ADVERTISEMENT

ಮಲ್ಲೇಶ್ವರದ ನಾಡಿಗಳಲ್ಲಿ ಹೋರಾಟದ ನೆನಪು

ಹೇಮಾ ವೆಂಕಟ್
Published 6 ಏಪ್ರಿಲ್ 2017, 5:18 IST
Last Updated 6 ಏಪ್ರಿಲ್ 2017, 5:18 IST
ಗಾಂಧಿಭವನದಲ್ಲಿ ಗಾಂಧೀಜಿ ಪ್ರತಿಮೆಯ ಎದುರು ಹೊ.ಶ್ರೀನಿವಾಸಯ್ಯ 	-ಚಿತ್ರಗಳು: ವಿಶ್ವನಾಥ ಸುವರ್ಣ
ಗಾಂಧಿಭವನದಲ್ಲಿ ಗಾಂಧೀಜಿ ಪ್ರತಿಮೆಯ ಎದುರು ಹೊ.ಶ್ರೀನಿವಾಸಯ್ಯ -ಚಿತ್ರಗಳು: ವಿಶ್ವನಾಥ ಸುವರ್ಣ   

ನಮ್ಮ ಮನೆ ಶೇಷಾದ್ರಿಪುರದ ಕಿನೋ ಥಿಯೇಟರ್‌ ಬಳಿ ಇತ್ತು. ಆಗ ಮಲ್ಲೇಶ್ವರದ ಬಳಿಯ ಮದ್ರಾಸು ರೈಲ್ವೆ ಲೇನ್‌ ಬೆಂಗಳೂರು ನಗರದ ಕೊನೆ ಆಗಿತ್ತು. ಅಲ್ಲಿಂದಾಚೆ ಬರೇ ಕಾಡು. ಶಿವರಾತ್ರಿ ದಿನ ನರಿಗಳನ್ನು ಓಡಿಸಲು ತಮಟೆ ಹೊಡೆಯುತ್ತಿದ್ದರು. ಸ್ಯಾಂಕಿ ಕೆರೆಯಿಂದ ಕೋಡಿ ಹರಿಯುತ್ತಿತ್ತು. ಸ್ಯಾಂಕಿಯ ನೀರು ಐದು ಕೆರೆಗಳಿಗೆ ಸೇರುತ್ತಿತ್ತು. ಈಗ ಆ ಕೋಡಿ ಮೋರಿಯಾಗಿದೆ.

1905ರಲ್ಲಿ ಇಡೀ ಬೆಂಗಳೂರು ನಗರಕ್ಕೆ ಕಾಲರಾ ಬಂದಿತ್ತಂತೆ. ಆಗ ಜನರೆಲ್ಲ ಊರಾಚೆ ಟೆಂಟ್‌ ಹಾಕಿಕೊಂಡಿದ್ದರಂತೆ. ಆಗ ಸರ್ಕಾರ ಊರಾಚೆ ಬಡಾವಣೆಗಳನ್ನು ನಿರ್ಮಾಣ ಮಾಡಿತು. ಆ ಬಡಾವಣೆಗಳೇ ಈಗಿನ ಚಾಮರಾಜಪೇಟೆ ಮತ್ತು ಮಲ್ಲೇಶ್ವರ. ಕೇವಲ 30 ರೂಪಾಯಿಗೆ 67X100 ಅಡಿಯ ಸೈಟುಗಳು. ಯಾರು ಎಷ್ಟು ಸೈಟು ಬೇಕಿದ್ದರೂ ಕೊಳ್ಳಬಹುದಿತ್ತು. ನಮ್ಮಪ್ಪ 2 ಸೈಟುಗಳನ್ನು ಕೊಂಡು ಸಣ್ಣ ಮನೆ ಕಟ್ಟಿದ್ದರು.

ಸಂಪಿಗೆ ರಸ್ತೆಯ ಆಚೆಗೆ ಬಂಗ್ಲೆ ಸೈಟುಗಳು ಇದ್ದವು. ಒಂದೊಂದು ಸೈಟು ಒಂದೊಂದು ಎಕರೆಯಷ್ಟು  ದೊಡ್ಡದಿತ್ತು. ದಿವಾನರು, ದೊಡ್ಡ ಅಧಿಕಾರಿಗಳು ಅಲ್ಲಿ ಸೈಟು ಕೊಳ್ಳುತ್ತಿದ್ದರು. ದಿವಾನ್‌ ಪೂರ್ಣಯ್ಯನವರೂ  ಅಲ್ಲಿ ಸೈಟುಕೊಂಡು ಮನೆ ಕಟ್ಟಿದ್ದರು.

ನನ್ನಪ್ಪ ಹೊನ್ನಪ್ಪ ಅವರು ಆಗ ದಿವಾನ್‌ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಬಳಿ ದಫೇದಾರ್‌ ಆಗಿದ್ದವರು. ವಿಶ್ವೇಶ್ವರಯ್ಯ ಟವರ್‌ ಬಳಿಯೇ ದಿವಾನರ ಮನೆ ಇತ್ತು. 1918ರಲ್ಲಿ ವಿಶ್ವೇಶ್ವರಯ್ಯ ಅವರು ದಿವಾನಗಿರಿಗೆ ರಾಜೀನಾಮೆ ನೀಡುವ ಹಿಂದಿನ ದಿನ, ಐವರು ದಫೇದಾರರನ್ನು ಕರೆದು ‘ನಾಳೆಯಿಂದ ನಾನು ದಿವಾನನಾಗಿ ಇರಲ್ಲ.

ಕೆಂಪೇಗೌಡ ಟವರ್‌ವರೆಗೂ ಬೆಂಗಳೂರು ನಗರ ವಿಸ್ತರಿಸುತ್ತೆ. ನಿಮಗೆ ಎಷ್ಟು  ಬೇಕೋ ಅಷ್ಟು ಜಮೀನು ಇವತ್ತು ಸಂಜೆಯೇ ಬರೆಸಿಕೊಡುತ್ತೇನೆ. ಹೋಗಿ ನೋಡಿಕೊಂಡು ಬನ್ನಿ ಎಂದರಂತೆ’. ನಮ್ಮಪ್ಪ ಜಮೀನು ನೋಡಿ ಬಂದು ‘ಸ್ವಾಮಿ ಆ ಕಾಡು ನಂಗೆ ಬೇಡ, ನಿಮ್ಮ ಸೇವೆಯೇ ಸಾಕು’ ಎಂದಿದ್ದರಂತೆ.ನಂತರ ವಿಶ್ವೇಶ್ವರಯ್ಯನವರು ಉತ್ತಮ ನಡತೆಯ ಪ್ರಮಾಣಪತ್ರದ ಜೊತೆಗೆ ಎಲ್ಲರಿಗೂ ಒಂದೊಂದು ಬೆಳ್ಳಿಯ ಪದಕ ಕೊಟ್ಟಿದ್ದರು. ಅಪ್ಪ ತೀರಿಹೋದ ಮೇಲೆ ನನ್ನಮ್ಮ ಅದನ್ನು ಮಾರಾಟ ಮಾಡಿ ಮಗಳಿಗೆ ಆಭರಣ ಕೊಂಡಿದ್ದರು.  

1945ರಲ್ಲಿ ನಾನು ಎಂಜಿನಿಯರಿಂಗ್‌ ಓದುತ್ತಿದ್ದಾಗ ವಿದ್ಯಾರ್ಥಿವೇತನಕ್ಕೆ  ಅರ್ಜಿ ಹಾಕಲು ವಿಶ್ವೇಶ್ವರಯ್ಯನವರಿಂದ ಶಿಫಾರಸು ಪತ್ರ ಪಡೆಯಲು ಹೋಗಿದ್ದೆ.‘ಹೊನ್ನಪ್ಪನ ಮಗನಾ. ನಾಳೆ ಬಂದು ಕಾಣು’ ಎಂದು  ಹೇಳಿ ಕಳಿಸಿದ್ರು. ನಾನು ಮತ್ತೆ ಹೋಗಿರಲಿಲ್ಲ. ಒಂದು ತಿಂಗಳಾದ ನಂತರ ಅವರ ಸಹಾಯಕ ಸಿಕ್ಕು, ‘ಯಾಕೆ ಸಾಹೇಬರನ್ನು ಕಾಣಲು ಬರಲಿಲ್ಲ’ ಎಂದು ಕೇಳಿದ. ‘ಅವರು ಪತ್ರ ಕೊಡಲಿಲ್ಲ. ನಾನೇಕೆ ಸುಮ್ಮನೆ ಅವರನ್ನು ನೋಡಲು ಬರಲಿ’ ಎಂದೆ. ‘ದಡ್ಡ ನೀನು. ಸಾಹೇಬ್ರು ಐದು ಸಾವಿರ ರೂಪಾಯಿಯನ್ನು ಕವರ್‌ನಲ್ಲಿ ಹಾಕಿ ನಿನಗೆ ಕೊಡಲು ನನ್ನ ಬಳಿ ಕೊಟ್ಟಿದ್ದರು’ ಎಂದ.  ವಿಶ್ವೇಶ್ವರಯ್ಯನವರು ಯಾರಿಗೂ  ಲೆಟರ್‌ ಕೊಡುತ್ತಿರಲಿಲ್ಲ.  ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು.
***
ಮಲ್ಲೇಶ್ವರದಲ್ಲಿ ಪಡಂಕರ್‌ ಅಂತ ಚೀಫ್‌ ಎಂಜಿನಿಯರ್‌ ಇದ್ದರು. ಅವರು ವಾಸವಿದ್ದ ಮನೆಯಲ್ಲಿ ಶಿಕ್ಷಕರ ತರಬೇತಿ ಕೇಂದ್ರ ಆರಂಭಿಸಲಾಯಿತು.  ಅಲ್ಲಿಯೇ ‘ಡಿಸ್ಟ್ರಿಕ್ಟ್‌ ನಾರ್ಮಲ್‌ ಸ್ಕೂಲ್‌’ ನಡೆಸುತ್ತಿದ್ದರು.  1930–31ರಲ್ಲಿ ನಾನು ಅಲ್ಲಿಗೆ ಸೇರಿದೆ. ಈಗ ಅದು ಗರ್ಲ್ಸ್‌ ಹೈಸ್ಕೂಲ್‌ ಆಗಿದೆ.ಮಲ್ಲೇಶ್ವರದ ಮಿಡ್ಲ್ ಸ್ಕೂಲ್‌ನಲ್ಲಿ ಎಲ್‌.ಎಸ್‌. ಶೇಷಗಿರಿರಾಯರ  ತಂದೆ ನನಗೆ ಹೆಡ್‌ಮೇಷ್ಟ್ರಾಗಿದ್ದರು. ಈಗ ಪಿಯು ಬೋರ್ಡ್‌ ಇರುವ ಕಟ್ಟಡ ಆಗ ಹೈಸ್ಕೂಲ್ ಆಗಿತ್ತು. ಪಕ್ಕದಲ್ಲಿಯೇ ನಮ್ಮ ಮನೆ ಇತ್ತು.

ಪಿಯುಗೆ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು (ಗ್ಯಾಸ್‌) ಸೇರಿದೆ. ಮಲ್ಲೇಶ್ವರದಿಂದ ಒಂದಷ್ಟು ಗೆಳೆಯರು ಸೇರಿ ನಡೆದೇ ಕಾಲೇಜಿಗೆ ಬರುತ್ತಿದ್ದೆವು. 1942ರ ಸ್ವಾತಂತ್ರ್ಯ ಹೋರಾಟದ ಕಾವು ಜೋರಾಗಿತ್ತು. ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಚಳವಳಿಗೆ ಧುಮುಕಿದ್ದರು. ಮೆರವಣಿಗೆ, ಘೋಷಣೆ ಕೂಗುವುದು ಎಲ್ಲ ಮಾಡುತ್ತಿದ್ದೆವು. ಆಗಲೇ ನಾನು ಭೂಗತ ಪತ್ರಿಕೆಗಳನ್ನು ಹಂಚುತ್ತಿದ್ದೆ.

ಪಿಯು ಮುಗಿದ ನಂತರ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದೆ.  ನಾನು ಸಿವಿಲ್‌ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ನನ್ನ ಗೆಳೆಯ ಗಣೇಶ ಮೆಕ್ಯಾನಿಕಲ್‌ ವಿಭಾಗ ಆಯ್ಕೆ ಮಾಡಿಕೊಂಡಿದ್ದ. ‘ನೀನೂ ಮೆಕ್ಯಾನಿಕಲ್‌ ಮಾಡು’ ಎಂದು ಒತ್ತಾಯಿಸಿದ್ದ. ಕಾಲೇಜಿಗೆ ದಾಖಲಾಗುವ  ದಿನ ಸರತಿಯಲ್ಲಿ ನಿಂತು ಪ್ರಾಂಶುಪಾಲರ ಕರೆಗೆ ಕಾಯುತ್ತಿದ್ದೆವು.

‘ಶ್ರೀನಿವಾಸ– ಸಿವಿಲ್‌ ವಿಭಾಗ’ ಎಂದು ಪ್ರಾಂಶುಪಾಲರು ಹೇಳುತ್ತಿದ್ದಂತೆ, ‘ಅಲ್ಲ, ಮೆಕ್ಯಾನಿಕಲ್‌’ ಎಂದೆ. ‘ಯಾಕೋ ಸಿವಿಲ್‌ಗೆ ಅರ್ಜಿ ಹಾಕಿದ್ಯಲ್ಲೋ’ ಅಂದ್ರು. ‘ಬೇಡ ಸಾರ್‌ ಮೆಕ್ಯಾನಿಕಲ್‌ ಇರಲಿ’ ಎಂದೆ. ಸರಿ ಎಂದು  ನನ್ನ ಹೆಸರಿನ ಮುಂದೆ ಮೆಕ್ಯಾನಿಕಲ್‌ ಅಂತ ಬರೆದು ಕಳಿಸಿದ್ರು. ಪ್ರಾಂಶುಪಾಲರು ಮೆಕ್ಯಾನಿಕಲ್‌   ಎಂಜಿನಿಯರಿಂಗ್‌ ಮಾಡಿದ್ದರು. ಆಗ ಆ ವಿಭಾಗ ಆಯ್ದುಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಇದರಿಂದ ಅವರಿಗೂ ಖುಷಿಯಾಗಿತ್ತು. ಹೀಗೆ ನಾನು ಮೆಕ್ಯಾನಿಕಲ್‌ ಎಂಜಿನಿಯರ್‌ ಆದೆ.

1943ರಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರಗೊಂಡ ಪರಿಣಾಮವಾಗಿ ಮೂರು ತಿಂಗಳು ಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು.  ‘ವಂದೇ ಮಾತರಂ’ ಘೋಷಣೆ ಕೂಗದಂತೆ ಬ್ರಿಟಿಷರು ನಿಷೇಧ ಹೇರಿದ್ದರು. ಆದರೂ ವಿದ್ಯಾರ್ಥಿಗಳೆಲ್ಲ ಸೇರಿ ಮಲ್ಲೇಶ್ವರ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತಿದ್ದೆವು. ಬೆಳಿಗ್ಗೆ ಪ್ರಭಾತ್‌ಪೇರಿ  ನಡೆಸುತ್ತಿದ್ದೆವು. ಕರಪತ್ರ ಹಂಚುವುದು, ಭೂಗತ ಪತ್ರಿಕೆಗಳನ್ನು ಹೊರತರುವುದು ನಿಂತಿರಲಿಲ್ಲ.

ನಾವು ಮೆರವಣಿಗೆ ಹೋಗುವಾಗ ಬ್ರಿಟಿಷರು ಕುದುರೆ ಮೇಲೆ ಬಂದು ಲಾಠಿ ಬೀಸುತ್ತಿದ್ದರು. ನಾವು ರಸ್ತೆ ಮೇಲೆ ರಾಗಿ ಚೆಲ್ಲಿ ಕುದುರೆಗಳು ಜಾರಿ ಬೀಳುವಂತೆ ಮಾಡುತ್ತಿದ್ದೆವು. ನಾನು ಕೆಲವೊಮ್ಮೆ ಪುಂಡಾಟಿಕೆಯನ್ನೂ ಮಾಡುತ್ತಿದ್ದೆ.

ಮಲ್ಲೇಶ್ವರದ 6ನೇ ಕ್ರಾಸ್‌ನಲ್ಲಿ ಮೆರವಣಿಗೆ ಹೋಗುತ್ತಿದ್ದಾಗ  ನಡೆದ ಗೋಲಿಬಾರ್‌ನಲ್ಲಿ ಆರನೇ ಕ್ಲಾಸಿನ ಹುಡುಗನೊಬ್ಬ ಮೃತಪಟ್ಟಿದ್ದ. ಮದ್ರಾಸ್‌ ಪೊಲೀಸರು ನಮಗೆ ಮನ ಬಂದಂತೆ ಹೊಡೆಯುತ್ತಿದ್ದರು.

ಪೋಲಿ ಅಲೆಯುವುದು ನಿಲ್ಲಿಸಿ ಎಂದ ಶರ್ಮ
ಅಲ್ಲಿಯವರೆಗೂ ನಮ್ಮ ಚಳವಳಿಗೊಂದು ಸ್ಪಷ್ಟತೆ ಇರಲಿಲ್ಲ. ನಮ್ಮ ಎಲ್ಲ ಚಟುವಟಿಕೆಗಳನ್ನು ಗಮನಿಸಿದ ಸಿದ್ಧವನಹಳ್ಳಿ ಕೃಷ್ಣ ಶರ್ಮ ಅವರು   ಒಮ್ಮೆ ನಮ್ಮನ್ನು ಕರೆದು, ‘ಸುಮ್ಮನೆ ಹೀಗೆಲ್ಲ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಏನಾದರೂ ರಚನಾತ್ಮಕ ಕೆಲಸ ಮಾಡಿ. ಪೋಲಿ ಅಲೆಯುವುದನ್ನು ನಿಲ್ಲಿಸಿ. ಗಾಂಧಿ ಹೆಸರಿನಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು. ಅವರ ಮಾತಿಗೆ ಬೆಲೆಕೊಟ್ಟು 1942ರಲ್ಲಿ ನಾವೆಲ್ಲ ಸೇರಿ ಹುಟ್ಟು ಹಾಕಿದ್ದು ‘ಗಾಂಧಿ ಸಾಹಿತ್ಯ ಸಂಘ’.

ಗಾಂಧಿ ಜಯಂತಿ ಆಚರಿಸುವುದು,  ವಯಸ್ಕರ ಶಿಕ್ಷಣ, ಖಾದಿ ಮಾರುವುದು  ಮುಂತಾದ ಚಟುವಟಿಕೆಗಳನ್ನು ಶುರು ಮಾಡಿದೆವು. ಪಡಿತರ ಪಡೆಯಲು ಬರುವ ಜನರನ್ನು ಸರತಿಯಲ್ಲಿ ನಿಲ್ಲಿಸುವುದೂ ಸೇರಿದಂತೆ ಹಲವು ಸ್ವಯಂ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೆವು. ಪುಸ್ತಕ,  ಖಾದಿ ಬಟ್ಟೆ ಮಾರುವುದು, ಗಾಂಧಿ ಜಯಂತಿಗೆ ಸ್ಪರ್ಧೆಗಳನ್ನು ನಡೆಸುವುದು ಮುಂತಾದ ಚಟುವಟಿಕೆಗಳನ್ನು ನಡೆಸುತ್ತಿದ್ದೆವು. 1945ರಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಉಳಿದ 125 ರೂಪಾಯಿಯಿಂದ 25 ಪುಸ್ತಕ ಕೊಂಡು  ನಮ್ಮ ಮನೆಯಲ್ಲಿಯೇ ಗಾಂಧಿ ಸಾಹಿತ್ಯ ಸಂಘ ಸ್ಥಾಪಿಸಿ ಅಲ್ಲಿ ಇಟ್ಟೆವು.

ಈಗ ರಾಮಕೃಷ್ಣ ಆಶ್ರಮದಲ್ಲಿರುವ  ಹರ್ಷಾನಂದ ಸ್ವಾಮೀಜಿ ನನಗಿಂತ 2 ವರ್ಷ ಕಿರಿಯರು. ಆ ದಿನಗಳಲ್ಲಿ ಅವರೂ ನಮ್ಮ ಜೊತೆ ಚಳವಳಿಯಲ್ಲಿದ್ದರು. ಜಿ.ಪಿ. ರಾಜರತ್ನಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಗೋಪಾಲಕೃಷ್ಣ  ಅಡಿಗ ಅವರೆಲ್ಲರೂ ಗಾಂಧಿ ಸಾಹಿತ್ಯ ಸಂಘಕ್ಕೆ ಆಗಾಗ ಬರುತ್ತಿದ್ದರು.

ಕ್ರಿಮಿನಲ್‌ ನೋಟಿಸ್‌
ಗಾಂಧಿ ಜಯಂತಿ ಆಚರಿಸಲು ಜಿಲ್ಲಾಧಿಕಾರಿಯಿಂದ ಅನುಮತಿ ತೆಗೆದುಕೊಳ್ಳಬೇಕಿತ್ತು. ಗಾಂಧಿ ವಿಚಾರ ಬಿಟ್ಟು ಬೇರೇನೂ ಮಾತನಾಡಬಾರದು ಎಂಬ ನಿಯಮ ಹೇರಿದ್ದರು. ಭಾಷಣಕಾರರನ್ನು ಆಹ್ವಾನಿಸುವಾಗ ಈ ವಿಚಾರ ತಿಳಿಸಿಯೇ ಕರೆ ತರುತ್ತಿದ್ದೆವು. ಆದರೂ, ಕೋಲಾರದ ಲಿಂಗಾರೆಡ್ಡಿ ಎಂಬುವವರು ಭಾಷಣದಲ್ಲಿ ಸರ್ಕಾರದ ವಿರುದ್ಧ ಮಾತನಾಡಿದ್ದರು. ನಮಗೆ ಕ್ರಿಮಿನಲ್‌ ನೋಟಿಸ್‌ ಬಂದಿತ್ತು. ಡಿ.ಸಿ ಕಚೇರಿಗೆ ಕರೆಸಿದ್ದರು. ನಾನು ಹೋದೆ. ‘ನಿನ್ನನ್ನು ಜೈಲಿಗೆ ಹಾಕುತ್ತೇವೆ’ ಎಂದರು. ಎಂಜಿನಿಯರಿಂಗ್‌ ವಿದ್ಯಾರ್ಥಿ ಎಂದು ಗೊತ್ತಾದ ಕೂಡಲೇ, ‘ಸುಮ್ಮನೆ ಓದಿನ ಕಡೆಗೆ ಗಮನ ಹರಿಸು. ಗಲಾಟೆ ಮಾಡಿ ಜೈಲಿಗೆ ಹೋದರೆ ನೀನು ಎಂಜಿನಿಯರ್‌ ಆಗುವುದು ಹೇಗೆ’ ಎಂದು ಬುದ್ಧಿ ಹೇಳಿ ಕಳಿಸಿದ್ದರು.

ಲಾಠಿ ಏಟು, ಸಸ್ಪೆಂಡ್‌ ನೋಟಿಸು
1944ರಲ್ಲಿ ನಾರಿಮನ್‌ ಭಾಷಣ ಕೇಳಲು ಹೋಗಿದ್ದೆ. ಅಲ್ಲಿ ಲಾಠಿ ಏಟು ತಿಂದಿದ್ದೆ. 1946ರಲ್ಲಿ ರಾಮಸ್ವಾಮಿ ಮೊದಲಿಯಾರ್‌ ಅವರು ಭಾಷಣ ಮಾಡುವಾಗ ಗಲಾಟೆಯಾಗಿ, ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಯಿತು. ನಮ್ಮನ್ನು  ಕಾಲೇಜಿನಿಂದ ಹೊರಗೆ ಹಾಕಬೇಕು ಎಂದು ಪ್ರಾಂಶುಪಾಲರಿಗೆ ಸರ್ಕಾರದಿಂದ ಪತ್ರ ಬಂದಿತ್ತು.ಪ್ರಾಂಶುಪಾಲ ಗೋಪಾಲಕೃಷ್ಣ ಅವರ ಮಗ ಕೂಡಾ ನಮ್ಮ ಜೊತೆ ಇದ್ದ. ಆತನ ಹೆಸರೂ ಶ್ರೀನಿವಾಸ.

ಪ್ರಾಂಶುಪಾಲರು ಅವರ ಮಗನ ಹೆಸರಿನಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು ಕಳುಹಿಸಿದರು. ‘ಮತ್ತೊಬ್ಬ ಶ್ರೀನಿವಾಸ  ನಮ್ಮ ಕಾಲೇಜಿನಲ್ಲಿ ಇಲ್ಲ’ ಎಂದು ಹೇಳಿ ನನ್ನನ್ನು ಬಚಾವ್‌ ಮಾಡಿದ್ದರು. ಇಲ್ಲದಿದ್ದರೆ ನನ್ನ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಅಲ್ಲಿಗೇ ಮುಗಿಯುತ್ತಿತ್ತು.

ಎಂಜಿನಿಯರಿಂಗ್‌ ಮುಗಿದ ನಂತರ ಬಿಇಎಂಎಲ್‌ನಲ್ಲಿ (ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌) ಎಂಜಿನಿಯರ್‌ ಕೆಲಸ ಸಿಕ್ಕಿತು. ನಂತರ ಮೂರು ವರ್ಷ ಜರ್ಮನಿಯಲ್ಲೂ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಿವೃತ್ತಿಯ ನಂತರ ನಿಟ್ಟೂರು ಶ್ರೀನಿವಾಸ ರಾಯರ ಒತ್ತಾಸೆಯಿಂದ  ಗಾಂಧಿಭವನದ ಅಧ್ಯಕ್ಷನಾದೆ. ಕಳೆದ 30 ವರ್ಷದಿಂದ  ಗಾಂಧಿ ವಿಚಾರಧಾರೆ ಹಂಚುವ ಕೆಲಸ ಮಾಡುತ್ತಿದ್ದೇನೆ. ಮಲ್ಲೇಶ್ವರದಲ್ಲಿ ಬಡ ಜನರಿಗಾಗಿ ಶ್ರೀರಾಮ ಕೋ ಆಪರೇಟಿವ್‌ ಬ್ಯಾಂಕ್, ಆಂಜನೇಯ ಕೋ ಆಪರೇಟಿವ್‌ ಬ್ಯಾಂಕ್‌  ಸ್ಥಾಪಿಸಿದೆ.

ಮೈಕ್‌ನಲ್ಲಿ ನೆಹರೂ ಭಾಷಣ
1947 ಆಗಸ್ಟ್‌ 14 ರಾತ್ರಿ 10ರಿಂದ 1ರವರೆಗೆ ದೆಹಲಿಯ ಕೆಂಪುಕೋಟೆಯಲ್ಲಿ  ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮಾಡಿದ ಭಾಷಣವನ್ನು ಮಲ್ಲೇಶ್ವರದ ಮೈದಾನದಲ್ಲಿ ಕುಳಿತು  ಆಲಿಸಿದ್ದೆ. ಅಂದು ಕಿರಣ್‌ ರೇಡಿಯೊ ಅಂಗಡಿಯವರು  ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ  ಭಾಷಣವನ್ನು ಮೈಕ್‌ಗೆ ಅಳವಡಿಸಿ ಇಡೀ ಮಲ್ಲೇಶ್ವರಕ್ಕೆ ಕೇಳುವಂತೆ ಮಾಡಿದ್ದರು. ‘when the world sleeps, India will awake to life and freedom’ ಎಂಬ ನೆಹರೂ ಅವರ ಮಾತು ನಮ್ಮನ್ನು ರೋಮಾಂಚನಗೊಳಿಸಿತ್ತು.  

ಗಾಂಧಿವಾದದ ಸಾಕಾರ ರೂಪ
ಗಾಂಧಿವಾದಿ ಹೊ.ಶ್ರೀನಿವಾಸಯ್ಯ (ಜನನ: 4ನೇ ಜನವರಿ 1925) ಅವರ ಮೂಲ ನೆಲೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಚೌದರಿ ಕೊಪ್ಪ ಗ್ರಾಮ. ಕಾಲೇಜು ದಿನಗಳಲ್ಲಿಯೇ ಭೂಗತ ಪತ್ರಿಕೆಗಳನ್ನು ಪ್ರಕಟಿಸಿ, ಹಂಚುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ದೇಶಪ್ರೇಮಿ ಇವರು.

ಮೆಕ್ಯಾನಿಕಲ್‌ ಎಂಜಿನಿಯರ್ ಆಗಿ ಬಿಇಎಂಎಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. 30 ವರ್ಷಗಳಿಂದ ‘ಕರ್ನಾಟಕ ಗಾಂಧಿ ಸ್ಮಾರಕ ನಿಧಿ’ಯ ಅಧ್ಯಕ್ಷರಾಗಿದ್ದಾರೆ.  ಇವರ ‘ನಾ ಕಂಡ ಜರ್ಮನಿ’ ಕೃತಿಗೆ 1976ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪ್ರವಾಸ, ಜೀವನ ಚರಿತ್ರೆ,  ಹಾಸ್ಯ, ಪ್ರಕೃತಿ ಚಿಕಿತ್ಸೆ, ಗಾಂಧಿ ಚಿಂತನೆ ಕುರಿತ 90ಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಬರೆದಿದ್ದಾರೆ.

ಗಾಂಧಿ ಬಂದಾಗ ದೂರ ನಿಂತೆ
1934ರಲ್ಲಿ ಗಾಂಧೀಜಿ ದೇಣಿಗೆ ಸಂಗ್ರಹಿಸಲು ಬೆಂಗಳೂರಿಗೆ ಬಂದಿದ್ದರು. ಆಗ ನನಗೆ 9 ವರ್ಷ. ಮಲ್ಲೇಶ್ವರಂ ಅಸೋಸಿಯೇಷನ್‌ಗೆ ಗಾಂಧೀಜಿ ಬಂದಾಗ ಮಕ್ಕಳೆಲ್ಲ ಹತ್ತಿರ ಹೋಗಿ ನಮಸ್ಕಾರ ಮಾಡುತ್ತಿದ್ದರು. ಆಗ ಗಾಂಧೀಜಿ ಹೆಣ್ಣುಮಕ್ಕಳ ಕಿವಿಯೋಲೆ ಕೇಳುತ್ತಿದ್ದರು. 

ಅವರೆಲ್ಲ ಹೆತ್ತವರನ್ನು ಕೇಳಿ ಓಲೆ ಬಿಚ್ಚಿ ಕೊಡುತ್ತಿದ್ದರು. ನಾನು ಗಾಂಧಿ ತಾತನ ಬಳಿ ಹೋಗದೆ ದೂರ ಕುಳಿತಿದ್ದೆ. ಯಾಕೆಂದರೆ ನನ್ನ ಕಿವಿಯಲ್ಲಿ ದೊಡ್ಡ ಓಲೆ ಇತ್ತು. ಅದನ್ನು ಕಿತ್ತು ಕೊಟ್ಟರೆ ಅಮ್ಮ ಹೊಡೆಯುತ್ತಾರೆ ಎಂಬ ಭಯ ನನಗೆ ಇತ್ತು. 1947ರಲ್ಲಿ ಮದ್ರಾಸ್‌ನಲ್ಲಿ ಹಿಂದಿ ಸಮ್ಮೇಳನ ನಡೆಯುತ್ತಿದ್ದಾಗ ಹೇಗಾದರೂ ಮಾಡಿ ಗಾಂಧೀಜಿಯ ಬಳಿ ಹೋಗಬೇಕು ಎಂಬ ಕಾರಣದಿಂದ ಸ್ವಯಂ ಸೇವಕರ ಪಾಸು ಪಡೆದು ಸಮ್ಮೇಳನಕ್ಕೆ ಹೋಗಿದ್ದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.