ADVERTISEMENT

ಮೋಟಾರ್ ರ‍್ಯಾಲಿ ಅನಿತಾ ಖಯಾಲಿ

ಸುರೇಖಾ ಹೆಗಡೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಮೋಟಾರ್ ರ‍್ಯಾಲಿ ಅನಿತಾ ಖಯಾಲಿ
ಮೋಟಾರ್ ರ‍್ಯಾಲಿ ಅನಿತಾ ಖಯಾಲಿ   

ಗುಂಗುರು ಕೂದಲು, ಹೊಳೆವ ಕಂಗಳು, ಕಿರುನಗೆ ಸೂಸುವ ಮುಖಾರವಿಂದ, ಎತ್ತರದ ನಿಲುವು, ಫಿಟ್‌ನೆಸ್‌ಗೆ ಒಗ್ಗಿಕೊಂಡ ಕಡೆದಿಟ್ಟಂಥ ದೇಹ, ಫ್ಯಾಷನ್‌ ಡಿಸೈನರ್‌, ರ‍್ಯಾಲಿಯಿಸ್ಟ್, ಸ್ಟೈಲಿಸ್ಟ್‌, ನಟಿ, 1998ರ ಮಿಸ್‌ ಬೆಂಗಳೂರು ವಿಜೇತೆ, ಮಾಡೆಲ್‌, ಉದ್ಯಮಿ...

ಅನಿತಾ ಖೋಲೆ ಅವರನ್ನು ಹೀಗೆಲ್ಲಾ ಬಣ್ಣಿಸಬಹುದು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು ಫ್ಯಾಷನ್‌ ಜಗತ್ತಿನಲ್ಲಿ ಜನಪ್ರಿಯರು. ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ರ‍್ಯಾಲಿಯಿಸ್ಟ್‌ ಕೂಡ ಹೌದು.

ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಭಾಗವಹಿಸಿರುವ ಅವರು ಏಷ್ಯ ಫೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಶಿಪ್‌, ಜೊಹರ್‌ ಮಲೇಷ್ಯಾ, ಕೊಚ್ಚಿನ್‌ ರ‍್ಯಾಲಿ, ಸ್ಪೀಡ್‌ ಡ್ರಾಗ್‌ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ADVERTISEMENT

ಬಹುಮುಖ ಪ್ರತಿಭೆ ಹೊಂದಿ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿರುವ ಅನಿತಾ ಖೋಲೆ ಮೆಟ್ರೊ ಮಾತಿಗೆ ಸಿಕ್ಕಾಗ...

* ಮೋಟಾರು ಕ್ರೀಡೆಯತ್ತ ಮನಸ್ಸು ವಾಲಿದ್ದು?
ನನ್ನ 15ನೇ ವರ್ಷಕ್ಕೆ ರೂಪೇಶ್‌   (ಈಗ ನನ್ನ ಪತಿ) ಪರಿಚಯವಾಯ್ತು. ಅವರು ರೇಸ್‌ ಹಾಗೂ ರ‍್ಯಾಲಿ ಬಗೆಗೆ ವಿಶೇಷ ಒಲವಿಟ್ಟುಕೊಂಡಿದ್ದರು. ನಾನು ರ‍್ಯಾಲಿಯಲ್ಲಿ ಭಾಗವಹಿಸಬಹುದು ಎಂಬ ಆಸೆ ಮೂಡಿಸಿದ್ದು ಅವರೇ. ತಂಡವಾಗಿ ದ್ವಿಚಕ್ರ ವಾಹನದಲ್ಲಿ ರ‍್ಯಾಲಿ ಸಿದ್ಧತೆ ಮಾಡಿಕೊಂಡೆವು. ನಂತರ ಕಾರು ಸಾಥ್‌ ನೀಡಿತು. 2003ರಲ್ಲಿ ಮಹಿಳೆಯರ ತಂಡ ಕಟ್ಟಿಕೊಂಡು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನೂ ಗೆದ್ದುಕೊಂಡೆ.

* ಮಹಿಳೆಯಾಗಿ ಈ ಕ್ಷೇತ್ರದಲ್ಲಿ ನೀವು ಎದುರಿಸಿದ ಸವಾಲು?
ಮಲೇಷ್ಯಾ ರ‍್ಯಾಲಿಯಲ್ಲಿ ಭಾರತದಿಂದ ಭಾಗವಹಿಸಿದ ಮೊದಲ ಮಹಿಳೆ ನಾನೇ. ಆದರೆ ಅಂದು ಗೆಲುವು ನನ್ನದಾಗಿತ್ತು. ಅಂದಿನ ಸ್ಪರ್ಧೆಯಲ್ಲಿ ಒಟ್ಟೂ 600ಕಿ.ಮೀ. ಕ್ರಮಿಸಿದ್ದೆ. ಜಾರುವ ನೆಲದಲ್ಲಿ ಸ್ಪರ್ಧೆಗಿಳಿದಿದ್ದ ಮಹಿಳೆ ನಾನೊಬ್ಬಳೇ. ಆದರೆ ಬೆಂಬಲವಾಗಿ ನಿಂತರು ರೂಪೇಶ್‌.

* ಫ್ಯಾಷನ್‌, ರ‍್ಯಾಲಿ, ಮನೆ ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?
ಯಾವಾಗಲೂ ನನ್ನನ್ನು ಬ್ಯುಸಿ ಆಗಿ ಇಟ್ಟುಕೊಳ್ಳುವುದರಲ್ಲಿ ನನಗೆ ಖುಷಿ ಇದೆ. ನಿತ್ಯವೂ ಬೇರೆ ಬೇರೆ ವಿಷಯದ ಮೇಲೆ ಕೆಲಸ ಮಾಡುತ್ತಿರುವುದರಿಂದ ಮಲ್ಟಿಟಾಸ್ಕಿಂಗ್‌ ನನಗೆ ಒಲಿದಿದೆ. ಸಮಯ ನಿರ್ವಹಣೆ, ಯೋಜನೆ ಸರಿಯಾಗಿದ್ದರೆ ಯಾವುದೂ ಅಸಾಧ್ಯವಲ್ಲ.

* ನಿಮ್ಮ ಇತರ ಹವ್ಯಾಸಗಳು?
ಕುದುರೆ ಸವಾರಿ ಇಷ್ಟ. ಪಿಯಾನೊ ನುಡಿಸುತ್ತೇನೆ. ಪುಸ್ತಕ ಓದುವುದು, ಸಿನಿಮಾ ನೋಡುವುದು ಬಿಡುವಿಗೆ ಸಾಥ್‌ ನೀಡುವ ಹವ್ಯಾಸ.

* ವಿನ್ಯಾಸ ಕ್ಷೇತ್ರದತ್ತ ಮನಸ್ಸು ಹರಿದಿದ್ದೇಕೆ. ಯಾವ ಬಣ್ಣ ಹೆಚ್ಚು ಇಷ್ಟ?
ಫ್ಯಾಷನ್‌ ಬಗ್ಗೆ ಪ್ರೀತಿ ಜಾಸ್ತಿ. ಅಲ್ಲದೆ ವಾರ್ಡ್‌ರೋಬ್‌ನಲ್ಲಿ ಸುಂದರ ದಿರಿಸು ಇರಬೇಕು ಎನ್ನುವುದು ಸಾರ್ವಕಾಲಿಕ ಬಯಕೆ. ಇದೇ ಆಸೆ ನನ್ನನ್ನು ಫ್ಯಾಷನ್‌ ಜಗತ್ತು ಪ್ರವೇಶಿಸಲು ಪ್ರೇರೇಪಿಸಿದ್ದು.  ಕಪ್ಪು ಬಣ್ಣ ತುಂಬಾ ಇಷ್ಟ. ಭಾರತೀಯರ ಮೈಬಣ್ಣಕ್ಕೆ ಹೊಂದಿಕೆಯಾಗುವಂಥ ಬಣ್ಣಗಳಲ್ಲಿಯೇ ವಿನ್ಯಾಸ ಮಾಡಲು ಇಷ್ಟ.

* ಫ್ಯಾಷನ್‌ ವಿನ್ಯಾಸಕರಿಗೆ ಹಾಗೂ ರ‍್ಯಾಲಿ ಆಸಕ್ತರಿಗೆ ಬೆಂಗಳೂರು ಹೇಗೆ ಸೂಕ್ತ?
ಕ್ರಿಯಾಶೀಲ ಮನಸ್ಸಿದ್ದರೆ ಫ್ಯಾಷನ್‌ ಕ್ಷೇತ್ರದ ಅವಕಾಶಗಳಿಗೆ ಕೊನೆಯಿಲ್ಲ. ಆದರೆ ಮೋಟಾರ್‌ ಸ್ಪೋರ್ಟ್ಸ್‌ ದುಬಾರಿ.  ಹಾಗೂ ಶ್ರಮದಾಯಕ ಕ್ರೀಡೆ. ಭಾರತದಲ್ಲಿ ಜನಪ್ರಿಯವಲ್ಲದ ಕ್ರೀಡೆಯಾದ್ದರಿಂದ ಅವಕಾಶಗಳು ಕಡಿಮೆಯೇ.

* ಸದ್ಯದ ಫ್ಯಾಷನ್‌ ಟ್ರೆಂಡ್‌ ಬಗ್ಗೆ ಹೇಳಿ?
ವಿಭಿನ್ನ, ಚಮತ್ಕಾರಿ, ಅತಿರೇಕ... ಸದ್ಯದ ಟ್ರೆಂಡ್‌ ಅನ್ನು ಹೀಗೆಂದು ಗುರುತಿಸಬಹುದು. ಅದು ನನಗೆ ತುಂಬ ಇಷ್ಟವೂ ಹೌದು. ರಿಪ್ಪ್ಡ್ ಜೀನ್ಸ್‌, ಆಫ್‌ ಶೋಲ್ಡರ್‌ ಟಾಪ್ಸ್‌, ಕೋಲ್ಡ್‌ಕಟ್‌ ಟಾಪ್‌ಗಳು ನನ್ನ ಫ್ಯಾಷನ್‌ ಬಯಕೆಯನ್ನು ನೀಗಿಸುತ್ತವೆ.

* ನಿಮ್ಮ ಫಿಟ್‌ನೆಸ್‌ ಗುಟ್ಟೇನು?
ವ್ಯಾಯಾಮ ಹಾಗೂ ಆರೋಗ್ಯಕರ ಜೀವನ ಶೈಲಿ. ನಿತ್ಯ ಎರಡು ಗಂಟೆ ಜಿಮ್‌ನಲ್ಲಿ (ವೇಟ್ ಅಂಡ್‌ ಕಾರ್ಡಿಯೊ) ವರ್ಕೌಟ್‌ ಮಾಡುತ್ತೇನೆ. ಮಾನಸಿಕ ಸಮತೋಲನಲಕ್ಕಾಗಿ ಯೋಗ ಮಾಡುತ್ತೇನೆ. ಸಂಜೆ ಕುದುರೆ ಸವಾರಿ ಮಾಡುತ್ತೇನೆ.

* ಮಹಿಳೆಯರಿಗೆ ನೀವು ನೀಡುವ ಸಲಹೆ?
ಪ್ರತಿಯೊಬ್ಬರೂ ವಿಭಿನ್ನ ಪ್ರತಿಭೆ ಇರುತ್ತದೆ. ಹೀಗಾಗಿ ಬೇರೆಯವರು ನಡೆದ ದಾರಿಯಲ್ಲಿ ನಡೆಯಲು ಪ್ರಯತ್ನಿಸಬೇಡಿ.  ನಿಮ್ಮ ಸಾಧನೆಗೆ ಕುಟುಂಬ ಹಾಗೂ ಸ್ನೇಹಿತರ ಬೆಂಬಲ ಬೇಕು. ಆದರೆ ಅದನ್ನೇ ನೆಚ್ಚಿಕೊಳ್ಳಬೇಡಿ. ನಿಮ್ಮಲ್ಲಿ ನಂಬಿಕೆ ಇಡಿ, ಕಠಿಣ ಪರಿಶ್ರಮ ಪಡಿ, ಆಗುವುದಿಲ್ಲ ಎಂದು ಕೈಚೆಲ್ಲಬೇಡಿ. ಇದೇ ಯಶಸ್ಸಿನ ಗುಟ್ಟು.

**

ವಸ್ತ್ರ ವಿನ್ಯಾಸಕಿಯಾಗಿ...

ಅನಿತಾ, ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ ಹಾಗೂ ಸ್ಟೈಲಿಸ್ಟ್‌ ಕೂಡಾ ಹೌದು. ಮಂದಿರಾ ಬೇಡಿ, ಅನುಷ್ಕಾ ಶರ್ಮಾ, ಸುಮನ್‌ ರಂಗನಾಥ್‌, ಕೀರ್ತಿ ರೆಡ್ಡಿ, ಸೈರಸ್‌ ಸಾಹುಕಾರ, ಗೌರವ್‌ ಕಪೂರ್‌, ಸ್ನೇಹಾ, ಅನುಷಾ ದಾಂಡೇಕರ್‌, ಪ್ರತೀಕ್‌ ಬಬ್ಬರ್‌, ಸೋನಲ್‌ ಚೌಹಾಣ್‌, ಕ್ರಿಕೆಟಿಗರಾದ ಕ್ರಿಸ್‌ ಗೇಲ್‌ ಹಾಗೂ ದೋನಿ ಅವರಿಗೆ ಸ್ಟೈಲಿಸ್ಟ್‌ ಆಗಿಯೂ ಕೆಲಸ ಮಾಡಿದ್ದಾರೆ.

2009ರಿಂದ ಐಪಿಎಲ್‌ ಚಿಯರ್‌ ಲೀಡರ್ಸ್‌ಗಳ ದಿರಿಸು, 2015ರಲ್ಲಿ ಅಂಪೈರ್‌ಗಳ ಸಮವಸ್ತ್ರ, ಕಿಂಗ್‌ಫಿಶರ್‌ ಸೂಪರ್‌ ಮಾಡೆಲ್ಸ್‌, ಕ್ಯಾಲೆಂಡರ್‌ ಗರ್ಲ್ಸ್‌ ಹಾಗೂ ಅಂತರರಾಷ್ಟ್ರೀಯ ಅನೇಕ ನೃತ್ಯಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿಕೊಟ್ಟ ಹೆಗ್ಗಳಿಕೆ ಇವರದ್ದು.
ಫೇಸ್‌ಬುಕ್‌ ಕೊಂಡಿ: http://bit.ly/2r2g2vB

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.