ADVERTISEMENT

ಮಾತಾಡ್ ಮಾತಾಡ್ ಮಲ್ಲಿಗೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ ವಾರ್ತಾ ಇಲಾಖೆ ಸಹಯೋಗದಲ್ಲಿ ಭಾನುವಾರ ಪ್ರಶಸ್ತಿ ವಿಜೇತ ಸಿನಿಮಾ `ಮಾತಾಡ್ ಮಾತಾಡ್ ಮಲ್ಲಿಗೆ~ ಪ್ರದರ್ಶನ ಏರ್ಪಡಿಸಿದೆ.

2007ರಲ್ಲಿ ತೆರೆಕಂಡ `ಮಾತಾಡ್ ಮಾತಾಡ್ ಮಲ್ಲಿಗೆ~ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದರು. ಚಿತ್ರಕಥೆ ಕೂಡ ಅವರದ್ದೆ. ಕೆ.ಮಂಜು ಚಿತ್ರದ ನಿರ್ಮಾಪಕರು. ಡಾ. ವಿಷ್ಣುವರ್ಧನ್, ಸುಹಾಸಿನಿ, ಸುದೀಪ್, ರಶ್ಮಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದರು.

ಒಬ್ಬ ಹೂವು ಬೆಳೆಗಾರ ತನ್ನ ಹಳ್ಳಿ, ತೋಟ, ಹೊಳೆ, ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ ಇದು. ಮಲ್ಲಿಗೆ ಕಥೆ, ಅದನ್ನು ನಿರೂಪಿಸಿದ ರೀತಿ, ಸಮಕಾಲೀನ ಸಮಸ್ಯೆಗಳು ಹೀಗೆ ಅನೇಕ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದರು. ಗಣಿಗಾರಿಕೆ ನೆಪದಲ್ಲಿ ನಮ್ಮ ಸಂಪತ್ತನ್ನು ಕಬಳಿಸಿ ತಮ್ಮ ಬೊಕ್ಕಸ ತುಂಬಿಕೊಳ್ಳಲು ಬರುವ ಬಹುರಾಷ್ಟ್ರೀಯ ಕಂಪೆನಿಗಳು ಕೊಡುವ ಎಂಜಲು ಕಾಸಿಗೆ ಹಳ್ಳಿಯನ್ನೇ ಒಕ್ಕಲೆಬ್ಬಿಸಲು ಆಜ್ಞೆ ಮಾಡುವ ಸರ್ಕಾರ, ಆ ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಿ ಹೋರಾಡುವ ಒಂದು ಹಳ್ಳಿ ಮತ್ತು ಅದರ ಮುಖಂಡ ಪೂವಯ್ಯ, ಹೋರಾಟದಲ್ಲಿ ತನ್ನ ಹೆಂಡತಿಯನ್ನೇ ಕಳೆದು ಕೊಂಡರೂ ಗಾಂಧಿ ಮಾರ್ಗದಲ್ಲಿ ಅಹಿಂಸಾತ್ಮಕ ಹೋರಾಟ ನಡೆಸಿ ಸರ್ಕಾರದ ಆಜ್ಞೆಯ ವಿರುದ್ಧ ಗೆಲುವು ಸಾಧಿಸುವ ಈ ಕಥೆಯನ್ನು ನಾಗತಿಗಹಳ್ಳಿ ನೈಜವಾಗಿ ಕಟ್ಟಿಕೊಟ್ಟಿದ್ದರು.

ರೈತ ಪೂವಯ್ಯನ ಪಾತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಶ್ರೇಷ್ಠ ಅಭಿನಯ. ಮುಗ್ಧ ಜನ ಬಂದೂಕು ಹಿಡಿದು ನಕ್ಸಲೈಟ್‌ಗಳೇಕೆ ಆಗುತ್ತಾರೆ ಎಂಬುದನ್ನು ಕೂಡ ಸೂಕ್ಷ್ಮವಾಗಿ ಹೇಳಿದ್ದರು ನಾಗತಿಹಳ್ಳಿ.

ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಕ್ರಾಸ್, ಟೀಚರ್ಸ್‌ ಕಾಲೊನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು. ಸಂಜೆ 5.30. ಮಾಹಿತಿಗೆ: 99641 52999.

ಚಿತ್ರ ಪ್ರದರ್ಶನಕ್ಕೂ ಮುನ್ನ `ಶ್ರದ್ಧಾ~ ನಾಟಕ ಪ್ರದರ್ಶನ. ನಾಟಕವನ್ನು ಬಿ.ಆರ್.ಗೋಪಿನಾಥ್ ನಿರ್ದೇಶಿಸಿದ್ದು, ಶ್ರೀನಿವಾಸ್ ವೈದ್ಯ ಕಥೆ ಬರೆದಿದ್ದಾರೆ. ನಾಟಕದಲ್ಲಿ ಎಂ.ಎಸ್.ಸತ್ಯನಾರಾಯಣ ರಾವ್, ಉಷಾ, ವನಜಾಕ್ಷಿ, ಮಂಜುನಾಥ್, ಕುಮಾರ್, ಯೋಗೇಶ್, ತ್ಯಾಗರಾಜ್. ಸಂಜೆ 5. ಚಿತ್ರಪ್ರದರ್ಶನದ ನಂತರ ನಾಟಕ ಕುರಿತು ಸಂವಾದ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.