೇ ಸಂಗೀತ ಪ್ರೇಮಿಗಳ ಕಿವಿ ನಿಮಿರುತ್ತದೆ. ಹೆಸರಿಗೆ ತಕ್ಕಂತೆ ಸಂಗೀತದಲ್ಲೂ ‘ಭೀಮ ಛಾಪು’ ಮೂಡಿಸಿದ್ದ ಜೋಶಿಯವರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಕಳೆ ತಂದವರು; ಆನೆ ನಡೆದ ಹಾದಿಯಂತೆ ತಮ್ಮದೇ ಘರಾನಾ ರೂಪಿಸಿಕೊಂಡು ವಿಶ್ವದಾದ್ಯಂತ ತಮ್ಮ ಸಂಗೀತದ ಸುಧೆ ಉಣಿಸಿದವರು. ಅಭಿಮಾನಿಗಳ ಪಾಲಿಗವರು ‘ಹಿಂದುಸ್ತಾನಿ ಸಂಗೀತದ ದಂತಕಥೆ’. ಇಂಥ ಮೇರು ಪ್ರತಿಭೆಯನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ‘ಪಂಡಿತ್ ಭೀಮಸೇನ ಜೋಶಿ ಗಾನವೈಭವ’.
‘ವಸಂತ ಪ್ರಕಾಶನ’ ಹಮ್ಮಿಕೊಂಡಿರುವ ಈ ‘ಗಾನವೈಭವ’ ಮಾತಿನ ಮಂಟಪದ ಶ್ರದ್ಧಾಂಜಲಿ ಕಾರ್ಯಕ್ರಮವಲ್ಲ. ಇದು ಪಂಡಿತ್‌ಜಿ ಅವರನ್ನು ಅವರ ಶರೀರ- ಶಾರೀರದ ದರ್ಶನದ ಮೂಲಕ ನೆನಪಿಸುವ ಕಾರ್ಯಕ್ರಮ. ಇಲ್ಲಿ ಅವರ ಉತ್ತುಂಗದ ದಿನಗಳ ಸಂಗೀತ ಕಛೇರಿಯ ಆಯ್ದ ವಿಡಿಯೊ ತುಣುಕುಗಳ ಪ್ರದರ್ಶನ ಇರುತ್ತದೆ. ಪಂಡಿತ್‌ಜಿಯನ್ನು ಕಣ್ತುಂಬಿಕೊಳ್ಳುತ್ತಲೇ ಅವರ ಕಂಠಸಿರಿಯನ್ನು ಎದೆತುಂಬಿಕೊಳ್ಳುವ ಅಪೂರ್ವ ಅವಕಾಶವಿದು.
ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ವಿಡಿಯೊಗಳನ್ನು ಖಾಸಗಿ ಸಂಗ್ರಹದಿಂದ ಪ್ರದರ್ಶನಕ್ಕಾಗಿ ಆರಿಸಿಕೊಳ್ಳಲಾಗಿದೆ. ಭೀಮಸೇನರ ಅಚ್ಚುಮೆಚ್ಚಿನ ರಾಗಗಳನ್ನೇ ಆರಿಸಿಕೊಂಡು ಪ್ರಸ್ತುತ ಪಡಿಸುತ್ತಿರುವುದು ವಿಶೇಷ. ತೋಡಿ, ರಾಮಕಲಿ, ಪುರಿಯಾ ಧನಾಶ್ರೀ, ಮುಲ್ತಾನಿ, ದರ್ಬಾರಿ, ಮಾಲಕೌಂಸ್, ಮಾರುಬಿಹಾಗ್, ಮಿಯಾಮಲ್ಹಾರ್- ಹೀಗೆ ಭೀಮಸೇನರ ಸಾಧನೆಯನ್ನು ಸ್ವರಗಳೇ ತಿಳಿಸಿಕೊಡುವ ಕಾರ್ಯಕ್ರಮವಿದು. ‘ಭೀಮಸೇನ ಜೋಶಿ ಗಾನವೈಭವ’ ಕಾರ್ಯಕ್ರಮದ ಹಿಂದೆ ಮತ್ತೊಂದು ಉದ್ದೇಶವೂ ಇದೆ. ಹೊಸ ತಲೆಮಾರಿನ ಸಂಗೀತಪ್ರೇಮಿಗಳಿಗೆ ಭೀಮಸೇನ ಜೋಶಿ (ಫೆ. 4,1920- ಜ. 24, 2011) ಅವರು ಧ್ವನಿಮುದ್ರಿಕೆಗಳ ಮೂಲಕವಷ್ಟೇ ಗೊತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಜೋಶಿಯವರು ಕಛೇರಿ ನೀಡುವುದನ್ನು ಬಿಟ್ಟು ವರ್ಷಗಳೇ ಆಗಿದ್ದವು. ಹಾಗಾಗಿ, ಪಂಡಿತ್‌ಜಿ ಅವರ ಕಛೇರಿಯ ಅನುಭವವನ್ನು ಹೊಸ ತಲೆಮಾರಿನ ಸಂಗೀತಪ್ರೇಮಿಗಳಿಗೆ ಕಟ್ಟಿಕೊಡುವ ಪ್ರಯತ್ನ ಇದು.
ವಸಂತ ಪ್ರಕಾಶನ: ಶನಿವಾರ ಗಾನವೈಭವ. ಭೀಮಸೇನ ಜೋಶಿಯವರ ಸಂಗೀತ ಮತ್ತು ಮಾತಿನ ಧ್ವನಿಮುದ್ರಿಕೆ ಹಾಗೂ ವಿಡಿಯೊ ಪ್ರದರ್ಶನ. ಅವರ ಬದುಕು-ಸಾಧನೆ ಕುರಿತು ಕಥೆಗಾರ ಎಸ್.ದಿವಾಕರ್ ಬರೆದ ‘ಪಂಡಿತ್ ಭೀಮಸೇನ ಜೋಶಿ’ ಕೃತಿ ಲೋಕಾರ್ಪಣೆ. ಅತಿಥಿಗಳು: ಪಂಡಿತ್ ಪರಮೇಶ್ವರ ಹೆಗಡೆ, ಇತಿಹಾಸಕಾರ ಡಾ. ರಾಮಚಂದ್ರ ಗುಹಾ, ಪ್ರಜಾವಾಣಿ ಸಂಪಾದಕ ಕೆ. ಎನ್. ಶಾಂತಕುಮಾರ್.
ಸ್ಥಳ: ಗಾಯನ ಸಮಾಜ, ಕೆ. ಆರ್. ರಸ್ತೆ, ಚಾಮರಾಜಪೇಟೆ. ಸಂಜೆ 6. ಮಾಹಿತಿಗೆ: 98863 99125, 99862 11308.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.