ADVERTISEMENT

ಮೋಡಿ ಮಾಡಿದ ನೃತ್ಯದ ಝಲಕ್

ಪಿ.ಎನ್.ಶಿವಣ್ಣ
Published 20 ಮೇ 2013, 19:59 IST
Last Updated 20 ಮೇ 2013, 19:59 IST
ಮೋಡಿ ಮಾಡಿದ ನೃತ್ಯದ ಝಲಕ್
ಮೋಡಿ ಮಾಡಿದ ನೃತ್ಯದ ಝಲಕ್   

ವೈಭವೋಪೇತ ವಿನ್ಯಾಸಗಳಿಂದ ಕಂಗೊಳಿಸುತ್ತಿದ್ದ ಆ ವೇದಿಕೆ, ಸಭಾಂಗಣದಲ್ಲಿ ಒಂದೆಡೆ ವೀಕ್ಷಕರ ಗುಂಪು, ಮತ್ತೊಂದೆಡೆ ಕೈಯಲ್ಲಿ ಪೆನ್ನು ಹಿಡಿದು ಕುಳಿತಿದ್ದ ತೀರ್ಪುಗಾರರ ತಂಡ. ತೀರ್ಪುಗಾರರ ಆಸನದಲ್ಲಿದ್ದವರು ನಟ ಅಲ್ಲು ಅರ್ಜುನ್, ಪುನೀತ್ ರಾಜ್‌ಕುಮಾರ್, ವೇದಿಕಾ ಮತ್ತು ನಟ ಸಿಂಬು. 7ಅಪ್ ಡಾನ್ಸ್ ಆನ್‌ನ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭರ್ಜರಿ ನೃತ್ಯ ಪ್ರದರ್ಶನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದರು.

ನೃತ್ಯಕ್ಕೆ ಸಜ್ಜಾದ ಹುಡುಗರ ಮುಖದಲ್ಲಿ ಭಯವಿದ್ದರೆ, ನೋಡುಗರ ಕಣ್ಣಲ್ಲಿ ಕುತೂಹಲ ತುಂಬಿತ್ತು. ಯುವಪಡೆಗಳ ನೃತ್ಯಕ್ಕೆ ಸಜ್ಜಾದ ಆ ವೇದಿಕೆ ಲೈಟಿಂಗ್ಸ್‌ನಿಂದು ಸುಂದರವಾಗಿ ಕಾಣಿಸುತ್ತಿತ್ತು. ನಿರೂಪಕಿ ಹೆಸರನ್ನು ಕೂಗುತ್ತಿದ್ದಂತೆ ವೇದಿಕೆಯ ಮೇಲೆ ಬಂದಿತು ಉಡುಪಿಯ `ಸಾಗರ್ ಗೈಸ್' ತಂಡ. `ಆಧುನಿಕ ದಶಾವತಾರ' ಇವರು ಹಾಕುವ ಹೆಜ್ಜೆಗೆ ವಿಷಯವಾಗಿತ್ತು.

ಸಿನಿಮಾ ಹಾಡುಗಳಾದ `ಶಿವಪ್ಪ ಕಾಯೋ ತಂದೆ', `ಯಾರೋ ಯಾರೋ ಗೀಚಿ ಹೋದ' ಹಾಡುಗಳ ಮಿಶ್ರಣದೊಂದಿಗೆ ಶುರುವಾದ ನೃತ್ಯದ ಕೇಂದ್ರಬಿಂದುವಾಗಿದ್ದು ಕೃಶಕಾಯದ ಕೃಷ್ಣ ವೇಷಧಾರಿ. ಅವನನ್ನು ಎತ್ತಿ ಬಿಸಾಕುತ್ತಾ ಅವರು ಮಾಡುತ್ತಿದ್ದ ನೃತ್ಯ ರೋಚಕವಾಗಿದ್ದರೂ ಎಲ್ಲಿ ಆ ಹುಡುಗ ಕೆಳಕ್ಕೆ ಬೀಳುತ್ತಾನೋ ಎಂಬ ಭಯದಲ್ಲಿಯೇ ಅಲ್ಲಿದ್ದವರು ನೋಡುತ್ತಿದ್ದರು. ನೃತ್ಯ ಮುಗಿಯುತ್ತಿದ್ದಂತೆ ವೇದಿಕೆಯಲ್ಲಿದ್ದವರ ಕಣ್ಣು ತೀರ್ಪುಗಾರರ ಮೇಲೆ ಬಿತ್ತು. ನೃತ್ಯ ತಂಡದಲ್ಲಿ ಒಬ್ಬಳೇ ಹುಡುಗಿ ಇದ್ದರೂ ಹುಡುಗರಿಗೆ ಸಮಾನವಾಗಿ ಕುಣಿದ ಅವಳ ನೃತ್ಯದ ಮೋಡಿಗೆ ತೀರ್ಪುಗಾರರು ಮೆಚ್ಚುಗೆಯ ಚಪ್ಪಾಳೆ ನೀಡಿದರು.

ಒಂದು ತಂಡ ವೇದಿಕೆಯಿಂದ ಇಳಿಯುತ್ತಿದ್ದಂತೆ ಮತ್ತೊಂದು ತಂಡ ಸಿದ್ಧವಾಗಿ ವೇದಿಕೆಗೆ ಬಂತು. ಅದುವೇ ಮಂಗಳೂರಿನ `ಸಿಝ್ಲಿಂಗ್ ಗೈಸ್' ತಂಡ. ಅವರನ್ನು ಗುರುತು ಹಿಡಿಯಲು ಆಗದಷ್ಟು ಮೇಕಪ್ ಮಾಡಿಕೊಂಡು ಬಂದಿದ್ದ ಅವರು ಸಿಲ್ವರ್ ಬಣ್ಣವನ್ನು ಮೈ ತುಂಬಾ ಹಚ್ಚಿಕೊಂಡಿದ್ದರು. ವೇದಿಕೆಯ ಬಣ್ಣದ ಬೆಳಕಿನೊಂದಿಗೆ ಅವರ ನೃತ್ಯದ ಮೋಡಿ ಅಲ್ಲಿದ್ದವರನ್ನು ದಂಗಾಗಿಸಿತ್ತು. ಇವರು ಕೂಡ ಆಯ್ಕೆ ಮಾಡಿಕೊಂಡಿದ್ದು ಭಕ್ತಿಪ್ರದಾನ ವಿಷಯವನ್ನು. ಕಾಳಿಂಗನ ಹೆಡೆಯ ಮೇಲೆ ನರ್ತಿಸುವ ಕೃಷ್ಣ, ಕೊಳಲನೂದುವ ಕೃಷ್ಣ, ತುಂಬಿದ ಸಭೆಯಲ್ಲಿ ದ್ರೌಪದಿಗೆ ವಸ್ತ್ರದಾನ ಮಾಡುವುದು, ಮದದಿಂದ ಮೆರೆಯುತ್ತಿದ್ದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುವ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟರು.

ನಂತರ ವೇದಿಕೆಯ ಮೇಲೆ ಬಂದವರೇ ಮುಂಬೈನ ಎಸ್.ಎನ್.ವಿ ಕ್ರ್ಯೂ ತಂಡ. ಈ ತಂಡ ಬರುವುದಕ್ಕೂ ಮುಂಚೆ ಅಲ್ಲಿದ್ದವರು ಈ ತಂಡದ ಬಗ್ಗೆ ಮಾತನಾಡಲು ಶುರು ಮಾಡಿದರು. ಇವರ ನೃತ್ಯ ನೋಡುವುದಕ್ಕೆ ತುಂಬಾ ಚೆನ್ನಾಗಿರುತ್ತೆ, ಹಾಕುವ ಹೆಜ್ಜೆಯಲ್ಲೂ ಭಿನ್ನತೆ ಇರುತ್ತೆ ಎಂಬ ಮಾತುಗಳು ಹಿಂದಿನಿಂದ ಕೇಳುತ್ತಿದ್ದವು. ಅವರ ಮಾತು ಸುಳ್ಳಾಗಲಿಲ್ಲ. ್ಙ56ಲಕ್ಷ ತಾವೇ ತೆಗೆದುಕೊಂಡು ಹೋಗುವುದು ಎಂಬ ಆತ್ಮವಿಶ್ವಾಸ ಅವರಲ್ಲಿ ಕಾಣಿಸುತ್ತಿತ್ತು. ಮೈಯಲ್ಲಿ ಮೂಳೆಯೇ  ಇಲ್ಲವೇನೋ ಎಂಬಂತೆ ನರ್ತಿಸುತ್ತಿದ್ದ ಅವರ ಪರಿ ನವಿಲಿಗೂ ಸೆಡ್ಡು ಹೊಡೆಯುವಂತಿತ್ತು.
ಸರ್ಕಸ್‌ನ ಮಾದರಿಯಲ್ಲಿ ನೃತ್ಯ ಮಾಡುತ್ತಿದ್ದ ಅವರ ತಂಡ ಚಪ್ಪಾಳೆಯ ಬಹುಮಾನವನ್ನು ಅಷ್ಟೊತ್ತಿಗಾಗಲೇ ಗಿಟ್ಟಿಸಿಕೊಂಡಿತ್ತು. ಒಬ್ಬ ಮೈಕೆಲ್

ಜಾಕ್ಸನ್‌ನಂತೆ ಬಂದು ಹೆಜ್ಜೆ ಹಾಕಿದರೆ, ಇನ್ನೊಬ್ಬ ಚೆಂಡನ್ನು ತಲೆ, ಕುತ್ತಿಗೆ ಮುಖದ ಮೇಲೆ ಕುಣಿಸುತ್ತಿದ್ದ. ಅವರು ನೃತ್ಯ ಮುಗಿಸಿದರೂ ಜನ ಮಾತ್ರ ಅವರ ನೃತ್ಯದ ಗುಂಗಿನಿಂದ ಇನ್ನೂ ಹೊರ ಬಂದಿರಲಿಲ್ಲ. ತೀರ್ಪುಗಾರರು ಏನು ಹೇಳುತ್ತಾರೆ ಎಂದು ಎಲ್ಲರೂ ಅವರತ್ತ ನೋಡಿದಾಗ ಅವರು ಕೂಡ ಮಾತೇ ಇಲ್ಲದವರ ಹಾಗೇ ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜೆ 6ರವರೆಗೂ ಮುಂದುವರಿದ ಸ್ಪರ್ಧೆಯಲ್ಲಿ ಒಂದರ ನಂತರ ಒಂದು ತಂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಮನರಂಜನೆ ನೀಡಿದರು.

ಪೇಯವೂ ಇಷ್ಟ ರಾಯಭಾರವೂ ಇಷ್ಟ
ಸ್ಪರ್ಧೆಯ ನಡುವೆ ಮಾತಿಗೆ ಸಿಕ್ಕ ಪುನೀತ್ ರಾಜ್‌ಕುಮಾರ್, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. `7 ಅಪ್‌ನ ರಾಯಭಾರಿಯಾಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಚಿಕ್ಕವರಿಂದಲೂ 7 ಅಪ್, ಪೆಪ್ಸಿ ಕುಡಿಯುತ್ತಾ ಬಂದಿದ್ದೆ. ಈಗ ಅದರ ರಾಯಭಾರಿಯಾಗಿದ್ದೇನೆ. ಜತೆಗೆ ಇಲ್ಲಿ ಬಂದ ತಂಡದ ನೃತ್ಯ ಮಾತ್ರ ಸಖತ್ತಾಗಿತ್ತು. ಅಲ್ಲು ಅರ್ಜುನ್ ಮೊದಲಿನಿಂದಲೂ ನನಗೆ ಸ್ನೇಹಿತ ಅವರ ಜತೆ ಇಲ್ಲಿ ತೀರ್ಪುಗಾರನಾಗಿ ಬಂದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಸೂರ್ಯ, ವಿಜಯ್ ತುಂಬಾ ಒಳ್ಳೆಯ ನೃತ್ಯಗಾರರು, ಕನ್ನಡದಲ್ಲಿ ನನ್ನಣ್ಣ ಶಿವರಾಜ್‌ಕುಮಾರ್ ಚೆನ್ನಾಗಿ ನೃತ್ಯ ಮಾಡುತ್ತಾರೆ' ಎಂದು ಹಾಡಿ ಹೊಗಳಿದರು.

ಮುಂಬೈ ತಂಡ ಪ್ರಥಮ
ಚೆನ್ನೈನ ಫಿಲ್ಮ್ ಸಿಟಿಯಲ್ಲಿ ನಡೆದ ಈ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಅತ್ಯುತ್ತಮ ಪ್ರದರ್ಶನ ತೋರಿದ್ದವು. ಗೆದ್ದ ತಂಡಕ್ಕೆ 56 ಲಕ್ಷ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರೂ ನಂತರ ತಂಡದ ನೃತ್ಯದ ಮೋಡಿಗೆ ಮರುಳಾಗಿ ಬಹುಮಾನದ ಮೊತ್ತವನ್ನು ಏಳು ತಂಡಕ್ಕೂ ಹಂಚುವ ತೀರ್ಮಾನಕ್ಕೆ ಆಯೋಜಕರು ಬಂದರು.

ಗೆಲುವಿನ ಗರಿ ಮುಡಿಗೇರಿಸಿಕೊಂಡ ಮುಂಬೈನ ಎಸ್‌ಎನ್‌ವಿ ತಂಡ ರೂ 21 ಲಕ್ಷ) ಪಡೆದುಕೊಂಡಿತು. ಮೊದಲ ರನ್ನರ್‌ಅಪ್ ಮಂಗಳೂರಿನ ಸಿಝ್ಲಿಂಗ್ ತಂಡ ರೂ 15 ಲಕ್ಷ), ಎರಡನೇ ರನ್ನರ್‌ಅಪ್‌ಗಳಾದ ಆ್ಯರೋ ಕೊಚ್ಚಿನ್ ಮತ್ತು ಸ್ಟ್ರೇಂಜರ್ಸ್‌ ತಂಡ ತಲಾ ಏಳು ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡರೆ ಸಾಗರ್ ಗೈಸ್, ಬಿಎಫ್‌ಎಬಿ, ಚೈತನ್ಯ ತಂಡ ಎರಡು ಲಕ್ಷ ರೂಪಾಯಿ ಹಂಚಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT