ADVERTISEMENT

ಮಹಿಳಾ ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಮಹಿಳೆಯರೇ ತುಂಬಿದ್ದ ಸಭಾಂಗಣ. ಅಲ್ಲಿ ಅವರು ಕೈಯಾರೆ ತಯಾರಿಸಿದ ವಸ್ತುಗಳದ್ದೇ ಕಾರುಬಾರು. ಎತ್ತ ನೋಡಿದರತ್ತ ಸಾಂಪ್ರದಾಯಿಕ ಮತ್ತು ಸಮಕಾಲಿನ ಸರಕುಗಳು.

ವಿವಿಧ ಆಕೃತಿಯ ದೀಪಗಳು, ಆಹಾರ ವಸ್ತುಗಳು, ಪರಿಸರ ಕಾಳಜಿ ವಸ್ತುಗಳು, ಇವುಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಹೇಳುವ ಮಹಿಳಾ ಉದ್ಯಮಿಗಳು. ಒಟ್ಟಿನಲ್ಲಿ ಅದು ಮಹಿಳೆಯರ ಮಹಲು. ಇದಕ್ಕೆ ವೇದಿಕೆ ಕಲ್ಪಿಸಿದ್ದು ಅವೇಕ್ ಸಂಸ್ಥೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಕಲಾಕೃತಿ ಉತ್ಸವ.

ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ ಮೂರು ಬಣ್ಣಗಳ ಇಳಕಲ್ ಸೀರೆ. ಇದರೊಂದಿಗೆ ಯುವತಿಯರಿಗಾಗಿ ಫ್ಯಾಷನೆಬಲ್ ಕುರ್ತಾ, ಭತ್ತದ ಕಾಳು ಮತ್ತು  ಸೀಗೆಕಾಯಿಯಿಂದ ಮಾಡಿರುವ ಆಭರಣಗಳು, ಆಹಾರ ವಸ್ತುಗಳು, ಆರ್ಯುವೇದದ ಔಷಧಿಗಳು, ಸಂಪೂರ್ಣ ಕಸೂತಿ ಕಲೆಯ ಆರತಿ ತಟ್ಟೆಗಳು, ದೀಪಾವಳಿಗಾಗಿ ವಿಶೇಷ ದೀಪಗಳು, ಮನೆಯ ಫರ್ನಿಶಿಂಗ್‌ಗಾಗಿ ವಿವಿಧ ಆಲಂಕಾರಿಕ ವಸ್ತುಗಳು, ಸಂಪೂರ್ಣ ಪರಿಸರಸ್ನೇಹಿ ವಸ್ತುಗಳು, ಅಗಾಧ ಸಂಗ್ರಹದ ಉಣ್ಣೆಯ ಬಟ್ಟೆಗಳು, ಬಿದಿರಿನ ವಸ್ತುಗಳು, ಕಂಚಿನ ಸಾಮಗ್ರಿಗಳು, ವಿವಿಧ ಗಿಡ ಮೂಲಿಕೆಗಳು, ಬಂಜಾರ ಸಮುದಾಯದವರ ಕನ್ನಡಿ ಕಲೆ ಉಡುಗೆಗಳು, ಸೆಣಬಿನ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ರಾಜಸ್ತಾನದ ಆಭರಣಗಳು, ಕೈಮಗ್ಗದ ಉಡುಪುಗಳು ಹೀಗೆ ವೈವಿಧ್ಯಮಯ ಸಂಗ್ರಹಗಳಿವೆ, ಒಂದಕ್ಕಿಂತ ಒಂದು ಭಿನ್ನ ನೋಡಲು ಆಕರ್ಷಕ.

 `ಇದು ಮುಖ್ಯವಾಗಿ ಮಹಿಳಾ ಉದ್ಯಮಿಗಳ ಉತ್ಪನ್ನ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ವೇದಿಕೆ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಪ್ರದರ್ಶನದ ಉದ್ದೇಶ~ ಎಂದು ಅವೇಕ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಶೋಭಾ ಹೇಳುತ್ತಾರೆ.

ಒಟ್ಟು 26 ಕೈಮಗ್ಗಗಳನ್ನು ಖುದ್ದಾಗಿ ಖರೀದಿಸಿರುವ ಪುಷ್ಪಾ ಸಿದ್ದೇಶ್ ಇಳಕಲ್ ಸೀರೆಗಳಿಗೆ ಹೊಸ ರೀತಿಯ ವಿನ್ಯಾಸ ನೀಡಿದ್ದಾರೆ. ಅದನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ಈ ರೀತಿಯ ವಸ್ತು ಪ್ರದರ್ಶನದಲ್ಲಿ  ಭಾಗವಹಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂಬ ಖುಷಿ ಮರಿಯಾ ಅವರದ್ದು.

ಇಲ್ಲಿ ಖರೀದಿ ಮಾಡುವ ಕೆಲವೊಂದು ವಸ್ತುಗಳ ಮೇಲೆ ರಿಯಾಯ್ತಿ ಕೂಡ ಸಿಗಲಿದೆ
ಸ್ಥಳ: ಸಫೀನಾ  ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಪ್ರದರ್ಶನ ಭಾನುವಾರ ಮುಕ್ತಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT