ADVERTISEMENT

ಯೋಗ ಅಂಚೆ ಚೀಟಿ ಸರಣಿ

ಜೆ.ಪಿ.ಕೋಲಾರ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಯೋಗ ಅಂಚೆ ಚೀಟಿ ಸರಣಿ
ಯೋಗ ಅಂಚೆ ಚೀಟಿ ಸರಣಿ   

ಮೈಮನಗಳಿಗೆ ಮುದಕೊಡುವ ಭಾರತೀಯ ಪರಂಪರೆ ಯೋಗ. ಯೋಗಕ್ಕೆ ವಿಶ್ವ ಮಾನ್ಯತೆ ತಂದುಕೊಡುವ ನಿಟ್ಟಿನಲ್ಲಿ ಪ್ರತಿವರ್ಷ ಯೋಗ ದಿನಾಚರಣೆಯನ್ನು ತನ್ನ ಸದಸ್ಯ ರಾಷ್ಟ್ರಗಳಲ್ಲಿ ಆಚರಿಸುವ ನಿರ್ಧಾರವನ್ನು ಮೂರು ವರ್ಷಗಳ ಹಿಂದೆ (2015) ವಿಶ್ವಸಂಸ್ಥೆ ಪ್ರಕಟಿಸಿತು. ಕಳೆದ ಜೂನ್‌ 21ರಂದು ವಿಶ್ವಸಂಸ್ಥೆಯು ಯೋಗ ದಿನಾಚರಣೆ ಪ್ರಯುಕ್ತ ಹತ್ತು ಆಸನಗಳನ್ನು ಚಿತ್ರಿಸಿರುವ ಹತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.

ದೇಹಕ್ಕೆ ಹೊಸ ಚೈತನ್ಯ ನೀಡುವ ನಿಧಿ ಎನ್ನಲಾಗುವ ‘ಯೋಗ’ ಕುರಿತು ಅಂಚೆಚೀಟಿಗಳ ಪ್ರಕಟಣೆ ಹೊಸ ವಿಚಾರವಲ್ಲ.

ಭಾರತ ಸರ್ಕಾರದ ಅಂಚೆ ಇಲಾಖೆ ನಾಲ್ಕು ವಿವಿಧ ಮುಖಬೆಲೆಯ ಬಹುವರ್ಣದ ಅಂಚೆ ಚೀಟಿಗಳನ್ನು 1991ರಲ್ಲಿ ಕೊಡುಗೆಯಾಗಿ ನೀಡಿತ್ತು. ತಲಾ 10 ಲಕ್ಷ ಯೋಗ ಅಂಚೆ ಚೀಟಿಗಳು ಮುದ್ರಣವಾದರೂ ಹೆಚ್ಚಿನ ಸದ್ದು–ಸುದ್ದಿ ಮಾಡಿರಲಿಲ್ಲ.

ADVERTISEMENT

ಮತ್ತೊಮ್ಮೆ ಯೋಗಕ್ಕೆ ಸಂಬಂಧಿಸಿದ ಅಂಚೆಚೀಟಿ ಹೊರಬಂದಿದ್ದು 2009ರಲ್ಲಿ. ಅದು ದೇಹದಲ್ಲಿರುವ ಶಕ್ತಿ ಚಕ್ರಗಳು, ವನ ಮೂಲಿಕೆಗಳೊಂದಿಗೆ ಧ್ಯಾನಮುದ್ರೆಯಲ್ಲಿ ಕುಳಿತ ಮಹರ್ಷಿಗಳ ಅಂಚೆಚೀಟಿ. ಮುಖಬೆಲೆ ₹5.

ಜಾಗತಿಕವಾಗಿ ‘ಯೋಗ’ ಗುರುತಿಸಲ್ಪಟ್ಟ ನಂತರ ಯೋಗ ಕುರಿತ ಅಂಚೆಚೀಟಿಗಳು, ಮಿನಿಯೇಚರ್‌ ಶೀಟ್‌ ಹಾಗೂ ದಸ್ತಾವೇಜುಗಳು ಪ್ರತಿವರ್ಷ ಹೊರ ಬರುತ್ತಿವೆ. ಅಂಚೆಚೀಟಿ ಸಂಗ್ರಾಹಕರಲ್ಲಿ ಮೊದಲ ನಾಲ್ಕು ಚೀಟಿಗಳಿಗೆ ಬೇಡಿಕೆ ಬಂದಿದೆ.

ಭುಜಂಗಾಸನ, ಧನುರಾಸನ, ಉತ್ತಿಷ್ಟಾಸನ ಹಾಗೂ ಉತ್ತಿಷ್ಟ ತ್ರಿಕೋನಾಸನಗಳಿರುವ (₹2,5, ₹6.50 ಹಾಗೂ ₹10 ಮುಖಬೆಲೆಯುಳ್ಳವು) ಹಳೆಯ ಚೀಟಿಗಳ ಸರಣಿಗೆ ₹ 500 ಬೆಲೆ ಇರುವುದು ಇದಕ್ಕೆ ಪುರಾವೆ.

ಭಾರತದ ಜೊತೆಗೆ ಯೋಗ ಚೀಟಿ ಬಿಡುಗಡೆ ಮಾಡುವಲ್ಲಿ ‘ಚೀನಾ’ ಕೂಡ ಹಿಂದೆ ಬಿದ್ದಿಲ್ಲ. ಯೋಗ ಜ್ಞಾನವನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ಶ್ರಮಿಸಿದ ಯೋಗಗುರುಗಳಲ್ಲಿ ಒಬ್ಬರಾದ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರ ನೆನಪಿನಲ್ಲಿ ಚೀನಾದ ಅಂಚೆ ಇಲಾಖೆ 2016ರಲ್ಲಿ ಎಂಟು ಅಂಚೆ ಚೀಟಿಗಳ ಹಾಳೆಯೊಂದನ್ನು ಹೊರ ತಂದಿತು. ಚೀನಾ–ಭಾರತ ಯೋಗ ಶೃಂಗ ಸಮಾವೇಶದಲ್ಲಿ ಬಿಡುಗಡೆಯಾದ ಅಂಚೆ ಚೀಟಿಗಳಲ್ಲಿ ಬಿ.ಕೆ.ಎಸ್‌.ಅಯ್ಯಂಗಾರ್‌ ಅವರು ಪ್ರದರ್ಶಿಸುತ್ತಿರುವ ವಿವಿಧ ಯೋಗಾಸನಗಳ ಚಿತ್ರಗಳಿವೆ.

ವಿಶ್ವಸಂಸ್ಥೆ ಅಂಚೆ ಆಡಳಿತ ವಿಭಾಗ 2017ರ ಜೂನ್‌ 21ರಂದು ಬಿಡುಗಡೆ ಮಾಡಿದ ಹತ್ತು ವಿವಿಧ ಯೋಗಾಸನಗಳುಳ್ಳ ಅಂಚೆಚೀಟಿಯ ಮುಖ್ಯ ಮೌಲ್ಯ 1.15 ಡಾಲರ್‌.

ನ್ಯೂಯಾರ್ಕ್‌, ಜಿನಿವಾ ಹಾಗೂ ವಿಯನ್ನಾಗಳಲ್ಲಿರುವ ವಿಶ್ವಸಂಸ್ಥೆಗಳ ಪತ್ರ–ಕಾಗದ ರವಾನೆಗೆ ಬಳಸಲಾಗುವ ಈ ಯೋಗಾಸನ ಅಂಚೆ ಚೀಟಿಗಳ ಖರೀದಿಗೆ ಆಸಕ್ತರು ಈಗಾಗಲೇ ಮುಗಿಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.