ADVERTISEMENT

ಮಿಮಿಕ್ರಿ ಲೋಕದ ಉದಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ದೃಶ್ಯ ಮಾಧ್ಯಮಗಳು ಮ್ಯಾಜಿಕ್ ಗೌಪ್ಯಗಳನ್ನು ಬಯಲಿಗೆಳೆಯುತ್ತಿದ್ದಂತೆ ಅದರತ್ತ ಜನಸಾಮಾನ್ಯರ ಆಸಕ್ತಿಯೂ ಕಡಿಮೆಯಾಗತೊಡಗಿತು. ಇಂದು ಅದು `ಡಯಿಂಗ್ ಆರ್ಟ್~ ಎನ್ನಿಸಿಕೊಳ್ಳಲು ಇದೇ ಕಾರಣ ಎನ್ನುವ ಉದಯ ಕವತ್ತೂರು ಮ್ಯಾಜಿಕ್ ಹಾಗೂ ಮಿಮಿಕ್ರಿ ಕಲಾವಿದ.

ಈವರೆಗೆ ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದಾದ್ಯಂತ 3000ಕ್ಕೂ ಅಧಿಕ ಪ್ರದರ್ಶನಗಳನ್ನು ಉದಯ್ ನೀಡಿದ್ದಾರೆ. ಹವ್ಯಾಸವಾಗಿ ಆರಂಭವಾದ ಮಿಮಿಕ್ರಿ ಇದೀಗ ಬದುಕು ಕಟ್ಟಿಕೊಟ್ಟ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.
 
ಮ್ಯಾಜಿಕ್, ಕಾಮಿಡಿ ಶೋಗಳಿಂದ ಮಿಮಿಕ್ರಿ ನನಗಿಷ್ಟದ ಪ್ರಕಾರ. ಅದೇ ಕಾರಣಕ್ಕೆ `ವಾಯ್ಸ ಇಲ್ಯೂಶನ್~ ಅನ್ನೇ ನನ್ನ ವೃತ್ತಿಯಾಗಿ ಬದಲಾಯಿಸಿಕೊಂಡೆ. ಹತ್ತನೇ ತರಗತಿಯಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿ ಮಿಮಿಕ್ರಿ ಮಾಡುವ ಮೂಲಕ ಬಹುಮಾನ ಪಡೆದಿದ್ದೆ. ಬಳಿಕ ಅದು ಬಿಬಿಎಂ ಮುಗಿಯುವವರೆಗೂ ಮುಂದುವರೆಯಿತು. ಊರಿನಲ್ಲಿ ಪ್ರದರ್ಶನ ಕೊಡುವ ಮೂಲಕ ಪರೀಕ್ಷೆಯ ಶುಲ್ಕ ತುಂಬುವ ಬಾಬತ್ತನ್ನು (ಮೊತ್ತವನ್ನು) ನಾನೇ ದುಡಿಯುತ್ತಿದ್ದೆ.

ಮೂಲತಃ ಕುಕ್ಕೆ ಸುಬ್ರಹ್ಮಣ್ಯದವನಾದ ನಾನು ಉದ್ಯೋಗ ಅರಸಿ ದೂರದ ಬೆಂಗಳೂರಿಗೆ ಬಂದಾಗ ಕಣ್ಣಲ್ಲಿದ್ದದ್ದು ಒಂದಷ್ಟು ಬಣ್ಣದ ಕನಸುಗಳು ಮಾತ್ರ.

ಹೊಟ್ಟೆಪಾಡಿಗಾಗಿ ಅಕೌಂಟೆಂಟ್ ಆಗಿ ಒಂದಷ್ಟು ಕಾಲ ಕಾರ್ಯನಿರ್ವಹಿಸಿದೆ. ಅದೇಕೋ ಮಾಯಾಲೋಕ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಆ ಬದುಕಿಗೆ ವಿದಾಯ ಹೇಳಿ ಕಲಾಲೋಕವನ್ನೇ ಅಪ್ಪಿಕೊಂಡೆ. ಯವನಿಕಾದಲ್ಲಿ ನಾನು ನೀಡಿದ ಮೊದಲ ಪ್ರದರ್ಶನಕ್ಕೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಹಾಗೂ ಮುಂದಿನ ಹತ್ತಾರು ಪ್ರದರ್ಶನಗಳಿಗೆ ಅವಕಾಶವೂ ದೊರೆಯಿತು. 

ಹೀಗೆ ವೃತ್ತಿಬದುಕಾಗಿ ಬದಲಾದ ಬಳಿಕ ಮ್ಯಾಜಿಕ್ ಹಾಗೂ ಮಿಮಿಕ್ರಿ ಶೋಗಳನ್ನು ಜತೆಯಲ್ಲೇ ನೀಡಲಾರಂಭಿಸಿದೆ. ಹೀಗಿದ್ದರೂ ನನ್ನ ಮೊದಲ ಆದ್ಯತೆ ಮಿಮಿಕ್ರಿಗೇ. ಆ ಕಲೆ ಎಲ್ಲರಿಗೂ ಒಲಿಯುವಂತದಲ್ಲ. ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿಯೂ ಸಿಗಲಾರಂಭಿಸಿದ ಬಳಿಕ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರವಾಯಿತು.

ಆರಂಭದ ದಿನಗಳಲ್ಲಿ ಸಾಕಷ್ಟು ಸವಾಲುಗಳು ಎದುರಾದವು. ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲೂ ಕಾಲೆಳೆಯುವ ಮಂದಿ, ಹೊಟ್ಟೆಕಿಚ್ಚಿನಿಂದ ಅವಕಾಶ ಸಿಗದಂತೆ ಮಾಡುವ ಮಂದಿ ಸಾಕಷ್ಟಿದ್ದರು. ಅವನ್ನೆಲ್ಲಾ ಮೆಟ್ಟಿ ಸಾಧನೆಯನ್ನೇ ಮೆಟ್ಟಿಲಾಗಿಸಿಕೊಂಡು ಮುಂದುವರೆದೆ.

ಇಂದು ಪ್ರತಿ ತಿಂಗಳಿಗೆ ಇಪ್ಪತ್ತರಿಂದ ಇಪ್ಪತ್ತೈದು ದಿನ ಪ್ರದರ್ಶನ ನೀಡುವುದರಲ್ಲೇ ಕಳೆದುಹೋಗುತ್ತದೆ. ಹಿಂದೆಲ್ಲಾ ಸಭೆ-ಸಮಾರಂಭಗಳಿಗಷ್ಟೇ ಸೀಮಿತವಾಗಿದ್ದ ಇಂತಹ ಪ್ರದರ್ಶನಗಳು ಇಂದು ತನ್ನ ವ್ಯಾಪ್ತಿ ಹಿಗ್ಗಿಸಿಕೊಂಡಿವೆ. ಹುಟ್ಟುಹಬ್ಬದ ಪಾರ್ಟಿ, ಕಾರ್ಪೊರೇಟ್ ಶೋ, ಖಾಸಗಿ ಕಂಪೆನಿಗಳ ಫ್ಯಾಮಿಲಿ ಡೇ ಸೆಲೆಬ್ರೇಶನ್, ಗೆಟ್ ಟುಗೆದರ್ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಾರೆ.
 
ಸಾಮಾನ್ಯ ಪ್ರದರ್ಶನಕ್ಕೆ  ರೂ.2,500ರಿಂದ ಆರಂಭಗೊಂಡು 25,000ದವರೆಗೆ ಚಾರ್ಜ್ ಮಾಡುತ್ತೇವೆ.  ಇಲ್ಲಿ ಪ್ರತಿ ಕಾರ್ಯಕ್ರಮ ನೀಡುವ ಮುನ್ನ ಪೂರ್ವಸಿದ್ಧತೆ ಅತ್ಯಗತ್ಯ. ಸ್ಕ್ರಿಪ್ಟ್ ಇಲ್ಲದೆ ವೇದಿಕೆ ಹತ್ತಿ ಕಾರ್ಯಕ್ರಮ ನೀಡುವುದು ಇಲ್ಲಿ ಸ್ವಲ್ಪ ಕಷ್ಟವೂ ಹೌದು. ನಿರೂಪಣೆಯ ವಿಧಾನದಲ್ಲಿ ವ್ಯತ್ಯಾಸ ಮಾಡುತ್ತಾ ಹೋದಂತೆ ಪ್ರದರ್ಶನದ ಪ್ರಕಾರಗಳಲ್ಲಿ  ಬದಲಾವಣೆ ಗೋಚರಿಸುತ್ತದೆ.
 
35 ಪ್ರಾಣಿ ಪಕ್ಷಿಗಳ ಸದ್ದನ್ನು ಅನುಕರಿಸುವ ನಾನು ಚಿತ್ರನಟರ ದನಿ ಮಿಮಿಕ್ರಿ ಮಾಡುವುದಿಲ್ಲ. ತಕ್ಷಣ ಪ್ರತಿಕ್ರಿಯೆ ದೊರಕದ ದೃಶ್ಯಮಾಧ್ಯಮದಲ್ಲಿ ಕಾರ್ಯಕ್ರಮ ನೀಡುವುದೂ ಇಷ್ಟವಾಗುವುದಿಲ್ಲ.

ಇಂದು ಕ್ಷೇತ್ರಕ್ಕೆ ಬರುವ ಹೊಸಬರಿಗೆ ತರಬೇತಿ ನೀಡುವ ಉದ್ದೇಶದಿಂದ `ಟ್ಯಾಲೆಂಟ್ ವರ್ಲ್ಡ್~ ಸ್ಥಾಪಿಸಿದ್ದೇನೆ. ಇಲ್ಲಿರುವ 8 ವಿದ್ಯಾರ್ಥಿಗಳ ಪ್ರತಿಭೆಗೆ ಮತ್ತಷ್ಟು ಸಾಣೆ ಹಾಕಿ, ನಮ್ಮ ತಂಡದೊಂದಿಗೆ ಸೇರಿಸಿ ಅವರಿಗೂ ದುಡಿಯುವ ಅವಕಾಶ ನೀಡಲಾಗುತ್ತದೆ.

ಕಲಿಕೆಯೊಂದಿಗೆ ಸಂಪಾದನೆಯೂ ಇಲ್ಲಿ ಸಾಧ್ಯ. ನನಗೆ ಬದುಕು ಕೊಟ್ಟ ಮಾಯಾಲೋಕದಲ್ಲಿ ಮತ್ತಷ್ಟು ಮಂದಿ ಜೀವನ ಕಂಡುಕೊಳ್ಳಲಿ ಎಂಬ ಬಯಕೆ ನನ್ನದು. ಸಂಪರ್ಕಕ್ಕೆ: 9448513175 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.