ADVERTISEMENT

ಮಾಧುರಿ ಗಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

`ಗುಲಾಬ್ ಗ್ಯಾಂಗ್' ಅಂದರೆ ದಿಟ್ಟ ಹುಡುಗಿಯರ ಒಂದು ತಂಡವಂತೆ. ಇಲ್ಲಿ ಹೆಣ್ಣು ಮಕ್ಕಳದ್ದೇ ದರ್ಬಾರು, ಕಾರುಬಾರು. ಇಂಥದ್ದೊಂದು ವಿಶಿಷ್ಟ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿ ತುಂಬಿದ್ದು ಸಾಮಾಜಿಕ ಕಾರ್ಯಕರ್ತ ಸಂಪತ್ ಪಾಲ್- ಹೀಗನ್ನುತ್ತಾರೆ ಚಿತ್ರನಿರ್ಮಾಣಕಾರ ಅನುಭವ್ ಸಿನ್ಹಾ. ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ದನಿ ಎತ್ತಿದ ಅವರ ದಿಟ್ಟತನವೇ `ಗುಲಾಬ್ ಗ್ಯಾಂಗ್' ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿ ಎನ್ನುವ ಅನುಭವ್, ಈ ಚಿತ್ರಕ್ಕಾಗಿ ನಟಿ ಮಾಧುರಿ ದೀಕ್ಷಿತ್ ಮತ್ತು ಆಕೆಯ ತಾಯಿಯಿಂದ ಒಂದು ಹಾಡನ್ನು ಹಾಡಿಸಿದ್ದಾರಂತೆ.

“ಮಾಧುರಿ ಅವರನ್ನು `ಗುಲಾಬ್ ಗ್ಯಾಂಗ್' ಚಿತ್ರದಲ್ಲಿನ ಒಂದು ಹಾಡಿಗೆ ದನಿಯಾಗುವಂತೆ ಕೇಳಿಕೊಂಡಾಗ ಆಕೆ ಸಂತೋಷದಿಂದಲೇ ಒಪ್ಪಿಕೊಂಡರು. ಹಾಡಿನ ಧ್ವನಿಮುದ್ರಣಕ್ಕೆಂದು ತಮ್ಮ ತಾಯಿಯ ಜತೆ ಸ್ಟುಡಿಯೋಗೆ ಬಂದರು. ನಮಗೊಂದು ಅಚ್ಚರಿ ಕಾದಿತ್ತು. ಮಾಧುರಿ ತಾಯಿ ಸಹ ಒಬ್ಬ ಅದ್ಭುತ ಗಾಯಕಿ ಎಂದು ನಮಗೆ ಆಗಲೇ ತಿಳಿದಿದ್ದು. ಆಗ ನಾವು ಮಾಧುರಿಗೆ ನಿಮ್ಮ ಜತೆ ನಿಮ್ಮ ತಾಯಿಯೂ ಹಾಡಲಿ ಎಂದು ಕೋರಿದೆವು. ಅದಕ್ಕೆ ಇಬ್ಬರೂ ಒಪ್ಪಿಕೊಂಡರು” ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಅನುಭವ್.

“ಈ ಗೀತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂಬ ನಂಬಿಕೆ ನನ್ನದು. ಅದು ಕೇಳಲಷ್ಟೇ ಅಲ್ಲ, ನೋಡಲು ಕೂಡ ಹಿತವಾಗಿದೆ. `ಗುಲಾಬ್ ಗ್ಯಾಂಗ್' ಚಿತ್ರವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ” ಎಂದು ಮಾತು ಸೇರಿಸುತ್ತಾರೆ ಅವರು. ಚಿತ್ರವನ್ನು ಸೌಮಿಕ್ ಸೇನ್ ನಿರ್ದೇಶಿಸಿದ್ದು, ಜೂಹಿ ಚಾವ್ಲಾ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.