ADVERTISEMENT

ಮೊಬೈಲ್ ಮಕ್ಕಳಿಗಲ್ಲ!

ಎಸ್.ರಶ್ಮಿ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಮೊಬೈಲ್ ಮಕ್ಕಳಿಗಲ್ಲ!
ಮೊಬೈಲ್ ಮಕ್ಕಳಿಗಲ್ಲ!   

ಬೆರಳಾಡಿಸುವ ಸುಖ ಅಂದ ಕೂಡಲೆ ನಿಮಗೆಲ್ಲ ಕಿವಿಗೆ ಬೆರಳಾಡಿಸುವುದು ನೆನಪಾಗಿರಬಹುದು. ಮನೆಯಲ್ಲಿ ಮಕ್ಕಳಿದ್ದರೆ ಮೂಗಿನೊಳಗೆ ಗಣಿಗಾರಿಕೆಯೂ ನೆನಪಾಗಿರಬಹುದು. ಆದರೆ ಇದೆಲ್ಲಕ್ಕೂ ಮಿಗಿಲಾದ ಸುಖಾನುಭವ ಇತ್ತೀಚೆಗೆ ಆರಂಭವಾಗಿದೆ. ಅದುವೇ ಸ್ಮಾರ್ಟ್ ಫೋನ್‌ ಸ್ಕ್ರೀನ್‌ ಮೇಲೆ ಬೆರಳಾಡಿಸುತ್ತಲೇ ಇರುವುದು.

ಮಕ್ಕಳಿರಲಿ, ಪ್ರೌಢರಿರಲಿ, ವಯೋವೃದ್ಧರಾಗಿದ್ದರೂ.. ಕೈ ಬೆರಳು ನಡುಗುತ್ತಿದ್ದರೂ ಮೊಬೈಲ್‌ನ ಟಚ್‌ ಸ್ಕ್ರೀನ್‌ ಮೇಲೆ ಕರಾರುವಕ್ಕಾಗಿ ಬೆರಳಾಡಿಸುವವರು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಇವೆಲ್ಲ ಜಗತ್ತಿನೊಂದಿಗೆ ಸಂಪರ್ಕ ಬೆಸೆಯುತ್ತವೆ. ಏಕಾಂತದೊಳು, ಲೋಕಾಂತವನ್ನೇ ಹೊತ್ತು ಹಾಕುತ್ತವೆ. ಪ್ರತಿಯೊಬ್ಬರೂ ತಮ್ಮದೊಂದು ಕೋಟೆ ಕಟ್ಟಿಕೊಂಡು, ತಮ್ಮದೇ ಸಾಮ್ರಾಜ್ಯದಲ್ಲಿಯೇ ವಿಹರಿಸುತ್ತಾರೆ.

ಪ್ರತಿಯೊಬ್ಬರ ಅಹಮಿಕೆಯನ್ನು ಸಂತೈಸುವ ಲೈಕ್‌ಗಳು, ಕಮೆಂಟ್‌ಗಳು, ಮುತ್ತನೀಯುವ ಇಮೋಜಿಗಳು, ಹೂ ನೀಡುವ ಸ್ಟಿಕರ್‌ಗಳು ಇವೆಲ್ಲ ಎಲ್ಲರಿಗೊಂದು ಕಂಫರ್ಟ್‌ ನೀಡುವುದಂತೂ ನಿಜ.

ADVERTISEMENT

ಎಲ್ಲರೂ ತಮ್ಮನ್ನೇ ಮೆಚ್ಚಿ ಅಹುದಹುದೆನಬೇಕು ಎಂಬ ಅಪೇಕ್ಷೆ ಹೆಚ್ಚಾದಂತೆ ಮೊಬೈಲ್ ಫೋನ್ ಸ್ಕ್ರೀನ್‌ ಮೇಲೆ ಬೆರಳಾಡಿಸುವುದು ಚಟವಾಗುತ್ತದೆ. ದಿನಗಳೆದಂತೆ ಗೀಳಾಗುತ್ತದೆ. ಯಾರು ನೋಡಿದರು, ಎಷ್ಟು ನೋಡಿದರು? ಎಷ್ಟು ಜನ ಮೆಚ್ಚಿದರು ಇಂಥದ್ದೊಂದು ತಹತಹ ಒಳಗಿನ ಸಮಾಧಾನವನ್ನು ಕದಡುತ್ತದೆ. ಇಂಥ ಹಪಹಪಿಯ ಮುಂದುವರಿದ ಭಾಗವೇ ಸೆಲ್ಫಿ ಹುಚ್ಚು.

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೊಬೈಲ್‌ ಫೋನ್‌ ಗೀಳನ್ನು ಬಿಡಿಸುವ ದೇಶದ ಮೊದಲ ಕೇಂದ್ರ ಸ್ಥಾಪಿತವಾಗಿದೆ. ಕೆಲವು ಪ್ರಕರಣಗಳೂ ದಾಖಲಾಗಿವೆ. ಆದರೆ ಫೋನ್‌ನಲ್ಲಿ ಕಥೆಗಳು, ಚಿತ್ರಗಳು, ಹಾಡುಗಳು, ರೈಮ್ಸ್‌ಗಳ ಮೂಲಕ ಪುಟ್ಟ ಪುಟಾಣಿ ಕೈಗಳಲ್ಲೂ ಮೊಬೈಲ್‌ ಫೋನ್‌, ಟ್ಯಾಬ್‌ಗಳು ಅವರನ್ನು ಹಿಡಿದು ಕೂರಿಸುತ್ತಿವೆ. ಕಾಲಾಡಿಸುತ್ತ ಓಡಾಡಿಕೊಂಡಿದ್ದ ಮಕ್ಕಳೀಗ ಇ–‍ಪ್ರಪಂಚಕ್ಕೆ ಜೋತುಬಿದ್ದಿವೆ. ಎರಡೂ ಕೈಗಳಿಗೆ ಕೋಳ ಹಾಕಿದಂತೆ ಗ್ಯಾಡ್ಜೆಟ್ಸ್‌ ಹಿಡಿದು ಕುಳಿತರೆ, ತೋರು ಬೆರಳುಗಳು ಚಲಿಸುತ್ತಲೇ ಇರುತ್ತವೆ.

ಕಥೆ, ಹಾಡು, ಆಟ, ನೋಟ, ಬಣ್ಣ, ಅಂಕಿ ಏನೇ ಇರಲಿ ಎಲ್ಲವೂ ಇದರಲ್ಲಿಯೇ. ತಲೆತಗ್ಗಿಸಿ ಕುಳಿತರೆಂದರೆ, ಭಾವಬುದ್ಧಿ ಎಲ್ಲವೂ ಅಲ್ಲಿಯೇ ಲೀನ. ಮನಃಶಾಸ್ತ್ರಜ್ಞರ ಪ್ರಕಾರ 3–5 ವರ್ಷದೊಳಗಿನ ಮಕ್ಕಳು ಗರಿಷ್ಠವೆಂದರೆ ಒಂದು ಗಂಟೆ ಸ್ಕ್ರೀನ್‌ ಒಡನಾಟದಲ್ಲಿರಬಹುದು. ಅದು ಯಾವುದೇ ಸ್ಕ್ರೀನ್‌ ಆಗಿರಲಿ. ಐದು ವರ್ಷ ಮೇಲ್ಪಟ್ಟವರಿಗೆ ಇನ್ನೊಂದು ಗಂಟೆಯ ವಿನಾಯ್ತಿ ನೀಡಬಹುದು.

ಆದರೆ ಎರಡು ವರ್ಷದೊಳಗಿನ ಮಕ್ಕಳಿಗಂತೂ ಇದನ್ನು ಪರಿಚಯಿಸಲೇ ಕೂಡದು. ಅವರ ಕಾಲ್ಪನಿಕ ಶಕ್ತಿ, ಭಾವಾಭಿವ್ಯಕ್ತಿ, ಭಾಷಾ ಕೌಶಲ ಅತಿ ತೀವ್ರವಾಗಿ ಬೆಳೆಯುವ ವಯಸ್ಸಿದು. ಆಗಲೇ ಅದಕ್ಕೊಂದು ಸ್ಕ್ರೀನ್‌ನ ಚೌಕಟ್ಟು ಹಾಕಿದರೆ ಆ ಮಕ್ಕಳಲ್ಲಿ ಈ ಎಲ್ಲ ಕೌಶಲಗಳೂ ಕುಂಠಿತವಾಗುತ್ತವೆ.

ಅಮೆರಿಕದ ಒಂದು ಅಧ್ಯಯನದ ಪ್ರಕಾರ ಸ್ಕ್ರೀನ್‌ ಮೋಹಕ್ಕೊಳಗಾದ ಮಕ್ಕಳು ಅತಿ ಹೆಚ್ಚು ರೇಗುತ್ತಾರೆ. ಹಟ ಮಾಡುತ್ತಾರೆ. ಅವರ ಬೇಡಿಕೆ ಈಡೇರುವವರೆಗೂ ಹಟಮಾರಿಗಳಾಗಿರುತ್ತಾರೆ.

ಮಕ್ಕಳ ಕೈಗೆ ಗ್ಯಾಜೆಟ್‌ಗಳನ್ನು ನೀಡಿ, ಆ ಕ್ಷಣಕ್ಕೆ ನಾವು ನಿರಾಳವಾಗಿರಬಹುದು. ಆದರೆ ದೀರ್ಘಕಾಲದಲ್ಲಿ ಇವೆಲ್ಲವೂ ಮಕ್ಕಳಿಗೆ ಕಂಟಕವಾಗಿಯೇ ಪರಿಣಮಿಸುತ್ತವೆ ಎನ್ನುವುದು ಆ ಅಧ್ಯಯನದ ಎಚ್ಚರಿಕೆಯಾಗಿದೆ.

**

‘ಮೊಬೈಲ್‌ ಹುಳ’ದ ಬೆದರಿಕೆ!

ನನ್ನ ಮಗಳ ಹೆಸರು ಸನ್ನಿಧಿ. ಅವಳಿಗೀಗ ಐದು ವರ್ಷ. ಮೊಬೈಲ್‌ನಲ್ಲಿ ಯುಟ್ಯೂಬ್‌ ನೋಡುತ್ತಾಳೆ. ಗೇಮ್ಸ್‌ ಆಡುತ್ತಾಳೆ. ಬಿಟ್ಟರೆ ಗಂಟೆಗಟ್ಟಲೆ ಅದರಲ್ಲಿಯೇ ತಲ್ಲೀನಳಾಗಿ ಬಿಡುತ್ತಾಳೆ. ಅದನ್ನು ತಡೆಯಲು ಹಲವು ಉಪಾಯಗಳನ್ನು ಕಂಡುಕೊಂಡಿದ್ದೇನೆ. ಹೆಚ್ಚು ಹೊತ್ತು ಮೊಬೈಲ್‌ ನೋಡಿದರೆ ‘ಮೊಬೈಲ್‌ ಹುಳ’ ಬಂದು ಕಣ್ಣು ತಿಂದುಬಿಡುತ್ತದೆ ಎಂದು ಹೆದರಿಸಿದ್ದೇನೆ.

ವೈಫೈ ಕಡಿತಗೊಳಿಸಿ, ಇಂಟರ್‌ನೆಟ್‌ ಸಂಪರ್ಕ ತಪ್ಪಿಸಿದರೆ ಆಕೆಗೆ ಗೊತ್ತಾಗುವುದಿಲ್ಲ. ಮತ್ತೊಂದು ಮೊಬೈಲ್‌ನಿಂದ ನನ್ನ ನಂಬರ್‌ಗೆ ಫೋನ್‌ ಮಾಡಿ ಅವಳ ಕೈಯಿಂದ ಮೊಬೈಲ್‌ ಪಡೆದುಕೊಳ್ಳುತ್ತೇನೆ. ಚಪಾತಿ ಅಥವಾ ರೊಟ್ಟಿ ಹಿಟ್ಟನ್ನು ಸ್ವಲ್ಪ ಕೊಟ್ಟು ಅದರಲ್ಲಿ ಆಟವಾಡುವಂತೆ ಹೇಳುತ್ತೇನೆ. ಫಜಲ್‌ಗಳನ್ನು ಜೋಡಿಸಲು ತಿಳಿಸುತ್ತೇನೆ. ಚಿತ್ರ ಬರೆಯಲು, ಅದಕ್ಕೆ ಬಣ್ಣ ತುಂಬಲು ಹೇಳುತ್ತೇನೆ.

ಮನೆಯ ಬೇಸ್‌ಮೆಂಟ್‌ನಲ್ಲಿ ಸೈಕಲ್‌ ತುಳಿಸುತ್ತೇನೆ. ಈಜು ಕಲಿಕೆಗೂ ಕರೆದುಕೊಂಡು ಹೋಗುತ್ತೇನೆ. ಆಟವಾಡಲು ಪಾರ್ಕಿಗೂ ಕರೆದುಕೊಂಡು ಹೋಗುತ್ತೇನೆ. ಅಲ್ಲದೆ ತರಕಾರಿ, ಹಣ್ಣುಗಳನ್ನು ತರುವಾಗ ಅವಳನ್ನು ಅಂಗಡಿಗೆ ಕರೆದುಕೊಂಡು ಹೋಗುತ್ತೇನೆ.

-ಸ್ಮಿತಾ ಎಂ.ಬಿ., ರಾಜರಾಜೇಶ್ವರಿ ನಗರ

**

ಚಾರ್ಜ್ ಇಲ್ಲ ಪುಟ್ಟಾ...

ನನ್ನ ಮೊಮ್ಮಗಳಿಗೆ ಈಗ ಎರಡು ವರ್ಷ. ಅವಳು ಊಟ–ತಿಂಡಿ ತಿನ್ನಲು ಹಟ ಮಾಡಿದಾಗ ಮಾತ್ರ ಮೊಬೈಲ್ ಕೊಡ್ತೀನಿ. ಕೆಲವೊಮ್ಮೆ ಬಟ್ಟೆ ಹಾಕಿಸಿಕೊಳ್ಳು ವಾಗಲೂ ಮೊಬೈಲ್ ಕೊಡ್ತೀನಿ. ಕೊಟ್ಟರೂ ಐದು ನಿಮಿಷ ಮಾತ್ರ. ಚಾರ್ಜ್‌ ಇಲ್ಲ ಪುಟ್ಟಾ ಅಂದರೆ ಮೊಬೈಲ್ ವಾಪಸ್ ಕೊಟ್ಟುಬಿಡ್ತಾಳೆ. ಹಾಗಾಗಿ, ಮೊಬೈಲ್ ಗೀಳು ಅಷ್ಟಾಗಿ ಇಲ್ಲ.

–ಶೋಭಾ ರಾಜಶೇಖರ್, ಶ್ರೀನಗರ

**

ನೋ ಯು ಟ್ಯೂಬ್

ಮೊದಲನೆಯದಾಗಿ ನನ್ನ ಮೊಬೈಲ್‌ನಲ್ಲಿ ಯುಟ್ಯೂಬ್ ಇನ್‌ಸ್ಟಾಲ್ ಮಾಡಿಲ್ಲ. ಯಾವುದೇ ಆ್ಯಪ್‌ ಇಲ್ಲ. ನನಗೆ ಇಬ್ಬರು ಅವಳಿಜವಳಿ ಹೆಣ್ಣುಮಕ್ಕಳು. ಅವರಿಗೆ ಊಟ ಮಾಡುವಾಗ ಮೊಬೈಲ್ ಕೊಡಲ್ಲ. ತಗೊಂಡರೂ ಹತ್ತು ನಿಮಿಷ ಮಾತ್ರ ಬಳಸುತ್ತಾರೆ.

ಇಬ್ಬರು ಇರುವುದರಿಂದ ಅವರಿಗೆ ಮೊಬೈಲ್ ಬಗ್ಗೆ ಅಷ್ಟಾಗಿ ಹುಚ್ಚು ಇಲ್ಲ. ಟಿವಿಯಲ್ಲಿ ಮೋಟುಪತ್ಲು ಮಾತ್ರ ನೋಡ್ತಾರೆ. ನನ್ನ ಮೊಬೈಲ್‌ನಲ್ಲಿ ಯಾವುದೇ ಆ್ಯಪ್ ಇಲ್ಲದಿರುವುದರಿಂದ ನನ್ನ ಮಕ್ಕಳು ಮೊಬೈಲ್ ಅಷ್ಟಾಗಿ ನೋಡುವುದಿಲ್ಲ.

–ಸೌಮ್ಯಾ ರಾಜ್, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.