ADVERTISEMENT

ಮಹಾನವಮಿ ಮಜ್ಜನ...

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST
ಮಹಾನವಮಿ ಮಜ್ಜನ...
ಮಹಾನವಮಿ ಮಜ್ಜನ...   

ದಸರಾದ ಉತ್ತರಾರ್ಧದಲ್ಲಿದೆ ನಾಡು. ಪ್ರತಿ ಮನೆಯಲ್ಲೂ ಲಿಲಿಪುಟ್ ಗೊಂಬೆಗಳದ್ದೇ ಕಾರುಬಾರು. ಮನೆಯೊಡತಿಗೆ ನವದುರ್ಗೆಯರ ಪೂಜಾ ಸಂಭ್ರಮ. ದಿನಕ್ಕೊಬ್ಬ ದೇವತೆ, ದಿನಕ್ಕೊಂದು ಅಲಂಕಾರ. ಸರ್ವಿಸ್ ಸ್ಟೇಷನ್‌ಗಳಲ್ಲಿ ವಾಹನಗಳಿಗೆ `ವಾರ್ಷಿಕ ಮಜ್ಜನ~ದ ಭರಾಟೆ.

ಅಲ್ಲಿಯೂ ಈಗ ತಮ್ಮ ತಮ್ಮ ವಾಹನಗಳ ಸ್ನಾನಕ್ಕೆ ಅಪಾಯಿಂಟ್‌ಮೆಂಟ್ ನಿಗದಿ ಮಾಡಿಕೊಳ್ಳುವುದು ಫ್ಯಾಷನ್. ಆಯುಧ ಪೂಜೆಯ ನೆಪದಲ್ಲಿ ಒಮ್ಮೆ ಸಂಪೂರ್ಣ ಸರ್ವಿಸಿಂಗ್ ಮಾಡಿಸಿಕೊಳ್ಳುವುದು ಮಾಲೀಕರ ಅಭ್ಯಾಸ.
 
ಖಾಸಗಿ ಸರ್ವಿಸ್ ಸ್ಟೇಷನ್, ಶೋರೂಮ್‌ಗಳ ಸರ್ವಿಸ್ ಸ್ಟೇಷನ್‌ಗಳಲ್ಲಿ ಮುಂಜಾನೆ 5ರಿಂದಲೇ ಕಾರ್ಮಿಕರ ಫುಲ್ ಹಾಜರಿ. ರಾತ್ರಿ ಹನ್ನೊಂದಾದರೂ ಮುಗಿಯದ ಕೆಲಸ. ಹಬ್ಬಕ್ಕೆ ಒಂದು ದಿನವಾದರೂ ರಜೆ ಮಾಡಲು ಆಗದ ಸಂಕಷ್ಟ ಮಾಲೀಕನದು.

ಬುಧವಾರ ಮಹಾನವಮಿ; ಹಾಗೆಂದು ಕರೆಯುವುದಕ್ಕಿಂತ ಆಯುಧ ಪೂಜೆ ಎಂದರೇ ಜಾಸ್ತಿ ಜನಪ್ರಿಯ. ಅದಕ್ಕೋಸ್ಕರ ಕುಂಕುಮ ಬಳಿದ ಬೂದುಗುಂಬಳ, ಅಷ್ಟೆತ್ತರದ ಬಾಳೆಗಿಡಗಳಿಂದ ಹಿಡಿದು ಇಷ್ಟೇ ಪುಟ್ಟ ಗಿಡಗಳೂ ಭರದಿಂದ ಬಿಕರಿಯಾಗುವ ಪರಿಯೂ ನೆನಪಾಗುತ್ತದೆ.

ಬಾಳೆ ತೋಟಗಳನ್ನೇ ರಸ್ತೆ ಬದಿಗೆ ಎತ್ತಂಗಡಿ ಮಾಡಿದ್ದಾರೇನೋ ಎಂಬ ದೃಶ್ಯ. ಮರುದಿನ ಮಾತ್ರ ಫುಟ್‌ಪಾತ್ ತುಂಬಾ ಬಾಳೆಯ ಒಣಗಿದ ಎಲೆ, ಹಗ್ಗ, ಬಿಕರಿಯಾಗದೆ ಉಳಿದ ಬಾಳೆಯ ಸಂತೆ...

ವಾರದ ಹಿಂದೆ ಕೇಳುವವರೇ ಇಲ್ಲದ ಬೂದುಗುಂಬಳ ಕಾಯಿಗೆ ದಸರೆಗಿಂತ ಉತ್ತಮ ಮಾರುಕಟ್ಟೆ ಇನ್ನೆಂದು ಸಿಗಲು ಸಾಧ್ಯ? ಕನಕಪುರ ರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ನಿಂದಲೇ ಶುರುವಾಗುವ `ಮಾರುಕಟ್ಟೆ~ ಬನಶಂಕರಿ ದೇವಸ್ಥಾನದವರೆಗೂ ವಿಸ್ತರಿಸಿಕೊಂಡಿದೆ. ಇತ್ತ ಮಡಿವಾಳ, ಯಶವಂತಪುರ, ಸಿಟಿ ಮಾರ್ಕೆಟ್, ನವರಂಗ್ ಜಂಕ್ಷನ್, ಮಾಗಡಿ ರಸ್ತೆ, ಮೈಸೂರು ರಸ್ತೆ ಹೀಗೆ ಎಲ್ಲೆಡೆ ಇದೇ ದೃಶ್ಯ ರಿಪೀಟ್.

ತಾಜಾ ಸೊಪ್ಪು, ತರಕಾರಿಗಳ ಮಾರುಕಟ್ಟೆಯಲ್ಲಿ, ಮಂಡಿಗಳಲ್ಲಿ ಕಾಂಚಾಣದ್ದೇ ಸದ್ದು. ನಿಂಬೆಹಣ್ಣುಗಳಿಗೂ ಇನ್ನು ಮೂರು ದಿನ  ಎಲ್ಲಿಲ್ಲದ ಬೇಡಿಕೆ. ಕುಂಬಳಕಾಯಿಯನ್ನು ಇಷ್ಟಗಲ-ಆಳಕ್ಕೆ ಕತ್ತರಿಸಿ ಅದರೊಳಗೆ ಕುಂಕುಮ, ಅರಸಿನ ಹಾಗೂ ನಾಣ್ಯಗಳನ್ನು ಹಾಕಿಟ್ಟು ಅಂಗಡಿ, ಶೋರೂಮ್‌ಗಳ ಮುಂದೆ ನಿವಾಳಿಸಿ ನೆಲಕ್ಕೆ ಜೋರಾಗಿ ಎಸೆದರೆ ಹೋಳುಗಳಾಗುತ್ತದೆ.
 
ಅದರೊಳಗಿನ ನಾಣ್ಯಗಳನ್ನು ಹೆಕ್ಕಿಕೊಳ್ಳಲು ಕೈಕೈ ಮಿಲಾಯಿಸಿಕೊಳ್ಳಲೂ ಹಿಂಜರಿಯದ ಪೋರರು. ಇದಾದ ಮೇಲೆ ತೆಂಗಿನ ಕಾಯಿ ಒಡೆಯುವ ಕಾರ್ಯಕ್ರಮ. ಕಾಯಿ ಒಡೆಯುತ್ತಲೇ ಅಲ್ಲಿ ಇಲ್ಲಿ ಚಿಮ್ಮಿದ ತುಂಡುಗಳಿಗೆ ಮತ್ತೊಮ್ಮೆ ಮೇಲಾಟ.

ಆಯುಧ ಪೂಜೆಗೆ ವಾಹನಗಳಿಗೆ ಅಲಂಕಾರ ಮಾಡುವಲ್ಲಿಯೂ ಈಗ ಸ್ಪರ್ಧೆ. ನೆರೆರಾಜ್ಯಗಳಿಂದಲೂ ಹೂವಿನ ವ್ಯಾಪಾರಿಗಳು ಸಿಲಿಕಾನ್ ಸಿಟಿಯ ಹತ್ತಾರು ಮಾರುಕಟ್ಟೆಗಳಿಗೆ ಲಗ್ಗೆಯಿಡುತ್ತಾರೆ.
 
ಕಟ್ಟಿದ ಹೂವಾದರೆ ಮೊಳ, ಮಾರು ಲೆಕ್ಕದಲ್ಲಿ, ಬಿಡಿ ಹೂವಾದರೆ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡಿ ತಂದ ಸರಕನ್ನು ಪೂರ್ತಿ ಖಾಲಿ ಮಾಡಿ ಜೇಬು ಗಟ್ಟಿಮಾಡಿಕೊಂಡು ತೆರಳುತ್ತಾರೆ. ಸ್ಥಳೀಯ ವ್ಯಾಪಾರಿಗಳಿಗೂ ಹೂ ಹಬ್ಬ!

ಮಹಾನವಮಿ ದಿನ ಪೂಜೆ ಸಲ್ಲುವುದು ವಾಹನಗಳಿಗಷ್ಟೇ ಅಲ್ಲ. ಹೈಫೈ ಮಂದಿಯ ಹೈಟೆಕ್ ಕಂಪ್ಯೂಟರ್‌ಗಳು, ಬಡವರ ಬಾಳಬಂಡಿಯ ಹಾರೆ ಪಿಕಾಸಿ ಬುಟ್ಟಿ ಇತ್ಯಾದಿ ಸಾಧನ ಸಲಕರಣೆಗಳು, ಕಾರ್ಖಾನೆಯ ಭಾರೀ ಭಾರೀ ಯಂತ್ರೋಪಕರಣಗಳು, ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಉಪಕರಣಗಳ ಹೀಗೆ ಎಲ್ಲದಕ್ಕೂ ಪೂಜೆಯ ಭಾಗ್ಯ.

ಮಹಾಭಾರತದಲ್ಲಿ ಶಸ್ತ್ರಾಸ್ತ್ರಗಳ ಪೂಜೆಯನ್ನು ಆಯುಧಪೂಜೆ ಎಂದು ಕರೆದರೂ ಈಗ ಅದು ವಾಹನಗಳ ಪೂಜೆ ಎಂದು ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿರುವುದು ವಿಶೇಷ.

ಮರ್ತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿಸಿದ ಪಾಂಡವರು ಅಷ್ಟು ದಿನ ಶಮೀ ವೃಕ್ಷದಲ್ಲಿ ರಹಸ್ಯವಾಗಿರಿಸಿದ್ದ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದು ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ, ದುರ್ಗಾಮಾತೆಗೆ ನಮಸ್ಕರಿಸಿ ಕುರುಕ್ಷೇತ್ರಕ್ಕೆ ಅಣಿಯಾಗುತ್ತಾರೆ.

ಅದು ದಸರಾ ಕೊನೆಯ ದಿನವಾದ್ದರಿಂದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಗೆಲುವು ಸಾಧಿಸಿದ ದಿನ ವಿಜಯದಶಮಿಯಾಯಿತು ಎನ್ನುತ್ತದೆ ಪುರಾಣ.

ಶಮೀ ವೃಕ್ಷವನ್ನು ಕನ್ನಡದಲ್ಲಿ ಬನ್ನಿ ಮರವೆಂತಲೂ ಹೇಳುತ್ತೇವೆ. `ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನಿ; ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಸುರಪೂಜಿತಂ~ ಎಂಬ ಶ್ಲೋಕದೊಂದಿಗೆ, `ಬನ್ನಿ ತೊಗೊಂಡು ಬಂಗಾರದಾಂಗೆ ಇರೋಣ~ ಎನ್ನುತ್ತ ಬನ್ನಿ ವಿನಿಮಯ ಮಾಡಿಕೊಳ್ಳುವುದು ರೂಢಿ. 

ಹಿಂದೆಲ್ಲ ರಾಜರುಗಳು ವಿಜಯದಶಮಿಯಂದು ಯುದ್ಧ ಹೂಡುವ ಸಂಪ್ರದಾಯವಿರಿಸಿಕೊಂಡಿದ್ದರು. ವಿಜಯದಶಮಿಯಂದು ಯುದ್ಧ ಹೂಡಿದರೆ ಗೆಲುವು ನಿಶ್ಚಿತ ಎಂಬುದು ಅವರ ನಂಬಿಕೆಯಾಗಿತ್ತು.

ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿದಿನವೂ ಕಾದಾಟ, ಯುದ್ಧ... ಯಾರಿಗೋ ಗೆಲುವು, ಇನ್ಯಾರಿಗೋ ಸೋಲು... ಇಲ್ಲವೇ ತಮ್ಮದೇ ಚಕ್ರವ್ಯೆಹದಲ್ಲಿ ತಾವೇ ಸಿಕ್ಕಿ ಪರದಾಡುವ ಪರಿಸ್ಥಿತಿ...! ಇದೂ ಒಂದು ರೀತಿ ಮಹಾನವಮಿ, ವಿಜಯದಶಮಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.