ADVERTISEMENT

ಮಿಕ್ಸಿ ರಿಪೇರಿ ಸಂಚಾರಿ

ಇ.ಎಸ್.ಸುಧೀಂದ್ರ ಪ್ರಸಾದ್
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST
ಮಿಕ್ಸಿ ರಿಪೇರಿ ಸಂಚಾರಿ
ಮಿಕ್ಸಿ ರಿಪೇರಿ ಸಂಚಾರಿ   

ಹಳೆಯ ಸ್ಕೂಟರ್‌. ದೂರದಿಂದ ನೋಡಿದರೆ ಹಿಂದಿನ ಸೀಟಿನ ಮೇಲಿನ ಡಬ್ಬ. ಯಾವುದೋ ಹೋಟೆಲ್‌ನ ಡೆಲಿವರಿ ಬಾಯ್‌ ಇರಬಹುದು ಎನಿಸುತ್ತದೆ. ಹತ್ತಿರಕ್ಕೆ ಹೋದರೆ ಆ ಡಬ್ಬದ ಮೇಲೆ ಮಿಕ್ಸಿ, ಕುಕ್ಕರ್‌ ಚಿತ್ರ. ಡಬ್ಬದೊಳಗೆ ‘ಟೂಲ್ ಕಿಟ್‌’ಗಳು. ಅದೊಂದು ಸಂಚಾರಿ ಮಿಕ್ಸಿ ಕುಕ್ಕರ್ ರಿಪೇರಿ ಅಂಗಡಿ. ಮಾಲೀಕರ ಹೆಸರು ಮಜರ್‌ ಪಾಷಾ.

ಕುಕ್ಕರ್‌ ರಿಪೇರಿ ಪೆಟ್ಟಿಗೆಯನ್ನು ಹೊತ್ತು ಬೀದಿ ಬೀದಿ ಅಲೆಯುವುದು ಮಜರ್ ಪಾಷಾ ನಿತ್ಯದ ಕಾಯಕ. ದಿನಕ್ಕೆ ಹತ್ತಾರು ಗ್ರಾಹಕರು ಸಿಕ್ಕರೆ ಇವರ ಕುಟುಂಬದವರ ಹೊಟ್ಟೆ ತುಂಬುತ್ತದೆ. ನಿತ್ಯವೂ ದಣಿವಿಲ್ಲದಂತೆ ಸ್ಕೂಟರ್‌ ಮೇಲೆ ಸುತ್ತಿದರೂ ಮಜರ್‌ ಮೊಗದಲ್ಲಿ ಸಾವಿರ ವೋಲ್ಟ್‌ಗಳ ನಗೆ. ನಡೆಯಲ್ಲಿ ಮಿಕ್ಸಿ ಮೋಟಾರ್‌ಗೆ ಇರುವಂಥದ್ದೇ ವೇಗ.

ತಂದೆ–ತಾಯಿ ಮೃತಪಟ್ಟಾಗ ಮಜರ್‌ ವಯಸ್ಸು 25. ಜೀವನ ಸಾಗಿಸಲು ದುಡಿಮೆ ಅನಿವಾರ್ಯವಾಗಿತ್ತು. ಚಿಕ್ಕಪ್ಪನ ಮಿಕ್ಸಿ ರಿಪೇರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ವೃತ್ತಿ ಬದುಕಿನ ತರಬೇತಿ ಆರಂಭವಾಗಿದ್ದೇ ಅಲ್ಲಿ. ನಂತರ ಕುಕ್ಕರ್‌ ಕಾರ್ಖಾನೆಯಲ್ಲಿ ಒಂದಷ್ಟು ದಿನ ದುಡಿದರು. ಆಮೇಲೆ ಒಂದಿಷ್ಟು ದಿನ ಆಟೊ ಓಡಿಸಿದರು. ಈ ನಡುವೆ ಪ್ರೀತಿಸಿ ಮದುವೆಯಾದರು. ಇಬ್ಬರು ಹೆಣ್ಣು ಮಕ್ಕಳಿಗೆ ತಂದೆ ಆದರು. ಕುಟುಂಬದ ಹೊರೆ ಹೆಚ್ಚಾಯಿತು, ಜೇಬು ಹಗುರವಾಯಿತು. ಆಗ ಅವರ ನೆರವಿಗೆ ಬಂದಿದ್ದು ಬಾಲ್ಯದಲ್ಲಿ ತರಬೇತಿ ಪಡೆದ ಮಿಕ್ಸಿ, ಕುಕ್ಕರ್‌ ರಿಪೇರಿ.

ತಮ್ಮಲ್ಲಿದ್ದ ಹಳೆಯ ಸ್ಕೂಟರನ್ನೇ ಅಂಗಡಿಯನ್ನಾಗಿಸಿಕೊಂಡರು ಮಜರ್‌. ನೋಡಲು ಪಿಜ್ಜಾ, ಬರ್ಗರ್‌ ಅಥವಾ ಹೋಟೆಲ್‌ ಊಟ ಹೊತ್ತೊಯ್ಯುವ ವಾಹನದಂತೆ ಕಾಣುವ ಈ ಸ್ಕೂಟರ್‌ನ ಹಿಂದಿನ ಆಸನಕ್ಕೆ ತಮ್ಮದೇ ವಿನ್ಯಾಸದ ಪೆಟ್ಟಿಗೆಯನ್ನು ಸಿದ್ಧಪಡಿಸಿ ಕಟ್ಟಿಕೊಂಡರು. ಈ ಪೆಟ್ಟಿಗೆಯಲ್ಲಿ ಏನುಂಟು ಏನಿಲ್ಲ? ಮಿಕ್ಸಿ, ಕುಕ್ಕರ್‌ ದುರಸ್ತಿಗೆ ಬೇಕಾದ ಎಲ್ಲಾ ಸಲಕರಣೆಗಳು, ರಬ್ಬರ್‌, ಹ್ಯಾಂಡಲ್‌, ವೈರ್‌, ವೈಂಡಿಂಗ್‌, ಆರ್ಮೇಚರ್‌, ಕ್ಯಾಪ್‌ ಇತ್ಯಾದಿ ಸೇರಿದಂತೆ ಅಗತ್ಯವಿರುವ ಎಲ್ಲವೂ ಇದೆ. ಪ್ಲೈವುಡ್‌ನಿಂದ ಸಿದ್ಧಪಡಿಸಲಾದ ಈ ಪೆಟ್ಟಿಗೆಯ ಹೊರಮೈ ಮೇಲೆ ಮಿಕ್ಸಿ, ಕುಕ್ಕರ್‌ನ ಚಿತ್ರಗಳನ್ನು ಬಿಡಿಸಲಾಗಿದೆ.

‘ಮಾಗಡಿ ರಸ್ತೆಯ ಗೋಪಾಲಪುರ, ಅಗ್ರಹಾರ, ರಾಮಚಂದ್ರಪುರ ಬಡಾವಣೆ, ಯಶವಂತಪುರ, ರಾಜಾಜಿನಗರದಲ್ಲಿನ ಬಡಾವಣೆಗಳೇ ನನ್ನ ಕಾರ್ಯಕ್ಷೇತ್ರ. ದಿನಕ್ಕೆ 2–3 ಕಿ.ಮೀ. ವ್ಯಾಪ್ತಿಯಲ್ಲಿರುವ ಸಾಕಷ್ಟು ಜನ ಮಿಕ್ಸಿ ಅಥವಾ ಕುಕ್ಕರ್‌ ರಿಪೇರಿಗೆ ನನ್ನನ್ನೇ ಕಾಯುತ್ತಿರುತ್ತಾರೆ. ಬೆಳಿಗ್ಗೆ 9ಕ್ಕೆ ತಿಂಡಿ ತಿಂದು ಮನೆ ಬಿಟ್ಟರೆ ಮರಳುವುದು ಸಂಜೆ 4ಕ್ಕೆ. ಮನೆಗೆ ಬಂದೇ ಊಟ ಮಾಡುವುದು. ನಾಲ್ಕರ ನಂತರ ಮನೆಯ ಬಳಿಯೇ ರಿಪೇರಿ ಕಾರ್ಯ ಆರಂಭಿಸುತ್ತೇನೆ. ದಿನಕ್ಕೆ ಸರಾಸರಿ ಹತ್ತು ಮಿಕ್ಸಿ ಅಥವಾ ಕುಕ್ಕರ್‌ ರಿಪೇರಿ ಕೆಲಸ ಸಿಗುತ್ತದೆ. ದೊಡ್ಡ ಕೆಲಸ ಸಿಕ್ಕರೆ ಒಂದಷ್ಟು ಹೆಚ್ಚು ಕಾಸು ಸಿಗುತ್ತದೆ’ ಎನ್ನುತ್ತಾರೆ ಮಜರ್‌ ಪಾಷಾ.

ಬಹಳಷ್ಟು ಮಂದಿಗೆ ಮಿಕ್ಸಿ ಅಥವಾ ಕುಕ್ಕರ್‌ ರಿಪೇರಿಗಾಗಿ ಅಂಗಡಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹೋದರೂ ತಕ್ಷಣ ರಿಪೇರಿ ಆಗಿ ಸಿಗುವ ಸಾಧ್ಯತೆ ತೀರ ಕಡಿಮೆ. ಹೀಗಾಗಿ ಅವರೆಲ್ಲರೂ ಪಾಷಾ ಅವರ ಹಾದಿಯನ್ನೇ ಕಾಯುತ್ತಾರೆ. ಒಮ್ಮೆ ರಿಪೇರಿ ಮಾಡಿಸಿಕೊಂಡವರು ಇವರ ಮೊಬೈಲ್‌ ಸಂಖ್ಯೆ ಮೂಲಕ ಮತ್ತೊಮ್ಮೆ ಸಂಪರ್ಕ ಸಾಧಿಸುತ್ತಾರೆ. ಹೀಗಾಗಿ ಇವರ ಗ್ರಾಹಕರ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ.

‘ನಾನು ಶಾಲೆ ಮೆಟ್ಟಿಲು ತುಳಿದಿಲ್ಲ. ಬಾಲ್ಯದಿಂದಲೂ ಸಿಕ್ಕ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಬಾಡಿಗೆಗೆ ಆಟೊ ಪಡೆದು ಓಡಿಸುತ್ತಿದ್ದೆ. ಆದರೆ, ಅದರಿಂದ ಹಣ ಉಳಿಸಿ ಜೀವನ ಸಾಗಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ಸದ್ಯಕ್ಕೆ ಸಂಚಾರಿ ಮಿಕ್ಸಿ ರಿಪೇರಿ ಉದ್ಯೋಗ ನೆಚ್ಚಿಕೊಂಡಿದ್ದೇನೆ. ತಿಂಗಳಲ್ಲಿ 20 ದಿನ ಉತ್ತಮ ವ್ಯಾಪಾರವಾಗುತ್ತದೆ. ಉಳಿದ ದಿನ ಅಷ್ಟಕ್ಕಷ್ಟೇ. ಆದರೂ ತಿಂಗಳ ಆದಾಯ 7ರಿಂದ 8 ಸಾವಿರ ದಾಟದು. ಮಕ್ಕಳು ಬೆಳೆಯುತ್ತಾ ಹೋದಂತೆ ಖರ್ಚು ಕೂಡ ಹೆಚ್ಚಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಚಾರಿ ಬದಲು ರಿಪೇರಿ ಅಂಗಡಿ ತೆರೆಯುವ ಮನಸ್ಸಿದೆ’ ಎಂದು ಮಜರ್‌ ತಮ್ಮ ಮುಂದಿನ ಯೋಜನೆಯ ಕುರಿತು ಹೇಳಿಕೊಂಡರು. ‘₨50ಕ್ಕೆ ಮಿಕ್ಸಿ, ಕುಕ್ಕರ್‌ನ ಸಣ್ಣ ಪುಟ್ಟ ದುರಸ್ತಿ ಮಾಡಿಕೊಡುತ್ತೇನೆ.

ಕಾಯಿಲ್‌, ಆರ್ಮೇಚರ್‌ ಸರಿಪಡಿಸುವ ಅಥವಾ ಬದಲಿಸುವ ಕೆಲಸವಿದ್ದರೆ ಮೂರು ದಿನ ಬೇಕು. ಆರು ತಿಂಗಳ ಗ್ಯಾರಂಟಿಯನ್ನೂ ನೀಡುತ್ತೇನೆ. ಹೀಗಾಗಿ ನನ್ನ ಮೊಬೈಲ್‌ ಸಂಖ್ಯೆ ಪಡೆದು ಅವರು ನಂಬಿಕೆಯ ಮೇಲೆ ಸಾಧನವನ್ನು ರಿಪೇರಿ ಮಾಡಿಸಿಕೊಳ್ಳುತ್ತಾರೆ. ನಂಬಿಕೆಯೇ ನನ್ನ ವೃತ್ತಿಯ ಬಹುದೊಡ್ಡ ಆಸ್ತಿ. ಅದನ್ನು ಉಳಿಸಿಕೊಂಡು ಬದುಕು ನಡೆಸಿಕೊಂಡು ಬರುತ್ತಿದ್ದೇನೆ. ಗ್ರಾಹಕರೂ ಹೆಚ್ಚಾಗಿದ್ದಾರೆ’ ಎನ್ನುವುದು ಪಾಷಾ ಅನುಭವದ ಮಾತು. ದುಡಿಮೆ ಕಡಿಮೆಯಾದರೂ ಛಲ ಬಿಡದ ತ್ರಿವಿಕ್ರಮನಂತೆ ಮಜರ್‌ ಪಾಷಾ ಜೀವನದ ಬಂಡಿಯನ್ನು ನಡೆಸುತ್ತಿದ್ದಾರೆ. ಅವರ ಮೊಬೈಲ್‌ ಸಂಖ್ಯೆ: 99010 56849. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT