ADVERTISEMENT

ಮಾತಾಡುವ ಚಿತ್ರಗಳು

ಕಲಾಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST
ಕೋದಂಡರಾಮ ಅವರಿಗೆ ದಕ್ಕಿದ `ಸಿಂಹಾವಲೋಕನ'
ಕೋದಂಡರಾಮ ಅವರಿಗೆ ದಕ್ಕಿದ `ಸಿಂಹಾವಲೋಕನ'   

ಒಣಗಿದ ಎಲೆಯೂ ಇಲ್ಲಿ ಚಿಗುರಿದಂತೆ ಕಾಣುತ್ತಿದೆ. ಬೋನಿನ ಹಿಂದಿರುವ ಸಿಂಹದ ಕಣ್ಣಲ್ಲೂ ಕರುಣೆಯ ನೋಟ, ಭೂತರಾಧನೆಯ ರಂಗು, ಉತ್ತರ ಕರ್ನಾಟಕದ ಕಂಪು, ದೀಪದ ಬೆಳಕಿನ ಹಿಂದೆ ಸುಂದರ ನಗುವಿನ ನೆರಳು ಹೀಗೆ  ಹೊಸಬಗೆಯ ಅನುಭೂತಿ ನೀಡುವ ಛಾಯಾಚಿತ್ರ ಪ್ರದರ್ಶನ ಮೈಂಡ್‌ಸ್ಪೇಸ್‌ನಲ್ಲಿವೆ. ಏಳು ಹವ್ಯಾಸಿ ಛಾಯಾಚಿತ್ರಕಾರರು ತಮ್ಮ ಕಲ್ಪನೆಯ ನೋಟವನ್ನು ಸೆರೆಹಿಡಿದು ಅದಕ್ಕೆ ಚೌಕಟ್ಟು ಹಾಕಿದ್ದಾರೆ. ಈ ಹವ್ಯಾಸಿ ಛಾಯಾಚಿತ್ರಗಾರರ ಕಲಾಕೃತಿಯ ಚೌಕಟ್ಟಿಗೆ ಹಿರಿಯ ಛಾಯಾಚಿತ್ರಗಾರ ಟಿ.ಎನ್.ಎ. ಪೆರುಮಾಳ್ ಸಾಕ್ಷಿಯಾದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಎಸ್. ವಿಷ್ಣುಕುಮಾರ್ ಅಮೂರ್ತ ಹಾಗೂ ಆಧುನಿಕ ಕಲಾಕೃತಿ ರಚನೆಯಲ್ಲಿ ಈವರೆಗೆ ಸಾಕಷ್ಟು ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳನ್ನು ನೀಡಿದ ಕಲಾವಿದ. ಅವರು ಈ ಪ್ರದರ್ಶನದ ಮೂಲಕ ಛಾಯಾಚಿತ್ರ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. ತಾವು ರಚಿಸುತ್ತಿದ್ದ ಕಲಾಕೃತಿಯಂತೆಯೇ ಛಾಯಾಚಿತ್ರಗಳೂ ಇಲ್ಲಿ ಅಮೂರ್ತ ರೂಪವನ್ನು ಪಡೆದಿವೆ. ಬಳ್ಳಿಗಳು ಬಳುಕಾಡಿ, ಒಣ ಎಲೆ ಮಾತಾಡಿ, ಚಿಗುರೆಲೆಯು ಹೊಸ ನಿರೀಕ್ಷೆಯ ಮೇಲೆ ಮುಗಿಲತ್ತ ತಲೆ ಎತ್ತುತ್ತಿರುವಂತೆ ಅವರ ಛಾಯಾಚಿತ್ರಗಳು ರೂಪತಾಳಿವೆ. ಇಲ್ಲಿ ಹಸಿರು ಮಾತನಾಡುತ್ತಿರುವಂತಿದೆ. ಪ್ರತಿಯೊಬ್ಬ ನೋಡುಗನಿಗೂ ವಿಷ್ಣುಕುಮಾರ್ ಅವರ ಛಾಯಾಚಿತ್ರಗಳು ಹೊಸ ಬಗೆಯ ಅನುಭೂತಿ, ಹೊಸ ಭಾಷೆಯನ್ನು ನೀಡುವಂತಿವೆ ಹಾಗೂ ಮನಸ್ಸಿನೊಳಗೊಂದು ಪ್ರಶ್ನೆ ಮೂಡಿಸಿ ಅದಕ್ಕೆ ಉತ್ತರವನ್ನೂ ದೊರಕಿಸಿಕೊಡುವಂತಿವೆ.

ಅದರಂತೆಯೇ ಪ್ರಕೃತಿಯಲ್ಲಿ ಹಸಿರು ಎಷ್ಟು ಮುಖ್ಯವೋ ಅಷ್ಟೇ ಪ್ರಾಣಿಗಳೂ ಮುಖ್ಯ. ಹಸಿರಿನಷ್ಟೇ ಹಾಗೂ ಹಸಿರಿನೊಳಗೆ ನಳನಳಿಸುವ ಈ ಜೀವಿಗಳ ಜೀವನವೇ ಒಂದು ರೂಪಕದಂತಿರುತ್ತದೆ. ಅದನ್ನು ಸರೆಹಿಡಿದಿದ್ದಾರೆ ಕೋದಂಡರಾಮ. ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರು ಕಣ್ಣಿಗೆ ಕಂಡ ಅದ್ಭುತಗಳನ್ನು ಸೆರೆಹಿಡಿಯುವ ಬದ್ಧತೆಯನ್ನು ಅವರ ಛಾಯಾಚಿತ್ರಗಳಲ್ಲಿ ಕಾಣಬಹುದು.

ಹುಲ್ಲುಗಾವಲಿನ ನಡುವೆ ಲಂಗು ಲಗಾಮು ಇಲ್ಲದೆ ಸ್ವಚ್ಛಂದವಾಗಿ ವಿಹರಿಸುವ ಕುದುರೆ, ಬೋನಿನ ಹಿಂದೆ ಸಿಂಹದ ಮೌನ ಗರ್ಜನೆ, ಹಕ್ಕಿಗಳ ಕಲರವಗಳನ್ನು ಚಿತ್ರಗಳನ್ನು ನೋಡುತ್ತಲೇ ಅನುಭವಿಸಬಹುದಾದಷ್ಟು ಜೀವಂತವಾಗಿವೆ.

ದಶಕಗಳಿಂದ ಅನಿಮೇಷನ್ ಹಾಗೂ ಸಿನಿಮಾರಂಗದಲ್ಲಿ ದುಡಿಯುತ್ತಿರುವ ಎ.ವಿ. ಮಣಿಕಂಠನ್ ಅವರಿಗೆ ಕೆಲವೇ ವರ್ಷಗಳ ಹಿಂದೆ ಕ್ಯಾಮೆರಾದ ಸ್ನೇಹ ಬೆಳೆದಿದೆ. ಛಾಯಾಗ್ರಹಣ ಕಲಾಕೃತಿ ರಚನೆಯ ಮುಂದುವರಿದ ಭಾಗ ಎಂದೇ ಭಾವಿಸಿರುವ ಮಣಿಕಂಠನ್ ಕರಾವಳಿಯ ಭೂತಾರಾಧನೆಯ ವಿವಿಧ ಮಜಲನ್ನು ಸೆರೆಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಭೂತಾರಾಧನೆ ವೈಭವ, ಅದರ ಕುರಿತು ಜನರಲ್ಲಿರುವ ಭಕ್ತಿಭಾವ, ಸಂಭ್ರಮದ ರಂಗು ಎಲ್ಲವನ್ನೂ ಇವರ ಛಾಯಾಚಿತ್ರಗಳು ದೃಶ್ಯರೂಪದಲ್ಲಿ ಹೇಳುತ್ತವೆ. ಇವರ ಛಾಯಾಚಿತ್ರಗಳು ಭೂತಾರಾಧನೆಯ ಕಿರುಚಿತ್ರವನ್ನೇ ನಮ್ಮ ಮುಂದಿಡುತ್ತವೆ. ಅದೇ ರೀತಿ ಉತ್ತರ ಕರ್ನಾಟಕದ ವ್ಯಕ್ತಿಚಿತ್ರವನ್ನು ರತೀಶ್ ಮೆನನ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ರತೀಶ್ ಈ ಬಾರಿಯ ಛಾಯಾಚಿತ್ರ ಪ್ರದರ್ಶನದಲ್ಲಿ ಉತ್ತರ ಕರ್ನಾಟಕದತ್ತ ಗಮನ ಕೇಂದ್ರೀಕರಿಸಿದ್ದಾರೆ. ರೊಟ್ಟಿ ಮಾರುವ ಅಜ್ಜಿ, ದೇವಸ್ಥಾನದ ಆವರಣದಲ್ಲಿರುವ ಹಿರಿಯ ಜೀವ ಇತ್ಯಾದಿ ಅವರ ವಸ್ತುಗಳು. ಹಿರಿಯ ಜೀವಗಳ ಭಾವಗಳನ್ನು ಇವರ ಕ್ಯಾಮೆರಾ ದಾಖಲಿಸಿದ್ದನ್ನು ಕಾಣಬಹುದಾಗಿದೆ.

ರಾಹುಲ್ ಅಕ್ಕೋಟ್ ಅವರ ಶಾನಿಲ್ ಲೊಧಾ ನಿಸರ್ಗದ ನಡುವೆ ಸೂರ್ಯ ರಶ್ಮಿಯ ಪ್ರವೇಶವನ್ನು ದಾಖಲಿಸುವ ಪ್ರಯತ್ನ ಹೊಸ ಅನುಭವ ನೀಡುತ್ತದೆ. ಬಿಳಿ ಮೋಡ ಹಾಗೂ ಹಸಿರು ಭೂಮಿಯ ನಡುವೆ ನಿಂತ ಅನುಭವ ನೀಡುವ ರಾಹುಲ್ ಅಕ್ಕೋಟ್ ಅವರ ಛಾಯಾಚಿತ್ರ ಹೊಸತನದಿಂದ ಕೂಡಿದೆ. ಸೂರ್ಯನ ಬಿಸಿಲಿಗಾಗಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳ ನಡುವೆ ಭೂಮಿ ಸೇರುವ ತವಕದಲ್ಲಿ ಸೂರ್ಯನ ಕಿರಣಗಳನ್ನು ಸೆರೆಹಿಡಿದ ಕ್ಷಣ ಬದುಕಿಗೆ ಸ್ಫೂರ್ತಿ ನೀಡುತ್ತದೆ. ಶಾಲ್ಮಲಿ ಶೆಟ್ಟಿ ಅವರಿಗೆ ಕರಗತವಾಗಿರುವ ಕಲೆ, ಸಂಗೀತ ಹಾಗೂ ರಂಗಭೂಮಿಯ ನೆರಳನ್ನು ಇವರ ಛಾಯಾಚಿತ್ರಗಳಲ್ಲಿ ಕಾಣಬಹುದು.

ಈ ಛಾಯಾಚಿತ್ರ ಪ್ರದರ್ಶನವನ್ನು ರೇಸ್‌ಕೋರ್ಸ್ ರಸ್ತೆ ಬಳಿ ಇರುವ ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್‌ನಲ್ಲಿರುವ ಗ್ಯಾಲರಿ ಕ್ರೆಸೆಂಟ್‌ನಲ್ಲಿ ಏಪ್ರಿಲ್ 16ರವರೆಗೂ ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.