ADVERTISEMENT

ಮಾನಸ ಸರೋವರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST
ಮಾನಸ ಸರೋವರ
ಮಾನಸ ಸರೋವರ   

“ಎಡೆಬಿಡದೇ ಸುಮಾರು ಎರಡು ತಾಸು ಹುಚ್ಚು ಹಿಡಿದಂತೆ ಸುರಿದ ಜಡಿ ಮಳೆ ಆಗಷ್ಟೇ ನಿಂತಿತ್ತು. ಎಲೆಗಳಿಂದ ಹನಿಯುತ್ತಿದ್ದ ಹನಿಗಳಿಗೆಲ್ಲಾ ಈಗ ಪರ್ವ ಕಾಲ. ಅಂಗಳದ ಮೂಲೆಯಲ್ಲಿ ತುಂಬಿದ್ದ ಮಣ್ಣು-ಕಲ್ಲುಗಳೆಲ್ಲಾ ಮಳೆಯ ಆರ್ಭಟಕ್ಕೆ ಹೆದರಿ ಕೊಚ್ಚಿ ಹೋಗಿ, ಅಂಗಳವನ್ನೆಲ್ಲಾ ಚೊಕ್ಕಾಗಿಸಿದ್ದವು. ಮಟಮಟ ಮಧ್ಯಾಹ್ನವಾಗಿದ್ದರೂ ರವಿ ಕರಿ ಮೋಡಗಳ ಭಯದಿಂದಾಗಿ ಇನ್ನೂ ತನ್ನ ಕಿರಣಗಳ ಕೋಲನ್ನು ಹರಿಸಿರಲೇ ಇಲ್ಲ.

ಮಾಡಿನಿಂದ, ಎಲೆಗಳಿಂದ ಉದುರುವ ಮಳೆಹನಿಗಳ ಚಟಪಟ ಸದ್ದು, ಮೋಡದೊಳಗಿಂದಿಣುಕಿಯಾಡುವ ತುಂಟ ರವಿ, ತಂಪಾದ ಬುವಿಯು ತನ್ನೊಡಲಿಂದ ಹೊರ ಹಾಕುತ್ತಿದ್ದ ಧಗೆಯ ಕಂಪು- ಯಾವುದೂ ಸಾಧ್ವಿಯ ಮನಸನ್ನು ಅರಳಿಸಲಿಲ್ಲ.

ಇಂದು ಅವಳ ಮನಸು ಬಹು ವ್ಯಗ್ರವಾಗಿತ್ತು. ಮನೆಯ ಮೆಟ್ಟಿಲುಗಳನ್ನಿಳಿದು ಮುಂದಿರುವ ತೋಟದ ದಣಪೆಯ ಮುಂದೆ ಬಂದು ಸುಮ್ಮನೇ ನಿಂತಳು. ತಣ್ಣಗೆ ಬೀಸುತ್ತಿದ್ದ ಘಟ್ಟದ ಗಾಳಿ ಮೈ ಮನವನ್ನು ಸೋಕಲು ಗಂಟಿಕ್ಕಿಕೊಂಡಿದ್ದ ಮೊಗವು ತುಸು ಸಡಿಲವಾಯಿತು.

ಕ್ರಮೇಣ ಮೂಗಿನ ಹೊಳ್ಳೆಗಳಿಗೆ ಮಣ್ಣಿನ ಕಂಪೂ ಸೋಕಲು ಹಾಗೇ ಕಣ್ಮುಚ್ಚಿ ಒಂದು ಸಲ ಉಸಿರನ್ನು ಜೋರಾಗಿ ಒಳಗೆಳೆದುಕೊಳ್ಳಲು... ಉರಿಯುತಿದ್ದ ಒಡಲೊಳಗೆಲ್ಲಾ ತಂಪಿನ ಸಿಂಚನ. ಹಾಗೇ ಅರಳಿದ್ದ ಹೊಳ್ಳೆಗಳಿಗೆ ಇನ್ನೇನೋ ಹೊಸ ಪರಿಮಳ ಅಡರಲು ಮುಚ್ಚಿದ ಕಣ್ಗಳು ತೆರೆದುಕೊಂಡವು. ಪರಿಮಳದ ಮೂಲ ತುಸು ದೂರದಲ್ಲೇ ಇದ್ದ ಮೊಟ್ಟೆ ಸಂಪಿಗೆಯದಾಗಿತ್ತು. `ಛೇ ಇಂದು ದೇವರಿಗೆ ಹೂ ಕೊಯ್ಯುವಾಗ ಈ ಹೂವನ್ನು ಮರೆತೇ ಹೋದೆನಲ್ಲಾ...~ ಎಂದು ತನ್ನನ್ನೇ ಬೈದುಕೊಳ್ಳುತ್ತಾ ಗಿಡದ ಬಳಿ ಬಂದಳು.
 
ತುಸು ಹಳದಿ ಮಿಶ್ರಿತ ಬಿಳಿಬಣ್ಣದ ಹೂವುಗಳನ್ನು ನೋಡುತ್ತಿರುವಂತೇ ಮತ್ತೆ ಆಕೆಯ ಮನಸು ಮುದುಡಿತು... ಈ ಗಿಡವನ್ನು ನೆಟ್ಟಿದ್ದ ರಾಘವಣ್ಣನನ್ನು ನೆನೆದು... ಗಿಡದೊಳಗಿನ ಮೊಟ್ಟೆಸಂಪಿಗೆಯನ್ನು ತನ್ನ ಸುನಂದಕ್ಕನ ಬಾಳಿಗೆ ಹೋಲಿಸಿಕೊಂಡು”.

ಇದು, ತೇಜಸ್ವಿನಿ ಹೆಗಡೆ ಅವರ (manasa-hegde.blogspot.in)`ಮಾನಸ~ ಬ್ಲಾಗ್‌ನಲ್ಲಿನ ಒಂದು ತುಣುಕು. ಈ ಮಾನಸದೊಡತಿ ಮೂಲತಃ ಶಿರಸಿಯವರು. `ಬೆಳೆದದ್ದು, ಓದಿದ್ದು ಎಲ್ಲಾ ಕರಾವಳಿ ತೀರವಾದ ಮಂಗಳೂರಿನಲ್ಲಿ. ಈಗಿರುವುದು ಸಮುದ್ರದ ಗಂಧವೇ ಇಲ್ಲದ ಬೆಂಗಳೂರಿನಲ್ಲಿ~ ಎಂದು ತನ್ನನ್ನು ಬಣ್ಣಿಸಿಕೊಳ್ಳುವ ಮಾನಸದೊಡತಿ, ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವರಂತೆ.

ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲೂ ಬರೆಯಬಲ್ಲ ತೇಜಸ್ವಿನಿ, ತಮ್ಮ ಹಿಂದಿ ಬರಹಗಳಿಗಾಗಿಯೇpanchami-hegde.blogspot.com G ಎನ್ನುವ ಬ್ಲಾಗ್ ಕಟ್ಟಿಕೊಂಡಿದ್ದಾರೆ. ಅಡುಗೆಯಲ್ಲೂ ಅವರು ಪ್ರವೀಣೆಯಂತೆ. 

tejaswini-hegde.blogspot.in  ಅವರ ಪಾಕಶಾಸ್ತ್ರದ ತಿಳಿವಳಿಕೆಗೆ ಸಾಕ್ಷಿಯಂತಿದೆ. ಈ `ಒಗ್ಗರಣೆ~ ಪರಿ ಪರಿ ಪಾಕ ಪಾಠಶಾಲೆಯಂತೆ. ಕ್ಲಾಸು ಜೋರಾಗಿಯೇ ಇದೆ. ದಿಢೀರ್ ರವಾ ಮೊಸರು ಇಡ್ಲಿ, ಬಟಾಣಿ ಸಾರು, ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ, ನೆಲನೆಲ್ಲಿ ಸೊಪ್ಪಿನ ತಂಬುಳಿ, ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿ, ದಿಢೀರ್ ರವಾ ಮಸಾಲ ದೋಸೆ... ಓದುತ್ತಾ ಹೋದರೆ ಜೊಲ್ಲು ಸೋರುವುದು ಗೊತ್ತೇ ಆಗುವುದಿಲ್ಲ.

ಕನ್ನಡಕ್ಕೊಂದು, ಹಿಂದಿಗೊಂದು, ಅಡುಗೆಗೆ ಇನ್ನೊಂದು- ಹೀಗೆ ಬ್ಲಾಗ್‌ಗಳ ಪಟ್ಟಿ ನೋಡುತ್ತಿದ್ದರೆ ತೇಜಸ್ವಿನಿ ಅವರ ಬಹುಮುಖ ಪ್ರತಿಭೆ ಸ್ಪಷ್ಟವಾಗುತ್ತದೆ. ಅವರ `ಮಾನಸ~ ಬ್ಲಾಗ್‌ನಲ್ಲಿ ಕಥೆ, ಕವಿತೆ, ಚಿಂತನೆ, ವಿಮರ್ಶೆ, ಅನುವಾದ ಸೇರಿದಂತೆ `ಪರಿವಿಡಿ~ ದೊಡ್ಡದಾಗಿದೆ. `ಮಾನಸ~ಕ್ಕೆ ಭೇಟಿ ಕೊಡುವ ಮುನ್ನ ಅವರ ಕವಿತೆಯ ಒಂದು ತುಣುಕು ನೋಡಿ-

ಗೆಳತಿ ಮುರಿದ ಕಡ್ಡಿ, ಗೆಳೆಯ ಎಳೆದ ಜಡೆ
ಎಲ್ಲವನೂ ಮರೆತು, ಮತ್ತೆ ಬೆರೆತು
ನಗುವಿನಾಚೆಯ ನೋವ ಅನುಭವವ
ಅರಿಯಲಾಗದ ಬಾಲ್ಯದ ಎಳೆತನವ ನಾನೂ-
ಒಳಗೆಳೆದುಕೊಳ್ಳುವಂತಿದ್ದರೆ...
ಸುಖಿಯಾಗಿರುತ್ತಿದ್ದೆನೇನೋ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.