ಚಿತ್ರಗಳಿಗೆ ಹಾಸ್ಯ ಹಾಗೂ ವ್ಯಂಗ್ಯ ಬೆರೆಸಿದರೆ ಅದರ ಮಜಾವೇ ಬೇರೆ. ಸಮಾಜದ ಆಗುಹೋಗುಗಳನ್ನು ಚಿತ್ರದ ಮೂಲಕ ವಿಡಂಬನಾತ್ಮಕವಾಗಿ ವಿವರಿಸುವ ವ್ಯಂಗ್ಯಚಿತ್ರವನ್ನು ಮೆಚ್ಚಿ ತಲೆದೂಗದವರಿಲ್ಲ. ಪತ್ರಿಕೆಯ ಮೂಲೆಯಲ್ಲೆಲ್ಲೋ ಚಿಕ್ಕದಾಗಿ ಪ್ರಕಟಗೊಳ್ಳುವ ವ್ಯಂಗ್ಯಚಿತ್ರಗಳು ಜಗತ್ತನ್ನೇ ತಲ್ಲಣಗೊಳಿಸುತ್ತವೆ ಎಂಬುದು ಅವುಗಳ ಸಾಮರ್ಥ್ಯಕ್ಕೆ ಕನ್ನಡಿ.
ಬ್ರಿಟಿಷರಿಂದ ಬಳುವಳಿಯಾಗಿ ಬಂದ ವ್ಯಂಗ್ಯಚಿತ್ರಕಲೆ ಹಲವು ಭಾರತೀಯರನ್ನು ಆಕರ್ಷಿಸಿದೆ. ಇರುವ ಸಾವಿರಾರು ಕಲೆಯಲ್ಲಿ ವ್ಯಂಗ್ಯಚಿತ್ರಕಲೆಯನ್ನು ಮೆಚ್ಚಿಕೊಂಡು ವೃತ್ತಿಯಾಗಿಸಿಕೊಳ್ಳುವಂತೆಯೂ ಮಾಡಿದೆ.
ಭಾರತೀಯ ವ್ಯಂಗ್ಯಚಿತ್ರಕಲೆ ಪಿತಾಮಹ ಶಂಕರ್ ಪಿಳ್ಳೈ, ವಿಶ್ವದರ್ಜೆಯ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್, ಮಾರಿಯೊ ಡಿ. ಮಿರಾಂಡಾ, ಅಬು ಅಬ್ರಾಹಂನಂಥ ಪ್ರಸಿದ್ಧ ವ್ಯಂಗ್ಯಚಿತ್ರಕಾರರು ರಚಿಸಿದ ವ್ಯಂಗ್ಯಚಿತ್ರಗಳನ್ನು ನೋಡಿದಾಗ ಭಾರತೀಯ ಮನಸ್ಸು ಹೆಮ್ಮೆಯಿಂದ ನಲಿದಾಡುವುದು ಸುಳ್ಳಲ್ಲ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ
ಈ ಕಲೆ ಭಾರತೀಯ ಮನಸ್ಸುಗಳಲ್ಲಿ ನೆಲೆನಿಂತು ದಶಕಗಳೇ ಉರುಳಿದ್ದರೂ, ಶ್ರೇಷ್ಠ ಕಲಾವಿದರನ್ನು ನಾಡಿಗೆ ನೀಡಿದ್ದರೂ ಕಲೆಗೆ ಮಾನ್ಯತೆ ನೀಡುವ ಒಂದು ಸಂಸ್ಥೆಯೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಾಗ ಹುಟ್ಟಿಕೊಂಡ ಸಂಸ್ಥೆಯೇ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ (ಐಐಸಿ). ಜೂನ್ 8, 2001ರಲ್ಲಿ ಸ್ಥಾಪನೆಗೊಂಡ ಐಐಸಿಗೆ ಬಿ.ವಿ. ರಾಮಮೂರ್ತಿ ಮೊದಲ ಅಧ್ಯಕ್ಷರಾಗಿದ್ದರು.
ಇಂಡಿಯನ್ ಕಾರ್ಟೂನ್ ಗ್ಯಾಲರಿ
ತದನಂತರ ವ್ಯಂಗ್ಯಚಿತ್ರಕಾರರಿಗೆ ಹಾಗೂ ಆಸಕ್ತರಿಗೆ ಪ್ರೋತ್ಸಾಹ ನೀಡಬೇಕು ಎಂಬ ಯೋಚನೆ ಹುಟ್ಟಿಕೊಂಡಿತು.
ಅದೇ ಸಮಯದಲ್ಲಿ ವ್ಯಂಗ್ಯಚಿತ್ರಕಲಾವಿದ ಹಾಗೂ `ಐಐಸಿ~ಯ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದ ವಿ.ಜಿ. ನರೇಂದ್ರ ರಚಿಸಿದ ಕಾರ್ಟೂನ್ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಆಗ ಕರ್ನಾಟಕದಲ್ಲಿದ್ದದ್ದು ಧರ್ಮಸಿಂಗ್ ಸರ್ಕಾರ. ನೈಸ್ ರಸ್ತೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ದೇವೇಗೌಡರ ಮಧ್ಯೆ ವಾಗ್ವಾದ ಶುರುವಾಗಿದ್ದಕ್ಕೆ ಸಂಬಂಧಿಸಿದ ಚಿತ್ರವದು. ಸ್ವತಃ ಅಶೋಕ್ ಖೇಣಿ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿ `ಕಾರ್ಟೂನ್ ಗ್ಯಾಲರಿ~ ನಿರ್ಮಾಣಕ್ಕೆ ಕಾರಣರಾದರು. ಅಲ್ಲಿಂದ ಪ್ರಾರಂಭವಾದ ಕಾರ್ಟೂನ್ ಗ್ಯಾಲರಿ ಯಶಸ್ವಿ ಓಟಕ್ಕೆ ಇದೀಗ ಐದರ ಸಂಭ್ರಮ.
ಅಂತರರಾಷ್ಟ್ರೀಯ ಮಾನ್ಯತೆ ಪಡೆದು ಲಿಮ್ಕಾ ಪುಸ್ತಕದಲ್ಲಿ ದಾಖಲಾದ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಭಾರತೀಯ ಕಾರ್ಟೂನ್ ಗ್ಯಾಲರಿ ಎರಡೂ ಬೆಂಗಳೂರಿನಲ್ಲೇ ನಿರ್ಮಾಣಗೊಂಡಿದ್ದು ಎಂಬುದು ಕನ್ನಡಿಗರ ಹೆಮ್ಮೆ.
ಗ್ಯಾಲರಿ ಯಶಸ್ವಿ ಓಟ
ಅಶೋಕ್ ಖೇಣಿ ಅವರ ಬೆಂಬಲದಿಂದ ತಲೆಎತ್ತಿದ ಗ್ಯಾಲರಿಯಲ್ಲಿ ಇದುವರೆಗೆ 71 ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಉದಯೋನ್ಮುಖ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರ ಕಲೆಗೆ ವೇದಿಕೆ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಅಲ್ಲದೆ ಕನ್ನಡಿಗರ ನೆಲದಲ್ಲಿರುವ ಈ ಗ್ಯಾಲರಿಯಲ್ಲಿ ಆರ್.ಕೆ. ಲಕ್ಷ್ಮಣ್, ಪ್ರಾಣ್ ಕುಮಾರ್, ಎಸ್.ಕೆ. ಫಡ್ನಿಸ್ ಮುಂತಾದ ಮೇರು ಕಲಾವಿದರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿವೆ.
ಗ್ಯಾಲರಿಯ ಇನ್ನೊಂದು ವಿಶೇಷವೆಂದರೆ, ವ್ಯಂಗ್ಯಚಿತ್ರಕಾರರು ತಮ್ಮ ಚಿತ್ರಗಳನ್ನು ಕಳುಹಿಸಿಕೊಟ್ಟರೂ ಅದಕ್ಕೆ ಫ್ರೇಮ್ ಹಾಕಿಸಿ ಚಂದದ ರೂಪ ಕೊಟ್ಟು ಪ್ರದರ್ಶನಕ್ಕೆ ಎಲ್ಲಾ ಏರ್ಪಾಡನ್ನೂ ಐಐಸಿ ವತಿಯಿಂದಲೇ ಮಾಡಲಾಗುತ್ತದೆ.
ಇನ್ನೊಂದು ವಿಶೇಷತೆ ಎಂದರೆ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಗಿದೆ. ಜಗತ್ತಿನ ಹಲವಾರು ವ್ಯಂಗ್ಯಚಿತ್ರಕಾರರು ರಚಿಸಿದ ಚಿತ್ರಗಳನ್ನು ಸೀಡಿ ರೂಪದಲ್ಲಿ ಸಂಗ್ರಹಿಸಿಡಲಾಗಿದೆ. ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಯಾರಾದರೂ ಸಂಶೋಧನೆ ಕೈಗೊಳ್ಳಬೇಕು ಎಂದರೆ ಅದಕ್ಕೆ ಬೇಕಾದ ಎಲ್ಲಾ ಪೂರಕ ಮಾಹಿತಿಗಳು ಲಭ್ಯ. ಇಲ್ಲಿ ಜ್ಞಾನಕ್ಕೆ ಮಾಹಿತಿಯ ರಾಶಿ, ಕಲೆಗೊಂದು ವೇದಿಕೆ, ಜೊತೆಗೊಂದಿಷ್ಟು ಪ್ರೀತಿಯ ಪ್ರೋತ್ಸಾಹವೂ ಕಲಾರಾಧಕರಿಗೆ ಕಟ್ಟಿಟ್ಟ ಬುತ್ತಿ.
ಸದಾ ಬ್ಯುಸಿ ಈ ಗ್ಯಾಲರಿ
ಕಲಾರಾಧಕರನ್ನು ಸನ್ಮಾನಿಸುವುದರೊಂದಿಗೆ ಕಲಾಸಕ್ತರಿಗಾಗಿ ಸದಾ ಕಾರ್ಯಾಗಾರವನ್ನು ಏರ್ಪಡಿಸುತ್ತಿರುವುದು ಇಲ್ಲಿನ ಚಲನಶೀಲತೆಗೆ ಸಾಕ್ಷಿ. ಕಲಿಯುವವರಿಗೆ ಉಚಿತವಾಗಿ ಪೇಪರ್, ಪೆನ್ಸಿಲ್‌ಗಳನ್ನು ನೀಡಿ ತರಬೇತಿ ನೀಡಲಾಗುತ್ತದೆ. ಪ್ರಖ್ಯಾತ ಕಲಾವಿದರ ವ್ಯಂಗ್ಯಚಿತ್ರಗಳ ವಿಶ್ಲೇಷಣೆಯೂ ನಡೆಯುತ್ತದೆ.
ವ್ಯಂಗ್ಯಚಿತ್ರದಲ್ಲಿ ರಾಜಕೀಯ, ಸಾಮಾಜಿಕ, ಕ್ಯಾರಿಕೇಚರ್ ಹೀಗೆ ಬೇರೆ ಬೇರೆ ವಿಧಗಳಿವೆ. ಯಾವ ಕಲಾವಿದನಿಗೆ ಯಾವ ವಿಧದಲ್ಲಿ ಆಸಕ್ತಿ ಇದೆ ಎಂದು ಗುರುತಿಸಿ ಹೊಸ ಪರಿಕಲ್ಪನೆ ಬೆಳೆಸಿಕೊಳ್ಳುವ ಬಗೆ, ಚಿತ್ರಕ್ಕೆ ವ್ಯಂಗ್ಯ ಹಾಗೂ ಹಾಸ್ಯದ ಲೇಪ ಕೊಡುವ ಬಗ್ಗೆ ಹೇಳಿಕೊಡಲಾಗುತ್ತದೆ.
ಮುಂದಿನ ಯೋಜನೆ
ಸದ್ಯದಲ್ಲೇ ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ಭಾನುವಾರ ನಿರಂತರವಾಗಿ ವ್ಯಂಗ್ಯಚಿತ್ರ ಸಂಬಂಧಿ ಕಾರ್ಯಾಗಾರ ನಡೆಸುವ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸುವ ಯೋಜನೆ ಇದೆ.
`ಮಾಯಾ ಕಾಮತ್ ಸ್ಮಾರಕ ಪ್ರಶಸ್ತಿ~ ಸ್ಪರ್ಧೆಗಳನ್ನು ಪ್ರತಿವರ್ಷ ಏರ್ಪಡಿಸುತ್ತಿರುವ ಐಐಸಿ, ಸುಮಾರು 15 ವ್ಯಂಗ್ಯಚಿತ್ರ ಕಲಾವಿದರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
ಇಂದು, (ಆಗಸ್ಟ್ 13) ತನ್ನ ಐದನೇ ವರ್ಷಾಚರಣೆ ಮಾಡಿಕೊಳ್ಳುತ್ತಿರುವ ಗ್ಯಾಲರಿಯಲ್ಲಿ ಮೂರು ವಾರ `ಮೆಗಾ ಕಾರ್ಟೂನ್ ಪ್ರದರ್ಶನ~ ನಡೆಯಲಿದೆ. ಜಗತ್ತಿನ 85 ಕಲಾವಿದರ ಆಯ್ದ 150 ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಶಂಕರ್ ಪಿಳ್ಳೈ, ಮಾರಿಯೊ ಡಿ ಮಿರಾಂಡಾ, ಬಿ.ವಿ. ರಾಮಮೂರ್ತಿ, ಅಬು ಅಬ್ರಾಹಂ, ರಂಗ, ಮಾಯಾ ಕಾಮತ್, ಎಸ್.ಕೆ. ನಾಡಿಗ, ಜಿ.ವೈ.ಹುಬ್ಳೀಕರ್, ಡೇವಿಡ್ ಲೊ ಮುಂತಾದವರ ಕಲಾಕೃತಿಗಳನ್ನು ಕೂಡ ಪ್ರದರ್ಶಿಸಲಾಗುವುದು.
ಈ ಕಾರ್ಯಕ್ರಮವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಐಐಸಿ ಅಧ್ಯಕ್ಷ ಅಶೋಕ್ ಖೇಣಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಸೆಂಚುರಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪಿ. ದಯಾನಂದ ಪೈ, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಗೌತಮ್ ಮಾಚಯ್ಯ, ಮಾಯಾ ಕಾಮತ್ ಮೆಮೊರಿಯಲ್ ಅವಾರ್ಡ್ಸ್‌ನ ಟ್ರಸ್ಟಿ ಅಮರ್‌ನಾಥ್ ಕಾಮತ್ ಭಾಗವಹಿಸಲಿದ್ದಾರೆ.
ಸ್ಥಳ: 1, ಮಿಡ್‌ಫೋರ್ಡ್ ಹೌಸ್, ಎಂ.ಜಿ. ರಸ್ತೆ, ಬಿಗ್ ಕಿಡ್ಸ್ ಕೆಂಪ್ ಹತ್ತಿರ, ಟ್ರಿನಿಟಿ ವೃತ್ತ. ಸಂಪರ್ಕಕ್ಕೆ- 4175 8540, 99800 91428.
ಉಚಿತ ಪ್ರದರ್ಶನಕ್ಕೆ ಅವಕಾಶ `ಎಲ್ಲಾ ವ್ಯಂಗ್ಯಚಿತ್ರಕಾರರ ಸಹಕಾರದೊಂದಿಗೆ ಐಐಸಿ ನಿರ್ಮಾಣವಾಯಿತು. ನಂತರದ ದಿನಗಳಲ್ಲಿ ಇಂಡಿಯನ್ ಕಾರ್ಟೂನ್ ಗ್ಯಾಲರಿ ನಿರ್ಮಾಣಗೊಂಡು ವ್ಯಂಗ್ಯಚಿತ್ರ ಕಲಾವಿದರಿಗೆ ಉತ್ತಮ ವೇದಿಕೆಯಾಯಿತು. ರಾಷ್ಟ್ರೀಯ ಮಟ್ಟದಲ್ಲಿ ವ್ಯಂಗ್ಯಚಿತ್ರಕಾರರನ್ನು ಪ್ರತಿನಿಧಿಸುವ ಈ ಗ್ಯಾಲರಿ ಪ್ರಾಯೋಗಿಕವಾಗಿ ಪ್ರಾರಂಭವಾಗಿ ಇಂದಿಗೆ ಬ್ರಾಂಡ್ ಅನ್ನುವ ರೀತಿಯಲ್ಲಿ ರೂಪುಗೊಂಡಿದೆ. ಬೆಂಗಳೂರಿನಲ್ಲಿ ಎಲ್ಲವೂ ದುಬಾರಿ. ಆದರೆ ನಾವು ಹಣ ಪಡೆಯದೆ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ. ಪ್ರಚಾರದ ಜವಾಬ್ದಾರಿಯೂ ನಮ್ಮದೆ. ಕಾರ್ಟೂನ್ ಕಲೆ, ಕಲಾವಿದ ಹಾಗೂ ಸಂಸ್ಥೆ ಬೆಳೆಯಬೇಕು ಎಂಬುದು ನಮ್ಮ ಕನಸು~. -ಮ್ಯಾನೇಜಿಂಗ್ ಟ್ರಸ್ಟಿ ವಿ.ಜಿ. ನರೇಂದ್ರ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.