ADVERTISEMENT

ಮಹಿಳೆಯ ದಿನ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:30 IST
Last Updated 7 ಮಾರ್ಚ್ 2011, 19:30 IST
ಮಹಿಳೆಯ ದಿನ!
ಮಹಿಳೆಯ ದಿನ!   

ಇಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನ. ನಗರದ ವಿವಿಧೆಡೆ ಮಹಿಳಾ ಹಕ್ಕು, ಸಮಾನತೆ ಕುರಿತ ವಿಚಾರ ಸಂಕಿರಣ, ಗೋಷ್ಠಿಗಳ ಸರಮಾಲೆ.ಟ್ರಾಫಿಕ್‌ನಿಂದ ಬಸವಳಿದಿರುವ ಮೈಸೂರು ಬ್ಯಾಂಕ್ ವೃತ್ತದಲ್ಲೋ, ತಣ್ಣಗೆ ಕುಳಿತ ಗಾಂಧಿ ತಾತನ ಎದುರೋ ಪ್ರತಿಭಟನೆಯ ಕಾವು.

ಮಹಿಳಾ ದಿನದ ಸಂದೇಶಗಳಿಂದ ತುಂಬಿಹೋಗಿದೆ ಮೊಬೈಲ್ ಇನ್‌ಬಾಕ್ಸ್. ಹೈಟೆಕ್ ಬ್ಯೂಟಿ ಪಾರ್ಲರ್‌ಗಳಲ್ಲಿ, ಮಾಲ್‌ಗಳ ಬಟ್ಟೆ ಅಂಗಡಿಗಳಲ್ಲಿ, ರೆಸ್ಟೊರಂಟ್‌ಗಳಲ್ಲಿ ಈ ದಿನಕ್ಕೆಂದೇ ವಿಶೇಷ ರಿಯಾಯ್ತಿ. ಕೆಲ ಆಸ್ಪತ್ರೆಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣೆ. ಮತ್ತೆ ಕೆಲವೆಡೆ ಮಹಿಳೆಯರಿಗಾಗಿ ಗ್ರೂಮಿಂಗ್ ಸೆಷನ್. ಅಕ್ಷರ ಲೋಕ ಪ್ರವೇಶಿಸಿದ ಕಾಲೇಜು ಯುವತಿಯರಿಗೆ, ಮೇಲ್ವರ್ಗದ ಉದ್ಯೋಗಸ್ಥ ಮಹಿಳೆಯರಿಗೆ ಅದೇನೋ ಸಂಭ್ರಮ. ಫೀಲ್‌ಗುಡ್ ವಾತಾವರಣ. ಆದರೆ, ತುತ್ತಿನ ಚೀಲ ತುಂಬಿಸಲು ಸೂರ್ಯನಿಗಿಂತ ಮೊದಲೆದ್ದು ಕೆಲಸ ಆರಂಭಿಸುವ ಕೊಳೇಗೇರಿ ಹೆಂಗಸರಿಗೆ, ಗುಲ್ಬರ್ಗ ಕಾಲೋನಿಯ ಗುಳೇ ಬಂದ ಮಹಿಳೆಗೆ ಎಲ್ಲಿಯ ಮಹಿಳಾ ದಿನ?

ಇಂಥದ್ದೊಂದು ದಿನಾಚರಣೆ ಇದೆ ಎಂಬ ಅರಿವೂ ಆಕೆಗೆ ಇಲ್ಲ. ಮೇಸ್ತ್ರಿ ಹೇಳಿದಲ್ಲಿ ಜೆಲ್ಲಿ, ಸಿಮೆಂಟು ಹೊರುವ, ಡಾಂಬರು ಹಾಕುವ ಆಕೆಗೆ ಸೂರ್ಯ ಕಂತಿದ ಮೇಲೆ ಸುರಕ್ಷಿತವಾಗಿ ಮನೆ (ಗುಡಿಸಲು) ಮಟ್ಟುವುದೇ ಸಂಭ್ರಮ. ಕೆಲಸ ಮಾಡುವ ಕಟ್ಟಡದಡಿ, ರಸ್ತೆ ಪಕ್ಕದ ಮರದಡಿ ಮಲಗಿಸಿದ ಮಗು ಕೆಲಸದ ಸಮಯದಲ್ಲಿ ಏಳದಿದ್ದಲ್ಲಿ, ರಚ್ಚೆ ಹಿಡಿಯದಿದ್ದಲ್ಲಿ ಅದೇ ಸಮಾಧಾನ. ಮಕ್ಕಳೆಲ್ಲ ಹೊಟ್ಟೆ ತುಂಬ ಉಂಡು ಮಲಗಿದ ದಿನ ಹಬ್ಬ.

ಸಮಾನ ಉದ್ಯೋಗಕ್ಕೆ ಸಮಾನ ವೇತನ ಎಂಬುದು ಕಾಗದದ ಮೇಲಿನ ಮಾತು. ಆಕೆಯ ಗಂಡನೋ, ಮೈದುನನೋ ದಿನಕ್ಕೆ 200 ರೂಪಾಯಿ ಹಿಡಿದು ಬಂದರೆ, ಮೇಸ್ತ್ರಿ ಆಕೆಯ ಕೈಗೆ ಕೊಡುವುದು 150 ರೂಪಾಯಿ. ಮಹಿಳಾ ದಿನ...! ಹಾಂಗಂದ್ರೇ ಏನ್ರೀ? ಮನೆ, ಹೊಲಾ ಎಲ್ಲಾ ಬಿಟ್ ಬಂದೀವಿ. ಇಲ್ಲೊಂದಿಷ್ಟು ಹೊಟ್ಟೀಗ್, ಸಾಲ ತೀರಸಾಕ್ಕ್ ರೊಕ್ಕ ಸಿಕ್ರ್ ಸಾಕ್ರಿ ಅನ್ನುತ್ತಾಳೆ ಕುರುಬರಹಳ್ಳಿ ಬಳಿಯ ಗುಲ್ಬರ್ಗ ಕಾಲೋನಿಯ ತಾಯಮ್ಮ. ಸಿರಗುಪ್ಪ ತಾಲ್ಲೂಕಿನ ಕುಗ್ರಾಮದ ಆಕೆಯ ಮನೆ ಮಂದಿಗೆಲ್ಲ ರಾಜಕಾಲುವೆಯ ಬದಿಯ ಷೆಡ್ ಅರಮನೆ ಇದ್ದಂತೆ.

‘ಬೆಂಗಳೂರು ನಿಂಗೆ ಹಿಡಿಸುತ್ತಾ, ಇಲ್ಲಿ ಎಲ್ಲ ಅನುಕೂಲ ಇದ್ಯಾ’ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ‘ನನ್ನ ಚಿಕ್ಕ ಮಗ, ಮಗಳ್ನ ಸಾಲಿಗೆ ಸೇರಿಸ್‌ಬೇಕಿತ್ರಿ.. ಇಲ್ಲೆಲ್ಲೂ ಹತ್ತರದಾಗ ಸರ್ಕಾರಿ ಸಾಲೆ ಇಲ್ಲಲ್ರಿ?’ ಅಂತಾಳೆ ತಾಯಮ್ಮ.ಕಚೇರಿಯಿಂದ ಎರಡು ಬಸ್ ಬದಲಾಯಿಸಿ ಹೈರಾಣಾಗಿ ಮನೆ ಸೇರುವ ಉದ್ಯೋಗಸ್ಥ ಮಹಿಳೆಯ ಪಾಡು ಇದಕ್ಕಿಂತ ಭಿನ್ನವಲ್ಲ. ಸಮಯ ಉಳಿಸಲು ಕಾಫಿ  ಕಪ್ ಹಿಡಿದೇ ಮಗಳ/ ಮಗನ ಶಾಲಾ ಡೈರಿಯ ಓದು, ಹೋಂ ವರ್ಕ್ ಮೇಲೆ ನಿಗಾ. ರಾತ್ರಿ ಅಡುಗೆ ತಯಾರಿ, ಬೆಳಗ್ಗಿನ ತಿಂಡಿಗೆ ಪೂರ್ವ ಸಿದ್ಧತೆಯಲ್ಲಿ ಅರ್ಧ ಗಂಟೆ ವ್ಯಾಯಾಮವೂ ಖೋತಾ.

ಕನ್ನಡಿಯಲ್ಲಿ ಅಣಕಿಸುವ ಬಿಳಿ ಕೂದಲಿಗೆ, ಮಾಸಿದ ಮುಖಕ್ಕೆ ಒಂದಷ್ಟು ಹೊಳಪು ನೀಡಲು ಪುರುಸೊತ್ತೆಲ್ಲಿ. ನಿಮಗಾಗಿ ಒಂದಿಷ್ಟು ಸಮಯ ಮೀಸಲಿಡಿ ಎಂಬುದು ಮಹಿಳಾ ಪುರವಣಿಯ ಲೇಖನದಲ್ಲಿ, ಟಿವಿ ಚಾನೆಲ್‌ಗಳ ಮಹಿಳಾ ಕಾರ್ಯಕ್ರಮದಲ್ಲಿ ನೋಡಲಷ್ಟೇ ಚಂದ.

ಕಚೇರಿಯಲ್ಲಿ ಟಾರ್ಗೆಟ್ ಮುಟ್ಟುವ ಒತ್ತಡ, ಮನೆಯಲ್ಲಿ ಮಗನ ಪಿಯುಸಿ ಮಾರ್ಕ್ಸ್ ಚಿಂತೆ. ಇಂದು ಮಹಿಳಾ ದಿನದ ಅಂಗವಾಗಿ ಇಂತಿಂಥ ಕಾರ್ಯಕ್ರಮ ನಡೆಯಿತು ಎಂದು ಟಿವಿ ವಾರ್ತೆಯ ಕೊನೆಯಲ್ಲಿ ಕೇಳುವ ಸಾಲು ಆಕೆಯಲ್ಲಿ ಯಾವ ಉಲ್ಲಾಸ ಮೂಡಿಸಿತು?

ನಸುಕು ಹರಿಯುವ ಮುನ್ನವೇ ಎದ್ದು ಮನೆಮಂದಿಗೆಲ್ಲ ರೊಟ್ಟಿ ತಟ್ಟುವ ತಾಯಮ್ಮನಂತಹ ನೂರಾರು ಮಹಿಳೆಯರಿಗೆ, ಜೋಪಡಿಯ ಹೆಂಗಸರಿಗೆ ಮನೆಯ ಗಂಡಸರು ಕೈಜೋಡಿಸಿದಲ್ಲಿ... ಆಕೆ ತಟ್ಟುವ ರೊಟ್ಟಿಯನ್ನು ಪಕ್ಕ ಕುಳಿತು ಬೇಯಿಸಿಕೊಟ್ಟಲ್ಲಿ... ರಾತ್ರಿ ಕುಡಿದು ಬಂದು ಒದೆಯದೇ ಸಮಾಧಾನವಾಗಿ ಆಕೆಯ ಪಕ್ಕ ಕುಳಿತು ನಗುತ್ತ ಊಟ ಮಾಡಿದಲ್ಲಿ....

ಕಚೇರಿಯಲ್ಲಿ ಕೆಲಸ ಮಾಡುವ ಹೆಂಡತಿ ತನ್ನಷ್ಟೇ ದಣಿದಿರುತ್ತಾಳೆ ಎಂಬ ಅರಿವು ಉದ್ಯೋಗಸ್ಥ ಪುರುಷನಲ್ಲಿ ಮೂಡಿದಲ್ಲಿ, ಮನೆಗೆಲಸದಲ್ಲಿ ಅಷ್ಟಿಷ್ಟು ಕೈಯಾಡಿಸಿದಲ್ಲಿ, ಮಕ್ಕಳ ಹೋಂವರ್ಕ್ ಜವಾಬ್ದಾರಿ ಹೊತ್ತಲ್ಲಿ... ಅದೇ ಮಹಿಳಾ ದಿನ. ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ವಾರ್ಡ್‌ನಲ್ಲಿ ಕಣ್ಣೀರು ಸುರಿಸುವ ಅಮ್ಮ, ಕುಟುಂಬ ನ್ಯಾಯಾಲಯದ ಮೊಗಸಾಲೆಯಲ್ಲಿ ಒಂಟಿಯಾಗಿ ಕುಳಿತ ಯುವತಿಯ ಉದಾಸ ಮುಖದಲ್ಲಿ ನಗು ಮೂಡಿದಾಗ... ಅಂದೇ ಮಹಿಳಾ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.